ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಕಸಪೊರಕೆಯಲ್ಲಿ ಡಿಸಿ ಹಾಕಿ ಆಮ್ ಆದ್ಮಿ ಪಾರ್ಟಿ ಮೂರನೇ ಬಾರಿಗೆ ದೆಹಲಿ ಗದ್ದುಗೆ ಹಿಡಿದಿದೆ. ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ನಡೆಸಿದ ಭಾರಿ ಪ್ರಚಾರಾಂದೋಲನದ ನಡುವೆಯೂ ಆಪ್ ಗೆಲ್ಲಲು ಅನೇಕ ಕಾರಣಗಳಿವೆ. ಶಾಹೀನ್ ಬಾಘ್ ಪ್ರತಿಭಟನೆ, ಪೌರಶಾಸನ ಮುಂತಾದ ವಿಷಯಗಳನ್ನು ಬಿಜೆಪಿ ಕೆದಕಿ ಪ್ರಚಾರ ಮಾಡಿತ್ತು. ಆಮ್ ಆದ್ಮಿ ಪಾರ್ಟಿ ತನ್ನ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಮತಯಾಚನೆ ನಡೆಸಿತು. ಆದರೆ ೨೦೧೫ರ ಸಾಧನೆಯನ್ನು ಮತ್ತೊಮ್ಮೆ ಮಾಡುವಲ್ಲಿ ಕೇಜ್ರೀವಾಲ್ ಯಶಸ್ವಿಯಾಗಿದ್ದಾರೆ.

ಕೇಜ್ರೀವಾಲ್‌ಗೆ ಅತ್ಯಂತ ಸಹಕಾರಿಯಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಆಪ್ ಸರ್ಕಾರ ತೆಗೆದುಕೊಂಡ ನಿಲುವು ಮತ್ತು ಕ್ರಮಗಳು. ತಮ್ಮ ಆಡಳಿತದ ಮೂಲಕ ರಾಷ್ಟ್ರ ರಾಜಧಾನಿಯ ಶಾಲಾ ಮಕ್ಕಳನ್ನು ಕೇಜ್ರೀವಾಲ್ ಹಲವು ರೀತಿಯಲ್ಲಿ ಮುಟ್ಟಲು ಅವರು ಯಶಸ್ವಿಯಾಗಿದ್ದಾರೆ. ದೆಹಲಿಯಲ್ಲಿರುವ ೨೦೦ಕ್ಕೂ ಹೆಚ್ಚು ಖಾಸಗಿ ಶಾಲೆಗಳಲ್ಲಿ ಕಳೆದ ಐದು ವರ್ಷಗಳಿಂದ ಶುಲ್ಕ ಏರಿಸಲು ಆಪ್ ಸರ್ಕಾರ ಬಿಟ್ಟಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ. ಇದನ್ನು ಮುಂದೆಯೂ ಹೀಗೆ ಮುಂದುವರಿಸುವುದಾಗಿ ಕೇಜ್ರೀವಾಲ್ ವಾಗ್ದಾನ ನೀಡಿದ್ದರು.
ಕೇಜ್ರೀವಾಲ್ ಸರ್ಕಾರದ ಮತ್ತೊಂದು ಮಹತ್ವದ ಹೆಜ್ಜೆ ಸರ್ಕಾರಿ ಶಾಲೆಗಳನ್ನು ಆಧುನೀಕರಣಗೊಳಿಸಿ, ಮೂಲಸೌಕರ್ಯಗಳನ್ನು ಒದಗಿಸುವುದು. ಶಿಕ್ಷಣ ಖಾತೆ ಹೊಂದಿದ್ದ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಈ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಹನ್ನೆರಡನೇ ತರಗತಿ ಸಿಬಿಎಸ್‌ಇ ಪರೀಕ್ಷೆಗಳಲ್ಲಿ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳ ಫಲಿತಾಂಶ ಚೆನ್ನಾಗಿ ಮೂಡಿಬಂದಿದ್ದು ಇದಕ್ಕೊಂದು ನಿದರ್ಶನ. ಇದು ದೆಹಲಿ ಜನರ ಮನಸ್ಸನ್ನು ಮುಟ್ಟಿತ್ತು.
ಆರು ತಿಂಗಳ ಹಿಂದೆ ವಿದ್ಯುತ್ ದರದಲ್ಲಿ ಸಬ್ಸಿಡಿ ಪ್ರಕಟಿಸಿದ್ದರು. ೨೦೦ ಯೂನಿಟ್‌ಗಿಂತಲೂ ಕಡಿಮೆ ವಿದ್ಯುತ್ ಬಳಕೆ ಮಾಡಿದಲ್ಲಿ ಶೂನ್ಯ ಬಿಲ್ ನೀಡುವ ಈ ಯೋಜನೆ ಜನರ ಮನಸ್ಸನ್ನು ಗೆದ್ದಿತ್ತು.

ಈ ಮೊದಲು ೨೦೦ ಯೂನಿಟ್‌ಗಳಿಗೆ ೬೨೨ ರೂ. ಕಟ್ಟುತ್ತಿದ್ದ ಜನರಿಗೆ ಅಷ್ಟು ಹಣ ಉಳಿತಾಯವಾದಂತಾಗಿತ್ತು.
ತಿಂಗಳಿಗೆ ೨೦,೦೦೦ ಲೀಟರ್‌ವರೆಗೆ ನೀರು ಉಚಿತವಾಗಿ ನೀಡಲಾಗುವುದು ಎನ್ನುವ ಆಶ್ವಾಸನೆಯನ್ನು ೨೦೧೭ರಲ್ಲಿ ಆಪ್ ಈಡೇರಿಸಿತ್ತು. ಈ ಹಿಂದೆ ೧೦೦೦ ಮೊಹಲ್ಲಾ ಕ್ಲಿನಿಕ್‌ಗಳನ್ನು ಸ್ಥಾಪಿಸುವ ಮೂಲಕ ಉಚಿತ ವೈದ್ಯಕೀಯ ನೆರವು ನೀಡುವುದಾಗಿ ಆಪ್ ಆಶ್ವಾಸನೆ ನೀಡಿತ್ತು. ಆದರೆ ೩೦೧ ಮೊಹಲ್ಲಾ ಕ್ಲಿನಿಕ್‌ಗಳನ್ನು ಸ್ಥಾಪಿಸಿದ್ದು, ವಿಶ್ವದ ಗಮನ ಸೆಳೆದಿದೆ. ಡಿಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ, ಮೃದು ಹಿಂದುತ್ವ, ಮುಖ್ಯಮಂತ್ರಿ ತೀರ್ಥಯಾತ್ರ ಯೋಜನೆ ಮುಂತಾದವು ಜನರನ್ನು ಆಕರ್ಷಿಸಿವೆ.
ಜನಪ್ರಿಯ ಯೋಜನೆಗಳಿಂದ ಕೇಜ್ರೀವಾಲ್ ಪ್ರಭಾವಿ ಬಿಜೆಪಿಯನ್ನು ಎದುರಿಸಿ ಗೆಲ್ಲಲು ಸಾಧ್ಯವಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here