ಝೀರೋ ಟ್ರಾಫಿಕ್ ಈ ಪದವು ದೋಸ್ತಿ ಸರ್ಕಾರವು ಅಸ್ತಿತ್ವದಲ್ಲಿದ್ದಾಗ ದೊಡ್ಡ ಸುದ್ದಿಯಾಗಿತ್ತು. ಅದರಲ್ಲೂ ಆಗಿನ ಡಿಸಿಎಂ ಆಗಿದ್ದ ಪರಮೇಶ್ವರ್ ಅವರು ಝೀರೋ ಟ್ರಾಫಿಕ್ ಸೌಲಭ್ಯ ಪಡೆದು ಸಾರ್ವಜನಿಕರ ಅಸಮಾಧಾನ ಮತ್ತು ಆಕ್ರೋಶಕ್ಕೆ ಕಾರಣವಾಗಿತ್ತು. ಝೀರೋ ಟ್ರಾಫಿಕ್ ಬಗ್ಗೆ ಸಾರ್ವಜನಿಕರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಆದರೆ ಈಗ ಬಿಜೆಪಿ ಸರ್ಕಾರದಲ್ಲಿ ಕೂಡಾ ಅಂತಹುದೇ ಒಂದು ಘಟನೆ ನಡೆದಿದ್ದು, ಮಾನ್ಯ ಉಪ ಮುಖ್ಯಮಂತ್ರಿಯವರಾದ ಅಶ್ವಥ್ ನಾರಾಯಣ್ ಅವರು ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ಕು ಬಾರಿ ಝೀರೋ ಟ್ರಾಫಿಕ್ ಪಡೆದು ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಡಿಸಿಎಂ ಅಶ್ವಥ್ ನಾರಾಯಣ್‍ ಅವರ ಸಂಚಾರ ಸುಗಮವಾಗಿರಲಿ ಎಂದು ಪೊಲೀಸರು ನಾಲ್ಕು ಬಾರೀ ಝಿರೋ ಟ್ರಾಫಿಕ್ ಸೌಲಭ್ಯ ನೀಡಿದ ಪರಿಣಾಮದಿಂದಾಗಿ, ಸಾರ್ವಜನಿಕರು ಬಿಸಿಲಿನಲ್ಲಿ ನಿಂತುಕೊಂಡು ಸಂಕಷ್ಟ ಅನುಭವಿಸಬೇಕಾಯಿತು. ಇಂತಹ ಒಂದು ಘಟನೆ ನಡೆದಿದ್ದು ಚಿಕ್ಕಮಗಳೂರಿನಲ್ಲಿ. ಜನ ಝೀರೋ ಟ್ರಾಫಿಕ್ ನಿಂದಾಗಿ ರೋಸಿ ಹೋಗುವಂತಹ ಪರಿಸ್ಥಿತಿ ಎದುರಿಸಬೇಕಾಯಿತು. ಚಿಕ್ಕಮಗಳೂರು ಪ್ರವಾಸದಲ್ಲಿ ಇರುವ ಡಿಸಿಎಂ ಅಶ್ವಥ್ ನಾರಾಯಣ್ ಅವರು ಇಂದು ನಾಲ್ಕು ಸಲ ಝೀರೋ ಟ್ರಾಫಿಕ್ ಸೌಲಭ್ಯ ಬಳಸಿಕೊಂಡಿದ್ದಾರೆ.

ಇಂದು ಚಿಕ್ಕಮಗಳೂರು ನಗರದ ತೊಗರಿಹಂಕಲ್, ಹನುಮಂತಪ್ಪ ವೃತ್ತ, ಮಲಂದೂರು ಸರ್ಕಲ್ ನಲ್ಲಿ ಟ್ರಾಫಿಕ್ ಜಾಮ್ ಆದ ಕಾರಣ ಆ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಯಿತು. ಈ ಹಿಂದೆ ಒಮ್ಮೆ ಅವರು ತನಗೆ ಝೀರೋ ಟ್ರಾಫಿಕ್ ಬೇಡ ,ತಾನು ಜನರಿಗೆ ತೊಂದರೆ ಕೊಡಲು ಇಚ್ಛಿಸುವುದಿಲ್ಲ ಎಂದು ಮಾನ್ಯ ಡಿಸಿಎಂ ಅವರು ಹೇಳಿದ್ದರು. ಅಲ್ಲದೆ ಹೈ ಕಮಾಂಡ್ ಕೂಡಾ ಝೀರೋ ಟ್ರಾಫಿಕ್ ತೆಗೆದುಕೊಳ್ಳದಿರಲು ಸೂಚನೆ ನೀಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here