ಹೊಸ ಸೈಬರ್ ಕ್ರೈಂ: ಡಿಜಿಟಲ್‌ ಅರೆಸ್ಟ್‌ ಹೆಸರಿನಲ್ಲಿ 3 ಕೋಟಿ ರೂ. ವಂಚನೆ

ಬೆಂಗಳುರು: ಸೈಬರ್ ದರೋಡೆಕೋರರು, ತನಿಖಾ ಸಂಸ್ಥೆ ಅಥವಾ ಪೊಲೀಸ್ ಸಿಬ್ಬಂದಿಯಂತೆ ನಟಿಸಿ, ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ.

ಡಿಜಿಟಲ್‌ ಅರೆಸ್ಟ್‌ ಎಂಬ ಹೊಸ ವಿಧಾನದ ವಂಚನೆಗೆ 15 ದಿನದ ಅಂತರದಲ್ಲಿ ಏಳು ಜನರಿಗೆ ಮೂರು ಕೋಟಿ ರೂ. ವಂಚನೆ ಮಾಡಲಾಗಿದ್ದು ಈ ಬಗ್ಗೆ ಅಗ್ನೇಯ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಎಫ್‌ ಐಆರ್ ದಾಖಲಾಗಿವೆ.

ಏನಿದು ಸೈಬರ್ ವಂಚನೆಯಲ್ಲಿ ದೊಡ್ಡ ಸದ್ದು ಮಾಡುತ್ತಿರುವ ಡಿಜಿಟಲ್ ಅರೆಸ್ಟ್? ಸೈಬರ್ ವಂಚಕರು ಇದರಲ್ಲಿ ಪೊಲೀಸರು ಅಥವಾ ತನಿಖಾ ಸಂಸ್ಥೆಯ ಹೆಸರು ಹೇಳಿಕೊಂಡು ಕರೆ ಮಾಡುತ್ತಾರೆ. ನಿಮ್ಮ ದಾಖಲಾತಿಗಳನ್ನು ಬಳಸಿ ಯಾವುದೋ ಅಪರಾಧ ಮಾಡಲಾಗಿದೆ. ನೀವು ವಿಚಾರಣೆಗೆ ಹಾಜರಾಗಬೇಕು ಎಂದು ಬೆದರಿಸಲಾಗುತ್ತದೆ. ವಿಚಾರಣೆಯಿಂದ ವಿನಾಯಿತಿ ಬೇಕಾದರೆ ಹಣ ಹಾಕಿ, ಇಲ್ಲವಾದರೆ ಅರೆಸ್ಟ್ ಮಾಡ್ತೀವಿ ಎಂದು ಬೆದರಿಕೆ ಹಾಕುತ್ತಾರೆ. ಇದರಿಂದ ಹೆದರಿದವರು, ವಂಚಕರು ಹೇಳಿದ ಖಾತೆಗೆ ಹಣ ಪಾವತಿಸಿ ಕೈ ತೊಳೆದುಕೊಳ್ಳಲು ಮುಂದಾದರೆ ದುಷ್ಕರ್ಮಿಗಳು ತೋಡಿದ ಗುಂಡಿಗೆ ಬಿದ್ದಂತೆಯೇ ಲೆಕ್ಕ.

ಹೆಚ್‌ ಎಸ್‌ ಆರ್ ಲೇಔಟ್ ಮೂಲದ ವೃದ್ಧ ದಂಪತಿಯಿಂದ 1 ಕೋಟಿ 97 ಲಕ್ಷ ರೂಪಾಯಿಗಳನ್ನು ವಂಚಕರು ಸುಲಿಗೆ ಮಾಡಿದ್ದಾರೆ. ಅಲ್ಲದೆ ಕಳೆದ 15 ದಿನಗಳ ಅಂತರದಲ್ಲಿ ಅಗ್ನೇಯ ವಿಭಾಗ ಒಂದರಲ್ಲೇ ಬರೋಬ್ಬರಿ ಮೂರು ಕೋಟಿಗಳಷ್ಟು ಮೊತ್ತವನ್ನು ಸೈಬರ್ ಖದೀಮರು ವಂಚಿಸಿದ್ದಾರೆ. ಆದರೆ ಪೊಲೀಸರಿಗೆ ಮಾತ್ರ ಇದುವರೆಗೂ ಇದರ ಸುಳಿವು ಪತ್ತೆಯಾಗಿಲ್ಲ.

Comments (0)
Add Comment