ಮೈತ್ರಿ ಧರ್ಮ ಪಾಲನೆಯ ಕಾರಣದಿಂದಾಗಿ ಕೆಲವು ಕಾಂಗ್ರೆಸ್ ನಾಯಕರು ಅಸಮಾಧಾನಗೊಂಡು ತಮ್ಮ ಅಸಹನೆಯನ್ನು ಹೊರ ಹಾಕಿರುವ ಘಟನೆಯೊಂದು ನಡೆದಿದೆ. ಈ ಘಟನೆ ನಡೆದಿರುವುದು ಬೇರೆಲ್ಲೂ ಅಲ್ಲ, ಜೆಡಿಎಸ್ ನಿಂದ ದೇವೇಗೌಡರು ಸ್ಪರ್ಧಿಸಲು ತೀರ್ಮಾನಿಸಿರುವ ತುಮಕೂರಿನಲ್ಲಿ. ಹೌದು ಇಂತಹ ಒಂದು ಅನಿರೀಕ್ಷಿತವಾದ ಬೆಳವಣಿಗೆಯು ನಡೆದಿದೆ. ಕಾಂಗ್ರೆಸ್ ನ ಸಂಸದ ಮುದ್ದೆಹನುಮೇಗೌಡ ಅವರು ಸೋಮವಾರ ತುಮಕೂರಿನಿಂದ ಲೋಕಸಭಾ ಚುನಾವಣೆಗೆ ನಾಮಪತ್ರವನ್ನು ಸಲ್ಲಿಸುವ ಹೇಳಿಕೆಯೊಂದನ್ನು ನೀಡಿದ್ದರು. ಆದರೆ ಈಗ ಅಲ್ಲಿ ಆಗಿರುವ ಬೆಳವಣಿಗೆಗಳು ಅದಕ್ಕೆ ತಡೆ ಒಡ್ಡಿದೆ ಎಂಬುದು ವಾಸ್ತವವಾಗಿದೆ.

ಇದೇ ವಿಚಾರವಾಗಿ ಇಂದು ಡಿಸಿಎಂ ಪರಮೇಶ್ವರ್ ಅವರು ತುಮಕೂರಿನ ಜಿಲ್ಲಾ ನಾಯಕರ ಜೊತೆ ಸಭೆಯೊಂದನ್ನು ನಡೆಸಿದ್ದಾರೆ. ಸಭೆಯಲ್ಲಿ ಮಾತನಾಡಿದ ಪರಮೇಶ್ವರ್ ಅವರು ಮೈತ್ರಿ ಧರ್ಮ ಪಾಲನೆಯ ದೃಷ್ಟಿಯಿಂದ ಕಾಂಗ್ರೆಸ್ ನ ಮುದ್ದೆ ಹನುಮೇಗೌಡರಿಗೆ ಟಿಕೆಟ್ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಕಾರ್ಯಕರ್ತರು ದೇವೇಗೌಡರಿಗೆ ಬೆಂಬಲ ನೀಡಬೇಕೆಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಆಕ್ರೋಶ ಗೊಂಡಿದ್ದಾರೆ ಕಾಂಗ್ರೆಸ್ ನಾಯಕ ರಾಯಸಂದ್ರ ರವಿ ಅವರು. ಆಕ್ರೋಶದಿಂದ ಅವರು ಕಣ್ಣೀರು ಕೂಡಾ ಹಾಕಿದ್ದಾರೆ.

ರಾಯಸಂದ್ರ ರವಿ ಕಳೆದ ಬಾರಿ ತುಮಕೂರು ಗ್ರಾಮಾಂತರದಿಂದ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದರು. ಈ ಬಾರಿ ಹನುಮೇಗೌಡರಿಗೆ ಟಿಕೆಟ್ ಸಿಗುತ್ತಿಲ್ಲ ಎಂಬ ವಿಷಯ ತಿಳಿದ ಕೂಡಲೇ ಅವರು ಕಣ್ಣೀರು ಹಾಕಿ, ದೇವಗೌಡರನ್ನು ಸೋಲಿಸಿ , ಬಿಜೆಪಿಯನ್ನು ಗೆಲ್ಲಿಸೋಣ ಎಂದು ಅವರು ಕರೆ ನೀಡಿದ್ದಾರೆ. ಹಾಗೆ ಕಣ್ಣೀರು ಸುರಿಸುತ್ತಾ ಅವರು ಸಭೆಯಿಂದ ಹೊರ ನಡೆದಿದ್ದಾರೆ. ಅವರ ಆಕ್ರೋಶ ಸರಿ ಎನಿಸಿದರೂ ಎಲ್ಲೋ ಒಂದೆಡೆ ಮೈತ್ರಿ ಧರ್ಮಕ್ಕೆ ಕಟ್ಟು ಬೀಳಬೇಕಾದ ಪರಿಸ್ಥಿತಿ ಎದುರಾಗಿದೆ ಎಂಬುದಂತೂ ನಿಜ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here