ಹಸುವನ್ನು ನಾವು ಗೋಮಾತೆ ಎಂದೇ ಪೂಜ್ಯ ಭಾವದಿಂದ ಕಾಣುತ್ತೇವೆ. ಗೋವನ್ನು ಕಾಮಧೇನು, ನಂದಿನಿ, ಸುರಭಿ ಹೀಗೆ ಹಲವು ದೈವಿಕ ರೂಪಗಳಲ್ಲಿ ನಾವು ಆರಾಧನೆಯನ್ನು ಕೂಡಾ ಮಾಡುತ್ತೇವೆ. ಇಂತಹ ಶ್ರೇಷ್ಠ ಹಾಗೂ ಸಾಧು ಜೀವಿಯಾದ ಹಸು ಕೂಡಾ ತನ್ನ ಶ್ರೇಷ್ಠತೆ ಹಾಗೂ ದಯಾಗುಣವನ್ನು ಮೆರೆಯುವ ಅಪರೂಪದ ಘಟನೆಗಳು ಆಗಾಗ ನಡೆದು, ನಮಗೆ ಅವುಗಳ ಬಗ್ಗೆ ಮತ್ತಷ್ಟು ಗೌರವ ಬರುವಂತೆ ಮಾಡುತ್ತವೆ. ಈಗ ಅಂತಹುದೇ ಒಂದು ಅಪರೂಪದ ಹಾಗೂ ಹಸುವಿನಲ್ಲಿರುವ ಮಾತೃ ಹೃದಯದ ಗುಣವನ್ನು ನೋಡುವ ಘಟನೆಯೊಂದು ರಾಜಸ್ಥಾನದಲ್ಲಿ ನಡೆದಿದ್ದು, ಎಲ್ಲರೂ ಗೋಮಾತೆಗೆ ಕೈ ಎತ್ತಿ ಮುಗಿಯುವಂತೆ ಮಾಡಿದೆ.

ಎಲ್ಲೆಲ್ಲೂ ಬೇಸಿಗೆಯ ಬಿಸಿಯ ಅನುಭವ ಮಾನವರಿಂದ ಹಿಡಿದು ಪಶು ಪಕ್ಷಿಗಳನ್ನು ಕೂಡಾ ಈ ಬಾರಿ ಕಂಗೆಡಿಸಿದೆ. ಪಶುಗಳು ಹಾಗೂ ಪಕ್ಷಿಗಳಿಗೆ ಕುಡಿಯುವ ನೀರು ಸಿಗದೆ ಕಂಗೆಟ್ಟು ಹೋಗಿವೆ. ಇಂತಹ ಗಂಭೀರ ಸ್ಥಿತಿಯಲ್ಲಿ ರಾಜಸ್ಥಾನದ ಸಿರೋಹಿ ಜಿಲ್ಲೆಯ ಜಬೇಶ್ವರ ಮಹಾದೇವ ಆಲಯದ ಪ್ರಾಂಗಣದಲ್ಲಿ ವಾಸಿಸುವ ಹಸುವೊಂದು ಮಾಡುತ್ತಿರುವ ಕಾರ್ಯ, ಮನುಷ್ಯರಿಗೆ ಒಂದು ಮಾನವೀಯ ಮೌಲ್ಯ ಬೋಧಿಸುವಂತಿದೆ. ಏನು ಆ ಹಸು ಅಂತಹ ಪರಮೋಚ್ಚ ಕಾರ್ಯ ಮಾಡುತ್ತಿದೆ ಎಂದು ಹಲವರ ಪ್ರಶ್ನೆಯಾದರೆ, ಈ ಹಸು ಬಾಯಾರಿಕೆಯಿಂದ ಕಂಗಾಲಾದ, ಹಸಿವಿನಿಂದ ಕಂಗೆಟ್ಟ ಕೋತಿಗಳಿಗೆ ತಾನೇ ತಾಯಿಯಾಗಿದೆ.

ಈ ಹಸು ಹಸಿದ ಕೋತಿಗಳಿಗೆ ಹಾಲುಣಿಸುವ ಮೂಲಕ ಜೀವ ವೈವಿಧ್ಯತೆಯ ಹೊರತಾಗಿಯೂ ಪರಸ್ಪರ ಕಷ್ಟ ಬಂದಾಗ ನೆರವಾಗಬೇಕೆಂಬ ನೀತಿಯನ್ನು ಸಾರಿ ಹೇಳಿದೆ. ಆಲಯ ಪ್ರಾಂಗಣದಲ್ಲಿ ಇರುವ ಈ ಹಸುವಿಗೆ ಕೋತಿಗಳ ಮೇಲಿರುವ ಕಾಳಜಿ ನೋಡಿ ಎಲ್ಲರೂ ಅಚ್ಚರಿ ಪಡುವಂತಾಗಿದೆ. ಇದೊಂದು ವಿಸ್ಮಯವೇ ಎನ್ನುತ್ತಾರೆ ಹಲವರು. ಆದರೆ ಸಂಕಷ್ಟ ಎಂಬುದು ಹೇಗೆ ಜೀವಿ ಜೀವಿಗಳನ್ನು ಬೆಸೆಯುತ್ತದೆ ಎಂದು ಈ ಮೂಕ ಪ್ರಾಣಿ ಬುದ್ಧಿವಂತ ಮನುಷ್ಯನಿಗೆ ತಿಳಿಸಿಕೊಟ್ಟಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here