ಜಂಟಿ ಅಧಿವೇಶನ ಪ್ರಯುಕ್ತ ಸಿ ಎಂ ಹೊರಡಿಸಿರುವ ಆದೇಶದ ಪ್ರತಿ ಹೀಗಿದೆ.

*ಕರ್ನಾಟಕ ವಿಧಾನ ಮಂಡಲದ ಜಂಟಿ ಅಧಿವೇಶನ –

ಕರ್ನಾಟಕ ವಿಧಾನ ಪರಿಷತ್ತಿನ ಸನ್ಮಾನ್ಯ ಸಭಾಪತಿಗಳೇ,
ಕರ್ನಾಟಕ ವಿಧಾನಸಭೆಯ ಸನ್ಮಾನ್ಯ ಸಭಾಧ್ಯಕ್ಷರೇ,
ಸನ್ಮಾನ್ಯ ಕರ್ನಾಟಕದ ಮುಖ್ಯಮಂತ್ರಿಯವರೇ,
ಸನ್ಮಾನ್ಯ ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕರೇ,
ಸನ್ಮಾನ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕರೇ,
ಸನ್ಮಾನ್ಯ ಸಚಿವರೇ ಹಾಗೂ ಕರ್ನಾಟಕ ವಿಧಾನ ಮಂಡಲದ ಸನ್ಮಾನ್ಯ ಸದಸ್ಯರೇ,

1. ಕರ್ನಾಟಕ ವಿಧಾನ ಮಂಡಲದ ಈ ಜಂಟಿ ಅಧಿವೇಶನಕ್ಕೆ ತಮ್ಮೆಲ್ಲರನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಇಂದು, ತಮ್ಮೆಲ್ಲರನ್ನು ಉದ್ದೇಶಿಸಿ ಮಾತನಾಡುವುದು ನನ್ನ ಸೌಭಾಗ್ಯವೆಂದೇ ಭಾವಿಸುತ್ತೇನೆ.

2. ನನ್ನ ಸರ್ಕಾರವು ಬಡವರು, ದುರ್ಬಲ ವರ್ಗದವರು ಮತ್ತು ಅವಕಾಶ ವಂಚಿತರ ಕಲ್ಯಾಣ ಮತ್ತು ಅಭಿವೃದ್ಧಿಗೆ ಬದ್ಧವಾಗಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಕಳೆದ ಐದು ವರ್ಷಗಳಲ್ಲಿ ನನ್ನ ಸರ್ಕಾರವು, ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವಲ್ಲಿ ಮತ್ತು ಸಮಾಜದ ಎಲ್ಲಾ ವರ್ಗದವರಿಗೂ ಸಾಮಾಜಿಕ ನ್ಯಾಯ ಮತ್ತು ಕಲ್ಯಾಣ ದೊರಕಿಸುವಲ್ಲಿ ಗಮನಾರ್ಹ ಹೆಜ್ಜೆ ಇರಿಸಿದೆ. ನನ್ನ ಸರ್ಕಾರವು, ಹಸಿವು ಮುಕ್ತ ಕರ್ನಾಟಕದ ಗುರಿಯನ್ನು ತಲುಪುವಲ್ಲಿ ಉತ್ತಮ ಪ್ರಗತಿ ಸಾಧಿಸಿದೆ.

3. ನನ್ನ ಸರ್ಕಾರವು, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಹಲವಾರು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡಿದೆ ಮತ್ತು ಕೋಮು ಸೌಹಾರ್ದ ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಖಾತರಿಪಡಿಸಿದೆ. ಹಠಾತ್ತನೆ ಘಟಿಸುವ ಕೋಮು ಹಿಂಸೆ ಘಟನೆಗಳ ಬಗ್ಗೆ ದೃಢವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ನನ್ನ ಸರ್ಕಾರವು, ಕಾವೇರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ನೀರಿಗಾಗಿ ನ್ಯಾಯಯುತ ಬೇಡಿಕೆಯನ್ನು ಈಡೇರಿಸಿಕೊಳ್ಳುವಲ್ಲಿ ರಾಜ್ಯಕ್ಕೆ ನ್ಯಾಯ ದೊರಕಿಸುವಲ್ಲಿನ ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ನನ್ನ ಸರ್ಕಾರವು ಮಹದಾಯಿ ಜಲಾನಯನ ಪ್ರದೇಶದಿಂದ ನಮ್ಮ ಜನರಿಗೆ ಹಕ್ಕಿನ ಪಾಲನ್ನು ದೊರಕಿಸುವಲ್ಲಿ ಎಲ್ಲಾ ರೀತಿಯ ಪ್ರಯತ್ನಗಳನ್ನು ಮುಂದುವರೆಸುತ್ತದೆ.

4. ಪೊಲೀಸ್ ಇಲಾಖೆಯನ್ನು ವೃತ್ತಿಪರಗೊಳಿಸುವ ಮತ್ತು ಆಧುನೀಕರಣಗೊಳಿಸುವ ದೃಷ್ಟಿಯಿಂದ ಮತ್ತು ಪೊಲೀಸ್ ಸಿಬ್ಬಂದಿಯ ಕಲ್ಯಾಣಕ್ಕಾಗಿ ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಆಧುನೀಕರಣದ ಯೋಜನೆಯಡಿಯಲ್ಲಿ, 84 ಪೊಲೀಸ್ ಠಾಣೆಗಳು, 2 ಜಿಲ್ಲಾ ಪೊಲೀಸ್ ಕಚೇರಿ ಸಂಕೀರ್ಣಗಳು, 232 ವಸತಿ ಕ್ವಾರ್ಟರ್ಸ್‍ಗಳು, 6 ಜಿಲ್ಲಾ ಪೊಲೀಸ್ ತರಬೇತಿ ಕೇಂದ್ರಗಳು, 10 ಪೊಲೀಸ್ ಉಪಠಾಣೆಗಳು, 10 ಬ್ಯಾರಕ್‍ಗಳು, 6 ಶಸ್ತ್ರಾಗಾರಗಳು ಮತ್ತು ಇತರೆ 46ಕ್ಕಿಂತ ಹೆಚ್ಚಿನ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಸಬ್‍ಬೀಟ್ ವ್ಯವಸ್ಥೆ, ಡಯಲ್ 100 ತುರ್ತು ಸ್ಪಂದನೆ ವ್ಯವಸ್ಥೆಯ ವಿಸ್ತರಣೆ ಮತ್ತು ಗಸ್ತು ವಾಹನಗಳ ಹೆಚ್ಚಳದ ಮೂಲಕ ಸಾರ್ವಜನಿಕರನ್ನು ಒಳಗೊಂಡ ನಾಗರಿಕ ಕೇಂದ್ರಿತ ಪೊಲೀಸಿಂಗ್‍ಗೆ ಹೆಚ್ಚಿನ ಬಲವನ್ನು ಒದಗಿಸಲಾಗಿದೆ. ಪೊಲೀಸ್ ಠಾಣೆಗಳನ್ನು ನಾಗರಿಕ ಸ್ನೇಹಿಯನ್ನಾಗಿ ಮಾಡುವುದಕ್ಕೆ ಜನಸ್ನೇಹಿ ಯೋಜನೆಯಡಿಯಲ್ಲಿ 760 ಪೊಲೀಸ್ ಠಾಣೆಗಳಲ್ಲಿ ಕ್ರಮಗಳನ್ನು ಕೈಗೊಳ್ಳಲಾಗಿದೆ. 2013 ರಿಂದಲೂ ಪ್ರಮುಖ ಪೊಲೀಸ್ ಹುದ್ದೆಗಳನ್ನು ಭರ್ತಿ ಮಾಡಲು ವ್ಯವಸ್ಥಿತ ಪ್ರಯತ್ನಗಳನ್ನು ಕೈಗೊಂಡಿದ್ದೇವೆ. 29,684 ಪೊಲೀಸ್ ಪೇದೆ, ಆರಕ್ಷಕ ಉಪ ನಿರೀಕ್ಷಕರು ಮತ್ತು ಇತರ ಲಿಪಿಕ ಸಿಬ್ಬಂದಿಯ ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಲಾಗಿದೆ. 2017-18ರಲ್ಲಿ 11,000ಕ್ಕಿಂತ ಹೆಚ್ಚು ಪೊಲೀಸ್ ಪೇದೆ ಮತ್ತು ಮುಖ್ಯ ಪೊಲೀಸ್ ಪೇದೆಗಳಿಗೆ ಬಡ್ತಿ ನೀಡಲಾಯಿತು. 2017-18ರ ಅವಧಿಯಲ್ಲಿ ಒಟ್ಟು 1,733 ಕ್ವಾರ್ಟರ್ಸ್‍ಗಳನ್ನು ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಗಳಲ್ಲಿ ನಿರ್ಮಿಸಲಾಯಿತು. ಸರ್ಕಾರವು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ 1,989 ಹುದ್ದೆಗಳನ್ನು ಮತ್ತು ಕಾರಾಗೃಹ ಇಲಾಖೆಯಲ್ಲಿ 1,995 ಹುದ್ದೆಗಳನ್ನು ಮಂಜೂರು ಮಾಡಿದೆ. 112 ಸರ್ಕಾರಿ ಅಭಿಯೋಜಕರ ಹುದ್ದೆಗಳನ್ನು ಸಹ ಸೃಜಿಸಲಾಗಿದ್ದು, 229 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಎಲ್ಲಾ ಪೊಲೀಸ್ ಠಾಣೆಗಳು ಮತ್ತು ಜಿಲ್ಲಾ ಕಾರಾಗೃಹಗಳಲ್ಲಿ ಸಿ.ಸಿ.ಟಿವಿಗಳನ್ನು ಅಳವಡಿಸುವ ಕಾರ್ಯ ಮಾಡಲಾಗಿದೆ ಮತ್ತು 9 ಕಾರಾಗೃಹಗಳನ್ನು 25 ನ್ಯಾಯಾಲಯಗಳೊಂದಿಗೆ ಸಂಪರ್ಕಿಸಲು ವಿಡಿಯೋ ಕಾನ್ಫರೆನ್ಸ್ ನಡೆಸುವ ಸೌಲಭ್ಯಗಳನ್ನು ಒದಗಿಸಲಾಗಿದೆ.

5. ನನ್ನ ಸರ್ಕಾರವು ಸಾರ್ವಜನಿಕ ಸೇವೆಗಳಲ್ಲಿ ಇರುವ ಭ್ರಷ್ಟಾಚಾರದ ವಿರುದ್ಧ ಹೋರಾಟವನ್ನು ಮುಂದುವರೆಸಿದೆ. ಇ-ಆಡಳಿತ ಉಪಕ್ರಮಗಳ ಸರಣಿಯು ಸಾರ್ವಜನಿಕ ಸೇವೆಗಳಲ್ಲಿ ಪಾರದರ್ಶಕತೆ ಹಾಗೂ ದಕ್ಷತೆಯನ್ನು ಹೆಚ್ಚಿಸಿದೆ. ಭ್ರಷ್ಟಾಚಾರದ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸÀಲು ಭ್ರಷ್ಟಾಚಾರ ನಿಗ್ರಹ ದಳವನ್ನು ಸ್ಥಾಪಿಸಲಾಗಿದೆ. ಭ್ರಷ್ಟಾಚಾರ ನಿಗ್ರಹ ದಳ ಸ್ಥಾಪನೆಯಾದಾಗಿನಿಂದ 278 ಟ್ರ್ಯಾಪ್ ಪ್ರಕರಣಗಳು, 65 ದಾಳಿ ಪ್ರಕರಣಗಳು ಮತ್ತು 61 ಇತರೆ ಪ್ರಕರಣಗಳು ಒಟ್ಟು 404 ಪ್ರಕರಣಗಳು ದಾಖಲಾಗಿವೆ. ಭ್ರಷ್ಟಾಚಾರ ನಿಗ್ರಹ ದಳ ಸ್ಥಾಪನೆಯಾದಾಗಿನಿಂದ ಸರ್ಕಾರವು ಸ್ವೀಕರಿಸಿದ 106 ಪ್ರಕರಣಗಳಲ್ಲಿ, 72 ಪ್ರಕರಣಗಳಲ್ಲಿ ಅಭಿಯೋಜನಾ ಮಂಜೂರಾತಿ ಆದೇಶವನ್ನು ಹೊರಡಿಸಲಾಗಿದೆ. ಜಿಲ್ಲಾ ಮಟ್ಟ, ತಾಲ್ಲೂಕು ಮಟ್ಟ ಮತ್ತು ಗ್ರಾಮ ಮಟ್ಟದಲ್ಲಿ, ಕಾಲಕಾಲಕ್ಕೆ ಜನ ಸಂಪರ್ಕ ಸಭೆಗಳನ್ನು ನಡೆಸುವುದರ ಮೂಲಕ ಭ್ರಷ್ಟಾಚಾರ ನಿಗ್ರಹ ದಳದ ಕಾರ್ಯವೈಖರಿಯ ಬಗೆಗೆ ಜನರಲ್ಲಿ ಅರಿವನ್ನು ಮೂಡಿಸಲಾಗಿದೆ ಮತ್ತು ದೂರುಗಳನ್ನು ಸ್ವೀಕರಿಸಿದ ನಂತರ ವಿಳಂಬವಿಲ್ಲದಂತೆ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

6. ನನ್ನ ಸರ್ಕಾರವು, ಡಾ: ನಂಜುಂಡಪ್ಪ ಸಮಿತಿಯ ವರದಿಯನ್ನು ಅನುಷ್ಠಾನಗೊಳಿಸಲು ವಿಶೇಷ ಅಭಿವೃದ್ಧಿ ಯೋಜನೆಯನ್ನು 5 ವರ್ಷಗಳ ಕಾಲ ಮುಂದುವರೆಸುವ ಮೂಲಕ ಭಾರತ ಸಂವಿಧಾನದ 371-ಜೆ ಅನುಚ್ಛೇದದ ಅನ್ವಯ ಹೈದರಾಬಾದ್-ಕರ್ನಾಟಕ ಪ್ರದೇಶದ ಅಭಿವೃದ್ಧಿಯಲ್ಲಿ ಎದ್ದು ಕಾಣುವ ಪ್ರಾದೇಶಿಕ ಅಸಮಾನತೆಯನ್ನು ಪರಿಣಾಮಕಾರಿಯಾಗಿ ನಿವಾರಿಸಲು ಐತಿಹಾಸಿಕ ಕ್ರಮಗಳನ್ನು ಕೈಗೊಂಡಿದೆ.

7. ಹೈದರಾಬಾದ್-ಕರ್ನಾಟಕ ಪ್ರದೇಶದ ಸ್ಥಳೀಯ ವ್ಯಕ್ತಿಗಳಿಗೆ ಸಾರ್ವಜನಿಕ ಉದ್ಯೋಗದಲ್ಲಿ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ಒಟ್ಟು 18,993 ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಲಾಗಿದೆ. ಕಳೆದ ಐದು ವರ್ಷಗಳಲ್ಲಿ 3,750 ಕೋಟಿ ರೂಪಾಯಿಗಳನ್ನು ಹೈದರಾಬಾದ್-ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗಾಗಿ ಮೀಸಲಿರಿಸಲಾಗಿದೆ. ಮಂಜೂರಾದ 12,696 ಕಾಮಗಾರಿಗಳಲ್ಲಿ 6,064 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.

8. ನನ್ನ ಸರ್ಕಾರವು ಕರ್ನಾಟಕವನ್ನು ಬರ ಮುಕ್ತವನ್ನಾಗಿಸುವತ್ತ ಹಲವಾರು ಕ್ರಮಗಳನ್ನು ಕೈಗೊಂಡಿದೆ. ನನ್ನ ಸರ್ಕಾರವು ಮಳೆಯಾಶ್ರಿತ ಕೃಷಿಕರಿಗೆ ನೆರವು ಒದಗಿಸುವ ಸಲುವಾಗಿ ‘ಕೃಷಿ ಭಾಗ್ಯ ಯೋಜನೆ’ ಯನ್ನು ಪ್ರಾರಂಭಿಸಿತು. ಕಿರು ನೀರಾವರಿ ಮತ್ತು ಅಗತ್ಯ ಪರಿಕರಗಳೊಂದಿಗೆ ರೈತರ ಜಮೀನುಗಳಲ್ಲಿ 1.90 ಲಕ್ಷ ಮಳೆ ನೀರು ಕೊಯ್ಲು ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ಈ ಕಾರ್ಯಕ್ರಮದಡಿ ರೈತರು ಅಂದಾಜು ಶೇಕಡ 50 ರಷ್ಟು ಹೆಚ್ಚು ಇಳುವರಿ ಪಡೆದಿರುವುದಕ್ಕೆ ಸಾಕ್ಷಿಯಾಗಿದ್ದಾರೆ. ಇಲ್ಲಿಯವರೆಗೆ ಕೃಷಿ ಭಾಗ್ಯ ಯೋಜನೆಗಾಗಿ 1,898 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. 8,891 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ 2,672 ಕೆರೆಗಳನ್ನು ತುಂಬಿಸಲು, 114 ಕೆರೆ ತುಂಬಿಸುವ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಇದು ಅಂತರ್ಜಲ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಬರಪೀಡಿತ ಪ್ರದೇಶಗಳಿಗೆ ಕುಡಿಯುವ ನೀರನ್ನು ಒದಗಿಸುತ್ತದೆ. ಇದರೊಂದಿಗೆ, ಭದ್ರಾ ಮೇಲ್ದಂಡೆ ಯೋಜನೆಯಡಿಯಲ್ಲಿ 367 ಕೆರೆಗಳನ್ನು ಮತ್ತು ಎತ್ತಿನಹೊಳೆ ಯೋಜನೆಯಡಿಯಲ್ಲಿ 527 ಕೆರೆಗಳನ್ನು ತುಂಬಿಸಲು ಯೋಜಿಸಲಾಗಿದೆ.

9. ನನ್ನ ಸರ್ಕಾರವು ಕೃಷಿ ಯಾಂತ್ರೀಕರಣ ಯೋಜನೆಯನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಪ್ರೋತ್ಸಾಹಿಸಿದೆ. ಕಳೆದ ನಾಲ್ಕು ವರ್ಷಗಳಲ್ಲಿ 1,654 ಕೋಟಿ ರೂಪಾಯಿಗಳನ್ನು ಕೃಷಿ ಯಾಂತ್ರೀಕರಣಕ್ಕಾಗಿ ಒದಗಿಸಿದೆ. ಇದರಡಿಯಲ್ಲಿ 8.16 ಲಕ್ಷ ರೈತರು ಕೈಗೆಟುಕುವ ಬೆಲೆಗಳಲ್ಲಿ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆಗೆ ಪಡೆಯಲು ಸಾಧ್ಯವಾಗುವಂತೆ 335 ‘ಕೃಷಿ ಯಂತ್ರ ಧಾರೆ’ ಎನ್ನಲಾದ ಬಾಡಿಗೆ ಆಧಾರಿತ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಆರೋಗ್ಯ ಮತ್ತು ಪೌಷ್ಠಿಕತೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಸಿರಿಧಾನ್ಯ ವ್ಯವಸಾಯವನ್ನು ವಿಶೇಷ ಪ್ರಯತ್ನದ ಮೂಲಕ ಉತ್ತೇಜಿಸಲಾಗುತ್ತಿದೆ. 2016ರ ಮುಂಗಾರಿನ ಅವಧಿಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲು ವಿಮೆ ಯೋಜನೆ (ಪಿಎಂಎಫ್‍ಬಿವೈ) ಮತ್ತು ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಅಡಿಯಲ್ಲಿ ಒಟ್ಟು 10.46 ಲಕ್ಷ ರೈತರು ಬೆಳೆ ವಿಮೆಯನ್ನು ಹೊಂದಿದ್ದಾರೆ ಹಾಗೂ 6.25 ಲಕ್ಷ ರೈತರು ಇಳುವರಿ ಕೊರತೆಯ ಕಾರಣದಿಂದ ವಿಮೆ ಪರಿಹಾರವಾಗಿ 1,005.96 ಕೋಟಿ ರೂಪಾಯಿಗಳನ್ನು ಪಡೆದುಕೊಂಡಿದ್ದಾರೆ.

10. ನನ್ನ ಸರ್ಕಾರವು 2013-14ರಲ್ಲಿ ಎರಡು ಲಕ್ಷ ರೂಪಾಯಿಗಳವರೆಗಿನ ಶೂನ್ಯ ಬಡ್ಡಿ ದರದ ಅಲ್ಪಾವಧಿ ಕೃಷಿ ಸಾಲಗಳನ್ನು ಘೋಷಿಸಿತ್ತು, ತದನಂತರ ಅದನ್ನು ಮೂರು ಲಕ್ಷ ರೂಪಾಯಿಗಳವರೆಗೆ ಹೆಚ್ಚಿಸಲಾಯಿತು. 2016-17ನೇ ಸಾಲಿನಲ್ಲಿ 23.45 ಲಕ್ಷ ರೈತರನ್ನು ಒಳಗೊಂಡಂತೆ ಹಂಚಿಕೆಯಾದ ಸಾಲದ ಮೊತ್ತವು 11,902 ಕೋಟಿ ರೂಪಾಯಿಗಳಿಗೆ ಹೆಚ್ಚಿದೆ. ಕಳೆದ ನಾಲ್ಕುವರೆ ವರ್ಷಗಳಲ್ಲಿ, 6.74 ಲಕ್ಷ ಹೊಸ ರೈತರು 5,352 ಕೋಟಿ ರೂಪಾಯಿಗಳ ಸಾಲವನ್ನು ಪಡೆದುಕೊಂಡಿದ್ದಾರೆ.

11. ನನ್ನ ಸರ್ಕಾರವು ರೈತರ ರಕ್ಷಣೆಗೆ ಮುಂದಾಗಿ, 22.27 ಲಕ್ಷ ರೈತರಿಗೆ ಅನುಕೂಲವಾಗುವಂತೆ ಸಹಕಾರ ಸಂಸ್ಥೆಗಳಿಂದ ಪಡೆದಿರುವ 8,165 ಕೋಟಿ ರೂಪಾಯಿಗಳವರೆಗಿನ ಕೃಷಿ ಸಾಲವನ್ನು 2017-18ರಲ್ಲಿ ಮನ್ನಾ ಮಾಡಿರುತ್ತದೆ.

12. ನನ್ನ ಸರ್ಕಾರವು 2013ನೇ ಸಾಲಿನಲ್ಲಿ ನೂತನ ಕೃಷಿ ಮಾರಾಟ ನೀತಿಯನ್ನು ಜಾರಿಗೆ ತಂದಿದ್ದು, ಇದು ದೇಶದಲ್ಲಿಯೇ ಪ್ರಪ್ರಥಮ ಮಾದರಿಯಾಗಿದೆ. ಈ ನೀತಿಯ ಅಡಿಯಲ್ಲಿ, ತಂತ್ರಜ್ಞಾನ ಆಧಾರಿತ ಆನ್‍ಲೈನ್ ವ್ಯಾಪಾರ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಈ ಆನ್‍ಲೈನ್ ವ್ಯವಸ್ಥೆಯು ಏಕೀಕೃತ ಮಾರುಕಟ್ಟೆ ವೇದಿಕೆ, ಏಕೀಕೃತ ಪರವಾನಗಿ ಮತ್ತು ಉಗ್ರಾಣ ಆಧಾರಿತ ಮಾರಾಟಕ್ಕೆ ಅವಕಾಶವನ್ನು ಕಲ್ಪಿಸುತ್ತದೆ. ಮಾರುಕಟ್ಟೆಯಲ್ಲಿರುವ ಸರಕುಗಳು, ವೈಜ್ಞಾನಿಕ ವಿಶ್ಲೇಷಣಾ ಪ್ರಯೋಗಾಲಯಗಳು ಮತ್ತು ಇತರೆ ಸವಲತ್ತುಗಳ ಬಗ್ಗೆ ಕನ್ನಡದಲ್ಲಿ ಎಸ್.ಎಂ.ಎಸ್. ಕಳುಹಿಸುವ ಮೂಲಕ ರೈತರಿಗೆ ಮಾಹಿತಿ ನೀಡಲಾಗುತ್ತದೆ.

13. 82,875 ರೈತರುಗಳಿಂದ 4.62 ಲಕ್ಷ ಟನ್ ತೊಗರಿಬೇಳೆ ಸಂಗ್ರಹಕ್ಕಾಗಿ ಪ್ರತಿ ಕ್ವಿಂಟಾಲ್‍ಗೆ 450 ರೂಪಾಯಿಗಳ ವಿಶೇಷ ಬೋನಸನ್ನು ನೀಡುವುದರ ಮೂಲಕ ತೊಗರಿಬೇಳೆ ಸಂಗ್ರಹಕ್ಕಾಗಿ ಕನಿಷ್ಟ ಬೆಂಬಲ ಕಾರ್ಯ ಚಟುವಟಿಕೆಗಳನ್ನು ಕೈಗೆತ್ತಿಕೊಂಡಿದೆ. ಹೆಸರುಕಾಳು, ಉದ್ದು, ಹತ್ತಿ, ಶೇಂಗಾ, ಕಡಲೆಕಾಳುಗಳಿಗೂ ಸಹ ಕನಿಷ್ಟ ಬೆಂಬಲ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ.

14. ಕರ್ನಾಟಕವನ್ನು ದೇಶದಲ್ಲಿಯೇ ಉತ್ತಮ ತೋಟಗಾರಿಕಾ ರಾಜ್ಯವೆಂದು 2015ರಲ್ಲಿ ಘೋಷಿಸಲಾಗಿದೆ. 5,275 ರೈತರನ್ನು ಒಳಗೊಂಡಂತೆ 15 ಸಮಗ್ರÀ ತೋಟಗಾರಿಕೆ ಅಭಿವೃದ್ಧಿ ಯೋಜನೆಗಳನ್ನು 74 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮಂಜೂರು ಮಾಡಲಾಗಿದೆ. ಉತ್ತಮ ಗುಣಮಟ್ಟದ ತೋಟಗಾರಿಕಾ ಕಸಿ-ಸಸಿಗಳ ಸಸ್ಯೋತ್ಪಾದನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ತನ್ಮೂಲಕ, ಕಸಿಗಿಡಗಳನ್ನು ಒಳಗೊಂಡಂತೆ 20,000 ಎಕರೆ ಭೂಮಿಯಲ್ಲಿ ತೋಟಗಾರಿಕೆಯನ್ನು ವಿಸ್ತರಿಸಲು 43 ಲಕ್ಷ ಸಸಿಗಳನ್ನು 18,500 ರೈತರಿಗೆ ವಿತರಿಸಲಾಗುವುದು.

15. ಕೃಷಿ, ತೋಟಗಾರಿಕೆ, ಕಂದಾಯ ಮುಂತಾದ ಇಲಾಖೆಗಳ ಸುಮಾರು 20,000 ನೌಕರರನ್ನು ಒಳಗೊಂಡಂತೆ ಭೌಗೋಳಿಕ ಸ್ಥಾನದೊಂದಿಗೆ ಬೆಳೆಗಳ ಛಾಯಾಚಿತ್ರಗಳನ್ನು ಸಂಗ್ರಹಿಸಲು ವ್ಯವಸ್ಥಿತ ಪ್ರಯತ್ನವನ್ನು ಕೈಗೊಳ್ಳಲಾಗಿತ್ತು. 2.00 ಕೋಟಿಗಿಂತಲೂ ಹೆಚ್ಚಿನ ಜಮೀನುಗಳಲ್ಲಿ, ಇಲ್ಲಿಯವರೆಗೆ 1.49 ಕೋಟಿಗಿಂತಲೂ ಹೆಚ್ಚು ಬೆಳೆ ವಿವರಗಳನ್ನು ಸಂಗ್ರಹಿಸಲಾಗಿದೆ. ಈ ಮಧ್ಯೆ, ರೈತರು ತಾವೇ ಮಾಹಿತಿಯನ್ನು ನೀಡಲು ಒಂದು ಆ್ಯಪ್ (ಂಠಿಠಿ) ಅನ್ನು ಸಹ ಪ್ರಾರಂಭಿಸಲಾಗಿದೆ. ಈ ದತ್ತ ಮಾಹಿತಿಯನ್ನು ಕನಿಷ್ಟ ಬೆಂಬಲ ಬೆಲೆ ಯೋಜನೆ, ಬೆಳೆ ವಿಮೆ, ಬರಗಾಲ ಅಥವಾ ಪ್ರವಾಹ ಮೊದಲಾದ ಸಂದರ್ಭಗಳಲ್ಲಿ ಬೆಂಬಲ ಬೆಲೆ ಪಾವತಿ ಮೊದಲಾದವುಗಳನ್ನು ಅನುಷ್ಠಾನಗೊಳಿಸಲು ಉಪಯೋಗಿಸಲಾಗುವುದು.

16. ಪಶುಸಂಗೋಪನೆ ಮತ್ತು ಮೀನುಗಾರಿಕೆಯು ರೈತರ ಆದಾಯಕ್ಕೆ ಮತ್ತು ರಾಜ್ಯದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡಿವೆ. ಸೇವೆ ನೀಡಿಕೆಯನ್ನು ಮತ್ತಷ್ಟು ಬಲಪಡಿಸಲು 302 ಪ್ರಾಥಮಿಕ ಪಶುವೈದ್ಯಕೀಯ ಕೇಂದ್ರಗಳನ್ನು ಪಶು ಚಿಕಿತ್ಸಾಲಯಗಳನ್ನಾಗಿ ಉನ್ನತೀಕರಿಸಲಾಗಿದೆ. ಇದರೊಂದಿಗೆ ಎಲ್ಲಾ ಪಶುವೈದ್ಯಕೀಯ ಸಂಸ್ಥೆಗಳಲ್ಲಿ ಪದವೀಧರ ಪಶುವೈದ್ಯರೇ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ, ಕರ್ನಾಟಕವು ರಾಷ್ಟ್ರದಲ್ಲಿಯೇ ಪ್ರಥಮ ರಾಜ್ಯವಾಗುವ ಹಾದಿಯಲ್ಲಿ ಮುಂದುವರೆದಿದೆ. ಪಶುವೈದ್ಯಾಧಿಕಾರಿಗಳ ಕೊರತೆಯನ್ನು ನೀಗಲು 476 ಪಶುವೈದ್ಯಾಧಿಕಾರಿಗಳ ನೇರ ನೇಮಕಾತಿಯನ್ನು ಆರಂಭಿಸಲಾಗಿದೆ.

17. 2017-18ನೇ ಸಾಲಿನಲ್ಲಿ ಪಶುಭಾಗ್ಯ ಯೋಜನೆಯಿಂದ ಜಾನುವಾರುಗಳು, ಕುರಿ, ಮೇಕೆ, ಹಂದಿ ಮತ್ತು ಕೋಳಿ ಸಾಕಾಣಿಕೆ ಘಟಕಗಳೊಂದಿಗೆ 21,399 ಫಲಾನುಭವಿಗಳಿಗೆ ಪ್ರಯೋಜನ ದೊರೆತಿದೆ. ಹಾಲು ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಹಾಲು ಉತ್ಪಾದಕ ರೈತರ ಆರ್ಥಿಕಸ್ಥಿತಿಯನ್ನು ಉತ್ತಮಪಡಿಸಲು ‘ಕ್ಷೀರಧಾರೆ’ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯಡಿ 8.97 ಲಕ್ಷ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆÉ 5 ರೂಪಾಯಿಗಳ ಪ್ರೋತ್ಸಾಹಧನವನ್ನು ಒದಗಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕಾಗಿ ಕಳೆದ ನಾಲ್ಕು ವರ್ಷಗಳಲ್ಲಿ 1,206 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ.

18. ನನ್ನ ಸರ್ಕಾರವು, ಮೀನುಗಾರಿಕೆಯನ್ನು ಕಾರ್ಯಸಾಧ್ಯವಾಗುವಂತೆ ಮಾಡಲು, ಮೀನುಗಾರರಿಗೆ ಡೀಸಲ್ ಸಹಾಯಧನ ನೀಡಿಕೆಗಾಗಿ 284 ಕೋಟಿ ರೂಪಾಯಿಗಳನ್ನು ಒದಗಿಸಿದೆ. ಮೀನು ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಮೀನು ಕೃಷಿಕರನ್ನು ಪ್ರೋತ್ಸಾಹಿಸಲು ರಾಜ್ಯದಲ್ಲಿನ ಪ್ರಮುಖ ಕೆರೆಗಳ 2,500 ಹೆಕ್ಟೇರ್ ಪ್ರದೇಶದಲ್ಲಿ ‘ಮತ್ಸ್ಯ ಕೃಷಿ ಆಶಾಕಿರಣ ಯೋಜನೆ’ಯನ್ನು ಜಾರಿಗೆ ತರಲಾಗಿದೆ. 13,000ಕ್ಕಿಂತಲೂ ಹೆಚ್ಚಿನ ಮೀನುಗಾರರು ತಮ್ಮ ಸ್ವಂತ ಮನೆಗಳನ್ನು ನಿರ್ಮಿಸಿಕೊಳ್ಳಲು ಮತ್ಸ್ಯ ಆಶ್ರಯ ಯೋಜನೆಯು ನೆರವು ನೀಡಿದೆ. ಮೀನುಗಾರಿಕೆ ಬಂದರುಗಳು ಮತ್ತು ಇಳಿದಾಣ ಕೇಂದ್ರಗಳ ನಿರ್ಮಾಣ, ನವೀಕರಣ ಮತ್ತು ಹೂಳೆತ್ತುವಿಕೆಗೆ ಹಾಗೂ ಮೀನುಗಾರಿಕೆ ಬಂದರು ಕಟ್ಟೆಗಳು, ಸೇತುವೆಗಳು, ರಸ್ತೆಗಳು, ಮೀನು ಮರಿ ಕೇಂದ್ರಗಳು ಮತ್ತು ಮೀನುಗಾರಿಕೆ ಮಾರುಕಟ್ಟೆಗಳ ನಿರ್ಮಾಣಕ್ಕಾಗಿ ಕಳೆದ ಐದು ವರ್ಷಗಳಲ್ಲಿ 309 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ.

19. ನನ್ನ ಸರ್ಕಾರವು, ಕಳೆದ ಐದು ವರ್ಷಗಳಲ್ಲಿ 58,393 ಕೋಟಿ ರೂಪಾಯಿಗಳನ್ನು ಜಲ ಸಂಪನ್ಮೂಲ ಇಲಾಖೆಗೆ (ಭಾರೀ ಮತ್ತು ಮಧ್ಯಮ ನೀರಾವರಿ) ಹಂಚಿಕೆ ಮಾಡಿದೆ. 2017ರ ಡಿಸೆಂಬರ್ ಅಂತ್ಯದವರೆಗೆ 43,348 ಕೋಟಿ ರೂಪಾಯಿಗಳ ವೆಚ್ಚದಲ್ಲಿ, 2.64 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸಾಮಥ್ರ್ಯವನ್ನು ಕಲ್ಪಿಸಲಾಗಿದೆ. 2013-14ರಿಂದ ಕೃಷ್ಣ ಮೇಲ್ದಂಡೆ ಯೋಜನೆ ಹಂತ-3ರಡಿಯಲ್ಲಿ ಸುಮಾರು 8,500 ಕೋಟಿ ರೂಪಾಯಿಗಳ ವೆಚ್ಚದ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಮತ್ತು 59,166 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸಾಮಥ್ರ್ಯವನ್ನು ಕಲ್ಪಿಸಲು 6,995 ಕೋಟಿ ರೂಪಾಯಿಗಳ ವೆಚ್ಚ ಮಾಡಲಾಗಿದೆ.

20. ಹಾಸನ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು (ಗ್ರಾಮಾಂತರ), ರಾಮನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿನ ಬರಪೀಡಿತ ಪ್ರದೇಶಗಳಲ್ಲಿ ಅಂತರ್ಜಲವನ್ನು ಪುನಶ್ಚೇತನಗೊಳಿಸುವುದಕ್ಕೆ ಬಹು ನಿರೀಕ್ಷಿತ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಮೊದಲನೇ ಹಂತದ ಲಿಫ್ಟ್ ಕಾಂಪೊನೆಂಟ್ ಕಾಮಗಾರಿಗಳನ್ನು 5 ಪ್ಯಾಕೇಜುಗಳಡಿಯಲ್ಲಿ 3,716 ಕೋಟಿ ರೂಪಾಯಿಗಳ ಅಂದಾಜು ವೆಚ್ಚದೊಂದಿಗೆ ಕೈಗೆತ್ತಿಕೊಳ್ಳಲಾಗಿದೆ. 2017ರ ಡಿಸೆಂಬರ್ ಅಂತ್ಯದವರೆಗೆ 2,565 ಕೋಟಿ ರೂಪಾಯಿಗಳು ವೆಚ್ಚವಾಗಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ಕೆರೆಗಳನ್ನು ಭರ್ತಿ ಮಾಡುವುದಕ್ಕಾಗಿ ಬೆಂಗಳೂರು ನಗರದಿಂದ ಸಂಸ್ಕರಿಸಿದ ಕೊಳಚೆ ನೀರನ್ನು ಬಳಸಿಕೊಳ್ಳುವ ಎರಡು ಪ್ರಮುಖ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲಾಗುತ್ತಿದೆ.

21. ರಕ್ಷಣೆ ಮತ್ತು ಸಂರಕ್ಷಣೆ ಚಟುವಟಿಕೆಗಳಿಗಾಗಿ ವಿವಿಧ ಕ್ರಮಗಳನ್ನು ಕೈಗೊಂಡ ಕಾರಣದಿಂದ ಕರ್ನಾಟಕ ರಾಜ್ಯವು ವನ್ಯಜೀವಿಗಳ ಸಂರಕ್ಷಣೆಯಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಕರ್ನಾಟಕವು ದೇಶದಲ್ಲಿಯೇ ಹೆಚ್ಚಿನ ಸಂಖ್ಯೆಯ ಹುಲಿಗಳನ್ನು ಅಂದರೆ 406 ಹುಲಿಗಳನ್ನು ಹೊಂದಿದೆ. ಇಡೀ ದೇಶದಾದ್ಯಂತ ಇರುವ ಒಟ್ಟು ಆನೆಗಳ ಸಂಖ್ಯೆಯ ಶೇಕಡ 25ರಷ್ಟು ಅಂದರೆ ಸುಮಾರು 6,072 ಆನೆಗಳು ಸಹ ಇಲ್ಲಿವೆ. ವನಮಹೋತ್ಸವದ ಅಡಿಯಲ್ಲಿ ಗಿಡ ನೆಡುವ ಬೃಹತ್ ಕಾರ್ಯಕ್ರಮಗಳಿಂದ ಅರಣ್ಯ ಪ್ರದೇಶದ ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ. ಕಳೆದ ವರ್ಷ ಸುಮಾರು 3,000 ಕಿಲೋ ಮೀಟರ್‍ಗಳವರೆಗೆ ರಸ್ತೆ ಬದಿಯಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ವಿಸ್ತರಿಸಿದೆ. ಅರಣ್ಯವನ್ನು ರಕ್ಷಿಸುವುದಕ್ಕೆ ಮತ್ತು ಒತ್ತುವರಿದಾರರನ್ನು ನಿವಾರಿಸಲು ಅರಣ್ಯ ಗಡಿಗಳಿಗೆ ತಡೆಗಟ್ಟುಗಳನ್ನು ಅಳವಡಿಸಲಾಗುತ್ತಿದೆ.

22. ನನ್ನ ಸರ್ಕಾರವು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಅತಿ ಹೆಚ್ಚಿನ ಆದ್ಯತೆಯನ್ನು ನೀಡಿದೆ. ಅವರ ಸಮಗ್ರ ಅಭಿವೃದ್ಧಿಗಾಗಿ 2017-18ರಲ್ಲಿ 27,703 ಕೋಟಿ ರೂಪಾಯಿಗಳ ಅನುದಾನದೊಂದಿಗೆ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಯಡಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರಲ್ಲಿ, 6,341 ಕೋಟಿ ರೂಪಾಯಿಗಳನ್ನು ಸಮಾಜ ಕಲ್ಯಾಣ ಹಾಗು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳಿಗಾಗಿ ಹಂಚಿಕೆ ಮಾಡಲಾಗಿದೆ. ಉಪಯೋಜನೆಗಳ ಅಡಿಯಲ್ಲಿ ಹಂಚಿಕೆಯಾದ ಹಣವನ್ನು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಬಳಸಿಕೊಳ್ಳಲಾಗುತ್ತಿದೆ.

23. ಗ್ರಾಮಾಂತರ ಪ್ರದೇಶಗಳಲ್ಲಿರುವ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಿಕೊಡಲು 663 ವಸತಿ ಶಾಲೆಗಳು ಮತ್ತು ಕಾಲೇಜುಗಳನ್ನು ನಡೆಸಲಾಗುತ್ತಿದೆ. ಪ್ರಸ್ತುತ ಈ ಶಾಲೆಗಳಲ್ಲಿ 1.05 ಲಕ್ಷ ವಿದ್ಯಾರ್ಥಿಗಳು ದಾಖಲಾತಿ ಹೊಂದಿದ್ದಾರೆ. 103 ವಸತಿ ಶಾಲಾ ಸಂಕೀರ್ಣಗಳು ನಿರ್ಮಾಣಗೊಳ್ಳುತ್ತಿವೆ ಹಾಗೂ 800 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಇತರೆ 55 ಶಾಲಾ ಸಂಕೀರ್ಣಗಳಿಗೆ ಅನುಮೋದನೆ ನೀಡುವುದಕ್ಕಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಸಂಬಂಧಪಟ್ಟ ನಿಗಮಗಳು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಫಲಾನುಭವಿಗಳಿಗಾಗಿ, ಸಾಲ ನೀಡಿಕೆ, ಸಹಾಯಧನ, ತರಬೇತಿಗಳನ್ನು ಒಳಗೊಂಡಂತೆ ವಿವಿಧ ಫಲಾನುಭವಿ ಕೇಂದ್ರಿತ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡಿವೆ. ಇಲಾಖೆ ಮತ್ತು ನಿಗಮಗಳ 20,133 ಕೋಟಿ ರೂಪಾಯಿಗಳವರೆಗಿನ ವಿವಿಧ ಯೋಜನೆಗಳಿಂದ ಒಟ್ಟಾರೆ 84.60 ಲಕ್ಷಕ್ಕಿಂತಲೂ ಹೆಚ್ಚಿನ ವ್ಯಕ್ತಿಗಳು ಪ್ರಯೋಜನ ಪಡೆದಿದ್ದಾರೆ.

24. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು 2,814 ಕೋಟಿ ರೂಪಾಯಿಗಳ ವೆಚ್ಚದಲ್ಲಿ ವಿದ್ಯಾಸಿರಿ, ವಿದ್ಯಾರ್ಥಿ ವೇತನ ಮತ್ತು ಶುಲ್ಕ ವಿನಾಯತಿ ಯೋಜನೆಗಳ ಅಡಿಯಲ್ಲಿ 105.19 ಲಕ್ಷ ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ. ಸ್ವಯಂ ಉದ್ಯೋಗ ಸಾಲ ಯೋಜನೆ, ಗಂಗಾ ಕಲ್ಯಾಣ, ಅರಿವು ಶೈಕ್ಷಣಿಕ ಸಾಲ ಯೋಜನೆ ಮತ್ತು ಪಾರಂಪರಿಕ ಕುಶಲಕರ್ಮಿಗಳ ಆರ್ಥಿಕ ನೆರವಿನ ಅಡಿಯಲ್ಲಿ 1.50 ಲಕ್ಷದಷ್ಟು ಫಲಾನುಭವಿಗಳು ಪ್ರಯೋಜನ ಪಡೆದಿರುತ್ತಾರೆ.

25. ಅಲ್ಪ ಸಂಖ್ಯಾತರ ಕಲ್ಯಾಣ ಮತ್ತು ಅಭಿವೃದ್ಧಿಯು ನನ್ನ ಸರ್ಕಾರದ ಪ್ರಮುಖ ದೃಷ್ಟಿಕೋನವಾಗಿದೆ. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು, ರಾಜ್ಯದ ಧಾರ್ಮಿಕ ಅಲ್ಪಸಂಖ್ಯಾತರು ಅಂದರೆ, ಮುಸ್ಲಿಮರು, ಕ್ರೈಸ್ತರು, ಜೈನರು, ಬೌದ್ಧರು, ಸಿಖ್ಖರು ಮತ್ತು ಪಾರ್ಸಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಉನ್ನತಿಗೆ ಸಂಬಂಧಿಸಿದಂತೆ ವಿವಿಧ ಯೋಜನೆಗಳನ್ನು ಅನುಷ್ಠ್ಠಾನಗೊಳಿಸುತ್ತಿದೆ. ಈ ನಿಗಮವು, ಸಾಕು ಪ್ರಾಣಿಗಳನ್ನು ಮತ್ತು ಕೃಷಿ ಸಲಕರಣೆಗಳನ್ನು ಖರೀದಿಸುವುದಕ್ಕಾಗಿ ಸಾಲಗಳು, ಮನೆಮಳಿಗೆ ಯೋಜನೆಯಡಿಯಲ್ಲಿ ಸಾಲಗಳು, ಕೊಲ್ಲಿ ರಾಷ್ಟ್ರಗಳಿಂದ ಮರಳಿ ಬಂದವರಿಗೆ ಸ್ವಯಂ ಉದ್ಯೋಗದ ಉದ್ದೇಶಕ್ಕಾಗಿ ಸಾಲಗಳು, ಟ್ಯಾಕ್ಸಿ ಮತ್ತು ಸರಕು ಸಾಗಣೆ ವಾಹನಗಳ ಖರೀದಿ, ಆಟೋಮೊಬೈಲ್ ಸೇವೆ ಮತ್ತು ಬಿದರಿ ಕರಕುಶಲ ವಸ್ತುಗಳಿಗಾಗಿ ಸಹಾಯಧನ ಮುಂತಾದವುಗಳಿಂದ 3.80 ಲಕ್ಷ ಫಲಾನುಭವಿಗಳಿಗೆ 1,089 ಕೋಟಿ ರೂಪಾಯಿಗಳವರೆಗಿನ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ.

26. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯು ನನ್ನ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. 2017ರ ಗಾಂಧೀ ಜಯಂತಿ ದಿನದಿಂದ ರಾಜ್ಯದಾದ್ಯಂತ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಪೌಷ್ಠಿಕ ಬಿಸಿಯೂಟ ಒದಗಿಸುವುದಕ್ಕಾಗಿ ಮಾತೃಪೂರ್ಣ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಇಲ್ಲಿಯವರೆಗೆ, 8.31 ಲಕ್ಷ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಪೌಷ್ಠಿಕ ಬಿಸಿಯೂಟವನ್ನು ಒದಗಿಸಲಾಗಿದೆ. ರಾಜ್ಯದ 65,911 ಅಂಗನವಾಡಿ ಕೇಂದ್ರಗಳಲ್ಲಿ 37.52 ಲಕ್ಷ ಮಕ್ಕಳಿಗೆ ‘ಕ್ಷೀರ ಭಾಗ್ಯ’ ಯೋಜನೆಯಡಿಯಲ್ಲಿ ವಾರದಲ್ಲಿ 5 ದಿನ ಕೆನೆಭರಿತ ಹಾಲನ್ನು ನೀಡಲಾಗುತ್ತಿದೆ. ಅಂಗನವಾಡಿ ಮಕ್ಕಳಿಗೆ ವಾರದಲ್ಲಿ 2 ದಿನ ಮೊಟ್ಟೆಗಳನ್ನು ಸಹ ನೀಡಲಾಗುತ್ತಿದೆ. ಅತಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ನನ್ನ ಸರ್ಕಾರದ ಬದ್ಧತೆಯನ್ನು ತೋರುತ್ತಾ, ಕರ್ನಾಟಕದಲ್ಲಿರುವ ಲಿಂಗತ್ವ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಪ್ರಗತಿಪರ ಲಿಂಗತ್ವ ಅಲ್ಪಸಂಖ್ಯಾತರ ನೀತಿಯನ್ನು ಜಾರಿಗೆ ತಂದಿದೆ.

27. ನನ್ನ ಸರ್ಕಾರವು ‘ಪ್ರತಿ ಮಗುವು ಶಾಲೆಗೆ ಹೋಗಿ ಚೆನ್ನಾಗಿ ಓದಬೇಕು’ ಎಂಬ ಧ್ಯೇಯದೊಂದಿಗೆ ಶಿಕ್ಷಣದ ಸಂವಿಧಾನಾತ್ಮಕ ಹಕ್ಕನ್ನು ಸಫಲಗೊಳಿಸಲು ಶ್ರಮಿಸುತ್ತಿದೆ. ಎಲ್ಲಾ ಮಕ್ಕಳು ಶಾಲೆಗೆ ಪ್ರವೇಶ ಪಡೆದು ಹಾಜರಾಗುವ ಸಲುವಾಗಿ ಶಾಲೆಗಳಲ್ಲಿ ಉಚಿತ ಪಠ್ಯ ಪುಸ್ತಕಗಳು, ಮಧ್ಯಾಹ್ನದ ಬಿಸಿ ಊಟ, ಹಾಲು, ಬೈಸಿಕಲ್‍ಗಳು, ಸಮವಸ್ತ್ರಗಳು ಮತ್ತು ಶೂಗಳನ್ನು ಒದಗಿಸಲಾಗುತ್ತಿದೆ. ಶಿಕ್ಷಕರ ಅದರಲ್ಲೂ ವಿಶೇಷವಾಗಿ ಗಣಿತ ಮತ್ತು ಇಂಗ್ಲಿಷ್ ಶಿಕ್ಷಕರ ತರಬೇತಿ, ರಜಾ ದಿನಗಳಂದು ಮಕ್ಕಳಿಗೆ ಪೂರಕ ಬೋಧನೆ ಒದಗಿಸುವುದು ಮತ್ತು ಹಾಜರಾತಿ ಮತ್ತು ಕಲಿಕಾ ಮಟ್ಟಗಳನ್ನು ಪತ್ತೆ ಹಚ್ಚುವ ಮೂಲಕ ಮಕ್ಕಳ ಕಲಿಕಾ ಮಟ್ಟಗಳನ್ನು ಉತ್ತಮಪಡಿಸುವತ್ತ ಒತ್ತು ನೀಡಲಾಗಿದೆ. ಇದರ ಪರಿಣಾಮವಾಗಿ, ಕರ್ನಾಟಕವು ಎಂ.ಹೆಚ್.ಆರ್.ಡಿ.ಯು ನಡೆಸುವ ರಾಷ್ಟ್ರೀಯ ಸಾಧನೆ ಸಮೀಕ್ಷೆಯಲ್ಲಿ ಮೊದಲ ಐದರೊಳಗಿನ ಸ್ಥಾನವನ್ನು ಹೊಂದಿದೆ. 1 ರಿಂದ 3ನೇ ತರಗತಿಯ ಮಕ್ಕಳ ಕಲಿಕಾ ಸಾಮಥ್ರ್ಯವನ್ನು ಬಲಪಡಿಸಲು ಕಲಿಕೆಯ ಸಂತಸವನ್ನು ಹೆಚ್ಚಿಸುವ ನಲಿ-ಕಲಿ ಕಾರ್ಯಕ್ರಮವನ್ನು ಮುಂದುವರೆಸಲಾಗಿದೆ.

28. ನನ್ನ ಸರ್ಕಾರವು, ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ದಾಖಲಾತಿ ಮತ್ತು ಕಲಿಕಾ ಗುಣಮಟ್ಟವನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಭಾರತ ಸಂವಿಧಾನ ಶಿಲ್ಪಿ ಡಾ: ಬಿ.ಆರ್. ಅಂಬೇಡ್ಕರ್‍ರವರ 125ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲ್ಲಿ, ವಿಶ್ವದರ್ಜೆಯ ಬೆಂಗಳೂರು ಡಾ:ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಅನ್ನು ಸ್ಥಾಪಿಸಲಾಗಿದೆ. ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗಾಗಿ 10 ಸರ್ಕಾರಿ ಪ್ರಥಮ ದರ್ಜೆ ವಸತಿ ಕಾಲೇಜುಗಳು ಮತ್ತು ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ 6 ಸರ್ಕಾರಿ ಪ್ರಥಮ ದರ್ಜೆ ವಸತಿ ಕಾಲೇಜುಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಸರ್ಕಾರಿ ಪ್ರಥಮ ದರ್ಜೆಯ ಕಾಲೇಜುಗಳು, ಪಾಲಿಟೆಕ್ನಿಕ್‍ಗಳು ಮತ್ತು ಇಂಜಿನಿಯರಿಂಗ್ ಕಾಲೇಜುಗಳ 31,742 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್‍ಗಳನ್ನು ವಿತರಿಸಲಾಗುತ್ತಿದೆ. ಇದರೊಂದಿಗೆ, 4,300 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳು, 1,150 ವಿದ್ಯಾರ್ಥಿನಿಯರು ಮತ್ತು 650 ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಸರ್ಕಾರಿ ಪಾಲಿಟೆಕ್ನಿಕ್ ಮತ್ತು ಇಂಜಿನಿಯರ್ ಕಾಲೇಜುಗಳಲ್ಲಿ 113 ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಲಾಗಿದೆ. 25 ಹೊಸ ಪಾಲಿಟೆಕ್ನಿಕ್ ಕಾಲೇಜುಗಳನ್ನು ಪ್ರಾರಂಭಿಸಲಾಗಿದೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರ; ಮೈಸೂರಿನಲ್ಲಿ ಪರಿಪೋಷಣಾ ಕೇಂದ್ರ ಮತ್ತು ಮಂಗಳೂರಿನಲ್ಲಿ ಬೆಳಪು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. 2017-18ರ ಶೈಕ್ಷಣಿಕ ವರ್ಷದಲ್ಲಿ ಬೆಂಗಳೂರು ಕೇಂದ್ರ ಮತ್ತು ಬೆಂಗಳೂರು ಉತ್ತರ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ.

29. ನನ್ನ ಸರ್ಕಾರವು ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ (ಸಿಎಂಕೆಕೆವೈ) ಯಡಿಯಲ್ಲಿ, 5 ಲಕ್ಷ ಯುವಜನತೆಗೆ ವಿವಿಧ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳಲ್ಲಿ ತರಬೇತಿ ನೀಡುವ ಗುರಿ ಹೊಂದಿದೆ. ಕೌಶಲ್ಯಾಭಿವೃದ್ಧಿ ಒದಗಿಸುವುದಕ್ಕಾಗಿ ಇಲ್ಲಿಯವರೆಗೆ, 7.63 ಲಕ್ಷ ಅಭ್ಯರ್ಥಿಗಳು, 4,495 ತರಬೇತಿ ಕೇಂದ್ರಗಳು ಮತ್ತು 1,742 ತರಬೇತಿ ಸೇವೆ ಒದಗಿಸುವ ಸಂಸ್ಥೆಗಳನ್ನು ಕೌಶಲ್ಯಾಭಿವೃದ್ಧಿ ತರಬೇತಿ ನೀಡಲು ನೋಂದಾಯಿಸಲಾಗಿದೆ. 3.17 ಲಕ್ಷ ಯುವಜನರಿಗೆ ತರಬೇತಿ ಆದೇಶಗಳನ್ನು ನೀಡಲಾಗಿದೆ. ಅವುಗಳಲ್ಲಿ 1.23 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ ಮತ್ತು 74,476 ಅಭ್ಯರ್ಥಿಗಳಿಗೆ ಉದ್ಯೋಗಾವಕಾಶವನ್ನು ಒದಗಿಸಲಾಗಿದೆ.

30. ನನ್ನ ಸರ್ಕಾರವು ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಒದಗಿಸುವುದಕ್ಕೆ ಮತ್ತು ಕರ್ನಾಟಕದ ಜನರ ಆರೋಗ್ಯ ಸ್ಥಿತಿಯನ್ನು ಉತ್ತಮಪಡಿಸಲು ಅದರಲ್ಲೂ ವಿಶೇಷವಾಗಿ, ಶಿಶು ಮರಣ ಪ್ರಮಾಣ ಮತ್ತು ಮಾತೃ ಮರಣ ಪ್ರಮಾಣವನ್ನು ಕಡಿಮೆಗೊಳಿಸಲು ಮತ್ತು ಸುರಕ್ಷಿತ ಸಾಂಸ್ಥಿಕ ಹೆರಿಗೆಗಳನ್ನು ಹೆಚ್ಚಿಸಲು ಹಲವು ನೂತನ ಉಪಕ್ರಮಗಳನ್ನು ಕೈಗೊಂಡಿದೆ. ಈ ನಿರ್ದಿಷ್ಟ ಗುರಿಯನ್ನು ಸಾಧಿಸಲು ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದೂ ಸೇರಿದಂತೆ, ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಜನೌಷಧ ಕೇಂದ್ರಗಳನ್ನು ತೆರೆಯುವುದು ಮತ್ತು ಕಡ್ಡಾಯ ಆ್ಯಂಬುಲೆನ್ಸ್ ಸೇವೆಗಳನ್ನು ಒದಗಿಸುವುದಕ್ಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ.

31. ನನ್ನ ಸರ್ಕಾರವು, ಈ ವರ್ಷದಿಂದ ರಾಜ್ಯದಲ್ಲಿನ ಎಲ್ಲಾ 1.4 ಕೋಟಿ ಕುಟುಂಬಗಳಿಗೆ ಉತ್ತಮ ಆರೋಗ್ಯದ ಭರವಸೆಯನ್ನು ನೀಡಲು, ಎಲ್ಲಾ ಸರ್ಕಾರಿ ಆರೋಗ್ಯ ಯೋಜನೆಗಳನ್ನು ಒಂದೇ ಸೂರಿನಡಿಯಲ್ಲಿ ತರುವ ಮೂಲಕ ಪ್ರಪ್ರಥಮಬಾರಿಗೆ ಸಾರ್ವತ್ರಿಕ ಆರೋಗ್ಯ ರಕ್ಷಣಾ (ಯುಹೆಚ್‍ಸಿ) ಯೋಜನೆಯಾದ ‘ಆರೋಗ್ಯ ಭಾಗ್ಯ’ ಯೋಜನೆಯನ್ನು ಹೊರತರುತ್ತಿದೆ. ‘ಆರೋಗ್ಯ ಭಾಗ್ಯ’ ಯೋಜನೆಯಡಿಯಲ್ಲಿ ಆರ್ಥಿಕ ಹಿನ್ನೆಲೆ ಅಥವಾ ಸಾಮಾಜಿಕ ಹಿನ್ನೆಲೆ ಯಾವುದರ ಗಣನೆಯೂ ಇಲ್ಲದೇ ಎಲ್ಲಾ ವರ್ಗದ ಜನರು, ಸರ್ಕಾರಿ ಸಂಸ್ಥೆಗಳು ಹಾಗೂ ಪಟ್ಟಿ ಮಾಡಲಾದ ಖಾಸಗಿ ಆಸ್ಪತ್ರೆಗಳಲ್ಲಿ, ಕೈಗೆಟುಕುವ ಬೆಲೆಯ ಮತ್ತು ಗುಣಮಟ್ಟದ ಪ್ರಾಥಮಿಕ, ಮಾಧ್ಯಮಿಕ ಹಾಗೂ ಉನ್ನತ ಮಟ್ಟದ ಆರೋಗ್ಯ ಚಿಕಿತ್ಸಾ ಸೇವೆಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.

32. ನನ್ನ ಸರ್ಕಾರ ಕಳೆದ ಐದು ವರ್ಷಗಳಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಸ ಪರ್ವವನ್ನು ಪ್ರಾರಂಭಿಸಿ ಗ್ರಾಮೀಣ ಬದುಕಿನಲ್ಲಿ ಗುಣಾತ್ಮಕ ಬದಲಾವಣೆಯನ್ನು ತರಲಾಗಿದೆÉ. ಪಂಚಾಯತ್ ರಾಜ್ ಸಂಸ್ಥೆಗಳನ್ನು ಸಂವಿಧಾನದ 73ನೇ ತಿದ್ದುಪಡಿಯ ಸದಾಶಯದಂತೆ ಮತ್ತಷ್ಟು ಬಲಯುತಗೊಳಿಸುವ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾನೂನನ್ನು ಪರಿಣಾಮಕಾರಿಯಾಗಿ ನನ್ನ ಸರ್ಕಾರ ಜಾರಿಗೊಳಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಿಕೇಂದ್ರೀಕೃತ ಯೋಜನಾ ತಯಾರಿಕೆಗೆ ‘ನಮ್ಮ ಗ್ರಾಮ – ನಮ್ಮ ಯೋಜನೆ’ ಅಡಿ ರಾಜ್ಯದ 5971 ಗ್ರಾಮ ಪಂಚಾಯತಿಗಳಲ್ಲಿ ಯೋಜನಾ ಪ್ರಕ್ರಿಯೆಯನ್ನು ಸಮುದಾಯ ಸಹಭಾಗಿತ್ವದ ಮೂಲಕ ಪೂರ್ಣಗೊಳಿಸಲಾಗಿರುತ್ತದೆ. 100 ಸೇವೆಗಳನ್ನು ಒದಗಿಸುವ “ಬಾಪೂಜಿ ಸೇವಾ ಕೇಂದ್ರ” ಗಳನ್ನು 5648 ಗ್ರಾಮ ಪಂಚಾಯತಿಗಳಲ್ಲಿ ಸ್ಥಾಪಿಸಿದೆ.

33. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಮಾಡಿರುವ ಸಾಧನೆಗಳಿಗಾಗಿ ಕರ್ನಾಟಕ ರಾಜ್ಯಕ್ಕೆ ಹಲವಾರು ಪ್ರಶಸ್ತಿಗಳು ಸಂದಿವೆ. ಸತತವಾಗಿ ಮೂರನೇ ಬಾರಿಗೆ ನನ್ನ ಸರ್ಕಾರ 2017-18ನೇ ಸಾಲಿನಲ್ಲಿ ರಾಷ್ಟ್ರೀಯ ಇ-ಪುರಸ್ಕಾರದ ಪ್ರಥಮ ಪ್ರಶಸ್ತಿಗೆ ಭಾಜನವಾಗಿದೆ. ಗ್ರಾಮೀಣ ಆಡಳಿತದಲ್ಲಿ ಪರಿಣಾಮಕಾರಿಯಾದ ವ್ಯವಸ್ಥೆ ರೂಪಿಸಲು ಹಲವಾರು ವಿನೂತನ ಕ್ರಮಗಳ ಮೂಲಕ ಪಾರದರ್ಶಕತೆಯನ್ನು ಸುನಿಶ್ಚಿತಗೊಳಿಸಿದೆ.

34. 2018 ಮಾರ್ಚ್‍ರಷ್ಟರಲ್ಲಿ 2.00 ಕೋಟಿ ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆಯಲ್ಲಿ ಈ ಆರ್ಥಿಕ ವರ್ಷದ ಅಂತ್ಯಕ್ಕೆ 13,000 ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯಾರಂಭ ಮಾಡಿ ಶುದ್ಧ ಕುಡಿಯುವ ನೀರನ್ನು ಲಭ್ಯಗೊಳಿಸಿದ ಸಾಧನೆ ನಮ್ಮದಾಗುತ್ತದೆ. ಆಃಔಖಿ ಆಧಾರದ ಮೇಲೆ ಮೇಲ್ಮೈ ನೀರು ಒದಗಿಸಲು ಪಾಂಡವಪುರ, ಚಾಮರಾಜನಗರ, ಗುಂಡ್ಲುಪೇಟೆ ಯೋಜನೆಗಳು ಪೂರ್ಣಗೊಳ್ಳುವ ಹಂತದಲ್ಲಿದೆ. ಕರ್ನಾಟಕದಲ್ಲೇ ಮೊದಲ ಜಿಲ್ಲೆಯಾಗಿ ಗದಗ ಜಿಲ್ಲೆಯ ಎಲ್ಲಾ 343 ಹಳ್ಳಿಗಳಿಗೂ ಆಃಔಖಿ ಆಧಾರದ ಮೇಲೆ ಮೇಲ್ಮೈ ನೀರು ಒದಗಿಸುವ ಯೋಜನೆ ಪೂರ್ಣಗೊಂಡಿದೆ. ನಾಗಮಂಗಲ, ಅರಸೀಕೆರೆ, ಪಾವಗಡ, ಹೊಸದುರ್ಗ, ಹಳಿಯಾಳ, ಜೋಯಿಡಾ ಮುಂತಾದ ಕಡೆ ಆಃಔಖಿ ಆಧಾರದಲ್ಲಿ ಬೃಹತ್‍ಗಾತ್ರದ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. 4,362 ರಾಜ್ಯದ ಗ್ರಾಮೀಣ ಜನವಸತಿಗಳಿಗೆ ಪೂರ್ಣಪ್ರಮಾಣದಲ್ಲಿ ಮೇಲ್ಮೈ ನೀರು ಪೂರೈಕೆ ಮಾಡುವ 54 ಲಕ್ಷ ಗ್ರಾಮೀಣ ಜನಸಂಖ್ಯೆಗೆ ಒಳಗೊಂಡಂತೆ 4362 ಗ್ರಾಮೀಣ ಕುಟುಂಬಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡಲು 247 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ.

35. ಗ್ರಾಮೀಣ ಭಾಗದ ಶೇ. 87 ರಷ್ಟು ಕುಟುಂಬಗಳು ವೈಯಕ್ತಿಕ ಶೌಚಾಲಯಗಳನ್ನು ಹೊಂದಿವೆ ಎಂದು ಮಾನ್ಯ ಸದಸ್ಯರ ಗಮನಕ್ಕೆ ತರಲು ಹರ್ಷಿಸುತ್ತೇನೆ. ಪ್ರಸ್ತುತ ಹಣಕಾಸು ವರ್ಷದ ಅಂತ್ಯದ ವೇಳೆಗೆ ರಾಜ್ಯದ 30 ಜಿಲ್ಲೆಗಳು ಬಯಲು ಬಹಿರ್ದೆಸೆ ಮುಕ್ತಗೊಳ್ಳಲಿವೆ.

36. ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕಳೆದ ಸಾಲಿನಲ್ಲಿ 9.15 ಕೋಟಿ ಮಾನವ ದಿನಗಳ ಸೃಜನೆ ಮಾಡಿ ಬರಗಾಲ ಪೀಡಿತ ಪ್ರದೇಶಗಳಲ್ಲಿ ಸಂಜೀವಿನಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಯೋಜನೆ ಅಡಿಯಲ್ಲಿ ಮುಖ್ಯಮಂತ್ರಿಗಳ 21 ಅಂಶದ ಕಾರ್ಯಕ್ರಮ ಅನುಷ್ಠಾನಗೊಳಿಸಿ ಗ್ರಾಮೀಣ ಬದುಕಿನ ನೈಜ ಅವಶ್ಯಕತೆಗಳನ್ನು ಪೂರೈಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಗ್ರಾಮೀಣ ಭಾಗದಲ್ಲಿ ಗಾಂಧಿ ಪಥ-ಗ್ರಾಮ ಪಥ ಯೋಜನೆಯಡಿಯಲ್ಲಿ 9983 ಕಿಮೀ ರಸ್ತೆ ನಿರ್ಮಾಣ ಮಾಡಲಾಗಿದೆ. ಸವದತ್ತಿಯ ಯಲ್ಲಮ್ಮ ದೇವಸ್ಥಾನದ ಗುಡ್ಡದಲ್ಲಿ ಮೂಲಸೌಕರ್ಯ ನಿರ್ಮಾಣದ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ.

37. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಷಯಗಳಿಗಾಗಿ ಪ್ರಾರಂಭವಾಗಿರುವ ರಾಷ್ಟ್ರದ ಮೊದಲ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದಲ್ಲಿ 2017-18ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭಿಸಲಾಗಿದೆ.

38. ಕರ್ನಾಟಕವನ್ನು ‘ಹಸಿವು ಮುಕ್ತ ರಾಜ್ಯ’ವನ್ನಾಗಿ ಮಾಡಲು ‘ಅನ್ನಭಾಗ್ಯ’ ಕಾರ್ಯಕ್ರಮವನ್ನು ಜುಲೈ 2013ರಿಂದ ಜಾರಿಗೊಳಿಸಲಾಗಿದೆ. ಪ್ರತಿ ವ್ಯಕ್ತಿಗೆ ನೀಡಲಾಗುವ ಅಕ್ಕಿಯ ಪ್ರಮಾಣವನ್ನು 7 ಕಿಲೋಗ್ರಾಂಗೆ ನಾವು ಹೆಚ್ಚಿಸಿದ್ದೇವೆ. ಸುಮಾರು 30 ಲಕ್ಷ ಮನೆಗಳಿಗೆ ಉಚಿತ ಅನಿಲ ಸಂಪರ್ಕ ಸಹಿತ ಒಂದು ಗ್ಯಾಸ್ ಸ್ಟೋವ್ ಮತ್ತು ಎರಡು ರೀಫಿಲ್ಲುಗಳನ್ನು ಒದಗಿಸುವ ಗುರಿಯೊಂದಿಗೆ ನಾವು ‘ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ’ ಯನ್ನು ಪ್ರಾರಂಭಿಸಿದ್ದೇವೆ.

39. ಬೆಂಗಳೂರಿನಲ್ಲಿ ಪ್ರಾರಂಭಿಸಲಾದ 198 ಇಂದಿರಾ ಕ್ಯಾಂಟೀನ್‍ಗಳಿಗೆ ಸಾರ್ವಜನಿಕರಿಂದ ಬಂದ ಉತ್ತಮ ಪ್ರತಿಕ್ರಿಯೆಯನ್ನು ಪರಿಗಣಿಸಿ, ನಗರದ ಬಡಜನರು ಮತ್ತು ದುಡಿಯುವ ವರ್ಗದ ಜನರಿಗೆ ಕೈಗೆಟಕುವ ಬೆಲೆಯಲ್ಲಿ, ಉಪಾಹಾರ ಮತ್ತು ಊಟ ಒದಗಿಸಲು, ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಸ್ಥಾನಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ 247 ಇಂದಿರಾ ಕ್ಯಾಂಟೀನುಗಳನ್ನು ತೆರೆಯಲಾಗುತ್ತಿದೆ.

40. ಆಶ್ರಯವನ್ನು ಒದಗಿಸುವುದು ಮತ್ತು ಕರ್ನಾಟಕವನ್ನು ಗುಡಿಸಲು ಮುಕ್ತ ರಾಜ್ಯವನ್ನಾಗಿಸುವುದು ನನ್ನ ಸರ್ಕಾರದ ಪ್ರಮುಖ ಗುರಿಯಾಗಿದೆ. ಐದು ವರ್ಷಗಳಲ್ಲಿ 15 ಲಕ್ಷ ಮನೆಗಳನ್ನು ನಿರ್ಮಾಣ ಮಾಡುವ ಗುರಿಯಲ್ಲಿ ಇಲ್ಲಿಯವರೆಗೆ 13.7 ಲಕ್ಷ ಫಲಾನುಭವಿಗಳು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ‘ಮುಖ್ಯಮಂತ್ರಿಗಳ ಬೆಂಗಳೂರು ಒಂದು ಲಕ್ಷ ವಸತಿ ಯೋಜನೆ’ ಅಡಿಯಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲೂ ಒಂದು ಲಕ್ಷ ಮನೆಗಳನ್ನು ನಿರ್ಮಿಸಲಾಗುವುದು. 5.43 ಲಕ್ಷ ಮನೆ ನಿವೇಶನಗಳನ್ನು ಸಹ ಫಲಾನುಭವಿಗಳಿಗೆ ವಿತರಿಸಲಾಗಿದೆ. ರಿಯಲ್ ಎಸ್ಟೇಟ್ ವಲಯದಲ್ಲಿ ಪಾರದರ್ಶಕತೆಯನ್ನು ತರುವುದಕ್ಕಾಗಿ, ಕರ್ನಾಟಕ ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ನಿಯಮಗಳು, 2017 ಅನ್ನು ಅಧಿಸೂಚಿಸಲಾಗಿದೆ ಮತ್ತು ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರವನ್ನು ಸ್ಥಾಪಿಸಲಾಗಿದೆ.

41. ನನ್ನ ಸರ್ಕಾರವು, ಹಿರಿಯ ನಾಗರಿಕರು, ನಿರ್ಗತಿಕ ವಿಧವೆಯರು, ಅಂಗವಿಕಲ ವ್ಯಕ್ತಿಗಳು ಮತ್ತು ಬಡತನ ರೇಖೆಗಿಂತ ಕೆಳಗಿರುವ ವ್ಯಕ್ತಿಗಳು ಒಳಗೊಂಡಂತೆ 56.57 ಲಕ್ಷ ಫಲಾನುಭವಿಗಳಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವುದಕ್ಕೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಲಂಬಾಣಿ ತಾಂಡಗಳು, ಗೊಲ್ಲರ ಹಟ್ಟಿಗಳನ್ನು ಮತ್ತು ವಸತಿ ಪ್ರದೇಶಗಳನ್ನು ಕಂದಾಯ ಹಳ್ಳಿಗಳನ್ನಾಗಿ ಪರಿವರ್ತನೆ ಮಾಡುವುದಕ್ಕಾಗಿ 551 ವಸತಿ ಪ್ರದೇಶಗಳಿಗೆ ಅಂತಿಮ ಅಧಿಸೂಚನೆಗಳನ್ನು ಮತ್ತು 1,334 ವಸತಿ ಪ್ರದೇಶಗಳಿಗೆ ಪ್ರಾಥಮಿಕ ಅಧಿಸೂಚನೆಯನ್ನು ಹೊರಡಿಸಲಾಗಿದೆ. ನನ್ನ ಸರ್ಕಾರವು ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ದೃಷ್ಟಿಯಿಂದ ಪ್ರಸಕ್ತ ವರ್ಷದಲ್ಲಿ 50 ಹೊಸ ತಾಲ್ಲೂಕುಗಳನ್ನು ರಚನೆ ಮಾಡುವುದಕ್ಕಾಗಿ ಆಡಳಿತಾತ್ಮಕ ಅನುಮೋದನೆಯನ್ನು ನೀಡಿದೆ. ಮೊಟ್ಟಮೊದಲ ಬಾರಿಗೆ 2,450 ಕೋಟಿ ರೂಪಾಯಿಗಳ ಬೆಳೆ ನಷ್ಟ ಪರಿಹಾರವನ್ನು 35 ಲಕ್ಷ ಬರಪೀಡಿತ ರೈತರಿಗೆ ಅವರ ಆಧಾರ್ ಸಂಖ್ಯೆ ಜೋಡಣೆಗೊಂಡಿರುವÀ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗಿದೆ.

42. ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ದೃಷ್ಟಿಯಿಂದ, ಮೇ 2013 ರಿಂದ ವಿವಿಧ ಮೂಲಗಳಿಂದ 8,246 ಮೆಗಾವ್ಯಾಟ್‍ಗಳ ಉತ್ಪಾದನಾ ಸಾಮಥ್ರ್ಯವನ್ನು ಸೇರ್ಪಡೆ ಗೊಳಿಸಲಾಗಿದೆ. 139 ಹೊಸ ಉಪಕೇಂದ್ರಗಳ ಸ್ಥಾಪನೆ, 309 ಉಪಕೇಂದ್ರಗಳ ಉನ್ನತೀಕರಣ ಮತ್ತು 3,707 ಸಕ್ರ್ಯೂಟ್ ಕಿಲೋ ಮೀಟರ್ ಪ್ರಸರಣ ಮಾರ್ಗಗಳ ಸೇರ್ಪಡೆಯ ಮೂಲಕ ವಿದ್ಯುತ್ ಜಾಲವನ್ನು ಬಲಪಡಿಸಲಾಗಿದೆ. ಭಾಗ್ಯ ಜ್ಯೋತಿ ಮತ್ತು ಕುಟೀರ ಜ್ಯೋತಿ ಅಳವಡಿಕೆಗೆ ಪ್ರತಿ ತಿಂಗಳು ಒದಗಿಸಲಾಗುವ ಉಚಿತ ವಿದ್ಯುಚ್ಚಕ್ತಿ ಸರಬರಾಜನ್ನು 18 ಯೂನಿಟ್‍ಗಳಿಂದ 40 ಯೂನಿಟ್‍ಗೆ ಹೆಚ್ಚಿಸಲಾಗಿದೆ.

43. ವಿಕೇಂದ್ರೀಕೃತ ವಿದ್ಯುತ್ ಯೋಜನೆಗಳ ಸ್ಥಾಪನೆಗೆ, 59 ಹಿಂದುಳಿದ ತಾಲ್ಲೂಕುಗಳಲ್ಲಿ 1,150 ಮೆಗಾವ್ಯಾಟ್‍ಗಳ ಸಾಮಥ್ರ್ಯದ ಸೌರಶಕ್ತಿ ಯೋಜನೆಯನ್ನು ಮತ್ತು ಎಸ್.ಇ.ಸಿ.ಐ. ವತಿಯಿಂದ 970 ಮೆಗಾವ್ಯಾಟ್‍ಗಳ ಸಾಮಥ್ರ್ಯದ ಸೌರಶಕ್ತಿ ಯೋಜನೆಯನ್ನು ಹಂಚಿಕೆ ಮಾಡಲಾಗಿದೆ. ಇದರಲ್ಲಿ, 666 ಮೆಗಾವ್ಯಾಟ್‍ಗಳ ಸಾಮಥ್ರ್ಯದ ಸೌರಶಕ್ತಿ ಯೋಜನೆಗಳು ಕಾರ್ಯಾರಂಭಿಸಿವೆ. ಪಾವಗಡದಲ್ಲಿ 2,000 ಮೆಗಾವ್ಯಾಟ್‍ಗಳ ಸಾಮಥ್ರ್ಯದ ಸೊಲಾರ್ ಪಾರ್ಕ್‍ನ ಸ್ಥಾಪನೆಯ ಕಾರ್ಯವು ಭರದಿಂದ ಸಾಗುತ್ತಿದೆ ಹಾಗೂ 500 ಮೆಗಾವ್ಯಾಟ್‍ಗಳ ಈಗಾಗಲೇ ಕಾರ್ಯಾರಂಭಿಸಿದೆ ಮತ್ತು ಉಳಿದ ಕಾರ್ಯವು ಈ ವರ್ಷದ ಅಂತ್ಯದವರೆಗೆ ಕಾರ್ಯಾರಂಭಿಸಲಿದೆ. ನನ್ನ ಸರ್ಕಾರವು ತೆಗೆದುಕೊಂಡ ವಿವಿಧ ಕ್ರಮಗಳ ಕಾರಣದಿಂದಾಗಿ, ಪ್ರಸರಣ ಮತ್ತು ವಿತರಣೆಯಲ್ಲಾಗುವ ನಷ್ಟವು ಕಳೆದ ಐದು ವರ್ಷಗಳ ಅವಧಿಯಲ್ಲಿ ಗಣನೀಯವಾಗಿ ಕಡಿಮೆಯಾಗಿದೆ ಮತ್ತು ರಾಜ್ಯದಲ್ಲಿ ವಿದ್ಯುತ್ ಸರಬರಾಜಿನ ಗುಣಮಟ್ಟವು ಉತ್ತಮಗೊಂಡಿದೆ.

44. ಬೆಂಗಳೂರಿನಲ್ಲಿರುವ ಕೆರೆಗಳ ರಕ್ಷಣೆ ಮತ್ತು ಸಂರಕ್ಷಣೆಗೆ ಒಂದು ಸಮರ್ಥನೀಯ ಪರಿಹಾರವೆಂದರೆ ತ್ಯಾಜ್ಯ ನೀರಿನ ಶುದ್ಧೀಕರಣ. ಪ್ರಸ್ತುತ ಬೆಂಗಳೂರಿನಲ್ಲಿ ಪ್ರತಿ ದಿನ 84.6 ಕೋಟಿ ಲೀಟರ್ ತ್ಯಾಜ್ಯ ನೀರನ್ನು ಶುದ್ಧೀಕರಿಸುವ ಸಾಮಥ್ರ್ಯ ಹೊಂದಿರುವ 18 ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರತಿ ದಿನ 21.1 ಕೋಟಿ ಲೀಟರ್ ತ್ಯಾಜ್ಯ ನೀರನ್ನು ಶುದ್ಧೀಕರಿಸುವ ಸಾಮಥ್ರ್ಯ ಹೊಂದಿರುವ 6 ಘಟಕಗಳನ್ನು ಹೆಚ್ಚುವರಿಯಾಗಿ ಸ್ಥಾಪಿಸಲಾಗುತ್ತಿದೆ. ಭವಿಷ್ಯದ ಅವಶ್ಯಕತೆಗಳಿಗೆ ನೆರವು ನೀಡಲು, 1,203 ಕೋಟಿ ರೂಪಾಯಿಗಳ ಅಂದಾಜು ವೆಚ್ಚದೊಂದಿಗೆ ಪ್ರತಿ ದಿನ 44 ಕೋಟಿ ಲೀಟರ್ ತ್ಯಾಜ್ಯ ನೀರನ್ನು ಶುದ್ಧೀಕರಿಸುವ ಸಾಮಥ್ರ್ಯ ಹೊಂದಿರುವ 4 ಹೆಚ್ಚುವರಿ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲಾಗುವುದು. ಈ ಹೊಸ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳು 2020ರ ಅಂತ್ಯದ ವೇಳೆಗೆ ಕಾರ್ಯಾರಂಭಿಸಲಿವೆ. ಈ ಎಲ್ಲಾ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳ ಕಾರ್ಯ ನಿರ್ವಹಣೆಯಿಂದ ಬೆಂಗಳೂರಿನಲ್ಲಿ ಶೇಕಡ 100 ತ್ಯಾಜ್ಯ ನೀರಿನ ಶುದ್ಧೀಕರಣವಾಗಲಿದೆ.

45. ನಗರ ಮೂಲಭೂತ ಸೌಕರ್ಯ ಸೌಲಭ್ಯಗಳನ್ನು ಉತ್ತಮಪಡಿಸುವುದಕ್ಕೆ, ಪಾಲಿಕೆಗಳು ಮತ್ತು ನಗರಸಭೆಗಳಿಗೆ ನಗರೋತ್ಥಾನ ಹಂತ-2 ಮತ್ತು ಹಂತ-3 ಯೋಜನೆಗಳು ಮತ್ತು ವಿಶೇಷ ಅನುದಾನ ಯೋಜನೆಗಳ ಅಡಿಯಲ್ಲಿ 6,479 ಕೋಟಿ ರೂಪಾಯಿಗಳ ವೆಚ್ಚದಲ್ಲಿ 7,382 ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಮಾರ್ಚ್ 2018ರಷ್ಟರಲ್ಲಿ ಹುಬ್ಬಳ್ಳಿ-ಧಾರವಾಡ ತ್ವರಿತ ಬಸ್ ಸಾರಿಗೆ ವ್ಯವಸ್ಥೆ (ಬಿ.ಆರ್.ಟಿ.ಎಸ್.) ಕಾರ್ಯಾರಂಭಿಸುವುದು.

46. ನನ್ನ ಸರ್ಕಾರವು, ರಾಜ್ಯದಲ್ಲಿ ರೈಲ್ವೆ ಜಾಲ ಹಾಗೂ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ವಿಶೇಷ ಪ್ರಾಧಾನ್ಯತೆಯನ್ನು ನೀಡಿದೆ. ರೈಲ್ವೆ ಮಂತ್ರಾಲಯದೊಂದಿಗೆ ವೆಚ್ಚ ಹಂಚಿಕೆ ಆಧಾರದ ಮೇಲೆ 12 ರೈಲ್ವೆ ಯೋಜನೆಗಳನ್ನು ಕೈಗೆತ್ತಿಕೊಳ್ಳ್ಳಲಾಗಿದೆ. ಇವುಗಳಲ್ಲಿ ಮೂರು ಯೋಜನೆಗಳನ್ನು (ಹಾಸನ-ಬೆಂಗಳೂರು ಹೊಸ ರೈಲು ಮಾರ್ಗ, ಯಾದಗಿರಿ ಕೋಚ್ ಕಾರ್ಖಾನೆ ಮತ್ತು ಬೀದರ್-ಕಲಬುರಗಿ ಹೊಸ ರೈಲು ಮಾರ್ಗ) 2017-18 ರಲ್ಲಿ ಉದ್ಘಾಟಿಸಲಾಗಿದೆ ಹಾಗೂ ಇತರೆ ಯೋಜನೆಗಳು ಪ್ರಗತಿಯಲ್ಲಿವೆ. ಕಲಬುರಗಿ ವಿಮಾನನಿಲ್ದಾಣದ ಕಾಮಗಾರಿಯು 2018ರ ಮಾರ್ಚ್‍ನಲ್ಲಿ ಪೂರ್ಣಗೊಳ್ಳುವುದಾಗಿ ನಿರೀಕ್ಷಿಸಲಾಗಿದೆ ಹಾಗೂ ಇತರೆ ಪ್ರಾದೇಶಿಕ ವಿಮಾನ ನಿಲ್ದಾಣಗಳ ಕಾಮಗಾರಿಗಳನ್ನು ಶೀಘ್ರವಾಗಿ ಮುಗಿಸಲಾಗುತ್ತಿದೆ.

47. ಕರ್ನಾಟಕ ರಸ್ತೆ ಸಾರಿಗೆ ಹಾಗೂ ಮಹಾನಗರ ಸಾರಿಗೆ ಕಂಪನಿಗಳು ದೇಶದಲ್ಲಿಯೇ ಅತ್ಯುತ್ತಮವಾಗಿದ್ದು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಗಳನ್ನು ಹಾಗೂ ಪ್ರಶಸ್ತಿಗಳನ್ನು ಗಳಿಸಿವೆ. ಕರ್ನಾಟಕದ ಎಲ್ಲಾ ಸಾರಿಗೆ ನಿಗಮಗಳು, ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೌಲಭ್ಯವನ್ನು ನೀಡುವುದಕ್ಕಾಗಿ 207 ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿಗಳೊಂದಿಗೆ ಮನ್ನಣೆ ಪಡೆದುಕೊಂಡಿವೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ರಾಷ್ಟ್ರದಲ್ಲಿಯೇ ‘ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿ’ ಯನ್ನು ಗಳಿಸಿರುವ ಏಕೈಕ ನಿಗಮವಾಗಿದೆ. 1.13 ಲಕ್ಷ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಒದಗಿಸಲಾಗಿದೆ.

48. ದೃಢವಾದ ವಿವಿಧ ರೀತಿಯ ಅಂತರ್ ಸಾರ್ವಜನಿಕ ಸಾರಿಗೆಯ ಅಗತ್ಯತÉಗಾಗಿ ಮತ್ತು ವೈಜ್ಞಾನಿಕ ಸಂಚಾರ ನಿರ್ವಹಣೆಗಾಗಿ, ಬೆಂಗಳೂರು ಮೆಟ್ರೋ ರೈಲು ನಿಗಮವು 42 ಕಿಲೋಮೀಟರ್ ಮಾರ್ಗದ ಮೊದಲನೇ ಹಂತವನ್ನು ಪೂರ್ಣಗೊಳಿಸಿ, ವಾಣಿಜ್ಯ ಚಟುವಟಿಕೆಗಳನ್ನು ಈಗಾಗಲೇ ಪ್ರಾರಂಭಿಸಿದೆ. ಎರಡನೇ ಹಂತದಲ್ಲಿ, 72 ಕಿಲೋಮೀಟರ್‍ಗಳ ಮಾರ್ಗವನ್ನು 2021ರ ಮಾರ್ಚ್‍ರೊಳಗೆ ಪೂರ್ಣಗೊಳಿಸುವ ಗುರಿಯಿರಿಸಿಕೊಂಡಿದೆ. ನನ್ನ ಸರ್ಕಾರವು, ಬೆಂಗಳೂರು ಮೆಟ್ರೋ ಪಾಲಿಟನ್ ಪ್ರದೇಶಕ್ಕೆ, ಉಪ ನಗರ ರೈಲ್ವೆಯನ್ನು ಪರಿಚಯಿಸಲು ಕೇಂದ್ರ ಸರ್ಕಾರದ ರೈಲ್ವೆ ಮಂತ್ರಾಲಯಕ್ಕೆ ಮನವರಿಕೆ ಮಾಡಲು ಸಕ್ರಿಯ ಕ್ರಮಗಳನ್ನು ಕೈಗೊಂಡಿದೆ. ಹೆಚ್ಚುತ್ತಿರುವ ಮೋಟಾರು ವಾಹನಗಳ ಸಂಖ್ಯೆಯನ್ನು ನಿಯಂತ್ರಿಸಲು ಮತ್ತು ನಗರ ಸಾರಿಗೆ ವಲಯದಿಂದ ಉಂಟಾಗುವ ವಾಯುಮಾಲಿನ್ಯವನ್ನು ನಿಯಂತ್ರಿಸಲು, ಸಾರ್ವಜನಿಕ ಬೈಸಿಕಲ್ ಬಳಕೆ ವ್ಯವಸ್ಧೆಯನ್ನು ಮೈಸೂರಿನಲ್ಲಿ ಆರಂಭಿಸಲಾಗಿದೆ ಮತ್ತು ಬೆಂಗಳೂರು ನಗರದಲ್ಲಿ ಸದ್ಯದಲ್ಲಿಯೇ ಪ್ರಾರಂಭಿಸಲಾಗುವುದು.

49. ನನ್ನ ಸರ್ಕಾರವು, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿರುವ 407 ಎಕರೆಯ ಪ್ರಮುಖ ಸ್ಥಳದಲ್ಲಿ ಬೆಂಗಳೂರು ಸಿಗ್ನೇಚರ್ ಬಿಸ್‍ನೆಸ್ ಪಾರ್ಕನ್ನು ಅಭಿವೃದ್ದಿಪಡಿಸಲು ಅನುಮೋದನೆ ನೀಡಿದೆ. 1,440 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಆಧಾರದ ಬೆಂಗಳೂರು ಅಂತರರಾಷ್ಟ್ರೀಯ ಸಮಾವೇಶ ಕೇಂದ್ರ ಸ್ಥಾಪನೆಗೂ ಸಹ ಸರ್ಕಾರವು ಅನುಮೋದನೆ ನೀಡಿದೆ.

50. ನಾವು ರಾಜ್ಯದಲ್ಲಿನ ರಸ್ತೆ ಜಾಲವನ್ನು ಮೇಲ್ದರ್ಜೆಗೆ ಏರಿಸಲು ವಿಶೇಷ ಒತ್ತು ನೀಡಿದ್ದೇವೆ. ಕಳೆದ ನಾಲ್ಕು ವರ್ಷಗಳಲ್ಲಿ 8,190 ಕೋಟಿ ರೂಪಾಯಿಗಳ ವೆಚ್ಚದಲ್ಲಿ 9,644 ಕಿಲೋಮೀಟರ್ ರಾಜ್ಯ ಹೆದ್ದಾರಿಗಳ ಅಭಿವೃದ್ದಿ ಮಾಡಲಾಗಿದೆ ಮತ್ತು 20,733 ಕಿಲೋಮೀಟರ್ ಪ್ರಮುಖ ಜಿಲ್ಲಾ ರಸ್ತೆಗಳನ್ನು ಪೂರ್ಣಗೊಳಿಸಲಾಗಿದೆ; 1,854 ಕಿಲೋಮೀಟರ್ ಹೊಸ ರಾಷ್ಟ್ರೀಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲಾಗಿದೆ ಮತ್ತು 6,433 ಕಿಲೋಮೀಟರ್ ರಸ್ತೆಯ ಮೇಲ್ದರ್ಜೆಗಾಗಿ ಭಾರತ ಸರ್ಕಾರದಿಂದ ತಾತ್ವಿಕ ಅನುಮೋದನೆ ಪಡೆಯಲಾಗಿದೆ. ಹೀಗಾಗಿ, ರಾಜ್ಯದ ರಾಷ್ಟ್ರೀಯ ಹೆದ್ದಾರಿ ಜಾಲಕ್ಕೆ ಹೆಚ್ಚುವರಿಯಾಗಿ 8,287 ಕಿಲೋಮೀಟರ್ ಸೇರ್ಪಡೆಗೊಂಡಿದೆ.

51. ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪ ಯೋಜನೆಗಳಡಿಯಲ್ಲಿ, 2,900 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಲೋನಿಗಳಲ್ಲಿ 2,663 ಕಿಲೋಮೀಟರ್ ರಸ್ತೆ ನಿರ್ಮಾಣ ಮತ್ತು 1,190 ಕಿಲೋಮೀಟರ್ ಸಿಮೆಂಟ್ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಆರ್.ಐ.ಡಿ.ಎಫ್. ಯೋಜನೆಯಡಿಯಲ್ಲಿ, 1,210 ಕೋಟಿ ರೂಪಾಯಿಗಳ ವೆಚ್ಚದಲ್ಲಿ 2,420 ಕಿಲೋಮೀಟರ್ ಗ್ರಾಮೀಣ ರಸ್ತೆಗಳನ್ನು ಉತ್ತಮಪಡಿಸಿದ್ದು, 307 ಸೇತುವೆಗಳ ನಿರ್ಮಾಣವನ್ನು ಪೂರ್ಣಗೊಳಿಸಲಾಗಿದೆ. 440 ಕೋಟಿ ರೂಪಾಯಿಗಳ ವೆಚ್ಚದಲ್ಲಿ, ರಾಜ್ಯ ಹೆದ್ದಾರಿಗಳಲ್ಲಿ 175 ಸೇತುವೆಗಳನ್ನು ಮತ್ತು ಜಿಲ್ಲಾ ಮುಖ್ಯ ರಸ್ತೆಗಳಲ್ಲಿ 146 ಸೇತುವೆಗಳ ನಿರ್ಮಾಣವನ್ನು ಪೂರ್ಣಗೊಳಿಸಲಾಗಿದೆ.

52. 2017-18ರ ವಿವಿಧ ಕಾರ್ಯಕ್ರಮಗಳಡಿಯಲ್ಲಿ, 2,519 ಕೋಟಿ ರೂಪಾಯಿಗಳ ಅನುದಾನದೊಂದಿಗೆ 2,147 ಕಿಲೋಮೀಟರ್ ರಾಜ್ಯ ಹೆದ್ದಾರಿಯನ್ನು ಹಾಗೂ 1,417 ಕೋಟಿ ರೂಪಾಯಿಗಳ ಅನುದಾನದೊಂದಿಗೆ 4,014 ಕಿಲೋಮೀಟರ್ ಜಿಲ್ಲಾ ಮುಖ್ಯ ರಸ್ತೆಗಳನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸುವ ಗುರಿಯಿರಿಸಿಕೊಂಡಿದೆ. ಮುಂದುವರೆದು, ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಲೋನಿಗಳಲ್ಲಿ 1,532 ಕೋಟಿ ರೂಪಾಯಿಗಳ ವೆಚ್ಚದಲ್ಲಿ 1,247 ಕಿಲೋಮೀಟರ್ ಸಿಮೆಂಟ್ ಕಾಂಕ್ರೀಟ್ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ವಿವಿಧ ಯೋಜನೆಗಳಡಿಯಲ್ಲಿ 196 ಸೇತುವೆಗಳ ನಿರ್ಮಾಣ ಮತ್ತು ಪುನರ್ ನಿರ್ಮಾಣವನ್ನು ಕೈಗೊಳ್ಳಲಾಗುತ್ತಿದೆ. ವಿಶ್ವಬ್ಯಾಂಕ್ ಸಹಯೋಗದಲ್ಲಿ 1,095 ಕೋಟಿ ರೂಪಾಯಿಗಳ ವೆಚ್ಚದಲ್ಲಿ 361 ಕಿಲೋಮೀಟರ್ ರಾಜ್ಯ ಹೆದ್ದಾರಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

53. ವೇಗವಾಗಿ ಬೆಳೆಯುತ್ತಿರುವ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನದ ವಲಯಗಳಲ್ಲಿ ಕರ್ನಾಟಕವು ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿ ಮುಂದುವರೆದಿದೆ. ಕರ್ನಾಟಕ i4 ನೀತಿ ಮತ್ತು ಬಹುವಲಯ ನವೋದ್ಯಮ ನೀತಿಗಳನ್ನು ಫೋಷಿಸಲಾಗಿದ್ದು, ರಾಜ್ಯದಲ್ಲಿನ ವಿವಿಧ ಸ್ಥಳಗಳಲ್ಲಿ ಇನ್‍ಕ್ಯುಬೇಷನ್ ಸೆಂಟರ್‍ಗಳನ್ನು ಮತ್ತು ಐ.ಟಿ. ಪಾರ್ಕ್‍ಗಳನ್ನು ಸ್ಥಾಪಿಸಲಾಗಿದೆ.

54. ನನ್ನ ಸರ್ಕಾರವು, ಬಂಡವಾಳ ಹೂಡಿಕೆಯ ಉದ್ದೇಶದಲ್ಲಿ ಕರ್ನಾಟಕ ರಾಜ್ಯವನ್ನು 2013ರಲ್ಲಿ ದೇಶದಲ್ಲಿ ಹೊಂದಿದ್ದ 11ನೇ ಸ್ಥಾನದಿಂದ 2016 ಮತ್ತು 2017ರಲ್ಲಿ ರಾಷ್ಟ್ರದಲ್ಲಿ ಪ್ರಥಮ ಸ್ಥಾನಕ್ಕೇರಿಸಿದೆ. 2014-19ರ ಕೈಗಾರಿಕಾ ನೀತಿಯನುಸಾರ, ನೀತಿ ಜಾರಿಯಲ್ಲಿರುವ ಅವಧಿಯಲ್ಲಿ, ರಾಜ್ಯದಲ್ಲಿ 5 ಲಕ್ಷ ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ ಹಾಗೂ 15 ಲಕ್ಷ ಜನರಿಗೆ ಉದ್ಯೋಗವನ್ನು ಸೃಜಿಸುವ ಗುರಿ ಹೊಂದಿದೆ. ಕಳೆದ ನಾಲ್ಕುವರೆ ವರ್ಷಗಳಲ್ಲಿ, 3.39 ಲಕ್ಷ ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆ ಮತ್ತು 9.45 ಲಕ್ಷ ವ್ಯಕ್ತಿಗಳಿಗೆ ಸಮರ್ಥ ಉದ್ಯೋಗಗಳನ್ನು ಒದಗಿಸುವ ನಿಟ್ಟಿನಲ್ಲಿ ವಿವಿಧ ರಾಜ್ಯ ಅನುಮೋದನಾ ಸಮಿತಿಗಳಿಂದ 1,869 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಬೃಹತ್ ಕೈಗಾರಿಕಾ ವಲಯದಲ್ಲಿ 1.89 ಲಕ್ಷ ಉದ್ಯೋಗಗಳನ್ನು ಮತ್ತು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯಗಳಲ್ಲಿ 11.36 ಲಕ್ಷ ಉದ್ಯೋಗಗಳನ್ನು ಸೃಜಿಸಲಾಗಿದೆ. ಅಂದರೆ, ಒಟ್ಟಾರೆ 13.25 ಲಕ್ಷ ಉದ್ಯೋಗಗಳನ್ನು ಸೃಜಿಸಲಾಗಿದೆ.

55. ನನ್ನ ಸರ್ಕಾರವು, ಎಂ.ಎಸ್.ಎಂ.ಇ.ಗಳು ಮತ್ತು ಮೂಲ ಯಂತ್ರೋಪಕರಣಗಳ ತಯಾರಕರನ್ನು ಒಂದೇ ವೇದಿಕೆಯಡಿಯಲ್ಲಿ ತರಲು, ಸರಬರಾಜುದಾರರ ಅಭಿವೃದ್ದಿ ಮತ್ತು ಬಂಡವಾಳ ಹೂಡಿಕೆದಾರರ ಸಮಾವೇಶವನ್ನು 2017ರ ನವೆಂಬರ್‍ನಲ್ಲಿ ಬೆಂಗಳೂರಿನಲ್ಲಿ ಯಶಸ್ವಿಯಾಗಿ ನಡೆಸಿತು. ಈ ಸಮಾವೇಶದಲ್ಲಿ 1,500ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ನನ್ನ ಸರ್ಕಾರವು, ವಿದ್ಯುತ್ ವಾಹನ ಮತ್ತು ಇಂಧನ ಸಂಗ್ರಹಣಾ ನೀತಿಯನ್ನು ಅನಾವರಣ ಮಾಡುವುದರಲ್ಲಿ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಈಗಾಗಲೇ, ಈ ಉದಯೋನ್ಮುಖ ವಲಯದಲ್ಲಿ ಬಂಡವಾಳ ಹೂಡಿಕೆಗಾಗಿ ವಿಚಾರಣೆಗಳು ಬಂದಿರುತ್ತವೆ ಮತ್ತು ತ್ವರಿತ ಗತಿಯಲ್ಲಿ ಸೌಲಭ್ಯಗಳನ್ನು ಒದಗಿಸುವ ಮೂಲಕ ರಾಜ್ಯವು ಮೊದಲ ಬಾರಿಗೆ ಪ್ರಯೋಜನ ಪಡೆದಂತಾಗುವುದು.

56. ಕರ್ನಾಟಕ ಸರ್ಕಾರವು, ನೂತನ ಜವಳಿ ನೀತಿ 2013-18 ಅನ್ನು ಘೋಷಣೆ ಮಾಡಿದೆ. ಈ ನೀತಿಯ ಅವಧಿಯಲ್ಲಿ, 4,954 ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ 844 ಎಂ.ಎಸ್.ಎಂ.ಇ., ಮೆಗಾ, ಹಸಿರುಕ್ಷೇತ್ರ ಜವಳಿ ಪಾರ್ಕುಗಳನ್ನು ಸ್ಧಾಪಿಸಲಾಗಿದೆ. 1.3 ಲಕ್ಷ ಜನರಿಗೆ ಉದ್ಯೋಗಗಳನ್ನು ಒದಗಿಸಲಾಗಿದೆ. ಈ ಕೈಗಾರಿಕೆಗಳಿಗೆ ಪ್ರೋತ್ಸಾಹಧನ ಮತ್ತು ರಿಯಾಯಿತಿಯಾಗಿ 247 ಕೋಟಿ ರೂಪಾಯಿಗಳ ಮೊತ್ತವನ್ನು ನೀಡಲಾಗಿದೆ.

57. ಕಳೆದ ಐದು ವರ್ಷಗಳಲ್ಲಿ ನನ್ನ ಸರ್ಕಾರವು, ಸತತವಾಗಿ ರಾಜಸ್ವ ಹೆಚ್ಚುವರಿ ಉಳಿಸಿಕೊಂಡು ಬಂದಿದ್ದು, ಆರ್ಥಿಕ ಕೊರತೆಯನ್ನು ರಾಜ್ಯ ಆಂತರಿಕ ಒಟ್ಟು ಉತ್ಪನ್ನದ (ಜಿ.ಎಸ್.ಡಿ.ಪಿ.) ಶೇಕಡ 3ಕ್ಕಿಂತ ಕಡಿಮೆ ಹಾಗೂ ಒಟ್ಟಾರೆ ಹೊಣೆಗಾರಿಕೆಯನ್ನು ರಾಜ್ಯದ ಆಂತರಿಕ ಒಟ್ಟು ಉತ್ಪನ್ನದ (ಜಿ.ಎಸ್.ಡಿ.ಪಿ.) ಶೇಕಡ 25ರೊಳಗೆ ಇರುವಂತೆ ಖಚಿತಪಡಿಸಿಕೊಳ್ಳುವ ಮೂಲಕ ಕರ್ನಾಟಕ ವಿತ್ತೀಯ ಜವಾಬ್ದಾರಿ ಅಧಿನಿಯಮದ ಎಲ್ಲಾ ಅಗತ್ಯತೆಗಳನ್ನು ಪೂರೈಸಿದೆ. ಈ ವರ್ಷವೂ ಸಹ, ಪ್ರಮುಖ ತೆರಿಗೆಗಳ ರಾಜಸ್ವ ಸ್ವೀಕೃತಿಗಳು ಹೆಚ್ಚು ಕಡಿಮೆ ಆಯವ್ಯಯದ ಅಂದಾಜಿನಂತಿರುವುದರಿಂದ, ರಾಜ್ಯವು ಇದುವರೆಗೆ ಸಾಧಿಸಿರುವ ಪ್ರಗತಿಯನ್ನು ಮುಂದುವರೆಸುತ್ತದೆಯೆಂದು ನಿರೀಕ್ಷಿಸಲಾಗಿದೆ.

58. 2017ರ ಜುಲೈ 1ರಿಂದ ಜಾರಿಯಾಗುವಂತೆ ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ (GST) ಯನ್ನು ಅನುಷ್ಠಾನಗೊಳಿಸಲಾಗಿದೆ. ನಾವು ಜಿ.ಎಸ್.ಟಿ.ಯನ್ನು ಅನುಷ್ಠಾನಗೊಳಿಸಲು ಸಂಪೂರ್ಣವಾಗಿ ಸಿದ್ಧರಿದ್ದರೂ, ಜಿ.ಎಸ್.ಟಿ. ಅಡಿಯಲ್ಲಿ ರೂಪಿಸಿರುವ ಕಾನೂನು ಅವಶ್ಯಕತೆಗಳನ್ನು ಐ. ಟಿ. ವೇದಿಕೆಯಲ್ಲಿ ಪೂರೈಸುವಲ್ಲಿ ತೆರಿಗೆದಾರರು ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇದರ ಜೊತೆಗೆ ಪ್ರಾರಂಭಿಕ ತಿಂಗಳುಗಳಲ್ಲಿ ಆಗಾಗ ಬದಲಾವಣೆಯಾಗುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ಈ ಕಾರಣಗಳಿಂದಾಗಿ ಸದ್ಯಕ್ಕೆ ಜಿ.ಎಸ್.ಟಿ. ಸಂಗ್ರಹಣೆಯಲ್ಲಿ ಏರಿಳಿತವಾಗುತ್ತಿದೆ. ಆದರೆ, ಅಧಿನಿಯಮದ ಅನುಸಾರ, ಕೇಂದ್ರ ಸರ್ಕಾರದಿಂದ ಬರಬೇಕಾದ ನಷ್ಟ ಪರಿಹಾರದ ಮೂಲಕ ಕೊರತೆಯನ್ನು ನೀಗಿಸಬಹುದು ಎಂದು ನಿರೀಕ್ಷಿಸಲಾಗಿದೆ. ರಾಜ್ಯವು, ಕೆಲವು ವರ್ಷಗಳಿಂದ ಬಾಕಿ ಇರುವ ಅನೇಕ ವಸ್ತುಗಳ ಬೆಲೆಗಳನ್ನು ಪರಿಷ್ಕರಿಸುವ ಕಾರ್ಯವನ್ನು ಕೈಗೊಂಡಿದ್ದು, ಇಲಾಖೆಗಳೊಂದಿಗೆ ತೆರಿಗೆಯೇತರ ಸಂಗ್ರಹಣೆಗಳನ್ನು ಹೆಚ್ಚಿಸಲು ಸಹ ಪ್ರಯತ್ನಿಸುತ್ತಿದೆ. ಇಂತಹ ಕ್ರಮಗಳು ರಾಜ್ಯದ ಆರ್ಥಿಕತೆಗೆ ಲಾಭ ತರಲಿವೆ ಎಂದು ನಿರೀಕ್ಷಿಸಲಾಗಿದೆ.

59. ಕೊನೆಯದಾಗಿ, ಎಲ್ಲಾ ಜನರ ದೃಷ್ಟಿಯು ಕರ್ನಾಟಕದ ಮೇಲಿರುವುದರಿಂದ, ಗೌರವಾನ್ವಿತ ವಿಧಾನಮಂಡಲದ ಸದಸ್ಯರು ರಚನಾತ್ಮಕ ಹಾದಿಯನ್ನು ತಮ್ಮದಾಗಿಸಿಕೊಂಡು ವಿಸ್ತøತ ಮತ್ತು ಗಹನ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ವಿಧಾನಮಂಡಲದ ಚೌಕಟ್ಟನ್ನು ರೂಪಿಸುವಂತೆ ಕರೆ ನೀಡುತ್ತಿದ್ದೇನೆ. ಕರ್ನಾಟಕವು ಸದಾ ಅಭಿವೃದ್ಧಿಯ ಮುಂಚೂಣಿಯಲ್ಲಿದ್ದು, ಭವಿಷ್ಯದಲ್ಲಿ ಇದೇ ಹಾದಿಯಲ್ಲಿ ಮತ್ತಷ್ಟು ಸಾಧನೆ ಮಾಡಲಿ ಎಂದು ಹಾರೈಸುತ್ತೇನೆ. ನಾವೆಲ್ಲರೂ ಒಟ್ಟಾಗಿ ಶ್ರಮಿಸಿ, ಕರ್ನಾಟಕವನ್ನು ಭಾರತದಲ್ಲಿಯೇ ಉತ್ತಮ ರಾಜ್ಯವನ್ನಾಗಿಸೋಣ.

ಜೈ ಹಿಂದ್, ಜೈ ಕರ್ನಾಟಕ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here