ಬೆಂಗಳೂರು,ಸೆ.29: ಐ.ಬಿ.ಎಸ್.ಎ ವಿಶ್ವ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ( ಕ್ರಿಕೆಟ್ ಫಾರ್ ಬ್ಲೈಂಡ್ ) ಪಾಲ್ಗೊಂಡು ಚಿನ್ನದ ಪದಕ ಗೆದ್ದಿರುವ ಭಾರತದ ಮಹಿಳಾ ಅಂಧ ಕ್ರಿಕೆಟ್ ತಂಡ ಹಾಗೂ ರಜತ ಪದಕ ಗೆದ್ದಿರುವ ಪುರುಷರ ಕ್ರಿಕೆಟ್ ತಂಡದ ಕರ್ನಾಟಕದ ಆಟಗಾರರನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಅಭಿನಂದಿಸಿದರು.
ಭಾರತೀಯ ಅಂಧ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಕರ್ನಾಟಕದ ವರ್ಷಾ.ಯು ಹಾಗೂ ತಂಡದ ಆಟಗಾರರಾದ, ದೀಪಿಕಾ, ಗಂಗವ್ವ ಮತ್ತು ಪುರುಷರ ತಂಡದ ಪ್ರಕಾಶ್ ಜೆ, ಸುನೀಲ್ ಕುಮಾರ್, ಬಸಪ್ಪ ಒಡ್ಡಗೋಲ್ ಅವರನ್ನು ಮುಖ್ಯಮಂತ್ರಿಗಳು ಅಭಿನಂದಿಸಿದರು.
ಕರ್ನಾಟಕ ರಾಜ್ಯ ಒಲಂಪಿಕ್ ಸಂಸ್ಥೆ ಅಧ್ಯಕ್ಷರೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳೂ ಆದ ಗೋವಿಂದ ರಾಜು ಅವರ ನೇತೃತ್ವದಲ್ಲಿ ಪದಕ ವಿಜೇತ ಆಟಗಾರರ ತಂಡ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ತಮ್ಮ ಬೇಡಿಕೆಗಳನ್ನು ಮುಂದಿಟ್ಟಿತು. ಗೋವಿಂದರಾಜು ಅವರ ಜತೆ ಪ್ರತ್ಯೇಕವಾಗಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಂಡು ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು.
ಕ್ರಿಕೆಟ್ ಗೆ ಹೇಗೆ ತರಬೇತಿ ಪಡೆಯುತ್ತೀರಿ, ಬಾಲನ್ನು ಹೇಗೆ ಗುರುತಿಸುತ್ತೀರಿ, ಎಷ್ಟು ಪಂದ್ಯಗಳನ್ನು ಆಡಿದ್ದೀರಿ ಎನ್ನುವುದೂ ಸೇರಿದಂತೆ ಹಲವು ಕುತೂಹಲಕಾರಿ ಪ್ರಶ್ನೆಗಳ ಮೂಲಕ ಆಟಗಾರರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಲ ಕಾಲ ಸಂವಾದ ನಡೆಸಿದರು.
ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರಾದ ನಸೀರ್ ಅಹಮದ್ , ಕ್ರಿಕೆಟ್ ಅಸೋಸಿಯೇಷನ್ ಫಾರ್ ಬ್ಲೈಂಡ್ ಇಂಡಿಯಾದ ಆಜೀವ ಅಧ್ಯಕ್ಷ ಮಹಾಂತೇಶ್, ಕ್ಯಾಬಿ ಅಧ್ಯಕ್ಷ ಬೂಸಾಗೌಡ ಸಮರ್ಥನಮ್ ಟ್ರಸ್ಟ್ ನ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Disclaimer: This Story is auto-aggregated by a Syndicated Feed and has not been Created or Edited By City Big News Staff.