ಹೇಗಾಗಿತ್ತು ದಕ್ಷ ಅಧಿಕಾರಿಯ ಅಂತ್ಯ… ಚಂಬಲ್ ನಲ್ಲಿ ಇರೋದೆಲ್ಲಾ ಸತ್ಯಾನ…. ಚಂಬಲ್ ನೋಡಿದ ನಂತರ ಅನಿಸಿದ್ದೇನು…ಚಂಬಲ್ ನೋಡಿದ ಸಿನಿ ರಸಿಕರ  ರಿಯಲ್ ಅಭಿಪ್ರಾಯವೇನು… ಇಲ್ಲಿದೆ ನೈಜ ವರದಿ…

ನೀನಾಸಂ ಸತೀಶ್ ಅವರ ಬಹು ನಿರೀಕ್ಷಿತ ಚಿತ್ರ ಚಂಬಲ್. ಟೀಸರ್ ಬಿಡುಗಡೆಯಿಂದಲೇ ಕುತೂಹಲ ಕೆರಳಿಸಿದ್ದ ಈ ಸಿನಿಮಾ ಇಂದು ಬಿಡುಗಡೆಯಾಗಿ ಅಭಿಮಾನಿಗಳ ನಿರೀಕ್ಷೆಯನ್ನು ಹಾಗೂ ಸಿನಿ ರಸಿಕರ ಕುತೂಹಲವನ್ನು ತಣಿಸುವಲ್ಲಿ ಯಶಸ್ವಿಯಾಗಿದೆ. ಈಗಾಗಲೇ ಕನ್ನಡ ಮಾತ್ರವಲ್ಲದೆ ಇತರೆ ಭಾಷೆಗಳಲ್ಲೂ ಕೂಡಾ ಐಎಎಸ್ ಅಧಿಕಾರಿಗಳ ಸುತ್ತ ಸುತ್ತುವ ಸಿನಿಮಾಗಳು ಬಂದಿವೆ. ಆದರೆ ಚಂಬಲ್ ಚಿತ್ರವು ನಿರ್ದೇಶಕರ ಕೈ ಚಳಕದಿಂದ ಅಂತಹ ನೂರು ಚಿತ್ರಗಳಲ್ಲಿ ಒಂದಾಗದೆ ಭಿನ್ನವಾಗಿ ಮೂಡಿ ಬಂದಿದ್ದು ಇದರ ಕ್ರೆಡಿಟ್ ನಿರ್ದೇಶಕ ಜೇಕಬ್ ವರ್ಗೀಸ್ ಅವರಿಗೆ ಸೇರುತ್ತದೆ. ಇನ್ನು ಈ ಚಿತ್ರದ ಟ್ರೈಲರ್ ಬಂದ ಮೇಲೆ ಇದು ದಿವಂಗತ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಬಗ್ಗೆ ಇರಬಹುದೆಂಬ ಅನುಮಾನ ಮೂಡಿ ಮತ್ತಷ್ಟು ಕುತೂಹಲವನ್ನು ಕೆರಳಿಸಿತ್ತು.

ನಿರ್ದೇಶಕ ಜೇಕಬ್ ವರ್ಗಿಸ್ ಅವರು ಒಬ್ಬ ದಕ್ಷ ಐಎಎಸ್ ಅಧಿಕಾರಿ ಕೋಲಾರದಿಂದ ಬೆಂಗಳೂರಿಗೆ ವರ್ಗಾವಣೆಯಾಗಿ ಬಂದ ಮೇಲೆ ಹೇಗೆ ಇಲ್ಲಿನ ಕಾರ್ಪೊರೇಟ್ ಕಾಡಿನಲ್ಲಿ ಅಡಗಿರುವ ಭೂಗಳ್ಳರಿಗೆ ಸಿಂಹ ಸ್ವಪ್ನವಾಗುವರು ಎಂಬ ಕಥೆಯನ್ನು ಬಹಳ ಅಚ್ಚುಕಟ್ಟಾಗಿ ನಿರ್ದೇಶನ ಮಾಡಿ ಒಂದೊಳ್ಳೆ ಸಿನಿಮಾವನ್ನು ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ. ಯಾವ ರೀತಿ ರಾಜಕಾರಣಿಗಳು ಹಾಗೂ ಭೂಗಳ್ಳರು ಒಬ್ಬ ದಕ್ಷ ಅಧಿಕಾರಿಯನ್ನು ತಮ್ಮ ಅಕ್ರಮಗಳಿಗೆ ಅಡ್ಡಗಾಲಾಗದಂತೆ ಇರಲು ಏನೆಲ್ಲಾ ಯೋಜನೆಗಳನ್ನು ಮಾಡುತ್ತಾರೆ , ಏನೆಲ್ಲಾ ಕುಟಿಲ ಉಪಾಯಗಳನ್ನು ಹೂಡುತ್ತಾರೆ ಎಂಬುದನ್ನು ನಿರ್ದೇಶಕರು ಬಹಳ ಆಕರ್ಷಕವಾಗಿ ಮೂಡಿಸಿದ್ದಾರೆ.

ಚಿತ್ರದ ಪ್ರಮುಖ ಆಕರ್ಷಣೆ ಚಿತ್ರದ ನಾಯಕ. ನೀನಾಸಂ ಸತೀಶ್ ಈಗಾಗಲೇ ತನ್ನ ಸಹಜ ನಟನೆಯಿಂದ ಜನರ ಮನಸ್ಸನ್ನು ಗೆದ್ದವರು. ಅವರು ಪಾತ್ರಗಳನ್ನು ಲೀಲಾಜಾಲವಾಗಿ ನಿರ್ವಹಿಸುವುದರಲ್ಲಿ ಎತ್ತಿದ ಕೈ. ಕೊಟ್ಟ ಪಾತ್ರದಲ್ಲಿ ಲೀನವಾಗಿ ಬಿಡುವ ಅವರು, ಚಂಬಲ್ ನಲ್ಲಿ ಒಬ್ಬ ದಕ್ಷ ಹಾಗೂ ಸಮರ್ಥ ಐಎಎಸ್ ಅಧಿಕಾರಿಯ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ. ಅವರ ಲುಕ್ ಹಾಗೂ ಅವರ ಮಾತಿನ ಶೈಲಿ ನಿಜಕ್ಕೂ ಎಲ್ಲರನ್ನೂ ಮೆಚ್ಚಿಸುತ್ತದೆ. ಐಎಎಸ್ ಅಧಿಕಾರಿ ಸುಭಾಷ್ ಪಾತ್ರದಲ್ಲಿ ಅವರ ನಟನೆ ಅವರೊಬ್ಬ ಪ್ರತಿಭಾವಂತ ಹಾಗೂ ಪಾತ್ರ ನಿರ್ವಹಣೆಯಲ್ಲಿ ಸಿದ್ಧ ಹಸ್ತನಾದ ನಟ ಎಂಬುದನ್ನು ಸಾಬೀತು ಮಾಡಿದ್ದಾರೆ.

ಚಂಬಲ್ ನೋಡುತ್ತಾ ಹೋದಷ್ಟೂ ಎದೆಯಲ್ಲಿ ಹಲವಾರು ವಿಷಯಗಳನ್ನು ಹುಟ್ಟು ಹಾಕುತ್ತಾ , ಪ್ರೇಕ್ಷಕರ ತಲೆಯಲ್ಲಿ ಮುಂದೇನಾಗಬಹುದು ಎಂಬ ಪ್ರಶ್ನೆ ಹುಟ್ಟಿಸುತ್ತಾ ಸಾಗುತ್ತದೆ. ನಿಜಕ್ಕೂ ಒಬ್ಬ ಪ್ರಾಮಾಣಿಕ ಅಧಿಕಾರಿಯ ಸಾವು ಹೇಗೆ ಆಗಿರಬಹುದು ಮತ್ತು ಆ ಸಾವಿನ ಉದ್ದೇಶ , ಅಧಿಕಾರಿಯ ಸಾವಿನ ನಂತರ ಸುತ್ತಮುತ್ತಲಿನ ಪ್ರಬಲ ಕೈಗಳು ಹೇಗೆಲ್ಲಾ ಸಾವನ್ಬು ಆತ್ಮಹತ್ಯೆ ಎಂದು ತೋರಿಸುವ ಪ್ರಯತ್ನದ ದೃಶ್ಯಗಳಂತು  ತೀರಾ ನೈಜತೆ ಎನ್ನುವಂತೆ ಕಣ್ಣಿಗೆ ಕಟ್ಟುತ್ತವೆ. ಚಂಬಲ್ ನಂತಹ ಸಿನಿಮಾ ಕೇವಲ ಸಿನಿಮಾ ಆಗಿ ಉಳಿಯದೇ ಬೇರೆಯದ್ದೇ ಇತಿಹಾಸ ತೋರಿಸುತ್ತದೆ… ಕನ್ನಡಿಗರ ಮನಸ್ಸಲ್ಲಿ ನೆಲೆನಿಂತ ದಕ್ಷ ಅಧಿಕಾರಿಯ ನೆನಪು ನೀನಾಸಂ ಸತೀಶ್ ರೂಪದಲ್ಲಿ ನಿಮ್ಮ ಎದೆಯಲ್ಲಿ ಮತ್ತೆ  ನಿಲ್ಲುತ್ತದೆ. ಒಟ್ಟಾರೆ ಚಂಬಲ್ ಒಂದು ಉತ್ತಮ ಹಾಗೂ ಅದ್ಭುತ ಚಿತ್ರವಾಗುವುದರಲ್ಲಿ ಅನುಮಾನವೇ ಇಲ್ಲ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here