ಕೊರೊನಾ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ, ಮಾದ್ಯಮಗಳ ಮೂಲಕ ಜನರಿಗೆ ಅದರ ಬಗ್ಗೆ ಅರಿವು ಮೂಡಿಸುತ್ತಿದ್ದರೂ ಕೂಡಾ ಜನರಲ್ಲಿ ಇನ್ನೂ ಜಾಗೃತಿ ಮೂಡುತ್ತಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿ ರಾಯಚೂರಿನಲ್ಲಿ ಘಟನೆಯೊಂದು ನಡೆದಿದೆ. ಯಾರೋ ಅನಾಮಿಕ ಅಜ್ಜಿಯೊಬ್ಬಳು ದೇವರು ಮೈಮೇಲೆ ಬಂದಿದೆ ಎಂದು, ಕೊರೊನಾ ವೈರಸ್ ಶಾಂತಿಯಾಗಬೇಕಾದರೆ ಮಾರಮ್ಮನಿಗೆ ಮೊಸರು ನೀಡಬೇಕಂತೆ ಎಂದು ಹೇಳಿದ ಮಾತನ್ನು ಕೇಳಿದ ಮಹಿಳೆಯರು ಮೊಸರಿನೊಂದಿಗೆ ದೇವಾಲಯಕ್ಕೆ ಬಂದಿರುವ ಘಟನೆ ಪೋಲಿಸರಿಗೆ ಆಶ್ಚರ್ಯವನ್ನು ಉಂಟು ಮಾಡಿದೆ.

 

ಅಜ್ಜಿಯು ಹೇಳಿದ ಮಾತನ್ನು ನಂಬಿ ಮಹಿಳೆಯರು ಮೂಢರಂತೆ, ಕೊರೊನಾ ತೀವ್ರತೆಯ ಅರಿವು ಇಲ್ಲದಂತೆ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಮೊಸರನ್ನು ತೆಗೆದುಕೊಂಡು ಗುಂಪು ಗುಂಪಾಗಿ ದೇವಾಲಯಕ್ಕೆ ಪೂಜೆ ಮಾಡಿಸಲು ಆಗಮಿಸಿದ್ದಾರೆ. ದೇವಾಲಯಕ್ಕೆ ಬಂದ ಮಹಿಳೆಯರು ಹಾಗೂ ಇತರೆ ಜನರ ಗುಂಪನ್ನು ಚದುರಿಸಿ ಅವರನ್ನು ಮನೆಗಳಿಗೆ ಕಳುಹಿಸಲು ಪೋಲಿಸರು ಸಾಕಷ್ಟು ಹರಸಾಹಸವನ್ನು ಮಾಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೊನೆಗೂ ಜನರನ್ನು ಅಲ್ಲಿಂದ ಚದುರಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ.

ಇದೇ ರೀತಿ ಕೆಲವು ದಿನಗಳ ಹಿಂದೆ ಧರ್ಮಸ್ಥಳದ ದೇಗುಲದ ನಂದಾದೀಪ ಆರಿದೆ ಎಂಬ ವದಂತಿ ಕೂಡಾ ಹರಡಿ, ಇದನ್ನು ನಂಬಿದ ಜನರು ರಾತ್ರೋ ರಾತ್ರಿ ಮನೆಗಳನ್ನು ಸ್ವಚ್ಛ ಮಾಡಿ ದೀಪ ಬೆಳಗಿದ ಘಟನೆ ನಾವಿಲ್ಲಿ ಸ್ಮರಿಸಬಹುದು. ಅನಂತರ ಧರ್ಮಸ್ಥಳದ ಧರ್ಮಾಧಿಕಾರಿಗಳು ಇದರ ಬಗ್ಗೆ ಸ್ಪಷ್ಟನೆ ನೀಡಿ ವದಂತಿಗಳಿಗೆ ತೆರೆ ಎಳೆದಿದ್ದರು. ಜನರಲ್ಲಿ ಮೌಢ್ಯಗಳ ಮೇಲಿನ ನಂಬಿಕೆ ಇಂತಹ ಹುಚ್ಚಾಟ ನಡೆಸುವ ಕಿಡಿಗೇಡಿಗಳ ಪಾಲಿಗೆ ಪುಂಡಾಟವಾಗಿದೆ. ಜನರು ಕೂಡಾ ಹಿಂದು ಮುಂದು ಆಲೋಚಿಸದೆ ಅಪಾಯವನ್ನು ತಂದೊಡ್ಡುತ್ತಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here