ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರ ಹುಟ್ಟು ಹಬ್ಬದ ದಿನದಂದು ಅಭಿಮಾನಿಗಳಿಂದ ಹಲ್ಲೆಗೊಳಗಾದ ಪೋಲಿಸ್ ಪೇದೆ ಒಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಅವರ ಚಿಕಿತ್ಸೆಗೆ ಹಣ ನೀಡಲು ದರ್ಶನ್ ಅವರ ಪರವಾಗಿ ಕಾರ್ಯಕ್ರಮದ ವ್ಯವಸ್ಥಾಪಕರು ಹಣವನ್ನು ನೀಡಲು ಹೋಗಿದ್ದು ಅದನ್ನು ಪೋಲಿಸ್ ಅಧಿಕಾರಿಗಳು ತಿರಸ್ಕಾರ ಮಾಡಿದ್ದಾರೆ. ರಾಜರಾಜೇಶ್ವರಿ ನಗರದ ಐಡಿಯಲ್ ಲೇಔಟ್ ನಲ್ಲಿ ಇದೇ ತಿಂಗಳ 16 ರಂದು ದರ್ಶನ್ ಅವರ ಹುಟ್ಟು ಹಬ್ಬ ನಡೆದಿತ್ತು. 15 ನೇ ತಾರೀಖಿನ ರಾತ್ರಿಯೇ ಹುಟ್ಟು ಹಬ್ಬಕ್ಕಾಗಿ ಶುಭಾಶಯ ತಿಳಿಸಲು ಅಭಿಮಾನಿಗಳ ದಂಡು ಅಲ್ಲಿ ಸೇರಿತ್ತು.

ಆ ಸಂದರ್ಭದಲ್ಲಿ ಜ್ಞಾನಭಾರತಿ ಠಾಣೆಯ ಪೇದೆ ಡಿ.ಆರ್.ದೇವರಾಜ್ ಅವರ ಮೇಲೆ ದರ್ಶನ್ ಅವರ ಅಭಿಮಾನಿಗಳು ಹಲ್ಲೆ ನಡೆಸಿದ್ದರೆಂದು ಆರೋಪ ಮಾಡಲಾಗಿತ್ತು. ಈ ಸಂಬಂಧ ದೇವರಾಜ್ ಅವರು ದೂರು ದಾಖಲು ಮಾಡಿದ್ದರು. ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿತ್ತು. ಹಲ್ಲೆಗೊಳಗಾದ ಪೇದೆಯವರಿಗೆ ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಲಾಗಿದೆ. ಅವರು ಚಿಕಿತ್ಸಾ ವೆಚ್ಚ ಆರೋಗ್ಯ ಭಾಗ್ಯ ಅಡಿಯಲ್ಲಿ ಬರುವುದಿಲ್ಲ ಎಂದು, ವಿಶೇಷ ಪ್ರಕರಣ ಎಂದು ಪರಿಗಣಿಸಿ ಹಿರಿಯ ಅಧಿಕಾರಿಗಳೇ ಆಸ್ಪತ್ರೆಯ ವೆಚ್ಚವನ್ನು ಭರಿಸಿದ್ದಾರೆ.

ಪೋಲಿಸ್ ಇಲಾಖೆ ಎರಡು ಲಕ್ಷ ಈಗಾಗಲೇ ಚಿಕಿತ್ಸೆಗೆ ನೀಡಿದ್ದು, ಈ ನಡುವೆ ದರ್ಶನ್ ಅವರ ಕಾರ್ಯಕ್ರಮ ವ್ಯವಸ್ಥಾಪಕರು ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಎರಡು ಲಕ್ಷ ನೀಡುವುದಾಗಿ ಹೇಳಿದ್ದಾರೆ. ಆದರೆ ಅವರನ್ನು ತರಾಟೆಗೆ ತೆಗೆದುಕೊಂಡ ಪೋಲಿಸರು ನಿಮ್ಮ ಬೇಜವಾಬ್ದಾರಿತನದಿಂದ ಇಂತಹ ಅವಘಡ ನಡೆದಿದೆ ಎಂದೂ, ಹಣ ಕೊಟ್ಟರೆ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಹಣದ ಅವಶ್ಯಕತೆ ಇಲ್ಲ ಎಂದಿರುವ ಪೋಲಿಸರು ಕಾನೂನನ್ನು ಕ್ರಮ ಎದುರಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಡಿಸಿಪಿ ರಮೇಶ್ ಬಾನೋತ್ ಅವರು ಪ್ರಕರಣದ ಬಗ್ಗೆ ಹೆಚ್ಚು ಗಮನ ವಹಿಸಿದ್ದಾರೆ ಎನ್ನಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here