ಕನ್ನಡ ಚಿತ್ರರಂಗದ ಮೇರುನಟ , ವರನಟ ,ಕನ್ನಡಿಗರ ಆರಾಧ್ಯದೈವ ಡಾ.ರಾಜ್‍ಕುಮಾರ್ ಅವರಿಗೆ ರಾಜ್ಯದ ಮೂಲೆಮೂಲೆಗಳಲ್ಲಿ ಅಭಿಮನಿಗಳ ಬಳಗವೇ ಇದೆ. ವರನಟ ಡಾ.ರಾಜ್‍ಕುಮಾರ್ ಅವರು ದೈಹಿಕವಾಗಿ ನಮ್ಮ ಜೊತೆ ಇರದಿದ್ದರೂ ಜನಮಾನಸದಲ್ಲಿ ಅಣ್ಣಾವ್ರು ನಿತ್ಯ ನಿರಂತರವಾಗಿ ಇದ್ದೇ ಇರುತ್ತಾರೆ. ಇಂದಿಗೂ ಅದೆಷ್ಟೋ ಅಸಂಖ್ಯಾತ ಅಭಿಮಾನಿಗಳು ತಮ್ಮ ಮನೆಯಲ್ಲಿ ಅಣ್ಣಾವ್ರ ಫೋಟೋವನ್ನು ದೇವರ ಮನೆಯಲ್ಲಿ ಇಟ್ಟು ಪೂಜಿಸುವವರಿದ್ದಾರೆ.ಡಾ.ರಾಜ್‍ಕುಮಾರ್ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಜೀವನ ಸಾಗಿಸುವ ಹಲವಾರು ಅಭಿಮಾನಿಗಳ ಪೈಕಿ ಗದಗ ಜಿಲ್ಲೆಯ ನರೇಗಲ್ಲದ ರಾಮಣ್ಣ ಬೈರಗೊಂಡ ಕೂಡ ಪ್ರಮುಖರು.

ವರನಟ ಡಾ.ರಾಜ್‍ಕುಮಾರ್ ಹೆಸರಿನಲ್ಲಿ ಮನೆಯ ಬಳಿ ಹೋಟೇಲ್ ತೆರೆದು ಅತ್ಯಂತ ಕಡಿಮೆ ದರದಲ್ಲಿ ಹಸಿದವರಿಗೆ ಅನ್ನ ಹಾಕುವ ರಾಮಣ್ಣ ಅವರು ಹಣ ಇಲ್ಲದವರು ಹಸಿವ ಎಂದಾಗ ಉಚಿತವಾಗಿಯೇ ಊಟ ನೀಡುತ್ತಾರೆ. ವಿಶೇಷ ದಿನಗಳು ,ಅಣ್ಣಾವ್ರ ಜನ್ಮದಿನದ ದಿನಗಳಲ್ಲಿ ಉಚಿತ ಊಟ ನೀಡುವ ರಾಮಣ್ಣ ಭೈರಗೊಂಡ ಅವರ ಮನೆಯ ತುಂಬಾ ಅಣ್ಣಾವ್ರ ಅಪರೂಪದ ಫೋಟೋಗಳು ತುಂಬಿವೆ.ಅಣ್ಣಾವ್ರ ಹೆಸರಲ್ಲಿ ಸಮಾಜಸೇವೆ ಮಾಡುವ ರಾಮಣ್ಣ ಅವರು ತಮ್ಮ ಬಳಿ ಇದ್ದ ಜಮೀನಿನ ಸ್ವಲ್ಪ ಭಾಗವನ್ನು ಡಾ.ರಾಜ್‍ಕುಮಾರ್ ಉದ್ಯಾನವನ ಮಾಡಲೆಂದು ನೀಡಿದ್ದಾರೆ‌. ಇಂತಹ ಅಪ್ಪಟ ಅಣ್ಣಾವ್ರ ಅಭಿಮಾನಿಯ ಮನೆಗೆ ಸ್ಪೆಷಲ್ ಸ್ಟಾರ್ ಡಾಲಿ ಧನಂಜಯ್ ಅವರು ಭೇಟಿ ನೀಡಿ ರಾಮಣ್ಣನವರಿಗೆ ಅಚ್ಚರಿ ಕೊಟ್ಟಿದ್ದಾರೆ.

ಗದಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡಾಲಿ ಧನಂಜಯ್ ಅಭಿನಯದ ಭೈರವ ಗೀತ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ರಾಮಣ್ಣ ಅವರ ಅಣ್ಣಾವ್ರ ಅಭಿಮಾನದ ವಿಷಯ ತಿಳಿದ ಧನಂಜಯ್ ಅವರು ತಡ ಮಾಡದೇ ರಾಮಣ್ಣ ಅವರನ್ನು ಕಾಣಲು ಇದ್ದಕ್ಕಿದ್ದಂತೆ ನರೇಗಲ್ ಗೆ ಪ್ರಯಾಣಬೆಳಸಿ ಅಣ್ಣಾವ್ರ ಅಭಿಮಾನಿಯ ಮನೆಗೆ ಭೇಟಿ ನೀಡಿ ರಾಮಣ್ಣ ಭೈರಗೊಂಡ ಅವರ ಯೋಗಕ್ಷೇಮ ವಿಚಾರಿಸಿದರು.ಅಷ್ಟೇ ಅಲ್ಲದೇ ಸುಮಾರು ಹೊತ್ತು ರಾಮಣ್ಣ ಅವರ ಮನೆಯಲ್ಲಿ ಕಾಲ ಕಳೆದು ಉಪಚಾರ ಸ್ವೀಕರಿಸಿದರು.

ರಾಮಣ್ಣ ಭೈರಗೊಂಡ ಅವರ ಮನೆಯಲ್ಲಿನ ಅಣ್ಣಾವ್ರ ಫೋಟೋಗಳನ್ನು ನೋಡಿ ಖುಷಿ ಪಟ್ಟರು. ಭಾಸ್ಕರ್ ರಾಶಿ ಅವರು ನಿರ್ಮಾಣ ಮಾಡುತ್ತಿರುವ ಭೈರವ ಗೀತ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿರುವ ಡಾಲಿ ಧನಂಜಯ್ ಅವರ ಸರಳತೆಯ ಗುಣ ಕಂಡು ನರೇಗಲ್ ಗ್ರಾಮಸ್ಥರು ಅಚ್ಚರಿ ಪಟ್ಟರು. ತಮ್ಮ ಅಭಿಮಾನಿಗಳ ಮನೆಗೆ ನಟರು ಭೇಟಿ ನೀಡಲು ಸಮಯ ಇರುವುದಿಲ್ಲ.ಅಂತಹದುರಲ್ಲಿ ಧನಂಜಯ್ ಅವರು ಡಾ.ರಾಜ್‍ಕುಮಾರ್ ಅವರ ಅಭಿಮಾನಿ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಣೆ ಮಾಡುವ ಮೂಲಕ ಆದರ್ಶ ಮೆರೆದಿದ್ದಾರೆ‌.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here