ರಾಷ್ಟ್ರೀಯ ಲೋಕ ಅದಾಲತ್: 2854 ಪ್ರಕರಣಗಳು ಇತ್ಯರ್ಥ: ಜಿಲ್ಲಾ ನ್ಯಾಯಾಧೀಶರಾದ ಪ್ರೇಮಾವತಿ ಮನಗೂಳಿ

 

ಚಿತ್ರದುರ್ಗ: ಜಿಲ್ಲೆಯಲ್ಲಿ ಕಳೆದ ಜುಲೈ 8ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ಒಟ್ಟು 2854 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಪ್ರೇಮಾವತಿ ಮನಗೂಳಿ ಎಂ ಹೇಳಿದರು.

ನಗರದ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ಎಲ್ಲಾ 23 ನ್ಯಾಯಾಲಯಗಳಲ್ಲಿ ದಾಖಲೆಯ ಪ್ರಮಾಣದಲ್ಲಿ ಚಾಲ್ತಿಯಲ್ಲಿದ್ದ ಪ್ರಕರಣಗಳು ರಾಜೀ ಮುಖಾಂತರ ಇತ್ಯರ್ಥ ಆಗಿರುವುದು ಸಂತೋಷದ ಸಂಗತಿ ಮತ್ತು ಮುಂದಿನ ಲೋಕ ಅದಾಲತ್‍ಗೆ ಉತ್ತೇಜನ ನೀಡಿದೆ ಎಂದು ತಿಳಿಸಿದರು.

ಲೋಕ ಅದಾಲತ್‍ನಲ್ಲಿ 5525 ಪ್ರಕರಣಗಳನ್ನು ರಾಜೀ ಸಂಧಾನಕ್ಕೆ ಕೈಗೆತ್ತಿಕೊಳ್ಳಲಾಗಿತ್ತು. ಇದರಲ್ಲಿ 2854 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಅದರಲ್ಲಿ ವಿಶೇಷವಾಗಿ 74 ಪಾಲು ವಿಭಾಗದ ಪ್ರಕರಣಗಳು, 322 ಚೆಕ್‍ಬೌನ್ಸ್ ಪ್ರಕರಣಗಳು, 122 ಕ್ರಿಮಿನಲ್ ಕಾಂಪೌಂಡ್ ಪ್ರಕರಣಗಳು, 133 ಅಪಘಾತ ವಿಮಾ ಪ್ರಕರಣಗಳು, 73 ಕೌಟುಂಬಿಕ ಪ್ರಕರಣಗಳು, 188 ಅಮಲ್ ಜಾರಿ ಪ್ರಕರಣಗಳು, 322 ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು, 24 ಕರಾರಿಗೆ ಸಂಬಂಧಿಸಿದ ದಾವೆಗಳು, 166 ವಿವಿಧ ರೀತಿಯ ಸಿವಿಲ್ ದಾವೆಗಳು, 160 ಕ್ರಿಮಿನಲ್ ಕಾಂಪೌಂಡಬಲ್ ಪ್ರಕರಣಗಳು (ಐಪಿಸಿ ಹೊರತುಪಡಿಸಿ ಬೇರೆ ಕಾಯ್ದೆಗಳಲ್ಲಿ ದಾಖಲಾದ ಪ್ರಕರಣಗಳು), ಇತರೆ ಅಪರಾಧಿಕ ಕಾಯ್ದೆಗಳ ಅಡಿಯಲ್ಲಿ ಸಾವಿರಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥವಾಗಿರುವುದು ಗಮನಾರ್ಹ ಸಂಗತಿಯಾಗಿದೆ ಎಂದರು.

ಲೋಕ ಅದಾಲತ್‍ನಲ್ಲಿ ವಿಶೇಷವಾಗಿ ಚಿತ್ರದುರ್ಗದ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯದಲ್ಲಿ 29 ವರ್ಷಗಳ ಹಳೆಯದಾದ ವ್ಯಾಜ್ಯವನ್ನು ಪಕ್ಷಗಾರರು ರಾಜೀ ಮಾಡಿಕೊಂಡಿದ್ದು, ವಿವಾದಕ್ಕೆ ತಾರ್ಕಿಕ ಅಂತ್ಯ ಸಿಕ್ಕಿದೆ. ಹಿರಿಯೂರಿನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಮೂಲ ದಾವೆಯಲ್ಲಿ ರೂ.5,06,92,092/- ಮೊತ್ತದ (ಐದು ಕೋಟಿ ಆರು ಲಕ್ಷ ತೊಂಭತ್ತೆರಡು ಸಾವಿರದ ತೊಂಭತ್ತೆರಡು ರೂಪಾಯಿಗಳು) ಪರಿಹಾರದ ಹಣವನ್ನು ರಾಜೀ ಮೂಲಕ ಇತ್ಯರ್ಥಪಡಿಸಿರುವುದು ವಿಶೇಷವಾಗಿದೆ. ಈ ಪ್ರಕರಣವು ಒಂದೇ ಕುಟುಂಬದ ಸದಸ್ಯರ ನಡುವಿನ ವ್ಯಾಜ್ಯದಿಂದಾಗಿ ಭೂಸ್ವಾಧೀನದ ಪರಿಹಾರದ ಹಣವನ್ನು ಕೋರ್ಟಿನಲ್ಲಿ ಡಿಫಾಸಿಟ್ ಮಾಡಲಾಗಿತ್ತು. ಇದೀಗ ಕುಟುಂಬದ ಸದಸ್ಯರೆಲ್ಲರೂ ಲೋಕ ಅದಾಲತ್‍ನಲ್ಲಿ ರಾಜೀ ಮಾಡಿಕೊಂಡು ಪ್ರಕರಣ ಇತ್ಯರ್ಥ ಪಡಿಸಲಾಗಿದೆ. ಅಲ್ಲದೇ ಹೊಸದುರ್ಗದ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 13 ವರ್ಷಗಳಿಂದ ದೂರವಿದ್ದ ದಂಪತಿಗಳ ರಾಜೀ ಮಾಡಿ ಒಂದಾಗಿ ಹೋಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಲೋಕ ಅದಾಲತ್‍ಗೆ ಸಹಕರಿಸಿದ ವಕೀಲರು, ವಿಮಾ ಕಂಪನಿಗಳು, ಪೊಲೀಸ್ ಇಲಾಖೆ, ಕೆಪಿಟಿಸಿಎಲ್, ಪೈನಾನ್ಸ್ ಕಂಪನಿಗಳು, ಪಕ್ಷಗಾರರು, ನಗರಸಭೆ ಮತ್ತು ಇತರೆ ಇಲಾಖೆಗಳಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಧನ್ಯವಾದ ಸಲ್ಲಿಸಿದ ಅವರು, ಮುಂಬರುವ ಸೆಪ್ಟೆಂಬರ್ 9ಕ್ಕೆ ರಾಷ್ಟ್ರೀಯ ಲೋಕ ಅದಾಲತ್ ನಿಗಧಿಯಾಗಿದ್ದು, ಇನ್ನೂ ಹೆಚ್ಚಿನ ಪ್ರಕರಣಗಳನ್ನು ರಾಜೀ ಮೂಲಕ ಬಗೆಹರಿಸಿಕೊಳ್ಳಲು ಸಾರ್ವಜನಿಕರಲ್ಲಿ ವಿನಂತಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಇದ್ದರು.

Rashtriya Lok Adalat: 2854 cases settled: District Judge Premavathi Managuli
Comments (0)
Add Comment