ಹೈಕಮಾಂಡ್ ಹೇಳಿದರೆ ಮುಂದಿನ ನಾಲ್ಕು ವರ್ಷವೂ ನಾನೇ ಸಿಎಂ!

ಮೈಸೂರು : ನಿನ್ನೆ ಮೈಸೂರು ಭಾಗದ ಚುನಾವಣಾ ಪ್ರಚಾರ ನಡೆಸಿದ ವೇಳೆ ಭಾಷಣ ಮಾಡಿದ ಸಿಎಂ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡುವಾಗ “ಸಿಎಂ ಬದಲಾವಣೆ” ವಿಚಾರಕ್ಕೆ ಸಂಬಂಧಿಸಿದಂತೆ‌ ಇದೇ ಮೊದಲ ಬಾರಿಗೆ ತಮ್ಮ ಸ್ಪಷ್ಟನೆ ನೀಡಿದ್ದಾರೆ! ನಮ್ಮ ಹೈಕಮಾಂಡ್ ಬಯಸಿದರೆ ನಾನು ಮುಂದಿನ ನಾಲ್ಕು ವರ್ಷಗಳ ಕಾಲ ಸಿಎಂ ಆಗಿ ಮುಂದುವರಿಯುವೆನು. ಒಂದು ವೇಳೆ ಬೇಡ ಎಂದರೆ ಹೈಕಮಾಂಡ್ ಹೇಳಿದಂತೆಯೇ ನಡೆದುಕೊಳ್ಳುವೆನು. ಬಳಿಕ ಚುನಾವಣಾ ರಾಜಕಾರಣದಿಂದ ನಿವೃತ್ತನಾಗಬಯಸುವೆನು. ಆದರೆ, ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುವೆನು ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಸಿಎಂ ಪಟ್ಟವನ್ನು ಬೇರೊಬ್ಬ “ಅರ್ಹ” ರಿಗೆ ಬಿಟ್ಟುಕೊಡುವ ಸುಳಿವು ನೀಡಿದಂತಿದೆ. ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಗೆ ಸಿಎಂ ಬದಲಾವಣೆ ವಿಚಾರ ಅಪ್ರಸ್ತುತ. ಆದರೆ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ಅವರು ಲೋಕಸಭೆ ಚುನಾವಣೆಯಲ್ಲಿ ಇಪ್ಪತ್ತು ಸ್ಥಾನಗಳನ್ನು ಗೆಲ್ಲಬೇಕೆಂಬ ಛಲದಿಂದ ಜೋಡಿತ್ತಿನಂತೆ ಕೆಲಸ ಮಾಡುತ್ತಿರುವಾಗ ಸಿಎಂ ಬದಲಾವಣೆಯ ಮಾತೇಕೆ? ಅನ್ನೋ ಪ್ರಶ್ನೆ ಸಹಜವಾದುದು. ಕಳೆದ ವರ್ಷ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್136 ಸ್ಥಾನಗಳನ್ನು ಭರ್ಜರಿಯಾಗಿ ಗೆಲ್ಲುವ ಮೂಲಕ ಬಿಜೆಪಿ ಅಧಿಕಾರವನ್ನು ಕಿತ್ತೊಗೆದು ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿತ್ತು. ಈ ಸಂದರ್ಭದಲ್ಲಿ ಗ್ಯಾರಂಟಿ ಕರ್ತರಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇವರಿಬ್ಬರಲ್ಲಿ ಸಿಎಂ ಯಾರಾಗಬೇಕು? ಅನ್ನೋ ಪ್ರಶ್ನೆ ಉದ್ಭವಿಸಿತ್ತು. ಆಗ ಸಿಎಂ ಪಟ್ಟವನ್ನು ತನಗೇ ಕಟ್ಟಬೇಕೆಂದು ಡಿಕೆಶಿ ಪಟ್ಟು ಹಿಡಿದಿದ್ದರೆ, ಎಲ್ಲರಿಗಿಂತಲೂ ಮೊದಲೇ ತನಗೆ ಎಂಬತ್ತಕ್ಕೂ ಅಧಿಕ ಶಾಸಕರ ಬೆಂಬಲವಿದೆ ಎಂದು ದೆಹಲಿಯಲ್ಲಿ ಬೀಡು ಬಿಟ್ಟಿದ್ದ ಸಿದ್ದರಾಮಯ್ಯ ಮುಖ್ಯಮಂತ್ರಿ ಗಾದಿ ನನಗೇ ಸೇರತಕ್ಕದ್ದು, ನನ್ನ ಹಿಂದೆ ಕುರುಬ ಸೇರಿದಂತೆ ಅಹಿಂದ ಮತದಾರರ ಪಡೆಯೇ ಇದೆ ಇದೆ ಅಂತಾ ಹೈಕಮಾಂಡ್ ಗೆ ಗುಡುಗು ಹಾಕಿದ್ದರು. ಸಿಎಂ ಗದ್ದುಗೆಯ ಗುದ್ದಾಟ ಕೆಲ ದಿನಗಳ ಕಾಲ ಹೀಗೆಯೇ ಮುಂದುವರಿದಿತ್ತು. ಕೊನೆಗೆ ಡಿಕೆಶಿಯವರಿಗೆ ಕಾಂಗ್ರೆಸ್ ಹೈಕಮಾಂಡ್ ಏನು ಭರವಸೆ ನೀಡಿತೋ ಗೊತ್ತಿಲ್ಲ. ಸಿಎಂ ರೇಸ್ ನಿಂದ ಒಂದು ಹೆಜ್ಜೆ ಹಿಂದೆ ಸರಿಯಬೇಕಾಯಿತು.‌ಆಗ ಸಿದ್ದರಾಮಯ್ಯ ಮುಖ್ಯಮಂತ್ರಿ ಗದ್ದುಗೆ ಏರುವಂತಾಗಿತ್ತು. ಈ ವೇಳೆ ಹೈಕಮಾಂಡ್ ಸಂಧಾನ ಮಾಡಿದ್ದು, ಇಬ್ಬರೂ ತಲಾ ಎರಡೂ ವರೆ ವರ್ಷಗಳ ಕಾಲ ಸಿಎಂ ಆಗಲು ದಾರಿ ತೋರಿಸಿದೆ ಎಂದೂ ಕಾಂಗ್ರೆಸ್ ಪಡಸಾಲೆಯಲ್ಲಿ ಮಾತನಾಡಿಕೊಳ್ಳುತ್ತಿದ್ದುದು ಕಂಡು ಬಂತು. ಇದಾದ ಬಳಿಕ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ಗ್ಯಾರಂಟಿ ಯೋಜನೆಗಳ ಜಾರಿಯತ್ತ ತಲೆಕೆಡಿಸಿಕೊಂಡಿದ್ದರು. ಆದರೆ, ಏಕಾಏಕಿಯಾಗಿ ಇದೀಗ ಸಿಎಂ ಸಿದ್ದರಾಮಯ್ಯ ಅವರ ಬಾಯಿಂದಲೇ ಮುಖ್ಯಮಂತ್ರಿ ಬದಲಾವಣೆ ಮಾತೇಕೆ ಬಂತು? ಅನ್ನೋ ಪ್ರಶ್ನೆ ಉದ್ಭವಿಸುತ್ತೆ. ತಮ್ಮ ಸಿಎಂ ಗದ್ದುಗೆಯನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಇದೂ ಕೂಡ ಸಿಎಂ ಸಿದ್ದರಾಮಯ್ಯನವರ ತಂತ್ರ ಎಂದೇ ಹೇಳಲಾಗುತ್ತೆ. ಅಷ್ಟಕ್ಕೂ ಸಿಎಂ ಹೇಳಿದ್ದೇನು? ಹೈಕಮಾಂಡ್ ಬಯಸಿದರೆ ಮುಂದಿನ ನಾಲ್ಕು ವರ್ಷಗಳ ಕಾಲವೂ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ. ಒಂದು ವೇಳೆ ನಮ್ಮ ಹೈಕಮಾಂಡ್ ಬೇಡ ಎಂದರೆ ಮುಂದುವರಿಯಲಾರೆ. ಎಲ್ಲವೂ ಹೈಕಮಾಂಡ್ ನಿರ್ಧಾರದ ಮೇಲೆ ನಿಂತಿದೆ ಎಂದಿದ್ದಾರೆ. ಇಲ್ಲಿ ಉತ್ಪ್ರೇಕ್ಷೆ ಯಾಗುವಂಥದ್ದೇನಿದೆ?

Comments (0)
Add Comment