ಕೊರೊನಾ ಸೋಂಕಿತರಿಂದ ಚಿಕಿತ್ಸೆಯ ಸಲುವಾಗಿ ಹೆಚ್ಚುವರಿ ಹಣವನ್ನು ಪಡೆದಿದ್ದ ಖಾಸಗಿ ಆಸ್ಪತ್ರೆಯೊಂದರ ಮೇಲೆ ಹಿರಿಯ ಐಎಎಸ್ ಅಧಿಕಾರಿ ಹರ್ಷ ಗುಪ್ತ ಮತ್ತು ಐಜಿಪಿ ಡಿ.ರೂಪಾ ಅವರ ತಂಡ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದು ತಾನು ಜನರಿಂದ ಪಡೆದಿದ್ದ ಹೆಚ್ಚುವರಿ ಹಣ ಸುಮಾರು 24 ಲಕ್ಷ ರೂಪಾಯಿಗಳನ್ನು ಹಿಂದಿರುಗಿಸಿರುವ ಘಟನೆ ನಡೆದಿದೆ.‌ ತಮ್ಮ ತಂಡಕ್ಕೆ ಹೊಣೆಗಾರಿಕೆಯ ವಹಿಸಿರುವ ಮೂರು ಆಸ್ಪತ್ರೆ ಗಳಲ್ಲಿ ಒಂದರಲ್ಲಿ ಈ ಘಟನೆ ನಡೆದಿದ್ದು, ಸರ್ಕಾರ ನಿಗಧಿ ಪಡಿಸಿರುವುದಕ್ಕಿಂತ ಹೆಚ್ಚಿನ ಹಣ ಪಡೆದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಆಸ್ಪತ್ರೆಗೆ ಎಚ್ಚರಿಕೆ ನೀಡಿರುವುದಾಗಿ ರೂಪಾ ಅವರು ಮಾದ್ಯಮಗಳಿಗೆ ತಿಳಿಸಿದ್ದಾರೆ.

 

ಆಸ್ಪತ್ರೆಯಲ್ಲಿ ಹಣ ವಸೂಲಿ ಬಗ್ಗೆ ಹಲವು ದೂರುಗಳು ಬಂದಿದ್ದವು. ಕೊರೊನಾ ಚಿಕಿತ್ಸೆಗೆ ದಾಖಲಿಸಿಕೊಳ್ಳುವ ಮೊದಲೇ ಮುಂಗಡವಾಗಿ 1 ರಿಂದ 2 ಲಕ್ಷ ಹಣವನ್ನು ಪಡೆಯಲಾಗುತ್ತಿತ್ತು ಎನ್ನಲಾಗಿದೆ. ಸಂಪೂರ್ಣ ಚಿಕಿತ್ಸೆಗೆ ನಾಲ್ಕರಿಂದ ಐದು ಲಕ್ಷ ಖರ್ಚಾಗುವುದೆಂದು ಆಸ್ಪತ್ರೆ ತಿಳಿಸಿದ್ದರಿಂದ ಅನೇಕರು ಸಂಕಷ್ಟಕ್ಕೆ ಗುರಿಯಾಗಿದ್ದರು ಎನ್ನಲಾಗಿದೆ‌. ‌ಈ ವಿಷಯ ತಿಳಿದು ಆಸ್ಪತ್ರೆಗೆ ಹೋಗಿ ಪರಿಶೀಲನೆ ನಡೆಸಿದಾಗ ಹೆಚ್ಚುವರಿ ಹಣ ಪಡೆದ ದಾಖಲೆಗಳು ಪತ್ತೆಯಾದವು ಎಂದು ರೂಪಾ ಅವರು ತಿಳಿಸಿದ್ದಾರೆ.‌

ಕೂಡಲೇ ಆಸ್ಪತ್ರೆಗೆ ಸರ್ಕಾರ ನಿಗಧಿ ಪಡಿಸಿದ ವೆಚ್ಚದಲ್ಲಿ ಚಿಕಿತ್ಸೆ ನೀಡಬೇಕು, ಹೆಚ್ಚವರಿ ಹಣವನ್ನು ಪಡೆದವರಿಂದ ಹಿಂದಿರುಗಿಸಬೇಕು ಇಲ್ಲವಾದಲ್ಲಿ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ ನಂತರ ಎಚ್ಚೆತ್ತುಕೊಂಡ‌ ಆಸ್ಪತ್ರೆ ತಾನು ಮುಂಗಡವಾಗಿ ಪಡೆದಿದ್ದ ಹೆಚ್ಚುವರಿ ಹಣವನ್ನು 22 ಜನ ಕೊರೊನಾ ಚಿಕಿತ್ಸೆ ಒಡೆದ ಸೋಂಕಿತರಿಗೆ ವಾಪಸ್ಸು ನೀಡಿದೆ ಎನ್ನಲಾಗಿದೆ. ಕೊರೊನಾ ಸೋಂಕಿತರನ್ನು ಸುಲಿಗೆ ಮಾಡುತ್ತಿದ್ದ ಖಾಸಗಿ ಆಸ್ಪತ್ರೆಗೆ ಖಡಕ್ ಎಚ್ಚರಿಕೆ ನೀಡಿದ ರೂಪಾ ಹಾಗೂ ಅವರ ತಂಡಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here