ಮೊಘಲ್ ಸಾಮ್ರಾಜ್ಯ ಭಾರತದ ಇತಿಹಾಸದಲ್ಲಿ ಒಂದು ಮಹತ್ವದ ಭಾಗ ಎಂದು ಎಲ್ಲರಿಗೂ ತಿಳಿದಿದೆ‌. ಈ ವಂಶದ ಕೊನೆಯ ದೊರೆ ಬಹದ್ದೂರ್ ಷಾ ಜಾಫರ್ ನ ವಂಶಸ್ಥ ಎಂದು ಹೇಳಿಕೊಳ್ಳುವ ಪ್ರಿನ್ಸ್​ ಯಾಕೂಬ್ ಹಬೀಬುದ್ದೀನ್ ಟುಸಿ, ನಿನ್ನೆ ರಾಮ ಮಂದಿರ ನಿರ್ಮಾಣ ವಿಷಯವಾಗಿ ತನ್ನ ಐತಿಹಾಸಿಕ ತೀರ್ಪು ನೀಡಿದ ನಂತರ ಅದಕ್ಕೆ ಪ್ರತಿಕ್ರಿಯೆ ನೀಡುತ್ತಾ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ತಾವು ಕೂಡಾ ಕೈ ಜೋಡಿಸುವ ಮೂಲಕ ಸಹೋದರತ್ವ ಭಾವನೆಗೆ ಉದಾಹರಣೆಯಾಗಿ ನಿಲ್ಲಬೇಕು ಎನ್ನುವ ಕರೆಯನ್ನು ಮುಸ್ಲಿಂ ಸಮುದಾಯಕ್ಕೆ ನೀಡಿದ್ದಾರೆ. ಆ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ.

ಟುಸಿ ಮಾತನಾಡುತ್ತಾ ಸುಪ್ರೀಂ ಕೋರ್ಟ್​ ತೀರ್ಪನ್ನು ಐತಿಹಾಸಿಕ ಎಂದು ಬಣ್ಣಿಸಿದ್ದು, ನ್ಯಾಯಾಲಯದ ನೀಡಿರುವ ತೀರ್ಪನ್ನು ಎಲ್ಲರೂ ಸಂತೋಷವಾಗಿ ಒಪ್ಪಿಕೊಳ್ಳಬೇಕೆಂದು ಹೇಳಿದ್ದಾರೆ. ಅಲ್ಲದೆ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರವನ್ನು ನಿರ್ಮಾಣ ಮಾಡುವ ಕಾರ್ಯದಲ್ಲಿ ಹಿಂದುಗಳು ಮತ್ತು ಮುಸ್ಲಿಮರು ಜತೆಯಾಗಿ ಮುಂದೆ ಬರಬೇಕು. ನಿಜವಾದ ಜಾತ್ಯತೀತ ಮತ್ತು ಧಾರ್ಮಿಕ ಸಹೋದರತ್ವವನ್ನು ಮೆರೆದು ಜಗತ್ತಿಗೆ ನಾವು ಮಾದರಿಯಾಗಬೇಕೆಂದು ಎರಡು ಸಮುದಾಯಗಳ ಮುಂದೆ ತಮ್ಮ ಮನವಿ ಮಾಡಿದ್ದಾರೆ.

ಟುಸಿ ಇದೇ ಸಂದರ್ಭದಲ್ಲಿ ತಾನು ರಾಮ ಮಂದಿರ ನಿರ್ಮಾಣಕ್ಕೆ ಚಿನ್ನದ ಇಟ್ಟಿಗೆಯನ್ನು ನೀಡುವುದಾಗಿ ಹೇಳಿದ್ದ ಮಾತನ್ನು ಸ್ಮರಿಸುತ್ತಾ, ರಾಮ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದಾಗ, ತಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಚಿನ್ನದ ಇಟ್ಟಿಗೆಯನ್ನು ಹಸ್ತಾಂತರ ಮಾಡುವುದಾಗಿ ಹೇಳಿದ್ದಾರೆ. ಈ ಮೂಲಕ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ತನ್ನ ಬೆಂಬಲವನ್ನು ಸೂಚಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here