ಕರ್ನಾಟಕದ ರಾಜಕೀಯ ಹೈಡ್ರಾಮಾ ಇದೀಗ ಮುಂಬೈಗೆ ಶಿಫ್ಟ್ ಆಗಿದೆ. ಅಸಮಾಧಾನದಿಂದ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನ ಹೋಟೆಲ್‌ವೊಂದರಲ್ಲಿ ವಾಸ್ತವ್ಯ ಹೂಡಿರುವ ಹತ್ತು ಭಿನ್ನಮತೀಯ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸಮಾಧಾನಪಡಿಸುವ ಉದ್ದೇಶದಿಂದ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಮುಂಬೈಗೆ ಬಂದಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಡಿ.ಕೆ.ಶಿವಕುಮಾರ್ ಅವರಿಗೆ ಭಿನ್ನಮತೀಯ ಶಾಸಕರನ್ನು ಭೇಟಿ ಮಾಡಲು ಬಿಡುವುದಿಲ್ಲ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಪ್ರಕ್ಷುಬ್ಧತೆಯ ಮಧ್ಯೆ, ಕಾಂಗ್ರೆಸ್ ಹಿರಿಯ

ಮುಖಂಡ ಡಿ.ಕೆ.ಶಿವಕುಮಾರ್ ಮುಂಬೈ ಭೇಟಿಗೆ ಮುಂಚಿತವಾಗಿ ಭದ್ರತಾ ರಕ್ಷಣೆ ಕೋರಿ ಮುಂಬೈನಲ್ಲಿರುವ ರೆಬೆಲ್ ಶಾಸಕರು ಮುಂಬೈ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಶಾಸಕರು ತಂಗಿರುವ ಹೋಟೆಲ್ ಹೊರಗೆ ಮಹಾರಾಷ್ಟ್ರ ರಾಜ್ಯ ರಿಸರ್ವ್ ಪೊಲೀಸ್ ಪಡೆ ಮತ್ತು ಗಲಭೆ ನಿಯಂತ್ರಣ ಪೊಲೀಸರನ್ನು ನಿಯೋಜಿಸಲಾಗಿದೆ.ಡಿ.ಕೆ.ಶಿವಕುಮಾರ್ ಮತ್ತು ಜೆಡಿ (ಎಸ್) ಶಾಸಕ ಶಿವಲಿಂಗ ಗೌಡ ಮುಂಬೈ ಏರ್ಪೋರ್ಟ್ ನಿಂದ 10 ಬಂಡಾಯ ಶಾಸಕರು ತಂಗಿರುವ ಮುಂಬೈ ಕನ್ವೆನ್ಷನ್ ಸೆಂಟರ್ ಹೋಟೆಲ್ ಕಡೆಗೆ ಪ್ರಯಾಣ ಬೆಳೆಸಿದ್ದಾರೆ.

ಇದಕ್ಕೂ ಮೊದಲು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಡಿಕೆಶಿ ನಾವು ನಮ್ಮ ಸ್ನೇಹಿತರನ್ನು ಭೇಟಿಯಾಗಲು ಬಂದಿದ್ದೇವೆ ಎಂದಿದ್ದಾರೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಕೆಶಿ, ಮುಂಬೈ ಪೊಲೀಸ್ ಅಥವಾ ಇನ್ನಾವುದೇ ಪಡೆಗಳನ್ನು ನಿಯೋಜಿಸಲಿ. ಅವರು ತಮ್ಮ ಕರ್ತವ್ಯವನ್ನು ನಿರ್ವಹಿಸಲಿ. ನಾವು ನಮ್ಮ ಸ್ನೇಹಿತರನ್ನು ಭೇಟಿ ಮಾಡಲು ಬಂದಿದ್ದೇವೆ. ನಾವು ರಾಜಕೀಯದಲ್ಲಿ ಒಟ್ಟಿಗೆ ಜನಿಸಿದ್ದೇವೆ, ಒಟ್ಟಿಗೆ ಸಾಯುತ್ತೇವೆ. ಅವರು ನಮ್ಮ ಪಕ್ಷದವರು ಎಂದು ತಿಳಿಸಿದರು.ಏತನ್ಮಧ್ಯೆ, ಕರ್ನಾಟಕದ ಕಾಂಗ್ರೆಸ್-ಜೆಡಿ (ಎಸ್) ಪಕ್ಷದ 10 ಬಂಡಾಯ ಶಾಸಕರು ತಂಗಿರುವ ಹೋಟೆಲ್ ಒಳಗೆ ಕರ್ನಾಟಕ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಬಿಡುವುದಿಲ್ಲ. ಅಂತೆಯೇ ಹೋಟೆಲ್ನ ಗೇಟ್‌ಗಳ ಮುಂದೆ ನಿಲ್ಲಲು ಅವರನ್ನು ಅನುಮತಿಸಲಾಗುವುದಿಲ್ಲ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here