Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮಣಿಪುರ ಘಟನೆಯಿಂದ ನನಗೆ ತೀವ್ರ ನೋವಾಗಿದೆ, ಇಡೀ ದೇಶಕ್ಕೆ ಇದು ಅವಮಾನ, ತಪ್ಪಿತಸ್ಥರನ್ನ ಸುಮನ್ನೇ ಬಿಡೋಲ್ಲ ; ಪ್ರಧಾನಿ ಮೋದಿ ಫಸ್ಟ್ ರಿಯಾಕ್ಷನ್

ಹೊಸದಿಲ್ಲಿ: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮೌನ ಮುರಿದಿದ್ದಾರೆ. ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ನಡೆಸಿದ ಆಘಾತಕಾರಿ ವಿಡಿಯೋ ವಿಚಾರದಲ್ಲಿ ತಮ್ಮ ಹೃದಯ ನೋವಿನಿಂದ ತುಂಬಿಕೊಂಡಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಮಣಿಪುರದ ಹೆಣ್ಣುಮಕ್ಕಳಿಗೆ ಆಗಿರುವುದನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ. ಈ ಘಟನೆಯು ದೇಶಕ್ಕೆ ಅವಮಾನಕರ. ತಪ್ಪಿತಸ್ಥರನ್ನು ಸುಮ್ಮನೆ ಬಿಡುವುದಿಲ್ಲ” ಎಂದು ಸಂಸತ್‌ನ ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನ ಸುದ್ದಿಗಾರರ ಮುಂದೆ ಹೇಳಿಕೆ ನೀಡಿದರು.

ಮಣಿಪುರದ ಘಟನೆಯು ಯಾವುದೇ ಯೋಗ್ಯ ಸಮಾಜದಕ್ಕೆ ನಾಚಿಕೆಗೇಡಿನ ಸಂಗತಿ. ಪ್ರಜಾಪ್ರಭುತ್ವದ ಈ ದೇಗುಲದ ಪಕ್ಕದಲ್ಲಿ ನಿಂತಿರುವ ನನ್ನ ಹೃದಯವು ನೋವು ಹಾಗೂ ಆಕ್ರೋಶದಿಂದ ತುಂಬಿಕೊಂಡಿದೆ. ಮಣಿಪುರದ ಘಟನೆಯು ಯಾವುದೇ ನಾಗರಿಕ ಸಮಾಜಕ್ಕೆ ಅವಮಾನಕರ” ಎಂದು ಮಹಿಳೆಯರನ್ನು ಹೀನಾಯವಾಗಿ ನಡೆಸಿಕೊಂಡ ಘಟನೆಗೆ ಪ್ರತಿಕ್ರಿಯೆ ನೀಡಿದರು. ಅತ್ಯಾಚಾರಿಗಳನ್ನು ಬಿಡುವುದಿಲ್ಲ. ಮಹಿಳೆಯರ ರಕ್ಷಣೆ ವಿಚಾರದಲ್ಲಿ ನಾವು ರಾಜಕೀಯವನ್ನು ಮೀರಿ ಬೆಳೆಯಬೇಕು ಎಂದು ಹೇಳಿದರು.

ಯಾವುದೇ ತಪ್ಪಿತಸ್ಥರನ್ನು ಬಿಡುವುದಿಲ್ಲ ಎಂದು ನಾನು ಈ ದೇಶಕ್ಕೆ ಭರವಸೆ ನೀಡುತ್ತೇನೆ. ಕಾನೂನು ತನ್ನ ವ್ಯಾಪ್ತಿಯಲ್ಲಿನ ಎಲ್ಲಾ ಕ್ರಮಗಳನ್ನೂ ತೆಗೆದುಕೊಳ್ಳಲಿದೆ” ಎಂದು ಮೋದಿ ತಿಳಿಸಿದರು.

ರಾಜಸ್ಥಾನ, ಮಣಿಪುರ ಅಥವಾ ಛತ್ತೀಸಗಡವಿರಲಿ, ನಮ್ಮ ಎಲ್ಲಾ ಮಹಿಳೆಯರನ್ನು ಕಾಪಾಡುವಂತೆ ಎಲ್ಲಾ ಮುಖ್ಯಮಂತ್ರಿಗಳಿಗೂ ನಾನು ಮನವಿ ಮಾಡುತ್ತೇನೆ. ಮಹಿಳೆಯರನ್ನು ರಕ್ಷಿಸಲು ನಾವು ರಾಜಕೀಯ ಮೀರಿ ಏಳಬೇಕು” ಎಂದು ಹೇಳಿದರು.

ಮಣಿಪುರದಲ್ಲಿ ಇಬ್ಬರು ಆದಿವಾಸಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ನಡೆಸಿದ್ದ ಎರಡು ತಿಂಗಳ ಹಿಂದಿನ ಘಟನೆಯ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ. ಇದು ದೇಶಾದ್ಯಂತ ಆಕ್ರೋಶಕ್ಕೆ ಗುರಿಯಾಗಿದೆ. ಮೇ 4ರಂದು ಈ ಘಟನೆ ನಡೆದಿತ್ತು ಎನ್ನಲಾಗಿದೆ. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ನಗ್ನರಾಗಿ ಮೆರವಣಿಗೆ ನಡೆಸಿ ಹೊಲಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು ವರದಿಯಾಗಿದೆ. ಘಟನೆ ನಡೆದು 77 ದಿನಗಳ ನಂತರ ವಿಡಿಯೋ ವೈರಲ್ ಆಗಿದ್ದು, ಮರುದಿನ ಒಬ್ಬಾತನನ್ನು ಬಂಧಿಸಲಾಗಿದೆ.