ಇಂದು ಸಂಜೆ 4 ಗಂಟೆಗೆ ನಾನು ಬಹುಮತ ಸಾಬೀತು ಪಡಿಸುತ್ತೇನೆ. ಬಹುಮತ ಸಾಬೀತಾದ 24 ಗಂಟೆಯೊಳಗೆ ರೈತರ ಸಾಲಮನ್ನಾ ಮಾಡಲು ನಾನು ಬದ್ಧವಾಗಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರ ಭರವಸೆ ನೀಡಿದ್ದಾರೆ.

ಇಂದು ಬೆಳಗ್ಗೆ ಡಾಲರ್ಸ್​ ಕಾಲನಿಯಲ್ಲಿರುವ ಧವಳಗಿರಿ ನಿವಾಸದಿಂದ ಬಿಜೆಪಿ ಶಾಸಕರು ತಂಗಿರುವ ಹೋಟೆಲ್​ಗೆ ಹೊರಟ ಬಿಎಸ್​ವೈ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಇಂದು ನಾನು ಬಹುಮತ ಸಾಬೀತು ಪಡಿಸುತ್ತೇನೆ. ನಾಳೆ ತುರ್ತು ಸಂಪುಟ ಸಭೆ ಕರೆದು ಸಾಲಮನ್ನಾ ಸೇರಿದಂತೆ ಚುನಾವಣೆಗೂ ಮುನ್ನ ನೀಡಿದ್ದ ಪ್ರಮುಖ ಭರವಸೆಗಳನ್ನು ಈಡೇರಿಸುತ್ತೇನೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಇಂದು ಸಂಜೆಯವರೆಗೂ ಜನರು ಶಾಂತ ರೀತಿಯಲ್ಲಿ ವರ್ತಿಸಬೇಕು ಎಂದು ಮನವಿ ಮಾಡಿದರು.ಸರ್ಕಾರ ಉಳಿಸಿಕೊಳ್ಳಲು ಸರ್ವ ಪ್ರಯತ್ನ ನಡೆಸುತ್ತಿರುವ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ಶುಕ್ರವಾರ ರಾತ್ರಿಯಿಡೀ ಬಿಜೆಪಿ ನಾಯಕರೊಂದಿಗೆ ಚರ್ಚೆ ನಡೆಸಿದರು.

ಕೇಂದ್ರ ಸಚಿವ ಪ್ರಕಾಶ್​ ಜಾವಡೇಕರ್​ ಸೇರಿದಂತೆ ಹಲವು ಬಿಜೆಪಿ ನಾಯಕರ ಜತೆ ಬಿಎಸ್​ವೈ ತಾಜ್​ ವೆಸ್ಟೆಂಡ್​ನಲ್ಲಿ ಮಾತುಕತೆ ನಡೆಸಿ ಬಹುಮತ ಸಾಬೀತು ಪಡಿಸುವ ಕುರಿತು ರಣತಂತ್ರ ಹೆಣೆದರು. ರಾತ್ರಿಯಿಡೀ ನಡೆದ ಚರ್ಚೆಯ ಬಳಿಕ ಬಿಎಸ್​ವೈ ಬೆಳಗ್ಗೆ ಧವಳಗಿರಿ ನಿವಾಸಕ್ಕೆ ತೆರಳಿದರು. ಅಲ್ಲಿಂದ ಅವರು ನೇರವಾಗಿ ಬಿಜೆಪಿ ಶಾಸಕರು ತಂಗಿರುವ ಶಾಂಗ್ರಿಲಾ ಹೋಟೆಲ್​ಗೆ

ತೆರಳಲಿದ್ದು, ಅಲ್ಲಿಂದ ನೇರವಾಗಿ ವಿಧಾನಸೌಧಕ್ಕೆ ಆಗಮಿಸಲಿದ್ದಾರೆ.ವಿಧಾನಸಭೆ ಅಧಿವೇಶನ ಪ್ರಾರಂಭವಾಗುವುದಕ್ಕೂ ಮುನ್ನ ಇಂದು ಬೆಳಗ್ಗೆ 9 ಗಂಟೆಗೆ ಬಿಎಸ್​ವೈ ನೇತೃತ್ವದಲ್ಲಿ ಮಹತ್ವದ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ರಾತ್ರಿ ಶಾಂಗ್ರಿಲಾ ಹೋಟೆಲ್​ನಲ್ಲಿ ಬಿಜೆಪಿಯ 100 ಕ್ಕೂ ಹೆಚ್ಚು ಶಾಸಕರು ತಂಗಿದ್ದು, ಇವರೆಲ್ಲರೂ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here