ಬಾಳೆ ಎಲೆಯಲ್ಲಿ ಊಟ ಮಾಡುವುದು ನಮ್ಮ ಸಂಪ್ರದಾಯಗಳಲ್ಲಿ ಒಂದು. ಆದರೆ ಇಂದಿನ ಆಧುನಿಕತೆಯ ಸೋಗಿನಲ್ಲಿ ಸಂಪ್ರದಾಯಗಳಿಗೆ ಅರ್ಥ ಇಲ್ಲ ಎನ್ನುವ ಢಾಂಬಿಕ ಮನೋಭಾವದಿಂದ ನಡೆದುಕೊಳ್ಳುವ ಮೂಲಕ ಇಂತಹ ಸಂಪ್ರದಾಯಗಳನ್ನೆಲ್ಲಾ ಮೂಲೆ ಗುಂಪಾಗಿಸತೊಡಗಿದ್ದಾರೆ. ಆದರೆ ವಾಸ್ತವವಾಗಿ ಬಾಳೆ ಎಲೆಗೆ ತನ್ನದೇ ಆದ ಮಹತ್ವ ಇದೆ. ಬಾಳೆ ಎಲೆಯಲ್ಲಿ ಊಟ ಮಾಡುವುದು ಕೇವಲ ಒಂದು ಸಂಪ್ರದಾಯ ಮಾತ್ರವಲ್ಲದೆ ಕೆಲವು ಆರೋಗ್ಯಕ್ಕೆ ಪೂರಕವಾದ ಅಂಶಗಳು ಕೂಡಾ ಇವೆ ಎಂಬುದು ಹಲವರಿಗೆ ಇಂದಿಗೂ ತಿಳಿದಿಲ್ಲ‌. ತಿಳಿದರೆ ಬಹುಶಃ ಇನ್ನು ಮುಂದೆ ಬಾಳೆ ಎಲೆ ಎಂದರೆ ಮೂಗು ಮುರಿಯುವುದಿಲ್ಲ.

ಬಾಳೆ ಎಲೆಯು ಸ್ವಾಭಾವಿಕವಾದ ಬ್ಯಾಕ್ಟೀರಿಯಾಗಳ ನಿಯಂತ್ರಕ ಎಂದೇ ನಾವು ಹೇಳಬಹುದು. ಕಾರಣ ಬಾಳೆ ಎಲೆಯ ಮೇಲೆ ಬ್ಯಾಕ್ಟೀರಿಯಾಗಳು ಬದುಕುವುದು ಅಸಾಧ್ಯ. ಅದಕ್ಕೆ ಬಾಳೆ ಎಲೆ ಬಡಿಸಿದ ಆಹಾರ ಪದಾರ್ಥಗಳಲ್ಲೇನಾದರೂ ಬ್ಯಾಕ್ಟೀರಿಯಾಗಳು ಇದ್ದರೂ, ಅವು ಹೊಟ್ಟೆಗೆ ಸೇರುವ ಮುನ್ನವೇ ಕೊಲ್ಲಲ್ಪಡುತ್ತವೆ. ನಮ್ಮ ಆರೋಗ್ಯ ಭದ್ರವಾಗಿರುತ್ತದೆ. ಕೆಲವು ಮೂಲಗಳ ಪ್ರಕಾರ ಬಾಳೆ ಎಲೆ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಜೈವಿಕ ರಾಸಾಯನಿಕಗಳನ್ನು ಕೂಡಾ ನಿಯಂತ್ರಣ ಮಾಡುತ್ತದೆ ಎನ್ನಲಾಗಿದೆ.

ನಾವು ನಿತ್ಯ ಬಳಸುವ ತಟ್ಟೆಗಳನ್ನು ತೊಳೆಯಲು ಬಳಸುವ ರಾಸಾಯನಿಕ ಸೋಪು, ಪೌಡರ್ ಅಥವಾ ಲಿಕ್ವಿಡ್ ಗಳು ಕೆಲವೊಮ್ಮೆ ಮನೆಯಲ್ಲೋ ಅಥವಾ ಹೊರಗೆ ಊಟಕ್ಕೆಂದು ಹೊಟೇಲ್ ಅಥವಾ ರೆಸ್ಟೋರೆಂಟ್ ಗಳಿಗೆ ಹೋದಾಗ, ಅವು ದೇಹ ಸೇರುವ ಸಾಧ್ಯತೆ ಇದ್ದೇ ಇರುತ್ತದೆ. ಆದರೆ ಬಾಳೆ ಎಲೆಯಲ್ಲಿ ಅದಕ್ಕೆ ಯಾವುದೇ ಅವಕಾಶವೂ ಇಲ್ಲ. ಆರೋಗ್ಯದ ವೃದ್ಧಿಯೇ ಹೊರತು, ಆರೋಗ್ಯಕ್ಕೆ ಹಾನಿಯಾಗುವ ಯಾವುದೇ ಅಂಶವು ಇಲ್ಲಿ ಇರುವುದಿಲ್ಲ. ಅದಕ್ಕೆ ಹೆಚ್ಚಾಗಿ ಬಾಳೆ ಎಲೆಯಲ್ಲೇ ಊಟ ಮಾಡುವುದು ಒಳ್ಳೆಯದು.

ಬಾಳೆ ಎಲೆಯಲ್ಲಿ ಊಟ ಮಾಡುವುದು ದೇಹಕ್ಕೆ ತಂಪು ಎಂದು ಹೇಳಲಾಗಿದೆ. ಇತ್ತೀಚಿಗೆ ಎಲ್ಲರ ಮನೆಗಳಲ್ಲೂ ಗ್ಯಾಸ್ ಮೇಲೆಯೇ ಅಡುಗೆ ಸಿದ್ಧವಾಗುವುದರಿಂದ, ಅದರಲ್ಲಿ ಸೇರುವ ಉಷ್ಣದ ಅಂಶವು ಅಡುಗೆ ಮಾಡಿದ ಆಹಾರ ಪದಾರ್ಥಗಳನ್ನು ಬಾಳೆ ಎಲೆ ಮೇಲೆ ಬಡಿಸುವುದರಿಂದ ಅದು ಕಡಿಮೆಯಾಗುವುದಲ್ಲದೆ, ದೇಹಕ್ಕೆ ತಂಪು ನೀಡುತ್ತದೆ ಎಂದು ಹೇಳಲಾಗಿದೆ.

ಒಂದು ವೈಜ್ಞಾನಿಕ ಸಂಶೋಧನೆಯ ಪ್ರಕಾರ ಯುವಕರಿಗೆ ಕೂದಲು ಬೆಳ್ಳಗಾದರೆ ಅವರು ಪ್ರತಿ ದಿನ ಆಹಾರವನ್ನು ಬಾಳೆ ಎಲೆಯಲ್ಲಿ ಸೇವಿಸುವ ಅಭ್ಯಾಸ ಮಾಡಿಕೊಂಡರೆ ಅದರಿಂದ ಅವರ ತಲೆಗೂದಲು ಮತ್ತೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ ಎನ್ನಲಾಗಿದೆ. ಬಾಳೆ ಎಲೆಯಲ್ಲಿ ವಿಟಮಿನ್ ಡಿ ಇರುವುದರಿಂದ ಎಳೆಯ ಮಕ್ಕಳನ್ನು ಶುಂಠಿ ಎಣ್ಣೆ ಲೇಪಿಸಿರುವ ಬಾಳೆ ಎಲೆಯಿಂದ ಸುತ್ತಿದರೆ ಅವುಗಳ ಚರ್ಮ ಕಾಂತಿ ಪಡೆಯುವುದು ಮಾತ್ರವಲ್ಲದೆ ಭವಿಷ್ಯದಲ್ಲಿ ಚರ್ಮರೋಗಗಳು ಹತ್ತಿರ ಕೂಡಾ ಸುಳಿಯುವುದಿಲ್ಲ ಎನ್ನಲಾಗಿದೆ.

ಹೀಗೆ ನಮ್ಮ ಸಂಪ್ರದಾಯಿಕ ಆಹಾರ ಸೇವನೆಯ ಪದ್ಧತಿಯಲ್ಲಿ ಊಟವನ್ನು ಬಾಳೆ ಎಲೆಯಲ್ಲಿ ಮಾಡುವುದಕ್ಕೆ ಏಕೆ ಪ್ರಾಶಸ್ತ್ಯ ನೀಡಲಾಗಿದೆ ಎಂದು ತಿಳಿದಾಗ, ನಮ್ಮ ಪೂರ್ವಜರ ಆರೋಗ್ಯದ , ಗಟ್ಟಿ ಮುಟ್ಟಾದ ದೇಹದ ರಹಸ್ಯಗಳಲ್ಲಿ ಒಂದು ಈ ಬಾಳೆಯೂ ಕೂಡಾ ಎಂಬುದನ್ನು ನಾವು ಒಪ್ಪಲೇ ಬೇಕು. ಆರೋಗ್ಯಕ್ಕೆ ಇತ್ತೀಚಿನ ದಿನಗಳಲ್ಲಿ ಬಹಳ ಪ್ರಾಮುಖ್ಯತೆ ನೀಡುತ್ತಿದ್ದು, ಬಾಳೆ ಎಲೆಯಲ್ಲಿ ಆಹಾರ ಸೇವಿಸುವುದರ ನಿಜವಾದ ಉಪಯೋಗ ತಿಳಿದು ಬಳಸಿದರೆ ಉತ್ತಮ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here