ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದೊಂದು ಕಳವಳಕಾರಿ ಬೆಳವಣಿಗೆಯಾಗಿದೆ. ಈ ಸಂದರ್ಭದಲ್ಲಿ ಖ್ಯಾತ ಹೃದ್ರೋಗ ತಜ್ಞರಾದ ಡಾ.ದೇವಿ ಶೆಟ್ಟಿಯವರು ಮುಂದಿನ ಹತ್ತು ದಿನಗಳಲ್ಲಿ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗಲಿವೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಏಪ್ರಿಲ್ 14 ರಂದು ಏಕಾಏಕೀ ಲಾಕ್ ಡೌನ್ ತೆರವುಗೊಳಿಸಿದರೆ, ಸಾರ್ವಜನಿಕರು ಸಾಮಾಜಿಕ ಅಂತರ ಮರೆತು ತಮ್ಮ ಚಟುವಟಿಕೆಗಳಲ್ಲಿ ತೊಡಗಿದರೆ ಬಹು ದೊಡ್ಡ ಗಂಡಾಂತರವನ್ನು ಎದುರಿಸಬೇಕಾಗುವುದು ಎಂದು ಕೂಡಾ ಅವರು ಎಚ್ಚರಿಸಿದ್ದಾರೆ.

ಆಗ ನಾವು ಎಷ್ಟೇ ಪ್ರಯತ್ನ ಪಟ್ಟರೂ ಕೊರೊನಾ ಸೋಂಕಿನ ಕಾಟ ಕೆಲವು ತಿಂಗಳುಗಳ ವರೆಗೆ ಮುಂದುವರೆಯಲ್ಲಿದ್ದು, ಅದನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಾಗಿ ಎಂದು ಅವರು ಹೇಳಿದ್ದಾರೆ. ಪ್ರಸ್ತುತ ರಾಷ್ಟ್ರದಲ್ಲಿ ವರದಿಯಾಗುತ್ತಿರುವುದು ಲಾಕ್ ಡೌನ್ ಗಿಂತ ಮೊದಲು ಸೋಂಕಿಗೆ ತುತ್ತಾಗಿರುವವರದ್ದು, ಲಾಕ್ ಡೌನ್ ಅವಧಿಯಲ್ಲಿ ಹಾಗೂ ಸೋಂಕಿತರ ಸಂಪರ್ಕದಿಂದ ಹರಡಿರುವ ಸೋಂಕು ಈಗಷ್ಟೇ ವರದಿಯಾಗಬೇಕಿದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ ಭಾರತ ಕೊರೊನಾ ಸೋಂಕು ಭಾಧಿತವಾಗುವುದರಲ್ಲಿ ಒಂದು ತಿಂಗಳು ಹಿಂದೆ ಇದ್ದು, ಈಗಲೇ ಎಚ್ಚೆತ್ತುಕೊಳ್ಳದಿದ್ದರೆ, ಮುಂದೆ ಭೀಕರವಾದ ದಿನಗಳು ಕಾದಿವೆ ಎಂದಿದ್ದಾರೆ.

ಇತರೆ ದೇಶಗಳಲ್ಲಿ ಕೂಡಾ ವಿದೇಶಿಯರಿಂದಲೇ ಸೋಂಕು ಹರಡಿರುವುದು. ನಮ್ಮ ದೇಶಕ್ಕೆ ವಿದೇಶಿಯರು ಬರುವುದು ಕಡಿಮೆ. ಅಮೆರಿಕದಲ್ಲಿ ಮೊದಲ ಪ್ರಕರಣ ದಾಖಲಾಗಿದ್ದು ಜನವರಿ 15 ಕ್ಕಾದರೆ ನಮ್ಮಲ್ಲಿ ಜನವರಿ 30 ಕ್ಕೆ, ಅದು ವುಹಾನ್ ನಿಂದ ಕೇರಳಕ್ಕೆ ಬಂದ ವಿದ್ಯಾರ್ಥಿಗಳಿಂದ. ಆದ ಕಾರಣ ನಾವು ಒಂದು ತಿಂಗಳ ಹಿಂದೆ ಇದ್ದು, ಸೋಂಕಿನ ಗಂಭೀರತೆ ಇನ್ನು ಮುಂದೆ ಎದುರಾಗಬೇಕಿದೆ ಎಂದು ಮಾಹಿತಿ ನೀಡಿದ್ದಾರೆ. ಲಾಕ್ ಡೌನ್ ನಿಂದ 50% ಸಾವಿನ ಪ್ರಮಾಣ ಕಡಿಮೆಯಾಗಿದೆ. ಇದೇ ನಮಗೆ ಕೊರೊನಾ ನಿಯಂತ್ರಣಕ್ಕೆ ಸೂಕ್ತ ಸಮಯ. ಲಾಕ್ ಡೌನ್ ಮುಗಿಯುವ ವೇಳೆಗೆ ಸೋಂಕಿತರ ಪ್ರಮಾಣ ತೀವ್ರವಾಗಿ ಹೆಚ್ಚಾಗಿರುತ್ತವೆ.

ಲಾಕ್ ಡೌನ್ ನಂತರ ಸರ್ಕಾರ ಮತ್ತು ಸಾರ್ವಜನಿಕರು
ಎಚ್ಚರ ವಹಿಸಿದರೆ ಸೋಂಕಿನಲ್ಲಿ ಸ್ಥಿರತೆ ಮೂಡಿಸಲು ಸಾಧ್ಯ. ಅಲ್ಲದೆ ಇದರಿಂದ ಸೋಂಕಿತರ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ ಎಂದು ತಿಳಿಸಿರುವ ದೇವಿ ಶೆಟ್ಟಿಯವರು ಇಲ್ಲವಾದಲ್ಲಿ ಇಟಲಿ, ಅಮೆರಿಕ ಹಾಗೂ ಚೀನಾ ರೀತಿಯಲ್ಲಿ ಸೋಂಕು ಇಲ್ಲಿ ಕೂಡಾ ವರ್ತಿಸಬಹುದೆಂಬ ಎಚ್ಚರಿಕೆ ನೀಡಿದ್ದು, ಲಾಕ್ ಡೌನ್ ಬಳಿಕ ಕೂಡಾ ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕೆಂದು ತಿಳಿಸಿದ್ದಾರೆ. ಕೊರೊನಾ ವೈರಸ್ ವರ್ತನೆಯ ಬಗ್ಗೆ ಇನ್ನಷ್ಟು ಅಧ್ಯಯನ ನಡೆಯಬೇಕಿದೆ ಎಂದು ಅವರು ತಿಳಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here