ಬೆಂಗಳೂರು: ಶಾಸಕರುಗಳ ಅಹವಾಲುಗಳನ್ನು ಆಲಿಸಿ ಬೇಡಿಕೆಗಳಿಗೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ಮತ್ತು ಲೋಕಸಭಾ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವ ಸಲುವಾಗಿ ಐದು ದಿನಗಳ ಕಾಲ ನಡೆದ 31 ಜಿಲ್ಲೆಗಳ 136 ಶಾಸಕರುಗಳೊಂದಿಗಿನ ಮುಖ್ಯಮಂತ್ರಿಗಳ ಸಭೆ ಅತ್ಯಂತ ಅರ್ಥಪೂರ್ಣವಾಗಿ ಮುಕ್ತಾಯವಾಗಿದೆ.
ಆಗಸ್ಟ್ ಎರಡನೇ ವಾರದಲ್ಲಿ ಮೂರು ದಿನಗಳು ಮತ್ತು ಮೂರನೇ ವಾರದಲ್ಲಿ ಎರಡು ದಿನಗಳನ್ನು ಈ ಉದ್ದೇಶಕ್ಕಾಗಿಯೇ ಮೀಸಲಿಡಲಾಗಿತ್ತು.
ಐದು ದಿನಗಳ 50 ಗಂಟೆಗಳ ಚರ್ಚೆಯಲ್ಲಿ ಶಾಸಕರುಗಳು ತಮ್ಮ ತಮ್ಮ ಕ್ಷೇತ್ರಗಳಿಗೆ ಆಗಬೇಕಾದ ಅಗತ್ಯ ಕೆಲಸಗಳ ಬೇಡಿಕೆಯನ್ನು ಮತ್ತು ತಮ್ಮ ನಡುವಿನ ಅಸಮಾಧಾನಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದರು.
ಶಾಸಕರುಗಳ ಮಾತಿಗೆ ಪ್ರಥಮ ಪ್ರಾಶಸ್ತ್ಯ ನೀಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರುಗಳ ಅಭಿಪ್ರಾಯಗಳನ್ನು ಸಂಪೂರ್ಣವಾಗಿ ಕೇಳಿಸಿಕೊಂಡು ಸಕಾರಾತ್ಮಕವಗಿ ಸ್ಪಂದಿಸಿದಿರಿ. ಅಗತ್ಯ ಅನ್ನಿಸಿದಾಗ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ತಮಂತ್ರಿಗಳು ಶಾಸಕರು ಮತ್ತು ಉಸ್ತುವಾರಿ ಸಚಿವರಿಗೆ ಸೂಚನೆ ಮತ್ತು ಸಲಹೆಗಳನ್ನು ನೀಡಿದರು.
ಇನ್ನು ಸಭೆಯಲ್ಲಿ ಪ್ರತಿ ಶಾಸಕರ ಅಭಿಪ್ರಾಯ ಮತ್ತು ಅಭಿವೃದ್ಧಿಯ ಬೇಡಿಕೆಗಳನ್ನು ದಾಖಲಿಸಿಕೊಳ್ಳಲು ಮುಖ್ಯಮಂತ್ರಿ ಸಚಿವಾಲಯದ ಅಧಿಕಾರಿ ಮತ್ತು ಸಿಬ್ಬಂದಿ ತಂಡ ರಚಿಸಲಾಗಿತ್ತು. ಈ ತಂಡ ಜಿಲ್ಲಾವಾರು ಪ್ರತ್ಯೇಕ ಬೇಡಿಕೆಗಳು ಮತ್ತು ಪ್ರಗತಿಯ ಪಟ್ಟಿಗಳನ್ನು ಸಿದ್ದಪಡಿಸಿ ಸಂಬಂಧಪಟ್ಟ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ನೀಡಲಿದೆ.
ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಬಿಬಿಎಂಪಿ ಮತ್ತು ಮೈಸೂರು ಪಾಲಿಕೆ ಚುನಾವಣೆಗಳಲ್ಲಿ ಜಯಭೇರಿ ಬಾರಿಸುವುದು ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜಯಗಳಿಸುವ ಕುರಿತಂತೆ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸಮನ್ವಯದಿಂದ ಕೆಲಸ ಮಾಡುವ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ.
ತಮ್ಮ ತಮ್ಮ ಕ್ಷೇತ್ರಗಳನ್ನು ಹೊರತುಪಡಿಸಿ ತಮ್ಮದಲ್ಲದ ಕ್ಷೇತ್ರಗಳ ಆಡಳಿತಾತ್ಮಕ ವಿಚಾರಗಳಲ್ಲಿ ಯಾರೂ ಮೂಗು ತೂರಿಸಬಾರದು. ಜಿಲ್ಲಾ ಮಂತ್ರಿಗಳು ಶಾಸಕರಿಗೆ ಲಭ್ಯ ಇರಬೇಕು ಎನ್ನುವ ಸೂಚನೆಗಳನ್ನು ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯ ಮಂತ್ರಿಗಳು ಪ್ರತಿ ಸಭೆಯಲ್ಲೂ ಸ್ಪಷ್ಟವಾಗಿ ನೀಡಿದರು.
Disclaimer: This Story is auto-aggregated by a Syndicated Feed and has not been Created or Edited By City Big News Staff.