ಭಾನುವಾರ ರಾತ್ರಿ ಹೈದರಾಬಾದ್ ನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ ಚೆನೈ ತಂಡವನ್ನು ಸೋಲಿಸಿ ಮುಂಬೈ ಇಂಡಿಯನ್ಸ್‌ ತಂಡವು ಐಪಿಎಲ್ ಕಿರೀಟವನ್ನು ಮುಡಿಗೇರಿಸಿಕೊಂಡಿತು.ರಾಜೀವಗಾಂಧಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ರೋಚಕ ಫೈನಲ್‌ ಹೋರಾಟದಲ್ಲಿ ಮುಂಬೈ ತಂಡವು ಒಂದು ರನ್‌ ಅಂತರದಿಂದ ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ ಜಯಿಸಿತು.ಇದರೊಂದಿಗೆ ಮುಂಬೈ ತಂಡವು ಐಪಿಎಲ್ ಇತಿಹಾಸದಲ್ಲಿ ನಾಲ್ಕನೇ ಪ್ರಶಸ್ತಿ ಗೆದ್ದಿತು. ಅದರೊಂದಿಗೆ ಅತಿ ಹೆಚ್ಚು ಪ್ರಶಸ್ತಿ ಪಡೆದ ತಂಡವಾಯಿತು. ಕೊನೆಯ ಎಸೆತದವರೆಗೂ ಹೋದ ವರ್ಷದ ಚಾಂಪಿಯನ್ ಮಹೇಂದ್ರಸಿಂಗ್ ಧೋನಿ ಬಳಗವು ಮಾಡಿದ ಹೋರಾಟ ಇತಿಹಾಸದ ಪುಟ ಸೇರಿತು.

ಮೂರು ಜೀವದಾನ ಪಡೆದು 80 ರನ್‌ ಗಳಿಸಿದ ಶೇನ್ ವಾಟ್ಸನ್ ಆಟವು ವ್ಯರ್ಥವಾಯಿತು.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡವು ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ದೀಪಕ್ ಚಾಹರ್ (26ಕ್ಕೆ3) ಮತ್ತು ಶಾರ್ದೂಲ್ ಠಾಕೂರ್ (37ಕ್ಕೆ2)ಅವರ ಬೌಲಿಂಗ್‌ ಮುಂದೆ ಬೀಸಾಟವಾಡಲು ಸಾಧ್ಯವಾಗಲಿಲ್ಲ. 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 149 ರನ್‌ ಗಳಿಸಿತು. ಕೀರನ್ ಪೊಲಾರ್ಡ್‌ (ಔಟಾಗದೆ 41; 25 ಎಸೆತ, 3ಬೌಂಡರಿ, 3ಸಿಕ್ಸರ್) ಅವರೊಬ್ಬರೇ ದಿಟ್ಟತನದ ಆಟವಾಡಿದರು. ಅದರಿಂದಾಗಿ ತಂಡದ ಖಾತೆಗೆ ಒಂದಿಷ್ಟು ರನ್‌ಗಳು ಜಮೆಯಾದವು. ಗುರಿ ಬೆನ್ನಟ್ಟಿದ ಚೆನ್ನೈ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 147 ರನ್‌ ಗಳಿಸಿತು.ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಶೇನ್ ವಾಟ್ಸನ್‌ ರನ್‌ಔಟ್ ಆಗುವವರೆಗೂ ಚೆನ್ನೈ ತಂಡವು ಗೆಲುವಿನ ನಿರೀಕ್ಷೆಯಲ್ಲಿತ್ತು. ಮುಂಬೈ ತಂಡದ ಕಳಪೆ ಫೀಲ್ಡಿಂಗ್‌ನ ಲಾಭ ಪಡೆದಿದ್ದ ಅವರು ತಮ್ಮ ತಂಡವನ್ನು ಜಯದ ಅಂಚಿಗೆ ತಂದು ನಿಲ್ಲಿಸಿದ್ದರು.

ಮೂರು ಸಲ (ಓವರ್: 8.4, 13.5 ಮತ್ತು 16.1) ಅವರ ಕ್ಯಾಚ್‌ಗಳನ್ನು ಫೀಲ್ಡರ್‌ಗಳು ನೆಲಕ್ಕೆ ಚೆಲ್ಲಿದ್ದರು. 18ನೇ ಓವರ್‌ನಲ್ಲಿ ಅವರು ಮೂರು ಸಿಕ್ಸರ್‌ ಹೊಡೆದು ಜಯದ ಹಾದಿಯನ್ನು ಸುಲಭಗೊಳಿಸಿದ್ದರು. ಆದರೆ, ಕೊನೆಯ ಓವರ್‌ನ ನಾಲ್ಕನೇ ಎಸೆತದಲ್ಲಿ ಅವರು ರನ್‌ಔಟ್ ಆದರು. ಕೊನೆಯ ಎರಡು ಎಸೆತಗಳಲ್ಲಿ ನಾಲ್ಕು ರನ್‌ಗಳ ಅಗತ್ಯವಿತ್ತು.ಐದನೇ ಎಸೆತದಲ್ಲಿ ಶಾರ್ದೂಲ್ ಠಾಕೂರ್ ಎರಡು ರನ್ ಗಳಿಸಿದರು. ಆದರೆ ಕೊನೆಯ ಎಸೆತದಲ್ಲಿ ಲಸಿತ್ ಮಾಲಿಂಗ ಹಾಕಿದ ಯಾರ್ಕರ್‌ಗೆ ಶಾರ್ದೂಲ್ ಎಲ್‌ಬಿಡಬ್ಲ್ಯೂ ಆದರು. ಅದರೊಂದಿಗೆ ಮುಂಬೈ ಪಾಳಯದಲ್ಲಿ ಜಯದ ಬುಗ್ಗೆ ಪುಟಿಯಿತು. ಹೋದ ವರ್ಷದ ಫೈನಲ್‌ನಲ್ಲಿ ಅಜೇಯ ಶತಕ ಹೊಡೆದು ತಂಡಕ್ಕೆ ಟ್ರೋಫಿ ಯ ಕಾಣಿಕೆ ನೀಡಿದ್ದ ಶೇನ್ ಈ ಬಾರಿ ನಿರಾಶರಾದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here