ಅಚ್ಚ ಕನ್ನಡ ಭಾಷೆಯಲ್ಲಿ ನಿರೂಪಣೆ ಮಾಡುವ, ಕನ್ನಡ ಭಾಷೆಯನ್ನು ಬಹಳ ಸ್ಪಷ್ಟವಾಗಿ ತನ್ನ ನಿರೂಪಣೆಯಲ್ಲಿ ಬಳಸುವ ಒಬ್ಬರೇ ನಿರೂಪಕಿ ಎಂದರೆ ಅದು ಅಪರ್ಣಾ ಅವರು. ಈಗಾಗಲೇ ಕಿರುತೆರೆಯಲ್ಲಿ ಜನರ ಮನಸ್ಸು ಗೆದ್ದಿರುವ ಅಪರ್ಣಾ ಅವರು, ನಟನೆಯಲ್ಲೂ ತಮ್ಮ ಛಾಪು ಮೂಡಿಸಿರುವರಾದರೂ, ನಿರೂಪಣೆ ಯಿಂದಲೇ ಅವರು ಜನರ ಗಮನ ಸೆಳೆದವರು ಎಂಬುದು ವಾಸ್ತವ. ಅಪರ್ಣಾ ಅವರ ಧ್ವನಿ, ನಿರೂಪಣೆಯಲ್ಲಿ ಸ್ಪಷ್ಟ ಹಾಗೂ ಶುದ್ಧವಾದ ಭಾಷೆಯ ಬಳಕೆ ಎಲ್ಲರನ್ನೂ ಆಕರ್ಷಿಸುವ ಸಾಮರ್ಥ್ಯವನ್ನು ಹೊಂದಿದೆ.
ಬೆಂಗಳೂರು ಮಹಾನಗರದಲ್ಲಿ ಮೆಟ್ರೋ ಸಂಚಾರ ಮಾಡುವವರಿಗೆ ಪ್ರತಿ ದಿನ ಅವರ ಧ್ವನಿ ಕೇಳುತ್ತದೆ.

ಮೆಟ್ರೋದಲ್ಲಿ ಪ್ರತಿದಿನ ಕರ್ಣಾನಂದವನ್ನು ನೀಡುವ ಅಚ್ಚಕನ್ನಡದ, ಮುದ್ರಿತ ಧ್ವನಿ ಅಪರ್ಣಾ ಅವರದ್ದು ಎನ್ನುವುದು ವಿಶೇಷ. ನಿರೂಪಣೆ ಜೊತೆಗೆ ಅಪರ್ಣಾ ಅವರ ಮಜಾ ಟಾಕೀಸ್​​ ಮೂಲಕ ಕೂಡಾ ಹೆಸರು ಮಾಡಿದ್ದಾರೆ. ಮಜಾ ಟಾಕೀಸ್​​​​​ನಲ್ಲಿ ರಾಣಿ ಅಕ್ಕ ವರಲಕ್ಷ್ಮಿಯಾಗಿ ಕಾಣಿಸಿಕೊಂಡಿರುವ ಅಪರ್ಣಾ ಇದೀಗ ಧಾರಾವಾಹಿಯಲ್ಲಿ ಕೂಡಾ ನಟಿಸುತ್ತಿದ್ದಾರೆ. ಈ ಹಿಂದೆ ಅವರು ಮೂಡಲಮನೆ, ಮುಕ್ತ, ಪ್ರೀತಿ ಇಲ್ಲದ ಮೇಲೆ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದರು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಮಸಣದ ಹೂವು ಸಿನಿಮಾದಲ್ಲಿ ನಾಯಕಿಯಾಗಿದ್ದವರು ಕೂಡಾ ಅಪರ್ಣಾ. ನಂತರ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು.

ಹೀಗೆ ಅಪರ್ಣಾ ಅವರು‌ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲೂ ಕೂಡಾ ಜನ‌ಮೆಚ್ಚುಗೆ ಪಡೆದವರು. ಇಂತಹ ಪ್ರತಿಭಾನ್ವಿತ ನಟಿ, ನಿರೂಪಕಿಯಾದ ಅಪರ್ಣಾ ಅವರು 2005ರಲ್ಲಿ ನಾಗರಾಜ್ ವಸ್ತಾರೆ ಅವರನ್ನು ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಅವರ ಪತಿ ನಾಗರಾಜ್ ವಸ್ತಾರೆ ವಾಸ್ತುಶಿಲ್ಪಿ. 2002 ರಲ್ಲಿ ದೇಶದ ಹತ್ತು ಪ್ರತಿಭಾನ್ವಿತ ಯುವ ವಿನ್ಯಾಸಕಾರರಾಗಿ ಆಯ್ಕೆಯಾದ ಹೆಗ್ಗಳಿಕೆ ಅವರದ್ದು‌. ಅಪರ್ಣಾ ಅವರ ಪತಿ ವಾಸ್ತುಶಿಲ್ಪಿಯಾಗಿ ತಮ್ಮ ಪ್ರತಿಭೆ ಮೆರೆದರೆ, ಪತ್ನಿ ನಿರೂಪಕಿ, ನಟಿ, ಕಂಠದಾನ ಕಲಾವಿದೆಯಾಗಿ ಕರ್ನಾಟಕದ ಮನೆ ಮಾತಾಗಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here