ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು ಸಿಎಂ ಯಡಿಯೂರಪ್ಪ ತುರ್ತು ಸಭೆ ನಡೆಸಿದ್ದಾರೆ. ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಜಾರಿ ಬಗ್ಗೆ ಚಿಂತನೆ ನಡೆಸಿರುವ ಸಿಎಂ ಬೆಂಗಳೂರಿನ 5 ವಾರ್ಡ್​ಗಳಲ್ಲಿ ತಕ್ಷಣವೇ ಲಾಕ್​ಡೌನ್​ಗೆ ಸೂಚಿಸಿದ್ದಾರೆ. ಈ ಕ್ಷೇತ್ರಗಳಲ್ಲಿ ಬೆಳಗ್ಗೆ 7ರಿಂದ ಬೆ.10ರ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗುತ್ತೆ ಎನ್ನಲಾಗಿದೆ. ಈ ಕೊರೊನಾ ತುರ್ತು ಸಭೆಯಲ್ಲಿ ಸಚಿವರು, ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು

ಸೋಂಕು ಹೆಚ್ಚಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಸಿಎಂ ಯಡಿಯೂರಪ್ಪ, ರಾಜ್ಯದಲ್ಲಿ ಹೊರರಾಜ್ಯಗಳಿಂದ ಬಂದವರಿಂದಲೇ ಸೋಂಕು ಹೆಚ್ಚುತ್ತಿದೆ. ಲಾಕ್‌ಡೌನ್ ಸಡಿಲಿಕೆಯನ್ನು ಜನರು ದುರುಪಯೋಗ ಪಡಿಸಿಕೊಂಡಿದ್ದಾರೆ. ಪರಿಸ್ಥಿತಿ ಗಂಭೀರವಾಗಲು ಇದುವೇ ಮುಖ್ಯ ಕಾರಣ ಎಂದು ಸಿಎಂ ಬೇಸರ ವ್ಯಕ್ತಪಡಿಸಿದ್ದಾರೆ

ಕರೋನಾ ನಿಯಂತ್ರಿಸಲು ಲಾಕ್ ಡೌನ್ ಅನಿವಾರ್ಯ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ. ಸಿಎಂ ಜೊತೆಗಿನ ಸಭೆ ಬಳಿಕ ಮಾತಾಡಿದ ಅಶೋಕ್ ರಾಜಧಾನಿಯ ಎರಡು ಮುಖ್ಯ ಮಾರುಕಟ್ಟೆಗಳನ್ನು ಮುಚ್ಚಲು ತೀರ್ಮಾನಿಸಿದ್ದೇವೆ. ಇಡೀ ರಸ್ತೆಯನ್ನು ಸೀಲ್ ಡೌನ್ ಮಾಡಲು ತೀರ್ಮಾನ ಮಾಡಲಾಗುತ್ತದೆ. ಲಾಕ್‌ಡೌನ್‌ ನಿಯಮ ಮೀರಿ ಹೋಗುವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಹೋಮ್ ಕ್ವಾರಂಟೇನ್‌ನಲ್ಲಿರುವವರು ಸರ್ಕಾರದ ನಿಯಮ ಪಾಲನೆಯನ್ನು ಮಾಡಬೇಕು. ಮನೆಯಲ್ಲಿ ತಮ್ಮ ಮೊಬೈಲ್ ಇಟ್ಟು ಹೊರಗೆ ಹೋಗಬೇಡಿ. ಒಂದು ವೇಳೆ ಹೊರಗಡೆ ತಿರುಗಾಡಿದಲ್ಲಿ ಮುಲಾಜಿಲ್ಲದೆ ಕ್ರಿಮಿನಲ್ ಕೇಸ್ ದಾಖಲು ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.

ಸಿಎಂ ಜೊತೆ ಸಭೆ ಬಳಿಕ ಮಾತನಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಕಳೆದ ಹತ್ತು ದಿನಗಳಲ್ಲಿ ಕೊರೋನಾ ಪ್ರಕರಣ ವೇಗವಾಗಿ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಕೆಲವೊಂದು ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ. ಬೆಂಗಳೂರಿನ 13 ಸರ್ಕಾರಿ ಆಸ್ಪತ್ರೆಗಳು ಹಾಗೂ ಮೆಡಿಕಲ್ ಕಾಲೇಜು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು. ಕಲಾಸಿಪಾಳ್ಯ, ವಿವಿ ಪುರ, ವಿದ್ಯಾರಣ್ಯಪುರ‌, ಧರ್ಮರಾಯ ಪುರ ಹಾಗೂ ಸಿದ್ದಾಪುರ ಗಳಲ್ಲಿ 31ರ ವರೆಗೆ ಲಾಕ್ ಡೌನ್ ಜಾರಿಯಲ್ಲಿರುತ್ತದೆ ಎಂದ್ರು. ಇನ್ನೂ ಮೂರರಿಂದ 4 ಪ್ರಕರಣ ಕಂಡುಬಂದಿರುವ ಪ್ರದೇಶವನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ. 6 ಪೋಲಿಸ್ ಸ್ಟೇಷನ್‌ಗಳನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಪೋಲೀಸರಿಗೆ ಕೊರೊನಾ ಸೋಂಕು ಕಂಡುಬಂದಿರುವ ಹಿನ್ನೆಲೆಯಲ್ಲಿ ರ‌್ಯಾಂಡಮ್‌ ಟೆಸ್ಟ್‌ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here