ಬೆಂಗಳೂರು: ನಗರದ ದಕ್ಷಿಣ ವಲಯ ಪಟ್ಟಾಭಿರಾಮನಗರದಲ್ಲಿ ಹಸಿ ತ್ಯಾಜ್ಯದಿಂದ ಜೈವಿಕ ಅನಿಲ ಉತ್ಪಾದಿಸುವ ಘಟಕವನ್ನು ಉನ್ನತೀಕರಿಸಲಾಗಿದ್ದು, ಅದನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲು ದಕ್ಷಿಣ ವಲಯ ಆಯುಕ್ತರಾದ ಶ್ರೀ ಜಯರಾಮ್ ರಾಯಪುರ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಜೈವಿಕ ಅನಿಲ ಘಟಕಗಳನ್ನು ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಹಸಿ ತ್ಯಾಜ್ಯವನ್ನು ಮೂಲದಲ್ಲಿಯೇ ಸಂಸ್ಕರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಇರುವ ಜೈವಿಕ ಅನಿಲ ಘಟಕಗಳನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡು ಹಸಿ ತ್ಯಾಜ್ಯದಿಂದ ಜೈವಿಕ ಅನಿಲ ಉತ್ಪಾದಿಸಿ ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಾಭಿರಾಮನಗರದಲ್ಲಿ ಸ್ಥಗಿತವಾಗಿದ್ದ ಜೈವಿಕ ಅನಿಲ ಘಟಕವನ್ನು ಉನ್ನತೀಕರಿಸಲಾಗಿದ್ದು, ಪ್ರತಿನಿತ್ಯ 5 ಟನ್ ಹಸಿ ತ್ಯಾಜ್ಯವನ್ನು ಸ್ಕಂಸ್ಕರಣೆ ಮಾಡಲಿದ್ದು, ಅದರಿಂದ 300 ಕ್ಯೂಬಿಕ್ ಮೀಟರ್ ಜೈವಿಕ ಅನಿಲ ಉತ್ಪಾದಿಸಬಹುದಾಗಿದೆ. ಈ ಸಂಬಂಧ ಕೂಡಲೆ ಪ್ರಾಯೋಗಿಕವಾಗಿ ಪ್ರಾರಂಭಿಸಿ ಉತ್ಪತ್ತಿಯಾಗುವ ಜೈವಿಕ ಅನಿಲವನ್ನು ವಿದ್ಯುತ್ ಆಗಿ ಪರಿವರ್ತಿಸಿ ಹತ್ತಿರದ ಉದ್ಯಾನವನ ಹಾಗೂ ಬೀದಿ ದೀಪಗಳಿಗೆ ಬಳಸಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜೈವಿಕ ಅನಿಲ ಘಟಕದಿಂದ ಬರುವ ತ್ಯಾಜ್ಯದ ಸ್ಲರಿಯನ್ನು ಉದ್ಯಾನವನಗಳಿಗೆ ಬಳಸಿಕೊಳ್ಳಬಹುದಾಗಿದ್ದು, ದಕ್ಷಿಣ ವಲಯ ವ್ಯಾಪ್ತಿಯಲ್ಲಿರುವ ಉದ್ಯಾನಗಳಿಗೆ ಅದನ್ನು ಬಳಸಿಕೊಳ್ಳಲು ಸೂಚನೆ ನೀಡಲಾಯಿತು.
ಯಡಿಯೂರಿನಲ್ಲಿರುವ ಜೈವಿಕ ಅನಿಲ ಘಟಕ ವೀಕ್ಷಣೆ:
ಯಡಿಯೂರು ವಾರ್ಡ್ ವ್ಯಾಪ್ತಿಯಲ್ಲಿ ಬರುವ ಜೈವಿಕ ಅನಿಲ ಘಟಕವು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಅದರ ಕಾರ್ಯವೈಖರಿಯನ್ನು ಪರಿಶೀಲನೆ ನಡೆಸಲಾಯಿತು. ಸದರಿ ಘಟಕವು ಪ್ರತಿನಿತ್ಯ 5 ಟನ್ ಹಸಿ ತ್ಯಾಜ್ಯವನ್ನು ಸಂಸ್ಕರಣೆ ಮಾಡಲಿದ್ದು, ಅದರಿಂದ 300 ಕ್ಯೂಬಿಕ್ ಮೀಟರ್ ಜೈವಿಕ ಅನಿಲ ಉತ್ಪತ್ತಿಯಾಗುತ್ತಿದೆ. ಉತ್ಪತ್ತಿಯಾಗುವ ಜೈವಿಕ ಅನಿಲವನ್ನು ವಿದ್ಯುತ್ ಆಗಿ ಪರಿವರ್ತಿಸಿ ಉದ್ಯಾನ ಹಾಗೂ ಬೀದಿ ಬದಿ ವಿದ್ಯುತ್ ದೀಪಗಳ ಬಳಕೆಗೆ ಬಳಸಿಕೊಳ್ಳಲಾಗುತ್ತಿದೆ.
ಪರಿಶೀಲನೆಯ ವೇಳೆ ಮುಖ್ಯ ಅಭಿಯಂತರರಾದ ರಾಜೇಶ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸಂತೋಶ್, ಶಶಿಕಲಾ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
Disclaimer: This Story is auto-aggregated by a Syndicated Feed and has not been Created or Edited By City Big News Staff.