ಅದೊಂದು ಭಿನ್ನ ಅನ್ನ ದಾಸೋಹ. ಅಲ್ಲಿ ಬಗೆಬಗೆಯ ಭಕ್ಷ್ಯಗಳಿದ್ದವು. ಅವೆಲ್ಲವುಗಳ ರುಚಿ ಸವಿಯಲು ಬಂದವರೊಳಗೆ ಶ್ರೀಕ್ಷೇತ್ರದ ಸಾನಿಧ್ಯದಲ್ಲಿ ಪ್ರಸಾದ ಸ್ವೀಕರಿಸಿದ ಧನ್ಯತಾ ಭಾವ. ಧಾರ್ಮಿಕ ಉತ್ಸವದಲ್ಲಿ ಪಾಲ್ಗೊಂಡ ಖುಷಿಯ ಜೊತೆಗೆ ಪ್ರಸಾದಫಲ ಪಡೆದ ಸಂಭ್ರಮ.

ಲಕ್ಷದೀಪೋತ್ಸವದ ಕೊನೆಯ ದಿನ ಮಂಗಳವಾರ ವಿವಿಧ ಮಳಿಗೆಗಳಲ್ಲಿ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರೇ ಸಿದ್ಧಪಡಿಸಿದ ತರಹೇವಾರಿ ತಿನಿಸುಗಳು ಈ ಅನ್ನದಾಸೋಹದ ಕಳೆ ಹೆಚ್ಚಿಸಿದ್ದವು. ಹೋಳಿಗೆ, ಜಿಲೇಬಿ, ಲಡ್ಡು, ಮೈಸೂರು ಪಾಕ್, ರಾಗಿ ಮುದ್ದೆ, ರೊಟ್ಟಿ, ಪಲಾವ್, ಸೆಟ್ ದೋಸೆ, ಪೂರಿ, ಚಿತ್ರಾನ್ನ, ಮೊಸರನ್ನ, ಅನ್ನ, ತಿಳಿಸಾರು ಲಭ್ಯವಿದ್ದವು.
ಶ್ರೀಕ್ಷೇತ್ರ ಧರ್ಮಸ್ಥಳದ ಅನ್ನಪೂರ್ಣ ಭೋಜನಾಲಯದಲ್ಲಿ ಪ್ರತಿನಿತ್ಯ ನಡೆಯುವ ಅನ್ನದಾನಕ್ಕೆ ಅದರದ್ದೇ ಆದ ಮೌಲ್ಯವಿದೆ. ಲಕ್ಷದೀಪೋತ್ಸವದ ಕೊನೆಯ ದಿನದಂದು ಮಾತ್ರ ಈ ವ್ಯವಸ್ಥೆ ಇರುವುದಿಲ್ಲ. ಇದರ ಬದಲು ಈ ಭೋಜನಾಲಯದ ಹಿಂಬದಿಯಲ್ಲಿ ವಿವಿಧೆಡೆಯಿಂದ ಆಗಮಿಸಿದ ಭಕ್ತರು ವಿವಿಧ ಮಳಿಗೆಗಳ ಮೂಲಕ ನಿರ್ವಹಿಸುವ ಅನ್ನದಾಸೋಹಕ್ಕೂ ಶ್ರೀಕ್ಷೇತ್ರದ ಅನ್ನದಾನದಷ್ಟೇ ಮಹತ್ವವಿದೆ.


ಭಕ್ತರ ಕೈಯ್ಯಾರೆ ತಯಾರಿಸುವ ಭೋಜನ ನೆರೆದ ಭಕ್ತಾಭಿಮಾನಿಗಳಿಗೆ ಪ್ರಸಾದ ರೂಪದಲ್ಲಿ ದೊರೆಯುವುದು. ರಾಜ್ಯದ ಬೇರೆ ಬೇರೆ ಊರುಗಳಿಂದ ಬಗೆ ಬಗೆ ಖಾದ್ಯ ತಯಾರಿ ಮಾಡುವ ಜವಬ್ದಾರಿಯನ್ನು ಹಲವು ಸಂಘ-ಸಂಸ್ಥೆಗಳು ವಹಿಸಿಕೊಳ್ಳುತ್ತವೆ. ಹತ್ತು ವರ್ಷಗಳಿಂದ ಈ ವಿಶೇಷ ಅನ್ನದಾನ ಸೇವಾ ರೂಪದಲ್ಲಿ ನಡೆಯುತ್ತಾ ಬಂದಿದೆ.
ಕರ್ನಾಟಕ ರಾಜ್ಯದ ವಿವಿಧ ಖಾದ್ಯಗಳಾದ ಪಲಾವ್, ರೈಸ್‌ಬಾತ್, ಬೋಂಡ, ಇಡ್ಲಿ, ದೋಸೆ, ರಾಗಿಮುದ್ದೆ, ಮೊಸರನ್ನ ಹೀಗೆ ಬಗೆ ಬಗೆಯ ಭೋಜನ ಬಾಯಲ್ಲಿ ನೀರು ತರಿಸುತ್ತವೆ. ಜೊತೆಗೆ ಹೋಳಿಗೆ, ಲಾಡು, ಜಿಲೇಬಿ ಸಿಹಿಖಾದ್ಯಗಳಿರುತ್ತವೆ.ಒಟ್ಟು 16 ಸಂಘಗಳವರು 16 ಕಡೆಗಳಲ್ಲಿ ಆಹಾರ ಸಿದ್ಧಪಡಿಸುತ್ತಾರೆ. ಲಕ್ಷಾಂತರ ಜನರಿಗೆ ಭೋಜನ ತಯಾರಿಸುವುದು ಒಂದು ದಿನದ ಕೆಲಸವಲ್ಲ. ಕೇವಲ ಅಡುಗೆಗೆ ಒಂದು ಪೂರ್ಣ ದಿನ ಬೇಕಾಗುವುದು. ಅಷ್ಟು ಮಾತ್ರವಲ್ಲ, ಈ ಅನ್ನದಾನವು ಸಂಜೆ 6 ಗಂಟೆಯಿಂದ ರಾತ್ರಿ 2 ಗಂಟೆಯ ವರೆಗೂ ನಿರಂತರವಾಗಿ ನಡೆಯುತ್ತದೆ.
ಈ ಅನ್ನದಾಸೋಹ ನಿರ್ವಹಣೆಯ ಹೊಣೆಯೊಂದಿಗೆ ಭಾಗಿಯಾಗಲು ಅದೆಷ್ಟೋ ಸಂಘಗಳವರು ಅಪೇಕ್ಷಿಸುತ್ತಾರೆ. ಆದರೆ ಶ್ರೀ ಕ್ಷೇತ್ರದ ಆಡಳಿತವು ಆಹಾರ ವ್ಯಯವಾಗಬಾರದು ಎಂಬ ಉದ್ದೇಶದಿಂದ ಕೆಲವೇ ಸಂಘಗಳಿಗೆ ಅವಕಾಶ ನೀಡುತ್ತದೆ. ಇದರ ನೋಂದಾವಣೆ ಮೂರು ತಿಂಗಳ ಮೊದಲೇ ನಡೆಯುವಂಥದ್ದು. ಹಾಗೆಯೇ ಭೋಜನ ತಯಾರಿಗೆ ಬೇಕಾಗುವ ಎಲ್ಲಾ ವಸ್ತುಗಳನ್ನೂ ಸಂಘದವರೇ ತಂದು ರುಚಿಯಾದ ಮತ್ತು ಶುಚಿಯಾದ ಆಹಾರ ತಯಾರಿಸುತ್ತಾರೆ. ಸಂಘಗಳ ಸಹಾಯಕ್ಕಾಗಿಯೇ ಶ್ರೀ ಕ್ಷೇತ್ರ ಆಡಳಿತವು 150 ಸಿಬ್ಬಂದಿಗಳನ್ನು ನೇಮಿಸಿದ್ದು, ಅವರಿಗೆ ಸಂಪೂರ್ಣ ಸಹಕಾರವನ್ನು ನೀಡುತ್ತಾರೆ.
ಸ್ವಚ್ಛತೆಯ ಪಾಲನೆ
ಲಕ್ಷಾಂತರ ಜನರು ಅನ್ನ ಸೇವನೆ ಮಾಡಿದರೂ ಶುಚಿತ್ವಕ್ಕೆ ಅಡ್ಡಿಯಾಗದಂತೆ ಆಡಳಿತವು ಗಮನ ಹರಿಸುತ್ತದೆ. ಬಳಸಿದ ತಟ್ಟೆಗಳನ್ನು ಕ್ಷಣದಲ್ಲೇ ಟ್ರ್ಯಾಕ್ಟರ್ ಮೂಲಕ ಸಾಗಿಸುವ ಸೌಲಭ್ಯವಿದ್ದು, ಸ್ವಚ್ಛತೆಗೆ ಕನ್ನಡಿಯಾಗಿತ್ತು.

ವರದಿ: ಸ್ವಾತಿ. ಎಂ. ಪೂಜಾರಿ
ಚಿತ್ರಗಳು: ಶಿವಪ್ರಸಾದ್ ಎಚ್.ಎಸ್.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here