ಭಾರೀ ಮಳೆ, ಪ್ರವಾಹ ಹಾಗೂ ಭೂಕುಸಿತದಿಂದ ತತ್ತರಿಸಿರುವ ಕೊಡಗು ಹಾಗೂ ಕೊಡಗಿನ ಜನರಿಗೆ ಹಲವರು, ಹಲವು ರೀತಿಯಲ್ಲಿ ನೆರವನ್ನು ನೀಡಲು ಮುಂದಾಗಿದ್ದಾರೆ. ಈಗ ರಾಜ್ಯದ ಕೇಂದ್ರ ಕಾರಾಗೃಹದಲ್ಲಿ ಇರುವ ಖೈದಿಗಳು ತಮಗೆ ನೀಡುವ ಮಾಂಸಾಹಾರದ ಊಟವನ್ನು ತ್ಯಜಿಸಿ, ಅದಕ್ಕೆ ಖರ್ಚಾಗುವ ಮೊತ್ತವನ್ನು ಕೊಡಗಿನ‌ ಜನರಿಗೆ ನೀಡಲು ಮುಂದಾಗಿದ್ದಾರೆ. ಅವರ ಈ ಮಾನವೀಯ ನಡೆ ನಿಜವಾಗಿಯೂ ಶ್ಲಾಘನೀಯ ಎನಿಸಿದೆ. ಜೈಲುಗಳೆಂದರೆ ಪರಿವರ್ತನಾ ಸ್ಥಳ, ನಿಜವಾಗಿಯೂ ಇಲ್ಲಿ ಖೈದಿಗಳ ನಡೆ ಅವರ ಪರಿವರ್ತನೆಗೆ ನಿಜ ಸಾಕ್ಷಿ ಎನಿಸಿದೆ.

ಬಳ್ಳಾರಿ ಜಿಲ್ಲೆಯ ಕಾರಾಗೃಹದಲ್ಲಿ ಸುಮಾರು 650 ಕ್ಕಿಂತ ಹೆಚ್ಚು ಮಂದಿ ಖೈದಿಗಳಿದ್ದಾರೆ. ಇವರೆಲ್ಲಾ ಕೊಡಗಿನಲ್ಲಾಗಿರುವ ಪ್ರಕೃತಿ ವಿಕೋಪದಿಂದ ಜನರು ನೊಂದಿರುವ ವಿಚಾರ ತಿಳಿದು, ತಾವೂ ಅಲ್ಲಿನ ಜನರ ನೆರವಿಗೆ ಏನಾದರೂ ಮಾಡಬೇಕೆಂದು ಯೋಚಿಸಿ, ಅವರೆಲ್ಲಾ ತಮಗೆ ನೀಡುವ ಮಾಂಸಾಹಾರ ವನ್ನು ತ್ಯಜಿಸುವುದಾಗಿ, ಆ ಮೊತ್ತವನ್ನು ಕೊಡಗಿಗೆ ನೆರವು ನೀಡಿ ಎಂದು ತಮ್ಮ ಹಿರಿಯ ಅಧಿಕಾರಿಗಳಿಗೆ ಪತ್ರವನ್ನು ಬರೆದಿದ್ದಾರೆ. ಕಾರಾಗೃಹದಲ್ಲಿ ಪ್ರತಿ ಶುಕ್ರವಾರದಂದು ಖೈದಿಗಳಿಗೆ ಮಾಂಸಾಹಾರ ವನ್ನು ನೀಡಲಾಗುತ್ತದೆ. ಈ ಮಾಂಸಾಹಾರವನ್ನು ಒಂದು ತಿಂಗಳು ಅಂದರೆ ನಾಲ್ಕು ಶುಕ್ರವಾರಗಳಂದು ತ್ಯಜಿಸಿದರೆ , ಅದರಿಂದ ಸುಮಾರು ಎರಡು ಲಕ್ಷಕ್ಕಿಂತ ಅಧಿಕ ಮೊತ್ತ ಉಳಿತಾಯವಾಗುತ್ತದೆ.

ಈಗ ಖೈದಿಗಳ ತಮಗೆ ನೀಡುವ ಮಾಂಸಹಾರವನ್ನು ತ್ಯಜಿಸಲು ಸಿದ್ಧವಾಗಿದ್ದು, ಆ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಲು ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ. ಆದರೆ ಅದಕ್ಕಿನ್ನೂ ಹಿರಿಯ ಅಧಿಕಾರಿಗಳಿಂದ ಅಧಿಕೃತ ಪರವಾನಗಿ ದೊರೆತಿಲ್ಲ ಎನ್ನಲಾಗಿದೆ. ಅಧಿಕಾರಿಗಳು ಎಲ್ಲಾ ಖೈದಿಗಳು ಸರ್ವಾನುಮತದಿಂದ ಒಪ್ಪಿಗೆ ನೀಡಿದರೆ ಮಾತ್ರ ಅದು ಸಾಧ್ಯ , ಯಾರಾದರೂ ಅದರ ಬಗ್ಗೆ ಅಸಮಾಧಾನ ಪಟ್ಟರೆ ಅದರಿಂದ ಮತ್ತೆ ಯಾವುದಾದರೂ ಸಮಸ್ಯೆ ಉಂಟಾಗಬಹುದೆಂಬ ಅನುಮಾನದಲ್ಲಿ ಇದ್ದಾರೆ. ಹಿರಿಯ ಅಧಿಕಾರಿಗಳು ಹಾಗೂ ಎಲ್ಲಾ ಖೈದಿಗಳ ಒಪ್ಪಿಗೆ ದೊರೆತರೆ ಹಣ ಕೊಡಗಿನ ಜನರ ಪಾಲಿಗೆ ದೊರೆಯುವ ವರವಾಗಲಿದೆ.

ಜೈಲುಗಳಲ್ಲಿ ಖೈದಿಗಳ ಮನಃ ಪರಿವರ್ತನೆಗೆ ಪ್ರಯತ್ನಿಸಲಾಗುತ್ತದೆ. ಖೈದಿಗಳೆಂದರೆ ಅಪರಾಧಿಗಳೆಂಬ ಹಣೆಪಟ್ಟಿ ಯಾವಾಗಲೂ ಉಳಿದು ಬಿಡುತ್ತದೆ. ಅವರು ಹೊರಗೆ ಬಂದಮೇಲೂ ಆ ಹಣೆ ಪಟ್ಟಿ ದೂರಾಗಲೂ ಹಲವು ವರ್ಷಗಳೇ ಬೇಕು. ಆದೃ ಈಗ ಬಳ್ಳಾರಿಯ ಜೈಲಿನಲ್ಲಿರುವ ಖೈದಿಗಳು ಮಾಡಿರುವ ನಿರ್ಧಾರ ಖೈದಿಗಳ ಬಗ್ಗೆ ಜನಕ್ಕಿರುವ ಅಭಿಪ್ರಾಯವನ್ನು ಬದಲಾಯಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here