ಕೊರೊನಾ ವೈರಸ್ ಎಲ್ಲೆಡೆ ಹರಡುತ್ತಿರುವುದನ್ನು ಗಮನಿಸಿ, ಸೋಂಕು ಹರಡುವುದನ್ನು ತಪ್ಪಿಸಲು ಸರ್ಕಾರ ಈಗಾಗಲೇ ಅನೇಕ ಮುಂಜಾಗ್ರತಾ ಕ್ರಮಗಳನ್ನು ಜಾರಿಗೆ ತಂದಿತ್ತು.‌ ಈಗಾಗಲೇ ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಲಾಕ್ ಡೌನ್ ಘೋಷಣೆಯನ್ನು ಮಾಡಲಾಗಿದ್ದು, ಇಲ್ಲಿನ ಮುಸ್ಲಿಂ ಸಮುದಾಯವರಿಗೆ ತಮ್ಮ ತಮ್ಮ ಮನೆಯಲ್ಲೇ ನಮಾಜ್ ಮಾಡುವಂತೆ ಸರ್ಕಾರ ಕೋರಿದೆ. ಈ ವಿಷಯವಾಗಿ ಸರ್ಕಾರವು
ಸುತ್ತೋಲೆಯನ್ನು ಹೊರಡಿಸಿದ್ದು, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಕಾರ್ಯದರ್ಶಿ ಎ.ಬಿ. ಇಬ್ರಾಹಿಂ ಅವರು ಬರುವ ಮಾರ್ಚ್‌ 31 ರವರೆಗೆ ಲಾಕ್ ಡೌನ್ ಮಾಡಿರುವ ಒಂಬತ್ತೂ ಜಿಲ್ಲೆಗಳಲ್ಲಿ ಮುಸ್ಲಿಂ ಸಮುದಾಯದವರು ದಿನದ ಎಲ್ಲ ಪ್ರಾರ್ಥನೆ ಹಾಗೂ ಶುಕ್ರವಾರದ ವಿಶೇಷ ಪ್ರಾರ್ಥನೆಯನ್ನು ಮನೆಯಲ್ಲೇ ಮಾಡಬೇಕು ಎಂದು ವಿನಂತಿ ಮಾಡಿಕೊಂಡಿದ್ದಾರೆ.

ಮಸೀದಿಯಲ್ಲಿ ಅವರು ಪ್ರಾರ್ಥನೆ ಮಾಡಿದರೆ, ಇಲ್ಲಿ ಜನದಟ್ಟಣೆ ಹೆಚ್ಚಾಗುವ ಕಾರಣದಿಂದ, ಪ್ರಾರ್ಥನೆ ಮಾಡುವ ಸಂದರ್ಭದಲ್ಲಿ ಭುಜಕ್ಕೆ ಭುಜ ತಾಕುವಾಗ, ಅವರು ಕೈ ಕುಲುಕುವಾಗ, ಒಂದೆಡೆ ಹೆಚ್ಚಿನ ಜನರು ಸೇರುವುದರಿಂದ ಕೊರೊನಾ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಈ ಕುರಿತು ಮಸೀದಿ ಮುಖ್ಯಸ್ಥರು, ವಕ್ಫ್‌ ಬೋರ್ಡ್‌ ಅಧ್ಯಕ್ಷರು ಮತ್ತು ಸದಸ್ಯರ ಜತೆ ಸಮಾಲೋಚನೆ ಯನ್ನು ನಡೆಸಿದ ನಂತರ ಅವರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಎಲ್ಲರೂ ಮನೆಯಿಂದಲೇ ನಮಾಜ್‌ ಮಾಡುವಂತೆ ಅವರು ಕೋರಿದ್ದಾರೆ.

ಈಗಾಗಲೇ ರಾಜ್ಯದಲ್ಲಿ ಪ್ರಮುಖ ದೇಗುಲಗಳು ಕೂಡಾ ಬಂದ್ ಆಗಿವೆ. ಅಲ್ಲದೆ ಆಲಯ ಗಳಿಗೆ ಭಕ್ತರು ಕೆಲವು ದಿನಗಳ ಕಡೆ ಬರಬೇಡಿ ಎಂದು ಕೂಡಾ ಆಲಯಗಳ ಆಡಳಿತ ಮಂಡಳಿಗಳು ಸೂಚನೆಯನ್ನು ಹೊರಡಿಸಿದೆ. ಏಕೆಂದರೆ‌ ಧಾರ್ಮಿಕ ಸ್ಥಳಗಳಲ್ಲಿ ಸಹಜವಾಗಿಯೇ ಜನರು ಸೇರುವುದರಿಂದ ಇಲ್ಲಿ ಸೋಂಕು ಹರಡುವ ಭೀತಿ ಇದ್ದೇ ಇರುತ್ತದೆ. ಅದಕ್ಕಾಗಿಯೇ ಧಾರ್ಮಿಕ ಸ್ಥಳಗಳಲ್ಲಿ ಜನರು ಸೇರುವುದನ್ನು ಕೂಡಾ ಸರ್ಕಾರ ನಿರ್ಬಂಧ ಮಾಡುತ್ತಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here