ಕೊರೊನಾ ವೈರಸ್ ದಾಳಿಗೆ ಮೃತಪಟ್ಟವರ ಸಂಖ್ಯೆ ೩೦೫ ಕ್ಕೆ ಏರಿದೆ. ಚೈನಾದಿಂದ ಹೊರಗೂ ಮೊತ್ತಮೊದಲ ಸಾವು ಅಧಿಕೃತವಾಗಿ ದಾಖಲಾಗಿದ್ದು, ಹಲವು ದೇಶಗಳಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ. ಹುಬೈ ಪ್ರಾಂತ್ಯದ ರಾಜಧಾನಿ ವುಹಾನ್‌ನಲ್ಲಿ ಕಾಣಿಸಿಕೊಂಡ ಈ ಸೋಂಕು ಚೀನಾ ದೇಶಾದ್ಯಂತ ಆವರಿಸಿಕೊಂಡಿದೆ. ಭಾರತ, ಅಮೆರಿಕಾ, ಇಂಗ್ಲೆಂಡ್ ಸಹಿತ ವಿಶ್ವದಾದ್ಯಂತ ಸದ್ದಿಲ್ಲದೆ ಕೊರೊನಾ ಹರಡುತ್ತಿದ್ದು ಇದುವರೆಗೂ ೧೪,೫೬೨ ಸೋಂಕಿನ ಪ್ರಕರಣಗಳು ವರದಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಕೊರೋನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಭಾರತ ತಾತ್ಕಾಲಿಕವಾಗಿ ಚೈನಾಗೆ ತೆರಳುವ ಪ್ರವಾಸಿಗರ ಇ-ವೀಸಾ ಸೌಲಭ್ಯ ರದ್ದುಪಡಿಸಿದೆ. ವುಹಾನ್‌ನಿಂದ ಭಾರತೀಯರನ್ನು ಮರಳಿ ಕರೆತರಲು ನಿಯೋಜಿಸಲಾದ ವಿಶೇಷ ವಿಮಾನ ಭಾನುವಾರ ೩೨೩ ಜನರ ಎರಡನೇ ಗುಂಪನ್ನು ಸ್ವದೇಶಕ್ಕೆ ಕರೆತಂದಿದೆ. ಶನಿವಾರದಿಂದ ಒಟ್ಟಾರೆ ೬೫೪ ಮಂದಿ ಭಾರತೀಯರು ಸ್ವದೇಶಕ್ಕೆ ವಾಪಸಾಗಿದ್ದಾರೆ. ಭಾರತ ಕರೆತಂದಿರುವ ಸೋಂಕು ಪೀಡಿತರ ಪೈಕಿ ೭ ಮಂದಿ ಮಾಲ್ಡೀವ್ಸ್ ನಿವಾಸಿಗಳೂ ಸೇರಿದ್ದಾರೆ. ಭಾರತ ಸರ್ಕಾರ ಇದಕ್ಕಾಗಿಯೇ ಬೋಯಿಂಗ್ ೭೪೭ ವಿಮಾನವನ್ನು ನಿಯೋಜಿಸಿದೆ.
ಭಾರತಕ್ಕೆ ಮರಳಿರುವ ಪ್ರವಾಸಿಗರಲ್ಲಿ ಕೇರಳದ ಇಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ಧೃಢಪಟ್ಟಿದೆ. ಜನವರಿ ೧ರ ನಂತರ ಚೈನಾಗೆ ಭೇಟಿ ನೀಡಿದ ಪ್ರವಾಸಿಗರು ಸಮೀಪದ ಆರೋಗ್ಯ ಕೇಂದ್ರಗಳಲ್ಲಿ ತಪಾಸಣೆಗೊಳಪಡಬೇಕೆಂದು ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ.

ಚೀನಾ ಬ್ಯಾಂಕ್ ಭಾರೀ ನೆರವು
ಕೊರೊನಾ ವೈರಸ್ ದಾಳಿಯಿಂದ ನರಳುತ್ತಿರುವ ಚೀನಾ ದೇಶದಲ್ಲೀಗ ಹಕ್ಕಿಜ್ವರದ ಭೀತಿಯೂ ಎದುರಾಗಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ದೇಶದೆಲ್ಲೆಡೆ ಆರ್ಥಿಕ ಸಂಕಷ್ಟದ ಆತಂಕವೂ ಉಂಟಾಗಿದ್ದು, ಆರ್ಥಿಕ ಕುಸಿತ ತಡೆಯಲು ಪೀಪಲ್ ಬ್ಯಾಂಕ್ ಆಫ್ ಚೈನಾ (ಪಿಬಿಒಸಿ) ೧೭೩ ದಶಲಕ್ಷ ಡಾಲರ್‌ಗಳ ನೆರವು ಪ್ರಕಟಿಸಿದೆ.
ಸಾಂಕ್ರಾಮಿಕ ರೋಗದ ವಿರುದ್ದ ವೈದ್ಯಕೀಯ ನೆರವು ನೀಡುವ ಸಂಸ್ಥೆಗಳು ಹಾಗೂ ಉದ್ಯಮಗಳಿಗೆ ಸಾಲ ಹಾಗೂ ಆರ್ಥಿಕ ಬೆಂಬಲ ನೀಡುವ ಹಲವಾರು ಕ್ರಮಗಳನ್ನು ಬ್ಯಾಂಕ್ ಘೋಷಿಸಿದೆ. ಜೊತೆಗೆ ಇತರೆ ಹಣಕಾಸು ಸಂಸ್ಥೆಗಳಿಗೂ ಆಸ್ಪತ್ರೆ ಮತ್ತು ವೈದ್ಯಕೀಯ ಸಂಸ್ಥೆಗಳಿಗೆ ಅಗತ್ಯವಾದ ಆರ್ಥಿಕ ಸಂಪನ್ಮೂಲಗಳನ್ನು ಒದಗಿಸಲು ಒತ್ತಾಯಿಸಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here