ರುದ್ರ ಭೂಮಿ ಅಥವಾ ಸ್ಮಶಾನ ಎಂದರೆ ಎಲ್ಲರಿಗೂ ಮನಸ್ಸಿನಲ್ಲಿ ಯಾವುದೋ ಒಂದು ಅವ್ಯಕ್ತ ಭಯ ಕಾಡುತ್ತದೆ. ಜೀವನದ ಕೊನೆಗೆ ಎಲ್ಲರೂ ಅಲ್ಲಿಗೇ ಬರಬೇಕೆಂಬ ಸತ್ಯ ಗೊತ್ತಿದ್ದರೂ, ಮನವು ಅದಕ್ಕೆ ಸಿದ್ಧವಾಗಿರುವುದಿಲ್ಲ ಎಂಬಂತೆ ಸ್ಮಶಾನ ಎಂದರೆ ಭಯ. ಇನ್ನು ರುದ್ರ ಭೂಮಿಯನ್ನು ಕಾಯುವ ಕೆಲಸ ಮಾಡುವವರಿಗೆ ಅದೇ ಜೀವನಾಧಾರ. ಇಲ್ಲಿ ಪುರುಷರು ಆ ಕೆಲಸವನ್ನು ಮಾಡುತ್ತಾರೆ. ಆದರೆ ಬೆಂಗಳೂರಿನ ಚಾಮರಾಜಪೇಟೆ  ರುದ್ರ ಭೂಮಿಯಲ್ಲಿ ಕಳೆದ 25 ವರ್ಷಗಳಿಂದಲೂ ಶಾಂತಮ್ಮ ಎನ್ನುವ ಮಹಿಳೆ ಸ್ಮಶಾನದಲ್ಲಿ ಚಿತೆ ಕಟ್ಟುವುದು, ದಹನವಾದಮೇಲೆ ಬೂದಿ, ಅಸ್ತಿಗಳನ್ನು ಶೇಖರಿಸಿ ಕೊಡುವುದು ಮತ್ತು ವಾತಾವರಣದ ಸ್ವಚ್ಛತೆ ಕಾಪಾಡುವ ಕೆಲಸವನ್ನು ಮಾಡುತ್ತಿದ್ದಾರೆ.

ಈ ಮಹಿಳೆಯ ಹೆಸರು ಶಾಂತಮ್ಮ. ಆಕೆ ತಾಯಿ ಮೊದಲು ಇಲ್ಲಿ ರುದ್ರಭೂಮಿಯಲ್ಲಿ ಕೆಲಸ ಮಾಡುತ್ತಿದ್ದರು, ಬಡತನ, ಜೀವನ ನಿರ್ವಹಣೆಗಾಗಿ ಬಾಲ್ಯದಿಂದಲೇ ತಾಯಿಯ ಜೊತೆ ಸೇರಿದ ಶಾಂತಮ್ಮ ಕೂಡಾ ಆಡುವ ವಯಸ್ಸಿನಲ್ಲೇ ಸ್ಮಶಾನದಲ್ಲಿ ಕೆಲಸದಲ್ಲಿ ತೊಡಗಿಕೊಂಡರು. ಹಲವು ಸಂಪ್ರದಾಯಗಳಲ್ಲಿ ಮಹಿಳೆಯರು ಸ್ಮಶಾನಕ್ಕೆ ಬರುವುದನ್ನೇ ನಿಷೇಧಿಸಿರುವಾಗ ಶಾಂತಮ್ಮ ಅವರ ಈ ಕಾರ್ಯ ನಿಜಕ್ಕೂ ಮೆಚ್ಚುವಂಥದ್ದು. ಜೀವನ ಎಂದರೆ ಇದೇ ಅಲ್ಲವೇ? ಮಕ್ಕಳು ಆಟವಾಡುವ ವಯಸ್ಸು ಅಂದರೆ 12 ನೇ ವಯಸ್ಸಿಗೆ ಸ್ಮಶಾನದಲ್ಲಿ ಶವಗಳ ಜೊತೆ ಕಳೆಯಬೇಕಾದ ಪರಿಸ್ಥಿತಿ ಶಾಂತಮ್ಮನ ಪಾಲಿಗೆ ಬಂದಿತು.

ಶಾಂತಮ್ಮ ಸ್ಮಶಾನದಲ್ಲಿರುವ ಹರಿಶ್ಚಂದ್ರನ ಮೂರ್ತಿ ನೋಡುತ್ತಾ ತನ್ನ ಮನೋವ್ಯಥೆಯನ್ನು ಮರೆಯುವರು. ಎಷ್ಟೋ ಬಾರಿ ಶವ ಸಂಸ್ಕಾರದ ನಂತರ ಆಕೆ ತಾನೇ ಚಿತಾ ಭಸ್ಮವನ್ನು ಕಾವೇರಿ ಯಲ್ಲಿ ಬಿಟ್ಟಿರುವುದು ಉಂಟು. ಆದರೆ ಆಧುನಿಕತೆಯಿಂದಾಗಿ ಎಲೆಕ್ಟ್ರಿಕ್ ಚಿತಾಗಾರಗಳಿಗೆ ಹೆಚ್ಚು ಹೋಗುವ ಜನರ ನಡುವೆ ಕಟ್ಟಿಗೆ ದಹನಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಸ್ಮಶಾನವನ್ನೇ ನಂಬಿ ಜೀವನ ನಡೆಸುತ್ತಿರುವ ಶಾಂತಮ್ಮನಂತಹವರ ಕಡೆಗೆ ಬಿಬಿಎಂಪಿ ಅವರು ಗಮನ ವಹಿಸಿ ಅವರ ಜೀವನಕ್ಕೊಂದು ಆಸರೆ ಕಲ್ಪಿಸಬೇಕಿದೆ. 25 ವರ್ಷಗಳಿಂದ ಪುಡಿಗಾಸನ್ನು ನಂಬಿ ಜೀವನ ನಡೆಸುತ್ತಿರುವ ಶಾಂತಮ್ಮ ಅವರನ್ನು ನೇಮಕಾತಿ ನೀಡಿದರೆ ಅದು ಒಂದು ಉತ್ತಮ ಹೆಜ್ಜೆಯಾಗುತ್ತದೆ.

 

ಮೂಲ ಮಾಹಿತಿ :- ವಿಜಯ್ ರಂಗ ಪ್ರಸಾದ್ ಸಿಂಗಾಪುರ  👍

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here