ಪೇಜಾವರ ಮಠದ ಪೂಜ್ಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಪರಂಧಾಮ ಸಂದರ್ಭದಲ್ಲಿ ನಾವು ಅವರನ್ನು ಕಳೆದುಕೊಂಡು ಬಡವಾಗಿದ್ದೇವೆ. ಸರ್ವಧರ್ಮಿಯರಿಗೂ ಗುರುಗಳಾಗಿ, ಆಚಾರ್ಯರಾಗಿ, ಮಾರ್ಗದರ್ಶಕರಾಗಿ, ಪ್ರೇರಕರಾಗಿ ಆತ್ಮೀಯರಾಗಿ ಅವರು ಸತತ ಮಾರ್ಗದರ್ಶನ ನೀಡಿದ್ದಾರೆ.

ಪೂಜ್ಯರು ಭಾರತದಾದ್ಯಂತ “ವಿಶ್ವಸಂಚಾರಿ”ಯಾಗಿ ತಮ್ಮ ದೇಹವನ್ನು ಶ್ರೇಷ್ಠ ರೀತಿಯಲ್ಲಿ ಬಳಸಿಕೊಂಡಿದ್ದಾರೆ. ಅಂದರೆ, ಅವರ ಬದುಕಿನ ಸಂದೇಶವೇ “ಮಾನವ ದೇಹ ಅನ್ನುವುದು ಒಂದು ಯಂತ್ರ, ಉಪಕರಣ ಮತ್ತು ಇಹ-ಪರಗಳ ಸಾಧನೆಗೆ ಒಂದು ಮಾಧ್ಯಮ”. ಈ ದೇಹದ ಪೋಷಣೆಗಾಗಿ, ಸುಖಕ್ಕಾಗಿ, ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಎಲ್ಲಾ ಸಮಯವನ್ನು, ಸಂಪತ್ತನ್ನು ಮತ್ತು ಸಹವಾಸವನ್ನು ಉಪಯೋಗಿಸುತ್ತಾನೆ. ಅದಕ್ಕಾಗಿ ದೇಹಕ್ಕೆ ಸಾಕಷ್ಟು ವಿಶ್ರಾಂತಿ ಕೊಟ್ಟು, ದೀರ್ಘಾಯುಷಿಯಾಗುವ ಬಯಕೆ ವ್ಯಕ್ತಪಡಿಸುತ್ತಾನೆ.

ಆದರೆ, ಪೂಜ್ಯ ಪೇಜಾವರ ಶ್ರೀಗಳ ಸಂದೇಶವೆಂದರೆ, “ಬದುಕು ಅಮೂಲ್ಯವಾದದ್ದು, ಅದನು ಹಾಳು ಮಾಡಬೇಡಿರೊ ಹುಚ್ಚಪ್ಪಗಳಿರಾ” ಎನ್ನುತ್ತಾ ಆಯುಷ್ಯದ ಪ್ರತಿಯೊಂದು ಕ್ಷಣವನ್ನೂ ಸದುಪಯೋಗಪಡಿಸಿಕೊಂಡು ತಮ್ಮ ದೇಹವನ್ನು ಬಳಸಿದರು. ಅವರು ವಿಷ್ಣುವಿನಂತೆ “ದಶಾವತಾರ” ತಳೆದರು. ಮಠಾಧಿಪತಿಗಳಾಗಿ ಮಠದ ಕೈಂಕರ್ಯಗಳು, ಶ್ರೀ ಕೃಷ್ಣ ದೇವರ ಮತ್ತು ಮಠದ ಆರಾಧ್ಯ ದೇವರುಗಳ ಪೂಜೆ-ಪುನಸ್ಕಾರಗಳು, ಶಿಕ್ಷಣ ಕ್ಷೇತ್ರ, ವೈದ್ಯಕೀಯ ಹಾಗೂ ಸಾಮಾಜಿಕ ರಂಗಗಳಲ್ಲಿ ತಮ್ಮ ಸಮಯವನ್ನು ವಿನಿಯೋಗಿಸಿದರು.

ಶಿಷ್ಯರಿಗೆ ಧಾರ್ಮಿಕ ಪಾಠ-ಪ್ರವಚನಗಳನ್ನು ನೀಡುವುದರಲ್ಲಿ ಪೂಜ್ಯರಂತೆ ಯಾರೂ ಉದಾರಿಗಳಿಲ್ಲ. ನಿಷ್ಕಲ್ಮಶ ಹೃದಯದಿಂದ ಪೂರ್ತಿ ವಿದ್ಯಾದಾನ ಮಾಡಿದವರು ಇನ್ನೊಬ್ಬರಿಲ್ಲ. ಮಠದಲ್ಲಿ ಮಾತ್ರವಲ್ಲದೆ, ಬೆಂಗಳೂರಿನ ವಿದ್ಯಾಪೀಠದಲ್ಲಿಯೂ ಶಿಷ್ಯರಿಗೆ ಪಾಠ ಬೋಧಿಸುವುದರ ಜೊತೆಗೆ ವಾಹನದಲ್ಲಿ ಸಂಚಾರ ಸಮಯದಲ್ಲಿಯೂ ಅವರು ನಿರಂತರ ಪಾಠ-ಪ್ರವಚನ ನಡೆಸುತ್ತಿದ್ದರು.

ಅವರ ಆಪ್ತರು ಹೇಳುವಂತೆ ದೀರ್ಘ ವಾಹನ ಸಂಚಾರ ಸಮಯದಲ್ಲಿ ಅಥವಾ ಅಲ್ಪ ವಾಹನ ಸಂಚಾರ ಸಮಯದಲ್ಲಿ, “ಕೇವಲ ಕೆಲವು ನಿಮಿಷಗಳಷ್ಟು ನಿಮ್ಮೊಂದಿಗೆ ಮಾತನಾಡುತ್ತೇನೆ, ಉಳಿದ ಸಮಯ ಶಿಷ್ಯರಿಗೆ ಪಾಠ ಹೇಳಿ ಕೊಡುತ್ತೇನೆ. ಮಧ್ಯೆ ಯಾರೂ ನನ್ನ ಗಮನ ಸೆಳೆಯ ಬೇಡಿ” ಎನ್ನುತ್ತಿದ್ದರಂತೆ.

ಸಮಾಜದ ಕಟ್ಟಕಡೆಯ ವ್ಯಕ್ತಿಯ ಬಗ್ಯೆ, ಪತಿತೋದ್ಧಾರದ ಬಗ್ಯೆ ಅವರ ಕಾಳಜಿ ವಿಶ್ವಕ್ಕೆ ಮಾದರಿಯಾಗಿದೆ.
ರಾಮ ಜನ್ಮಭೂಮಿ ಬಗ್ಯೆ ಸುಪ್ರಿಂ ಕೋರ್ಟು ತೀರ್ಪು ಪ್ರಕಟವಾದಾಗ ಅವರ ಅನೇಕ ವರ್ಷಗಳ ಪ್ರಾರ್ಥನೆ ಮತ್ತು ಆ ವಿಷಯದಲ್ಲಿ ಅವರು ನೀಡಿದ ಸಲಹೆ-ಸೂಚನೆಗಳು ಕಾರ್ಯಗತವಾದ ಬಗ್ಯೆ ಪೂಜ್ಯರು ಸಂತೋಷ ಪಟ್ಟರು.
ನಮ್ಮ ಧರ್ಮಸ್ಥಳ ಕ್ಷೇತ್ರದ ಚಟುವಟಿಕೆಗಳಲ್ಲಿ, ವಿಶೇಷವಾಗಿ ಶಿಕ್ಷಣ ಕ್ಷೇತ್ರದ ಬೆಳವಣಿಗೆಯಲ್ಲಿ ನಾವು ಅವರಿಂದ ಪ್ರೇರಣೆ ಪಡೆದಿದ್ದೇವೆ. ಧಾರವಾಡದ ಜನತಾ ಶಿಕ್ಷಣ ಸಮಿತಿಯಂತೆ ನಮ್ಮ ರಾಜ್ಯದ ಮತ್ತು ರಾಷ್ಟ್ರದ ಅನೇಕ ಸಮಸ್ಯಾತ್ಮಕ, ಸಂಘಟನಾತ್ಮಕ ಮತ್ತು ಆರ್ಥಿಕ ಸಂಕಷ್ಟಕ್ಕೊಳಗಾದ ಸಂಸ್ಥೆಗಳಿಗೆ ಪೂಜ್ಯರು ಮಾರ್ಗದರ್ಶನ ನೀಡಿ ಕಾಯಕಲ್ಪ ಕೊಟ್ಟು ಪುನರುಜ್ಜೀವನಗೊಳಿಸಿದ್ದಾರೆ.

ನನ್ನ ವೈಯಕ್ತಕ ಅಭಿಪ್ರಾಯದಂತೆ ಪೂಜ್ಯ ಶ್ರೀಗಳು ನನ್ನ ಜೊತೆ ಮತ್ತು ನಮ್ಮ ಜೊತೆ ಎಂದೂ ಇರುತ್ತಾರೆ. ಅವರ ಭೌತಿಕ ದೇಹ ನಮ್ಮ ಮುಂದೆ ಇರದಿದ್ದರೂ, ಅವರೊಂದಿಗೆ ಕಳೆದ ಪ್ರತಿ ಒಂದು ಕ್ಷಣವೂ ಅಮೂಲ್ಯವಾದದ್ದು ಮತ್ತು ಸ್ಮರಣೀಯವಾದದ್ದು ಎಂದು ಪೂಜ್ಯರಿಗೆ ನನ್ನ ನುಡಿನಮನಗಳನ್ನು ಹಾಗೂ ನಮ್ಮ ಕುಟುಂಬದ ಪರವಾಗಿ ಭಕ್ತಿಪೂರ್ವಕ ಪ್ರಣಾಮಗಳೊಂದಿಗೆ ಗೌರವವನ್ನು ಅರ್ಪಿಸುತ್ತೇನೆ.

ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here