142 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ – ಪ್ರಾಂಶುಪಾಲ ಅಂದರ್‌

ಹರಿಯಾಣ: ಪಠ್ಯದ ಜತೆಗೆ ಜೀವನ ಪಾಠವನ್ನೂ ಹೇಳಿ ಕೊಟ್ಟು ಮಕ್ಕಳ ಉಜ್ವಲ ಭವಿಷ್ಯಕ್ಕೆ ದಾರಿದೀಪವಾಗಬೇಕಾದ ಶಾಲೆಯ ಪ್ರಾಂಶುಪಾಲನೊಬ್ಬ ತನ್ನ ಶಾಲೆಯ 142 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುವ ಮೂಲಕ ಗುರು ಎಂಬ ಸ್ಥಾನಕ್ಕೆ ಕಳಂಕ ತಂದಿದ್ದಾನೆ.

ಇಂತಹ ನೀಚ ಕೃತ್ಯ ಎಸಗಿದ ಹರಿಯಾಣದ ಜಿಂದ್ ಜಿಲ್ಲೆಯಲ್ಲಿರುವ ಬಾಲಕಿಯರ ಸರ್ಕಾರಿ ಶಾಲೆಯ ಪ್ರಾಂಶುಪಾಲ ಕರ್ತಾರ್‌ ಸಿಂಗ್‌ (56) ನನ್ನು ಪೊಲೀಸರು ಬಂಧಿಸಿದ್ದಾರೆ.

ಮೊದಲಿಗೆ ಈತ 60 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಮಾತುಗಳು ಕೇಳಿಬಂದಿದ್ದವು. ಈಗ ಈತನು ಸುಮಾರು 142 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬುದು ತನಿಖೆ ಬಳಿಕ ಬಯಲಾಗಿದೆ.

ನ. 6ರಂದೇ ಪೊಲೀಸರು ಕರ್ತಾರ್‌ ಸಿಂಗ್‌ನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಶಾಲೆಯ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ತನಿಖೆ ನಡೆಸಲು ಸಬ್‌ ಡಿವಿಷನಲ್‌ ಮ್ಯಾಜಿಸ್ಟ್ರೇಟ್‌ ನೇತೃತ್ವದ ಸಮಿತಿ ರಚಿಸಲಾಗಿದೆ.

ಶಾಲೆಯಲ್ಲಿ 9,10,11 ಹಾಗೂ 12ನೇ ತರಗತಿ ಓದುತ್ತಿರುವ 390 ವಿದ್ಯಾರ್ಥಿಗಳ ಜತೆ ನೇರವಾಗಿ ಮಾತುಕತೆ ನಡೆಸಲಾಗಿದ್ದು. ಇವರಲ್ಲಿ 142 ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳ ನೀಡಿರುವ ಕುರಿತು ಮಾಹಿತಿ ನೀಡಿದ್ದಾರೆ.

ಈಗಾಗಲೇ ಆರೋಪಿ ವಿರುದ್ಧ ಐಪಿಸಿ ಹಾಗೂ ಪೋಕ್ಸೋ ಕಾಯ್ದೆಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಂದ್ ಡಿಸಿಪಿ ಮೊಹಮ್ಮದ್‌ ಇಮ್ರಾನ್‌ ರಾಜಾ ಮಾಹಿತಿ ನೀಡಿದ್ದಾರೆ.

ಪ್ರಾಂಶುಪಾಲನು ಲೈಂಗಿಕ ಕಿರುಕುಳ ನೀಡುತ್ತಿರುವ ಕುರಿತು ಶಾಲೆಯ ವಿದ್ಯಾರ್ಥಿನಿಯರು ಕಳೆದ ಆ. 31ರಂದು ವಿದ್ಯಾರ್ಥಿನಿಯರು ಸಹಿ ಹಾಕಿದ ಪತ್ರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು, ಹರಿಯಾಣ ರಾಜ್ಯಪಾಲ, ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಕಳುಹಿಸಿದ್ದರು. ಇದಾದ ಬಳಿಕ ಶಾಲೆಯ ಪ್ರಾಂಶುಪಾಲನ ವಿರುದ್ಧ ಪ್ರಕರಣ ದಾಖಲಾಗಿತ್ತು. ಆರೋಪಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ವಿದ್ಯಾರ್ಥಿನಿಯರು, ಪೋಷಕರು ಆಗ್ರಹಿಸಿದ್ದಾರೆ.

 

 

Comments (0)
Add Comment