ನವದೆಹಲಿ : ಸೆ, 6: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 21ಕ್ಕೆ ಮುಂದೂಡಿದೆ. ಕರ್ನಾಟಕ ಕಾವೇರಿ ನೀರನ್ನು ಸಮರ್ಪಕವಾಗಿ ಹರಿಸುತ್ತಿಲ್ಲ ಎಂದು ಆರೋಪಿಸಿ ಸುಪ್ರಿಂ ಕೋರ್ಟ್ ಮೆಟ್ಟಿಲೇರಿರುವ ತಮಿಳುನಾಡು ಸರ್ಕಾರ, ಹೆಚ್ಚು ನೀರು ಬಿಡುವುದಕ್ಕೆ ಕರ್ನಾಟಕಕ್ಕೆ ಸೂಚಿಸುವಂತೆ ಅರ್ಜಿ ಸಲ್ಲಿಸಿತ್ತು.
ಕರ್ನಾಟಕ ಪ್ರತಿದಿನ ಮುಂದಿನ ಹದಿನೈದು ದಿನಗಳಿಗೆ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣ ಪ್ರಾಧಿಕಾರ ಆದೇಶಿಸಿತ್ತು. CWMA ಆದೇಶಕ್ಕೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿತ್ತು. 5 ಸಾವಿರ ಕ್ಯೂಸೆಕ್ ನೀರು ಸಾಲುವುದಿಲ್ಲ. 24 ಸಾವಿರ ಕ್ಯೂಸೆಕ್ ನೀರು ಬೇಕು ಎಂದು ಒತ್ತಡ ಹೇರಿದ್ದರು. ಇದಕ್ಕೆ CWMA ಒಪ್ಪಿರಲಿಲ್ಲ. ಇದೀಗ ಸುಪ್ರಿಂ ಕೋರ್ಟ್ ಮೆಟ್ಟಿಲೇರಿರುವ ತಮಿಳುನಾಡು ಸರ್ಕಾರ, ಹೆಚ್ಚು ನೀರು ಬಿಡುವುದಕ್ಕೆ ಸೂಚಿಸುವಂತೆ ಮನವಿ ಮಾಡಿದೆ.
ಕರ್ನಾಟಕ ಸರ್ಕಾರ ಅರ್ಜಿ ಸಲ್ಲಿಸಿ, ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆ ಕೈ ಕೊಟ್ಟಿದೆ. ಕೆಆರ್ಎಸ್ ಡ್ಯಾಂನಲ್ಲಿ ಅಗತ್ಯಕ್ಕೆ ಬೇಕಾದಷ್ಟು ನೀರಿಲ್ಲ. ಕಬಿನಿ, ಹೇಮಾವತಿ, ಹಾರಂಗಿ ಡ್ಯಾಂನಲ್ಲೂ ನೀರಿನ ಅಭಾವ ಎದುರಾಗುತ್ತಿದೆ. ಈಗಾಗಲೇ ನಾವು ಕಾವೇರಿ ಪ್ರಾಧಿಕಾರ ಹೇಳಿದಷ್ಟು ನೀರನ್ನು ತಮಿಳುನಾಡಿಗೆ ಬಿಟ್ಟಿದ್ದೇವೆ. ನಮ್ಮ ಡ್ಯಾಂನಲ್ಲಿ ಅಗತ್ಯ ಪ್ರಮಾಣದಲ್ಲಿ ನೀರು ಇಲ್ಲದಿದ್ದರೂ, 3 ತಿಂಗಳಲ್ಲಿ ತಮಿಳುನಾಡಿಗೆ 35 ಟಿಎಂಸಿ ನೀರು ಬಿಟ್ಟಿದ್ದೇವೆ. ತಮಿಳುನಾಡು ಕೇಳಿದಷ್ಟು ನೀರು ಬಿಡಲು ನಮ್ಮ ಮೂರು ಡ್ಯಾಂಗಳಲ್ಲೂ ನೀರಿಲ್ಲ, ಇರುವ ನೀರು ಕೊಟ್ಟರೆ ನಮಗೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಲಿದೆ ಎಂದಿದೆ.
ತಮಿಳುನಾಡು ಸರ್ಕಾರದ ಅರ್ಜಿಯಲ್ಲಿ, ಜೂನ್, ಜುಲೈ, ಆಗಸ್ಟ್ ತಿಂಗಳ ಅವಧಿಯಲ್ಲಿ ಕರ್ನಾಟಕ 80 ಟಿಎಂಸಿ ನೀರು ಕೊಡಬೇಕು, ಮೆಟ್ಟೂರು ಡ್ಯಾಂನಲ್ಲಿ ನೀರಿನ ಸಂಗ್ರಹ ಕಡಿಮೆ ಆಗುತ್ತಿದೆ, ಮೆಟ್ಟೂರು ಡ್ಯಾಂ ವ್ಯಾಪ್ತಿಯ ಕೃಷಿ ಜಮೀನಿಗೆ ನೀರಿನ ಅಗತ್ಯವಿದೆ, ಸದ್ಯ ಕರ್ನಾಟಕ ಬಿಡುತ್ತಿರುವ ನೀರುಸಾಲುತ್ತಿಲ್ಲ, ಒಪ್ಪಂದದ ಪ್ರಕಾರ ಕರ್ನಾಟಕ ಹೆಚ್ಚುವರಿ ನೀರು ಬಿಡಬೇಕು ಎಂದು ಬೇಡಿಕೆಯಿಟ್ಟಿದೆ.
Disclaimer: This Story is auto-aggregated by a Syndicated Feed and has not been Created or Edited By City Big News Staff.