ಕಾಂಗ್ರೆಸ್ ಮತ್ತು ಜೆಡಿಎಸ್ ನ ಕೆಲ ಶಾಸಕರು ಮಂತ್ರಿ ಸ್ಥಾನಕ್ಕೆ ಸಹಜವಾಗಿಯೇ ಬೇಡಿಕೆ ಇಟ್ಟಿದ್ದಾರೆ.
ಉಪ ಮುಖ್ಯಮಂತ್ರಿ ಹುದ್ದೆಯನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲು ಈಗಾಗಲೇ ಜೆಡಿಎಸ್ ನಿರ್ಧರಿಸಿದೆ. ಇನ್ನು ಕಾಂಗ್ರೆಸ್ ನಿಂದ ಉಪ ಮುಖ್ಯಮಂತ್ರಿ ಹುದ್ದೆಗೇರಲು ನಾಯಕರುಗಳ ದಂಡೇ ಸಿದ್ಧವಾಗಿ ಕಾಯುತ್ತಿದೆ. ಈಗಾಗಲೇ ದೊಡ್ಡ ಮಟ್ಟದಲ್ಲಿ ಲಾಬಿಯೂ ನಡೆಯುತ್ತಿದೆ. ಕೆಪಿಸಿಸಿ ರಾಜ್ಯಾಧ್ಯಕ್ಷರಾಗಿರುವ ಜಿ ಪರಮೇಶ್ವರ್ ಅವರು ಕರ್ನಾಟಕದ ಉಪ ಮುಖ್ಯಮಂತ್ರಿಯಾಗಿ ಆಯ್ಕೆಯಾಗುತ್ತಾರೆ ಎಂಬ ಸುದ್ದಿ ಹರಡಿತ್ತು.

ದಲಿತ ಸಮುದಾಯದ ವ್ಯಕ್ತಿಯೋರ್ವರಿಗೆ ಕರ್ನಾಟಕದ ಪ್ರಮುಖ ಹುದ್ದೆಯನ್ನು ನೀಡಬೇಕೆಂಬ ಕೂಗು ಕೇಳಿಬಂದಿತ್ತು. ಆ ಕಾರಣದಿಂದ ಕಾಂಗ್ರೆಸ್ ಪರಮೇಶ್ವರ್ ಅವರನ್ನು ಉಪ ಮುಖ್ಯಮಂತ್ರಿ ಹುದ್ದೆಗೆ ಸೂಚಿಸಿತ್ತು. ಆದರೆ ಇದೀಗ ಬದಲಾದ ಸನ್ನಿವೇಶದಲ್ಲಿ ಪರಮೇಶ್ವರ್ ಅವರ ಜೊತೆ ಜೊತೆಗೆ ಹಲವು ಕಾಂಗ್ರೆಸ್ ನಾಯಕರ ಹೆಸರುಗಳು ಕೇಳಿ ಬರುತ್ತಿದ್ದು, ಭಿನ್ನಮತ ಸ್ಫೋಟಗೊಳ್ಳುವ ನಿರೀಕ್ಷೆಯಿದೆ.

ಒಕ್ಕಲಿಗ ಸಮುದಾಯದ ಪ್ರಬಲ ನಾಯಕ ಡಿ ಕೆ ಶಿವಕುಮಾರ್ ಅವರು ಕೂಡ ಇದೀಗ ಉಪ ಮುಖ್ಯಮಂತ್ರಿ ಹುದ್ದೆಯ ರೇಸ್ ನಲ್ಲಿದ್ದಾರೆ. ಇನ್ನು ವೀರಶೈವ-ಲಿಂಗಾಯತರು ತಮ್ಮ ಸಮುದಾಯಕ್ಕೆ ಉಪ ಮುಖ್ಯಮಂತ್ರಿ ಹುದ್ದೆ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.ಕಾಂಗ್ರೆಸ್ ನ ಹಿರಿಯ ನಾಯಕರಾಗಿರುವ ಶಾಮನೂರು ಶಿವಶಂಕರಪ್ಪನವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕೆಂದು ಆಗ್ರಹಿಸಿದ್ದಾರೆ‌. ಇನ್ನು ಉತ್ತರ ಕರ್ನಾಟಕದ ವ್ಯಕ್ತಿಯೊಬ್ಬರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಿ ಎಂದು ಉತ್ತರ ಕರ್ನಾಟಕದ ಶಾಸಕರುಗಳು ಕೂಡ ಒತ್ತಡ ಹೇರುತ್ತಿದ್ದಾರೆ.

ಮುಸ್ಲಿಂ ಸಮುದಾಯದ ವ್ಯಕ್ತಿಯೋರ್ವರನ್ನು ಉಪಮುಖ್ಯಮಂತ್ರಿ ಮಾಡಿ ಎಂಬ ಕೂಗು ಸಹ ಕೇಳಿಬಂದಿದೆ. ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್ ಡಿ ದೇವೇಗೌಡ ಹಾಗೂ ಸೋನಿಯಾ ಗಾಂಧಿ ಅವರು ಕೂಡ ಈ ಕುರಿತು ಚರ್ಚಿಸಿದ್ದಾರೆ. ಅಧಿಕೃತವಾಗಿ ಯಾರಿಗೆ ಉಪಮುಖ್ಯಮಂತ್ರಿ ಹುದ್ದೆ ದೊರೆಯುವುದು ಎಂಬುದನ್ನು ಕಾದು ನೋಡಬೇಕಿದೆ.ಲಿಂಗಾಯತ ಧರ್ಮದ ಪರವಾಗಿ ನಿಂತು ಸಮುದಾಯಕ್ಕೆ ಅಪಮಾನ ಗೈದಿದ್ದ ಎಂ ಬಿ ಪಾಟೀಲರಿಗೆ ಯಾವ ಕಾರಣಕ್ಕೂ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬಾರದು ಎಂದು ಶಾಮನೂರು ಶಿವಶಂಕರಪ್ಪ ಬಣ ಒತ್ತಡ ಹೇರುತ್ತಿದೆ ಎನ್ನಲಾಗಿದೆ.

ಒಟ್ಟಾರೆ ಸಮ್ಮಿಶ್ರ ಸರ್ಕಾರ ಆರಂಭವಾಗುವುದಕ್ಕೂ ಮುನ್ನವೇ ಭಿನ್ನಾಭಿಪ್ರಾಯಗಳ ಸರಮಾಲೆ ಕಂಡು ಬರುತ್ತಿದ್ದು ಸರ್ಕಾರ ರಚನೆಗೂ ಮುನ್ನವೇ ಪಕ್ಷಗಳ ಒಳಗಿನ ಭಿನ್ನಮತ ಹೊರಬರುತ್ತಿದೆ.ಆದರೆ ಕುಮಾರಸ್ವಾಮಿ ಅವರಿಗೆ ಈ ಎಲ್ಲಾ ಭಿನ್ನಮತಗಳನ್ನು ಬಗೆಹರಿಸುವುದು ಕಷ್ಟದ ಕೆಲಸವೇನೂ ಅಲ್ಲ.ಎಲ್ಲಾ ಪಕ್ಷಗಳಲ್ಲಿ ಸರ್ಕಾರ ರಲ್ಲಿ ರಚನೆ ವೇಳೆ ಈ ಗೊಂದಲಗಳು ಸಹಜ ಎನ್ನುವುದು ರಾಜಕೀಯ ವಿಮರ್ಷಕರ ಅಭಿಪ್ರಾಯ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here