ಶತಮಾನಗಳ ಹಿಂದಿನಿಂದಲೂ ನಡೆದು ಬಂದಿರುವ ಒಂದು ಸಾಂಪ್ರದಾಯಿಕ ಆಚರಣೆ ಕರಗ. ಈ ಕರಗಕ್ಕೆಂದೇ ಮೀಸಲಾದ ಒಂದು ಜನಾಂಗವಿದೆ. ಅದೇ ವನ್ನಿಕುಲ ಜನಾಂಗ ಆಡು ಮಾತಿನಲ್ಲಿ ಹೇಳುವುದಾದರೆ ತಿಗಳರು. ಈ ತಿಗಳರ ಆರಾಧ್ಯ ದೈವ ಎಂದೇ ಹೇಳಲಾಗುವುದು ಈ ಕರಗ ಶಕ್ತಿ. ಈ ಶಕ್ತಿಯನ್ನು ದ್ರೌಪತಿಯ ರೂಪ ಎಂದು ಪುರಾಣ ಕಥೆಯಲ್ಲಿ ಹೇಳುವುದುಂಟು.

ಅಸಲಿಗೆ ಈ ಕರಗದ ಹಿಂದಿನ ಕಥೆ ಏನೆಂದರೆ ಇದಕ್ಕೆ ಕರಗ ಎಂದು ಏಕೆ ಕರೆಯುತ್ತಾರೆ ಎಂದು ತಿಳಿದುಕೊಳ್ಳಲೇ ಬೇಕು. ಕರಗ ಅಂದರೆ (ಕರಕ) ಅಂದರೆ ಕುಂಭ (ಕಳಸ, ಬಿಂದಿಗೆ) ಎಂದು ಅರ್ಥ. ನಮ್ಮ ಪೂರ್ವಜರು ಹೇಳುತ್ತದ್ದಂತೆ ಈ ಕರಗ ಎಂದರೆ ಕ ಅಂದರೆ ಕೈಯಿಂದ ರ ಅಂದರೆ ರುಂಡದ ಮೇಲೆ ಕುಳಿತುಕೊಳ್ಳುವ ಗ ಅಂದರೆ ಗತಿಸುವುದು ಇದರರ್ಥ ತಿರುಗುವುದು.

ಒಟ್ಟಾರೆ ಕೈಯಿಂದ ಮುಟ್ಟದೇ ತಲೆಯ ಮೇಲೆ ಇಟ್ಡುಕೊಂಡು ಸಂಚಾರ ಮಾಡುವುದು. ನಮ್ಮ ಪೂರ್ವಜರು ಹೇಳುತ್ತಿದ್ದರು ಈ ಶಕ್ತಿ ದೇವತೆಯನ್ನು ಪೂಜಿಸುವುದು ಬಹಳ ಕಠಿಣ ವ್ರತದ ಮೂಲಕ ಆಚರಿಸಬೇಕು. ಕರಗ ಹೊರುವ ಪೂಜಾರಿಯು ಕರಗ ಒಂದು ತಿಂಗಳು ಇದೆ ಅನ್ನುವಾಗಲೇ ಕಠಿಣ ವ್ರತ ಕೈಗೊಳ್ಳಬೇಕು. ಹಾಗೂಇನ್ನೊಂದು ವೈಶಿಷ್ಟವೆಂದರೆ ಯುಗಾದಿ ಕಳೆದು ಒಂದು ವಾರಕ್ಕೆ ಶ್ರೀರಾಮನವಮಿ ಶ್ರೀರಾಮನವಮಿ ಕಳೆದು ಒಂದು ವಾರಕ್ಕೆ ಈ ಕರಗವು ನಡೆಯುತ್ತದೆ.

ಈ ಕರಗದ ಬಗ್ಗೆ ಅಲ್ಲಿನ ಪೂರ್ವಜರು ಕರಗ ಹೊರುವ ಪೂಜಾರಿಯ ಕಠಿಣ ವ್ರತದ ಬಗ್ಗೆ ಹೇಳುತ್ತಿದ್ದ ಕಥೆ ಕರಗಕ್ಕೆ ಇನ್ನೂ 8 ದಿವಸ ಇದೆ ಅನ್ನುವಾಗಲೇ ಕರಗ ಹೊರುವ ಪೂಜಾರಿಯ ಪತ್ನಿಯು ಹುಟ್ಟಿದ ನಿರ್ವಾಣದಲ್ಲಿ ಬತ್ತವನ್ನು ಕೈಯ ಉಗುರಿಯಿಂದ ಬಿಡಿಸಿ ಅನ್ನ ಮಾಡಿ ಬಡಿಸುತ್ತಿದ್ದಳಂತೆ.

ಹಾಗೂ ತನ್ನ ಬಟ್ಟೆ ಹಾಗೂ ಒಡವೆಗಳನ್ನೆಲ್ಲಾ ಪತಿಯು ಕರಗ ಹೊರುವ ಸಂದರ್ಭದಲ್ಲಿ ಧರಿಸಲು ನೀಡುತ್ತಿದ್ದಳೆಂದು ಪೂಜಾರಿಯು ಕರಗ ವ್ರತ ಮುಗಿಸಿ ಬರುವವರೆಗೂ ಆಕೆ ಅದೇ ರೀತಿ ಕಠಿಣ ವ್ರತ ಕೈಗೊಂಡು ಗಂಡನ ವ್ರತಕ್ಕೆ ತಾನೂ ಸಹ ಭಾಗಿಯಾಗುತ್ತಿದ್ದಳೆಂದು ಹೇಳಲಾಗುತ್ತಿತ್ತು. ಅಲ್ಲದೆ ಆ ಕರಗವು ಸ್ವತಃ ತಾನೇ ಬಂದು ಶಿರ ಅಂದರೆ ತಲೆಯ ಮೇಲೆ ಕೂರುತ್ತಿತ್ತು.

ಎನಾದರೂ ಕರಗ ಅಪ್ಪಿ ತಪ್ಪಿ ಕೆಳಗೆ ಬಿದ್ದರೆ ಕರಗದ ಹಿಂದೆ ಬರುವ ವೀರಕುಮಾರರು ಆ ಪೂಜಾರಿಯ ತಲೆಯನ್ನು ಕಡೆಯುತ್ತಿದ್ದರು ಎಂದೂ ಸಹ ಹೇಳುತ್ತಿದ್ದರು. ಇಂದಿಗೂ ಸಹ ಈ ಕರಗವನ್ನು ಧರ್ಮರಾಯನ ಕರಗ ದ್ರೌಪತಿ ಕರಗ ಎನ್ನುತ್ತಾರೆ. ಈ ಕರಗವನ್ನು ದ್ರೌಪತಿ ಕರಗ ಅನ್ನಲು ಸಹ ಒಂದು ಪುರಾಣ ಕಥೆಯೂ ಇದೆ ಅದೇನೆಂದರೆಮಹಾಭಾರತದ ಕೊನೆಯ ಭಾಗದ ಪುರಾಣದಲ್ಲಿ ಪಾಂಡವರು ಸ್ವರ್ಗಕ್ಕೆ ನಡೆದುಕೊಂಡು ಹೋಗುವಾಗ ಪಾಂಡವರು ಮುಂದೆ ಹೊರಟು ಹೋಗಿರುತ್ತಾರೆ ಹಿಂದೆ ಹೋಗುತ್ತಿದ್ದ ದ್ರೌಪತಿಯು ಮೂರ್ಚೆ ಹೋಗುತ್ತಾಳೆ.

ಇದನ್ನು ನೋಡಿರದ ಪಾಂಡವರು ಮುಂದೆ ಹೊರಟು ಹೋಗಿರುತ್ತಾರೆ. ದ್ರೌಪತಿ ಎಚ್ಚರಗೊಂಡು ನೋಡಿದಾಗ ತಿಮಿರಾಸುರ ಎನ್ನುವ ರಾಕ್ಷಸನು ನಿಂತಿರುತ್ತಾನೆ. ಆಗ ದ್ರೌಪತಿಯು ಆದಿಶಕ್ತಿಯ ರೂಪವನ್ನು ತಾಳಿ ಹಣೆ, ತಲೆ, ಕಿವಿ, ಬಾಯಿ ಹಾಗೂ ಭುಜಗಳಿಂದ ವೀರಕುಮಾರರನ್ನು ಸೃಷ್ಟಿ ಮಾಡಿ ಇವರಿಂದ ಆ ರಾಕ್ಷಸನನ್ನು ಸಂಹಾರ ಆಗುವಂತೆ ಮಾಡುತ್ತಾಳೆ .

ತದನಂತರ ತನ್ನ ದಾರಿಯನ್ನು ಸ್ವರ್ಗದ ಕಡೆಗೆ ನಡೆಯುತ್ತಾಳೆ ಇದನ್ನರಿತ ವೀರಕುಮಾರರು ದ್ರೌಪತಿಯನ್ನು ತಡೆದು ತಮ್ಮಲ್ಲೇ ಉಳಿದುಕೊಳ್ಳಲು ಮನವಿ ಮಾಡಲು ಸಾಧ್ಯವಿಲ್ಲ ಎಂದು ವರ್ಷದಲ್ಲಿ 3 ದಿವಸ ಕರಗದ ರೂಪದಲ್ಲಿ ತಮ್ಮಲ್ಲಿ ನೆಲಸುತ್ತೇನೆ ಎನ್ನಲಾಗುತ್ತದೆ. ಮತ್ತೊಂದು ಐತಿಹ್ಯ ಅಂದರೆ ಸ್ವಯಃವರದಲ್ಲಿ ದ್ರೌಪತಿ ಕಳಸ ಸಮೇತಳಾಗಿ ಬಂದಾಗ ಅರ್ಜುನನ್ನು ವರಿಸುತ್ತಾಳೆ ಅರ್ಜುನನ ಆದೇಶದಂತೆ ತನ್ನ ನಾಲ್ವರು ಸಹೋದರರನ್ನು ವರಿಸಿದಾಗ ಕೈಯಲ್ಲಿ ಇದ್ದ ಕುಂಭ (ಕಳಸ)ವನ್ನು ತಲೆಯ ಮೇಲೆ ಧರಿಸುತ್ತಾಳೆ.

ಅದೇ ಕರಗ ಎಂದು ಪ್ರಸಿದ್ದಿ ಪಡೆದಿದೆ ಎನ್ನಲಾಗಿದೆ.ಚಿತ್ರಾ ಹುಣ್ಣಿಮೆಯ ಕರಗ‌ ಮಹೋತ್ಸವ ಒಂದು ವಾರ ಇದೆ ಅನ್ನುವಾಗ ಹಸಿ ಕರಗ ಎಂದು ನಡೆಸುತ್ತಾರೆ. ಈ ಕರಗವು ಧರ್ಮರಾಯ ದೇವಾಲಯದ ತೂಗಳತೆಯ ದೂರದಲ್ಲಿ ಇರುವ ಸಂಪಂಗಿರಾಮ ನಗರದ ಕೆರೆಯ ದಂಡೆಯ ಮೇಲೆ ಒಂದು ಸ್ಥಳವನ್ನು ಶುದ್ಧೀಕರಿಸಿ

ಅಲ್ಲಿ ಕೆಂಪು ವರ್ಣದ ಒಂದು ಛತ್ರಿಯನ್ನು ನೆಟ್ಟು ಕರಗ ಹೊರುವ ಪೂಜಾರಿಯ ಸಮೇತವಾಗಿ ನೇಮ ನಿಷ್ಟೆ ಇಂದ ವ್ರತ ನಡೆಸುವ ತಿಗಳ ಜನಾಂಗದ ಜನರು ಕತ್ತಿಯನ್ನು ಚಂದ್ರಾಕಾರದಲ್ಲಿ ನೆಲದಲ್ಲಿ ನೆಟ್ಟು ಕುಲ ಪುರೋಹಿತರ ಆದೇಶದಂತೆ ದೀಕ್ಷೆಯನ್ನು ಪಡೆಯುತ್ತಾರೆ. ಅಲ್ಲಿಂದ ಅವರು ಮತ್ತಷ್ಟು ಶುದ್ಧವಾಗಿ ತಮ್ಮ ಕೈಯ್ಯಲ್ಲಿ ಹಿಡಿಯುವ ಖಡ್ಗದಿಂದ ದಿಗ್ ದಿಗ್ ಎನ್ನುವ ಶಬ್ಧದೊಂದಿಗೆ ಎದೆಗೆ ಬಡಿದುಕೊಳ್ಖುತ್ತಾರೆ.

ಒಂದು ವೇಳೆ ಬಡೆದುಕೊಳ್ಳುವ ಸಂದರ್ಭದಲ್ಲಿ ರಕ್ತ ಬಂದರೆ ಆ ಜಾಗಕ್ಕೆ ಆದಿಶಕ್ತಿಯ ಭಂಡಾರವನ್ನು ಹಚ್ಚಿಕೊಳ್ಳುತ್ತಾರೆ. ಇವೆಲ್ಲಾ ಪಕ್ರಿಯೆ ಮುಗಿಯುವ ವೇಳೆಗೆ ಸಮಯ ಬೆಳಗಿನ ಜಾವ 3 ದಾಟಿರುತ್ತೆ ಅಷ್ಟರಲ್ಲಿ ಕುಲ ಪುರೋಹಿತರು ಹಸಿ ಕರಗವನ್ನು ಸಿದ್ದಪಡಿಸಿರುತ್ತಾರೆ. ಅದನ್ನು ತೆಗೆದುಕೊಂಡು ಪೂಜಾರಿಯು ತನ್ನ ಎಡ ಸೊಂಟದ ಮೇಲೆ ಇಟ್ಟುಕೊಂಡು ಕೋಟೆಯನ್ನು ಮೂರು ಸುತ್ತು ಸುತ್ತುತ್ತಾರೆ( ಅಂದರೆ ಇಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಯನ್ನು‌)

ಈ ಬೆಂಗಳೂರು ಕರಗವು ಇತಿಹಾಸ ಪ್ರಸಿದ್ದೀ ತಿಗಳ ಜನಾಂಗದ ಕುಲ ದೇವತೆ ದ್ರೌಪತಿಯ ಉತ್ಸವವಾಗಿದ್ದು ಈ ಕರಗವನ್ನು ಧರ್ಮರಾಯನ ದೇವಸ್ಥಾನದಿಂದ ಮಧ್ಯರಾತ್ರಿ 12 ಗಂಟೆಗೆ ಪೂಜಾ ವಿಧಾನದಿಂದ ಅಂದರೆ ಒಂದು ಕಳಸವನ್ನು ಕುಲಪುರೋಹಿತರು ದುಂಡುಮಲ್ಲಿಗೆಯಿಂದ ಅಲಂಕರಿಸಿ ಮೊದಲೇ ನೇಮ ದಿಂದ ವ್ರತ ಆಚರಿಸುವ ಪೂಜಾರಿಯ ತಲೆಯ ಮೇಲಿಟ್ಟು ಒಂದು ಕೈಯಲ್ಲಿ ನಿಂಬೆಹಣ್ಣು ಚುಚ್ಚಿದ ಒಂದು ಚಿಕ್ಕ ಕತ್ತಿಯನ್ನು ಮತ್ತೊಂದು ಕೈಯಲ್ಲಿ ಒಂದು ಸಣ್ಣ ದಂಡವನ್ನು ಹಿಡಿದು ಭರದಿಂದ ಸಾಗುತ್ತಾರೆ.

ಆ ಜನಾಂಗದ ಜನರೇ‌ ವಾಸಿಸುವ ತಿಗಳರ ಪೇಟೆ ಎಂದೇ ಪ್ರಸಿದ್ದಿ ಹೊಂದಿರುವ ಜಾಗದಿಂದ ಪ್ರತೀ ಮನೆಯಿಂದಲೂ ಪೂಜೆಯನ್ನು ಸ್ವೀಕರಿಸುತ್ತಾ ಸಾಗುತ್ತದೆ.ಸ್ತ್ರೀ ವೇಷದಾರಿಯ ಪೂಜಾರಿಯು ಕರಗವನ್ನು ಹೊತ್ತು ತಿಗಳರ ಪೇಟೆಯಿಂದ ಪೂಜೆಯನ್ನು ಸ್ವೀಕರಿಸುತ್ತಾ ಬಳೇಪೇಟೆ, ಅಂಚೆ ಬೇಟೆ. ಮನವರ್ತಿಪೇಟೆ ಕಾಟನ್ ಪೇಟೆ ಮೂಲಕ ಕಾಟನ್ ಪೇಟೆಯ ಮಸ್ತಾನ್ ದರ್ಗಾಕ್ಕೆ ತೆರಳಿ ಪೂಜೆಯನ್ನು ಸ್ವೀಕರಿಸುತ್ತಾರೆ.

ಇದು ಶತಮಾನಗಳಿಂದ ನಡೆದುಕೊಂಡು ಬಂದಿದ್ದು ನಮ್ಮ ಸೌಹಾರ್ದತೆಗೆ ಹಿಡಿದ ಕೈಗನ್ನಡಿ ನಂತರ ಬೆಂಗಳೂರಿನ
ತಾಯಿ ಅಣ್ಣಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಪಡೆದು ತನ್ನ ಸ್ವಸ್ಥಾನ ಕ್ಜೆ ತೆರಳುತ್ತದೆ.ಇನ್ನು ಈ ತಿಗಳರ ಬಗ್ಗೆ ಹೇಳುವುದಾದರೆ ಮೂಲತಃ ಇವರು ತಮಿಳುನಾಡಿನವರೆಂದು ಇವರನ್ನು ಹೈದರಾಲಿಯು ಆರ್ಕಾಟ್ ಯುದ್ದದ ಸಂದರ್ಭದಲ್ಲಿ ಹಿಂತಿರುಗಿ

ಬರುವಾಗ ಇವರ ಧೈರ್ಯ ಹಾಗೂ ಸುಂದರ ತೋಟಗಾರಿಕೆ ಕೌಶಲ್ಯವನ್ನು ಕಂಡು ಕರೆತಂದನೆಂದು ಹೇಳಲಾಗುತ್ತದೆ.ಇದೇ ತಿಂಗಳ ಅಂದರೆ ಮಾರ್ಚ್ ‌31 ರ ಚಿತ್ರಾ ಹುಣ್ಣಿಮೆಯಂದು ಈ ಬೆಂಗಳೂರಿನ ಐತಿಹಾಸಿಕ ಬೆಂಗಳೂರಿನ ಕರಗ ಎಂದೇ ಪ್ರಸಿದ್ದಿ ಹೊಂದಿರುವ ಈ ಕರಗ‌ ಉತ್ಸವ ನಡೆಯಲಿದೆ. ಈ ಬಾರಿಯೂ ಪೂಜಾರಿ‌ ಮನುರವರು ಕರಗ ಹೊರಲು ತಾಲೀಮನ್ನು ನಡೆದುತ್ತಿದ್ದಾರೆ.

ಆನಾದಿ ಕಾಲದಿಂದಲೂ ಈ ಉತ್ಸವವನ್ನು ನೋಡಲು ದೂರ ದೂರದ ಊರುಗಳಿಂದ ಸಾವಿರಾರು ಜನರು ಬರುತ್ತಾರೆ. ಇಡೀ ರಾತ್ರಿ ಜನರಿಂದ ಕರಗ ಬರುವ ಬಡಾವಣೆಗಳು ತುಂಬಿರುತ್ತವೆ. ಇನ್ನು‌ಕರಗ‌ ಬರಲು ಕೆಲವೇ ನಿಮಿಷಗಳು ಅನ್ನುವಾಗ ಜನರ ಕೂಗಾಡ, ಶಿಳ್ಳೆ, ಹುಡುಗರ ಕಿರುಚಾಟ ಕರಗ ಬಂತು ಕರಗ ಬಂತು ಎಂದು ಮಲಗಿದ್ದವರನ್ನೆಲ್ಲಾ ಎಬ್ಬಿಸಿಬಿಡುತ್ತಾರೆ.

ವೀರಕುಮಾರರ ತಾಲೀಮು ಕಣ್ಣಿಗೆ ಮುದನೀಡುತ್ತದೆ. ಈ ಕರಗದ ಮೇಲೆ ಅಂದು ಮಲ್ಲಿಗೆ ಹೂವನ್ನು ಚೆಲ್ಲಿ ಹರಕೆಯನ್ನು ಹೊತ್ತರೆ ಅದು ನೆರವೇರುತ್ತದೆ ಅನ್ನುವ ನಂಬಿಕೆ. ಅಂದು ಮಲ್ಲಿಗೆ ಹೂ ಮಾರುವವರಿಗೆ ಒಳ್ಳೆ ಹಬ್ಬ. ಅದನ್ನು ನೋಡಲು ಕಣ್ಣುಗಳೆರೆಡು ಸಾಲದು. ಬಂದು ಕರಗ ಉತ್ಸವವನ್ನು ಕಣ್ತುಂಬಿಕೊಳ್ಳಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here