‘200 ಸ್ಥಾನ ಗೆಲ್ಲುವುದೂ ಕಷ್ಟ ಎನ್ನುವುದು ತಾನೇ ನಡೆಸಿದ ಆಂತರಿಕ ಸಮೀಕ್ಷೆಯಿಂದ BJP ಗೆ ಸ್ಪಷ್ಟವಾಗಿದೆ’- ಸಿಎಂ

ಮೈಸೂರು: ತಾವೇ ನಡೆಸಿರುವ ಆಂತರಿಕ ಸಮೀಕ್ಷೆಯಲ್ಲಿ ಬಿಜೆಪಿ ಕೇವಲ 200 ಲೋಕಸಭಾ ಸೀಟುಗಳನ್ನು ಗೆಲ್ಲುವುದೂ ಕಷ್ಟ ಎನ್ನುವುದು ಗೊತ್ತಾಗಿದೆ. ಹೀಗಾಗಿ ತಂತ್ರಗಾರಿಕೆ ಕಾರಣದಿಂದ 400 ಸೀಟು ಗೆಲ್ಲುವುದಾಗಿ ಹೇಳುತ್ತಿದೆ. ದೇಶದ ಜನರನ್ನು ನಿರಂತರವಾಗಿ ಮೂರ್ಖರನ್ನಾಗಿಸುತ್ತೇವೆ ಎಂದು ಹೊರಟವರೇ ಜನರ ಎದುರು ಮೂರ್ಖರಾಗುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚರಿಸಿದರು.

ಅವರು ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಈ ಬಾರಿ 400 ದಾಟುತ್ತೇವೆ ಎಂದು ಪ್ರಧಾನಿ ಮೋದಿಯವರು ತಮ್ಮ ಭಾಷಣದಲ್ಲಿ ಹೇಳಿಕೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ , ಬಿಜೆಪಿಯದ್ದು ಅಭಿವೃದ್ಧಿ ಶೂನ್ಯ ಸಾಧನೆ. ಮೋದಿಯವರ ಸುಳ್ಳಿನ ಪಿಕ್ಚರ್ ಇನ್ನೂ ಬಾಕಿ ಇದೆ. ಸುಳ್ಳಿನ ಕನಸುಗಳನ್ನು ಬಿತ್ತುತ್ತಾ ಬಂದಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 20 ಸೀಟುಗಳವರೆಗೆ ಗೆದ್ದೇ ಗೆಲ್ಲುತ್ತದೆ. ಸೋಲುವ ಭಯಕ್ಕೆ ಒಳಗಾಗಿರುವ ಬಿಜೆಪಿಯವರು ಕರ್ನಾಟಕದಲ್ಲಿ ಬಿಜೆಪಿ 28 ಸೀಟುಗಳನ್ನು ಗೆಲ್ಲುತ್ತೇವೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದರು.

ಕೇಂದ್ರ ಗೃಹಸಚಿವರ ಕುರಿತ ಹೇಳಿಕೆಗೆ ಸಂಬಂಧಿಸಿದಂತೆ ಯತೀಂದ್ರ ಸಿದ್ದರಾಮಯ್ಯರವರಿಗೆ ಸಂಸ್ಕಾರದ ಪಾಠವನ್ನು ಬಿಜೆಪಿ ಹೇಳುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, ಬಿಜೆಪಿಯವರಿಗೆ ಸಂಸ್ಕಾರವಿಲ್ಲ. ಯತೀಂದ್ರ ಅವರು ಸಿಬಿಐ ನವರು ಕೊಟ್ಟಿರುವ ರಿಪೋರ್ಟ್ ಆಧಾರದ ಮೇಲೆ ಹೇಳಿಕೆಯನ್ನು ನೀಡಿದ್ದಾರೆಯೇ ಹೊರತು, ಅಮಿತ್ ಶಾ ಅವರಿಗೆ ಅವಮಾನ ಮಾಡುವ ಉದ್ದೇಶ ಅವರಿಗೆ ಇಲ್ಲ ಎಂದರು.

ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಬರುವವರಿಗೆ ಸ್ವಾಗತ:

ಕಾಂಗ್ರೆಸ್ ಪಕ್ಷಕ್ಕೆ ಇತರೆ ಪಕ್ಷಗಳಿಂದ ಜನರು ಬರುವ ಸಾಧ್ಯತೆಯಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಕಾಂಗ್ರೆಸ್ ಪಕ್ಷಕ್ಕೆ ಬಹಳಷ್ಟು ಜನರು ಸೇರ್ಪಡೆಯಾಗಲು ಉತ್ಸುಕರಿದ್ದಾರೆ. ಕಾಂಗ್ರೆಸ್ ಸಿದ್ಧಾಂತವನ್ನು ಒಪ್ಪಿ ಬರುವ ಎಲ್ಲರಿಗೂ ಪಕ್ಷದಲ್ಲಿ ಸ್ವಾಗತವಿದೆ ಎಂದರು.

ಮೋದಿ ಸರ್ಕಾರದ ವೈಫಲ್ಯ, ನಮ್ಮ ಸಾಧನೆಯಿಂದ ಕಾಂಗ್ರೆಸ್ ಗೆಲುವು ಖಚಿತ ಎಂದು ಹೇಳಿದರು.

Comments (0)
Add Comment