ಕಾಸರಗೋಡು ಜಿಲ್ಲೆಯ ಕುಂಬಳೆಯ ಅನಂತಪುರ ಈ ಹೆಸರು ಹಲವರಿಗೆ ಅಪರಿಚಿತ. ಇಲ್ಲಿನ ಕೆರೆಯ ಮಧ್ಯದಲ್ಲಿ ನೆಲೆಸಿರುವನು ಪದ್ಮನಾಭ ಸ್ವಾಮಿ. ಕೇರಳದ ತಿರುವನಂತಪುರಂನ ಅನಂತ ಪದ್ಮನಾಭನ
ಮೂಲ‌ನೆಲೆ ಇದು ಎಂದು ಕೂಡಾ ಹೇಳಲಾಗುತ್ತದೆ. ಈ ಆಲಯಕ್ಕೆ ತನ್ನದೇ ಆದ ವಿಶಿಷ್ಟತೆ ಹಾಗೂ ಧಾರ್ಮಿಕ ಮಹತ್ವವಿದೆ. ತುಳುನಾಡಿದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಇದೂ ಒಂದು ಎಂಬ ಪ್ರಾಶಸ್ತ್ಯ ಕೂಡಾ ಈ ದೇಗುಲಕ್ಕೆ ಇದೆ. ಈ ದೇಗುಲದಲ್ಲಿ ಅನಂತ ಪದ್ಮನಾಭನು ಶೇಷ ಶಯನನಾಗಿಲ್ಲ. ಬದಲಾಗಿ ಐದು ಹೆಡೆಯ ಸರ್ಪದ ಮೇಲೆ ಕುಳಿತಿರುವಂತೆ ದರ್ಶನವನ್ನು ನೀಡುತ್ತಾನೆ.

ಈ ಕ್ಷೇತ್ರದ ಬಹಳ ಪ್ರಮುಖವಾದ ಹಾಗೂ ಅದ್ಭುತ ಎನಿಸುವ ವೈಶಿಷ್ಟ್ಯವೆಂದರೆ ಆಲಯವಿರುವ ಕೆರೆಯಲ್ಲಿರುವ ಬಬಿಯ ಅದ್ಭುತ ಜೀವಿ. ಆ ಜೀವಿ ಒಂದು ಮೊಸಳೆ. ಹೌದು ಅಕ್ಷರಶಃ ಮೊಸಳೆಯೊಂದು ಆಲಯದ ಪ್ರಾಂಗಣದಲ್ಲಿ ಕೆರೆಯಲ್ಲಿರುವ ನೀರನ್ನು ವಾಸಸ್ಥಾನ ಮಾಡಿಕೊಂಡಿದೆ. ಆದರೆ ಆ ಭಗವಂತನ ಲೀಲೆಗಳು ಹಾಗೂ ಮಾಯೆ ಹೇಗಿದೆಯೆಂದರೆ, ಸಾಮಾನ್ಯವಾಗಿಯೇ ಮೊಸಳೆ ಮಾಂಸಹಾರಿಯೆಂಬುದು ಜಗವರಿತ ಸತ್ಯ. ಆದರೆ ಪ್ರಕೃತಿಯ ತತ್ವಕ್ಕೆ ವಿರುದ್ಧವಾಗಿ ಇಲ್ಲಿರುವ ಬಬಿಯ ಒಂದು ಸಸ್ಯಹಾರಿ ಮೊಸಳೆ ಎನ್ನುವುದು ವಿಶೇಷ. ನಂಬಲು ಇದು ಕಷ್ಟ ಎನಿಸಿದರೂ ಇದೇ ಅಲ್ಲಿನ ವಾಸ್ತವ..

ಬಹಳ ಹಿಂದೆ ಒಮ್ಮೆ ಇಲ್ಲಿಗೆ ಬ್ರಿಟಿಷರು ಬಂದಾಗ ಅಬರು ಈ ಜಾಗದಲ್ಲಿ ಟೆಂಟ್ ಹಾಕಿದ್ದರು. ಆ ಸಂದರ್ಭದಲ್ಲಿ ಈ ಕೆರೆಯಲ್ಲಿ ವಾಸವಿದ್ದ ಮೊಸಳೆಯನ್ನು ಕೊಲ್ಲಲು ಅವರೊಂದು ಉಪಾಯ ಮಾಡಿದರು. ಹೆಸರು ಕರೆದರೆ ಹೊರಗೆ ಬರುವ ಈ ಮೊಸಳೆಯ ಸಾಧು ಗುಣವನ್ನೇ ಅದರ ದುರ್ಬಲತೆ ಎಂದು ಅವರು ತಿಳಿದರು. ಅವರು ಬಬಿಯಾ ಎಂದು ಕರೆದಾಗ ಮೊಸಳೆ ಎಂದಿನಂತೆ ಹೊರ ಬಂದಿತ್ತು. ಆಗ ಬ್ರಿಟಿಷ್ ಅಧಿಕಾರಿಯೊಬ್ಬನು ಮೊಸಳೆಗೆ ಗುಂಡು ಹಾರಿಸಿ, ಅದನ್ನು ಕೊಂದು ಹಾಕಿದನು. ಆದರೆ ಶಾಪವೋ, ಮಾಡಿದ ಪಾಪವೋ ಅಥವಾ ದೈವ ವಿಧಿಸಿದ ಶಿಕ್ಷೆಯೋ ಎಂಬಂತೆ ಆ ಮೊಸಳೆಯನ್ನು ಕೊಂದ ಬ್ರಿಟಿಷ್ ಅಧಿಕಾರಿಯನ್ನು ಒಂದು ವಿಷ ಸರ್ಪಕಚ್ಚಿ ಆತ ಪ್ರಾಣ ಬಿಟ್ಟ ಎಂಬುದು ಕಥೆ.

ಅಲ್ಲಿಗೆ ಈ ಕಥೆ ಮುಗಿಯುವುದಿಲ್ಲ. ಇದಾದ ನಂತರ ಮತ್ತೊಂದು ಅದ್ಭುತ ಅಲ್ಲಿ ನಡೆಯಿತು. ಆ ಕೆರೆಯಲ್ಲಿ ಇನ್ನೊಂದು ಮೊಸಳೆ ಗೋಚರಿಸಿತು. ಅರ್ಚಕರು ಈ ಮೊಸಳೆಗೂ ಕೂಡಾ ಬಬಿಯಾ ಎಂಬ ಹೆಸರನ್ನೇ ಇಟ್ಟರು. ಅಲ್ಲದೆ ಆ ಮೊಸಳೆಗೆ ಪ್ರತಿದಿನ ಮಧ್ಯಾಹ್ನ ಮಹಾಪೂಜೆ ಮುಗಿದ ನಂತರ ನೈವೇದ್ಯವನ್ನು ನೀಡುವ ಸಂಪ್ರದಾಯ ಇದ್ದು ಆ ಸಮಯಕ್ಕೆ ಬಬಿಯಾ ಎಂದು ಕರೆದ ಕೂಡಲೇ ವಿಚಿತ್ರ ಎಂಬಂತೆ ಮೊಸಳೆಯು ಕೆರೆಯಲ್ಲಿರುವ ಒಂದು ಸುರಂಗದಿಂದ ಹೊರಗೆ ಬಂದು ಅರ್ಚಕರು ನೀಡುವ ನೈವೇದ್ಯವನ್ನು ಸ್ವೀಕರಿಸಿ ಎಲ್ಲರನ್ನೂ ಅಚ್ಚರಿಯಲ್ಲಿ ಮುಳುಗಿಸುತ್ತದೆ.

ಕೇವಲ ಅರ್ಚಕರು ಮಾತ್ರವಲ್ಲದೆ ಈ ಮೊಸಳೆಗೆ ಜನರು ಕೂಡಾ ತಾವು ಮಾಡಿಕೊಂಡಿರುವ ಹರಕೆ ಫಲಿಸಿದಾಗ, ಅದನ್ನು ತೀರಿಸಲು ಕೂಡಾ ಈ ದೈವಿಕ ಎಂದೇ ಪರಿಗಣಿಸಿರುವ ಮೊಸಳೆಗೆ ನೈವೇದ್ಯವನ್ನು ಸಮರ್ಪಿಸುವ ಪದ್ಧತಿಯನ್ನು ಮಾಡಿಕೊಂಡು ಬಂದಿದ್ದಾರೆ. ಸ್ವಾಭಾವಿಕವಾಗಿ ಮೊಸಳೆ ಎಂದರೆ ಕ್ರೂರ ಜಂತು ಎಂದೇ ಭಾವಿಸಿ ಜನರು ಅದರ ಬಳಿ ಹೋಗಲು ಹೆದರುವರು. ಆದರೆ ಈ ಬಬಿಯಾ ಯಾರಿಗೂ ಯಾವುದೇ ರೀತಿಯಲ್ಲೂ ತೊಂದರೆಯನ್ನು ಕೊಡುವುದಿಲ್ಲ. ಬಬಿಯಾ ಅದೇ ಕೆರೆಯಲ್ಲಿರುವ ಮೀನುಗಳನ್ನೂ ಕೂಡಾ ತಿನ್ನುವುದಿಲ್ಲ ಎಂದಾಗ ಇದೆಲ್ಲವೂ ದೈವೀ ಶಕ್ತಿಯ ಲೀಲೆ ಎನ್ನಲೇಬೇಕು.

https://youtu.be/oAidmPfl2ls

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here