99 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಸೆಂಚುರಿ ವೇಳೆ ಸಿಕ್ಕಿಹಾಕಿಕೊಂಡ…!!

ಬೆಂಗಳೂರು: ಯುವಕನೊಬ್ಬ 99 ಬಾರಿ ಟ್ರಾಫಿಕ್ ರೂಲ್ಸ್ ನ ಬ್ರೇಕ್ ಮಾಡಿ ಪೊಲೀಸರ ಕಣ್ಣತಪ್ಪಿಸಿಕೊಂಡಿದ್ದು, 100ನೇ ಬಾರಿ ಉಲ್ಲಂಘನೆ ಮಾಡಿದಾಗ ಸೀದಾ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಇದೀಗ ಯುವಕನಿಗೆ ವಿಧಿಸಿದ ಟ್ರಾಫಿಕ್ ದಂಡದ ರೀಸಿದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೆಂಗಳೂರಿನ ಬಿಳೇಕಹಳ್ಳಿ ನಿವಾಸಿ ನೃತ್ಯ ಸಂಯೋಜಕ ಹಸನ್ ರೆಹಮಾನ್ (25) ಟ್ರಾಫಿಕ್ ರೂಲ್ ಬ್ರೇಕ್ ಮಾಡಿದ ಯುವಕ. ಈತ ಬಿಟಿಎಂ ಎರಡನೇ ಹಂತದಲ್ಲಿ ಡ್ಯಾನ್ಸ್ ಕ್ಲಾಸ್​​​ ನಡೆಸುತ್ತಿದ್ದಾರೆ. ಹಸನ್ ರೆಹಮಾನ್ ಬನ್ನೇರುಘಟ್ಟ ರಸ್ತೆಯ ವೇಗಾ ಸಿಟಿ ಜಂಕ್ಷನ್ ಬಳಿ ವಿರುದ್ಧ ದಿಕ್ಕಿನಲ್ಲಿ ವೇಗವಾಗಿ ವಾಹನ ಚಲಾಯಿಸುತ್ತಿದ್ದರು. ಇದರಿಂದ ಇತರ ಸವಾರರಿಗೆ ತೊಂದರೆಯಾಗುತ್ತಿತ್ತು. ರೆಹಮಾನ್​​ ಸಂಚಾರ ನಿಯಮ ಉಲ್ಲಂಘಿಸಿ ವಾಹನ ಚಲಾನೆ ಮಾಡುತ್ತಿರುವ ದೃಶ್ಯ ಕಾರಿನ ಡ್ಯಾಶ್‌ಕ್ಯಾಮ್​​ನಲ್ಲಿ ರೆಕಾರ್ಡ್​​ ಆಗಿದೆ.

ಇದೇ ವೇಳೆ ಕಾರು ಚಾಲಕ ಟ್ರಾಫಿಕ್ ಪೊಲೀಸರ ಆ್ಯಪ್​​ನಲ್ಲಿ ಬೈಕ್ ಮೇಲಿನ ಪ್ರಕರಣ​ಗಳ ಬಗ್ಗೆ ಪರಿಶೀಲಿಸಿದ್ದಾರೆ. ಈ ವೇಳೆ 99 ಪ್ರಕರಣಗಳು, 56 ಸಾವಿರ ರೂ. ದಂಡ ಬಾಕಿ ಇರುವುದು ಪತ್ತೆಯಾಗಿದೆ. ಕೂಡಲೇ ಕಾರು ಚಾಲಕ ಟ್ರಾಫಿಕ್ ಪೊಲೀಸರಿಗೆ ಬೈಕ್ ಫೋಟೋ ತೆಗೆದು ಸಂಚಾರ ಪೊಲೀಸರಿಗೆ ಟ್ಯಾಗ್ ಮಾಡಿ ಟ್ವೀಟ್​ ಮಾಡಿದ್ದಾರೆ.

ಈ ಟ್ವೀಟ್ ಇದೀಗ ವೈರಲ್ ಆಗಿದೆ. ಇನ್ನು ಪೊಲೀಸರು ನೃತ್ಯ ಸಂಯೋಕನ ಸ್ಕೂಟರ್ ವಶಪಡಿಸಿಕೊಂಡು, ದಂಡ ಕಟ್ಟಲು ಎರಡು ತಿಂಗಳ ಕಾಲಾವಕಾಶ ನೀಡಿದ್ದಾರೆ. ಇಲ್ಲದಿದ್ದರೆ ವಾಹನವನ್ನು ಹರಾಜು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಹಸನ್ ರೆಹಮಾನ್ 54 ಬಾರಿ ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ, 34 ಬಾರಿ ನಂಬರ್ ಪ್ಲೇಟ್ ದೋಷಪೂರಿತ ಪ್ರಕರಣಗಳು, ವಾಹನ ಚಲಾಯಿಸುವಾಗ ಮೊಬೈಲ್ ಬಳಸಿದ ಐದು ಪ್ರಕರಣಗಳು, ನೋ ಎಂಟ್ರಿ ಮೂರು ಮತ್ತು ನೋ ಪಾರ್ಕಿಂಗ್, ಜೀಬ್ರಾ ಕ್ರಾಸಿಂಗ್‌ನಲ್ಲಿ ಪಾರ್ಕಿಂಗ್ ಮತ್ತು ಟ್ರಿಪಲ್ ರೈಡಿಂಗ್ ಸೇರಿದಂತೆ ತಲಾ ಒಂದು ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿದರು.

Comments (0)
Add Comment