ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಅತಿ ಹೆಚ್ಚು ಗಮನ ಸೆಳೆಯುವುದೆಂದರೆ ಅದು ಗಜ ಪಡೆಗಳು. ಹೌದು ಮೈಸೂರು ದಸರಾ ಅದ್ದೂರಿಯಾಗಿ ಪೂರ್ಣಗೊಳ್ಳಲು ಕಾರಣವೆಂದರೆ ಅದು ಜಂಬೂಸವಾರಿ. ನಾಡ ದೇವತೆ ಚಾಮುಂಡೇಶ್ವರಿಯನ್ನು ಹೊತ್ತು ಮೆರವಣಿಗೆ ಮೂಲಕ ಹೆಜ್ಜೆ ಮೇಲೆ ಹೆಜ್ಜೆ ಇಡುತ್ತ ಸಾಗುವ ಗಜಪಡೆಗಳಿಂದಲೇ ಮೈಸೂರು ದಸರಾ ವಿಜೃಂಭಣೆಗೊಳ್ಳುತ್ತದೆ.
ಜಂಬೂಸವಾರಿ ಮೆರವಣಿಗೆಯನ್ನು ಯಶಸ್ವಿಯಾಗಿ ನಿಭಾಯಿಸಿದ ದಸರಾ ಗಜಪಡೆ ಇಂದು ನಾಡಿನಿಂದ ಕಾಡಿನತ್ತ ಪ್ರಯಾಣ ಬೆಳೆಸಿವೆ. ಕಾಡಿಗೆ ಹೊರಟ ಆನೆಗಳಿಗೆ ಜಿಲ್ಲಾಡಳಿತದಿಂದ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಬೀಳ್ಕೊಡಲಾಯ್ತು. ಒಲ್ಲದ ಮನಸಿನಲ್ಲೇ ಗಜಪಡೆಗಳು ಕಾಡಿನತ್ತ ಮುಖ ಮಾಡಿದವು. ಮಾವುತರು ಕಾವಾಡಿಗಳ ಕೋರಿಕೆ ಮೇರೆಗೆ ಈ ಬಾರಿ ಅವರಿಗೆ ಹೆಚ್ಚು ಗೌರವಧನ ನೀಡಲಾಗಿದೆ. ಕಳೆದ ವರ್ಷ ತಲಾ ಹತ್ತು ಸಾವಿರ ಗೌರವ ಧನ ನೀಡಲಾಗಿತ್ತು. ಈ ಬಾರಿ 55 ಮಂದಿಗೆ ತಲಾ 15 ಸಾವಿರ ರೂ. ಗೌರವ ಧನ ನೀಡಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಡಾ ಕೆವಿ ರಾಜೇಂದ್ರ ಹೇಳಿದ್ದಾರೆ.
ಸೊಂಡಿಲೆತ್ತಿ ಸಲಾಮು ಹೇಳಿದ ದಸರಾ ಗಜಪಡೆ, ಕುಂಬಳಕಾಯಿ ಆರತಿ ಎತ್ತಿ ಆನೆಗಳಿಗೆ ವಿಶೇಷ ಪೂಜೆ. ಸಲೀಸಾಗಿ ಲಾರಿ ಹತ್ತಿದ ಆನೆಗಳು, ಎಲ್ಲರ ಮುಖದಲ್ಲೂ ಬೇಸರ. ಇದು ಮೈಸೂರು ಅರಮನೆ ಆವರಣದಲ್ಲಿ ಕಂಡು ಬಂದ ದೃಶ್ಯ. ಹೌದು ಇಂದು ದಸರಾ ಗಜಪಡೆಗೆ ಮೈಸೂರು ಅರಮನೆ ಆವರಣದಲ್ಲಿ ಬೀಳ್ಕೊಡುಗೆ ನೀಡಲಾಯ್ತು. ಎರಡು ತಿಂಗಳಿಂದ ಅರಮನೆ ಅಂಗಳದಲ್ಲಿ ಬೀಡು ಬಿಟ್ಟಿದ್ದ ಆನೆಗಳು, ಯಶಸ್ವಿಯಾಗಿ ಜಂಬೂಸವಾರಿ ಪೂರ್ಣಗೊಳಿಸಿದ್ದವು. ನಿನ್ನೆ ವಿಶ್ರಾಂತಿ ಪಡೆದಿದ್ದ ಆನೆಗಳು, ಇಂದು ವಾಪಸ್ಸು ಕಾಡಿಗೆ ಹೊರಟವು. ಕಾಡಿಗೆ ಹೊರಟ ಗಜಪಡೆಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬೀಳ್ಕೊಡುಗೆ ನೀಡಲಾಯ್ತು.
Disclaimer: This Story is auto-aggregated by a Syndicated Feed and has not been Created or Edited By City Big News Staff.