2024ರ ಲೋಕಸಭಾ ಚುನಾವಣೆಗೆ ಈಗಾಗಲೇ ಕಸರತ್ತು – ಹಣದುಬ್ಬರ ಕಡಿಮೆ ಮಾಡಲು ಮೋದಿ ಸರ್ಕಾರ ಪ್ಲಾನ್

ನವದೆಹಲಿ : 2024ರ ಲೋಕಸಭಾ ಚುನಾವಣೆಗೆ ಈಗಾಗಲೇ ಕಸರತ್ತು ಶುರುವಾಗಿವೆ. ಆಡಳಿತ ಪಕ್ಷ ಹಾಗೂ ವಿಪಕ್ಷಗಳು ಭಾರಿ ಕಸರತ್ತು ನಡೆಸಿವೆ. ದೇಶದ ಗದ್ದುಗೆಯನ್ನು ಮತ್ತೊಮ್ಮೆ ಹಿಡಿಯಲು ಆಡಳಿತ ಪಕ್ಷ ಬಿಜೆಪಿ ಹಲವು ಲೆಕ್ಕಾಚಾರದಲ್ಲಿ ಮುಳುಗಿದೆ. ಇನ್ನು, ವಿಪಕ್ಷಗಳು ಸೇರಿಕೊಂಡು ‘ಇಂಡಿಯಾ’ ಎಂಬ ಮೈತ್ರಿಕೂಟ ರಚಿಸಿಕೊಂಡು ಬಿಜೆಪಿಯನ್ನು ಸೋಲಿಸಲು ಹವಣಿಸುತ್ತಿವೆ. ಅದರ ಜೊತೆಗೆ ಬೆಲೆ ಏರಿಕೆಯ ಬಿಸಿಯೂ ಆಡಳಿತಾರೂಢ ಬಿಜೆಪಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಅಲ್ಲದೇ, ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗೆ ಬೆನ್ನಿಗಿರುವಾಗಲೇ ಈ ಹಣದುಬ್ಬರ ಸರ್ಕಾರಕ್ಕೆ ಮುಳುವಾಗಬಹುದು ಎಂಬ ಆತಂಕವೂ ಕೇಂದ್ರವನ್ನು ಕಾಡುತ್ತಿದೆ. ಹೀಗಾಗಿ, ಹಣದುಬ್ಬರ ನಿಯಂತ್ರಿಸಲು ಪೆಟ್ರೋಲ್ ಡೀಸೆಲ್ ಸೇರಿದಂತೆ ಹಲವು ವಸ್ತುಗಳ ಮೇಲಿನ ತೆರಿಗೆ ಇಳಿಕೆಗೆ ಕೇಂದ್ರದ ಬಿಜೆಪಿ ಸರ್ಕಾರ ಚಿಂತನೆ ಮಾಡುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರದ ಬಿಜೆಪಿ ಸರ್ಕಾರ ಹದಿನೈದು ತಿಂಗಳಲ್ಲೇ ದಾಖಲೆ ಮಟ್ಟಕ್ಕೆ ಜಿಗಿದಿರುವ ಹಣದುಬ್ಬರವನ್ನು ನಿಯಂತ್ರಿಸಲು ಹಲವು ಕ್ರಮಕ್ಕೆ ಮುಂದಾಗಲಿದೆ. ಬೆಲೆ ಏರಿಕೆಯು ಬಿಜೆಪಿ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದರಿಂದ ಕೇಂದ್ರ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಬೆಲೆ ಏರಿಕೆ ಬಿಸಿಯಿಂದ ಕರ್ನಾಟಕದಲ್ಲಿ ಅಧಿಕಾರ ಕಳೆದುಕೊಂಡ ಬಿಜೆಪಿ, ಕೇಂದ್ರದಲ್ಲೂ ಇದು ಮರುಕಳಿಸದಂತೆ ಎಚ್ಚರ ವಹಿಸಲು ಮುಂದಾಗಿದೆ. ಪೆಟ್ರೋಲ್‌, ಡೀಸೆಲ್‌ ಮೇಲಿನ ತೆರಿಗೆ ಇಳಿಕೆ ಮಾಡುವುದು. ಗೋಧಿ, ಅಡುಗೆ ಎಣ್ಣೆ ಮೇಲಿನ ಆಮದು ಸುಂಕ ಕಡಿತ, ಆ ಮೂಲಕ ಬೆಲೆ ಇಳಿಕೆಗೆ ಕ್ರಮ ಕೈಗೊಳ್ಳುವದು. ಬಡವರಿಗೆ ವಸತಿ, ಕಡಿಮೆ ಬಡ್ಡಿ ದರದಲ್ಲಿ ಸಾಲ ಪೂರೈಕೆ, ಸಗಟು ವ್ಯಾಪಾರಿಗಳ ಆಹಾರ ಪದಾರ್ಥ ದಾಸ್ತಾನಿನ ಮೇಲೆ ಗರಿಷ್ಠ ಮಿತಿ ನಿಗದಿ ಮಾಡಲು ಮೋದಿ ಸರ್ಕಾರ ನಿರ್ಧರಿಸಿದೆ. ವಿವಿಧ ಸಚಿವಾಲಯಗಳಿಗೆ ಬಜೆಟ್‌ನಲ್ಲಿ ಹಂಚಿಕೆಯಾಗಿರುವ ಅನುದಾನವನ್ನು ಮರು ಹೊಂದಾಣಿಕೆ ಮಾಡಿ, 1 ಲಕ್ಷ ಕೋಟಿ ರೂ.ಗಳನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳನ್ನು ಉಲ್ಲೇಖಿಸಿ ‘ಬ್ಲೂಮ್‌ಬರ್ಗ್‌’ ಸುದ್ದಿ ಸಂಸ್ಥೆ ವರದಿ ಮಾಡಿದೆ.

Comments (0)
Add Comment