ಬೆಂಗಳೂರು: ನಾಗರೀಕರ ಧ್ವನಿಯೇ ನಮ್ಮ ಸರ್ಕಾರದ ಧ್ವನಿ. ಹೀಗಾಗಿ ಬ್ರ್ಯಾಂಡ್ ಬೆಂಗಳೂರು ಯೋಜನೆಯಲ್ಲಿ ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಬೆಂಗಳೂರಿನ ಜನರ ಅಭಿಪ್ರಾಯ ಸಂಗ್ರಹಿಸಿ, ಅವರ ನಿರೀಕ್ಷೆಗೆ ತಕ್ಕಂತೆ ನಾವು ಬೆಂಗಳೂರು ಅಭಿವೃದ್ಧಿಯ ನೀಲನಕ್ಷೆ ಸಿದ್ಧಪಡಿಸುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಬ್ರ್ಯಾಂಡ್ ಬೆಂಗಳೂರು ಚಿಂತನ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಕುಮಾರ್ ಅವರು, ಬೆಂಗಳೂರಿನ ಅಭಿವೃದ್ಧಿಗೆ ತಾವು ಕೈಗೊಳ್ಳಲಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಬೆಂಗಳೂರಿಗೆ ಅಂಟಿರುವ ಗ್ರಾಬೇಜ್ ಸಿಟಿ, ಟ್ರಾಫಿಕ್ ಸಿಟಿ ಎಂಬ ಕಳಂಕವನ್ನು ನಾವು ತೊಡೆದು ಹಾಕುತ್ತೇವೆ.
ಪ್ರತಿ ರಸ್ತೆಯಲ್ಲಿ ಕ್ಯೂಆರ್ ಕೋಡ್ ಹಾಕಿ ಅಲ್ಲಿನ ಕಾಮಗಾರಿ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಲಾಗುವುದು. ಜನರಿಗೆ ಆ ರಸ್ತೆಯ ಕಾಮಗಾರಿ ಕುರಿತು ಜನರಿಗೆ ಮಾಹಿತಿ ನೀಡಿ ಪಾರದರ್ಶಕತೆ ನೀಡಲಾಗುವುದು.
ಬಿಬಿಎಂಪಿ ಚುನಾವಣೆಗೆ 225 ವಾರ್ಡ ಮಾಡಲಾಗಿದೆ. ವಾರ್ಡ್ ಸಮಿತಿ ಇಲ್ಲದ ಕಾರಣ ಜನರು ಕೆಲವು ಸಲಹೆ ನೀಡಿದ್ದಾರೆ. ಅದೇನೆಂದರೆ ಪಾರ್ಕ್, ಆಟದ ಮೈದಾನಗಳ ಮೇಲುಸ್ತುವಾರಿಯನ್ನು ಸ್ಥಳೀಯರಿಗೆ ನೀಡಿ ಎಂದು ಹೇಳಿದ್ದಾರೆ. ಈ ಬಗ್ಗೆ ನಾನು ಎಲ್ಲಾ ಶಾಸಕರ ಜೊತೆ ಚರ್ಚೆ ಮಾಡುತ್ತೇನೆ. ಇದರಲ್ಲಿ ಯಾವುದೇ ಪಕ್ಷದವರು ಸದಸ್ಯರಿಲ್ಲದ ನಾಗರೀಕ ಸಮೂಹಕ್ಕೆ ಜವಾಬ್ದಾರಿ ವಹಿಸಲು ಚಿಂತನೆ ನಡೆಸಿದ್ದೇವೆ” ಎಂದು ತಿಳಿಸಿದರು. ಉಳಿದಂತೆ ಅವರು ಹೇಳಿದ್ದಿಷ್ಟು;
ನಾನು ಬಹಳ ಉತ್ಸುಕನಾಗಿ ಈ ಇಲಾಖೆ ಅಧಿಕಾರ ವಹಿಸಿಕೊಂಡಿದ್ದೇನೆ. “By Birth I am an Agriculturist, By Profession I am a Businessman, By Choice I am an Educationist, By Passion I am a Politician” ಎಂದು ನಾನು ಅನೇಕ ಬಾರಿ ಹೇಳಿದ್ದೇನೆ. ಅದೇ ರೀತಿ ಬೆಂಗಳೂರು ನಗರಾಭಿವೃದ್ಧಿ ಸಚಿವಾಲಯದ ಜವಾಬ್ದಾರಿಯನ್ನು ವಹಿಸಿದ್ದೇನೆ.
ಎಸ್ ಎಂ ಕೃಷ್ಣ ಅವರ ಕಾಲದಲ್ಲಿ ನಗರಾಭಿವದ್ಧಿ ಸಚಿವಾನಾಗಿದ್ದಾಗ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬಿಎಂಐಸಿಪಿ ರಸ್ತೆ ಯೋಜನೆಗೆ ಸಹಿ ಹಾಕಿದೆ.
ಜೆ.ಹೆಚ್ ಪಟೇಲರ ಅವಧಿಯಲ್ಲಿ ಬೆಂಗಳೂರಿನಲ್ಲಿ ಮೋನೋ ರೈಲು ತರಲು ನಿರ್ಧರಿಸಲಾಗಿತ್ತು, ನಾನು ಹಾಗೂ ಅನಂತಕುಮಾರ್ ಅವರು ಚರ್ಚೆ ಮಾಡಿ, ಬೇರೆ ಬೇರೆ ಕಡೆ ಹೋಗಿ ಅಧ್ಯಯನ ಮಾಡಿ ನಂತರ ದೆಹಲಿ ಮಾದರಿಯಂತೆ ಮೆಟ್ರೋ ರೈಲು ಜಾರಿಗೆ ತಂದೆವು.
ಇಂದು ಕೂಡ ಬೈಯ್ಯಪನಹಳ್ಳಿಯಿಂದ ಕೆ.ಆರ್ ಪುರಂ, ಕೆಂಗೇರಿಯಿಂದ ಚಲ್ಲಘಟ್ಟಕ್ಕೆ ಮೆಟ್ರೋ ಮಾರ್ಗ ಆರಂಭವಾಗಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿಗಳನ್ನು ಆಹ್ವಾನಿಸಲು ಕಾಲಾವಕಾಶ ಕೇಳಿದೆವು. ಅವರು ಕಾಲಾವಕಾಶ ಕೇಳಿದ ಕಾರಣ ಇಂದು ಈ ಮಾರ್ಗಗಳ ಉದ್ಘಾಟನೆ ಮಾಡಿದ್ದಾರೆ. ನೀವು ಈ ಮಾರ್ಗಗಳಲ್ಲಿ ಪ್ರಯಾಣ ಮಾಡಬಹುದು.
ಬ್ರಾಂಡ್ ಬೆಂಗಳೂರು ಯೋಜನೆಗೆ 70 ಸಾವಿರ ಸಲಹೆ ಬಂದಿವೆ. ಪುಟಾಣಿಮಕ್ಕಳಿಂದ ಹಿರಿಯರವರೆಗೂ ಎಲ್ಲಾ ವರ್ಗದವರು ಸಲಹೆ ನೀಡಿದ್ದೀರಿ. ಈ ಬೆಂಗಳೂರು ನಮ್ಮದಲ್ಲ ಜನರದ್ದು. ನಾವು ನಮ್ಮದೇ ರೀತಿಯಲ್ಲಿ ಆಲೋಚನೆ ಮಾಡುತ್ತೇವೆ. ಅಧಿಕಾರಿಗಳು ಅವರದೇ ಆದ ರೀತಿ ಯೋಚಿಸುತ್ತಾರೆ. ಯೋಜನೆ ಆರಂಭಿಸುವ ಮುನ್ನ ನಾಗರೀಕರ ಅಭಿಪ್ರಾಯ ಮುಖ್ಯ. ಹೀಗಾಗಿ ನಾವು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದ್ದೇವೆ ಎಂದರು.
Disclaimer: This Story is auto-aggregated by a Syndicated Feed and has not been Created or Edited By City Big News Staff.