ಕಂಟೈನ್ಮೆಂಟ್​ ವಲಯಗಳಲ್ಲಿ ಇನ್ನೂ ಬಿಗಿ ಕ್ರಮ ಕೈಗೊಳ್ಳಲು ಸೂಚಿಸಿರುವ ಕೇಂದ್ರ ತಂಡ, ನಿರ್ಬಂಧಿತ ವಲಯದಲ್ಲಿರುವ ಎಲ್ಲರನ್ನೂ ಪರೀಕ್ಷಿಸುವಂತೆ ಸಲಹೆ ನೀಡಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ‌.ಸುಧಾಕರ್ ತಿಳಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ಕೋವಿಡ್​ನಿಂದಾಗಿ ಸಂಭವಿಸುವ ಸಾವಿನ ಪ್ರಮಾಣವನ್ನು ‌ಕಡಿಮೆ ಮಾಡುವಂತೆ ಕೇಂದ್ರ ತಂಡ ಸೂಚನೆ ನೀಡಿದೆ. ರಾಜ್ಯದಲ್ಲಿ ಸದ್ಯ 1.56% ಸಾವಿನ ಪ್ರಮಾಣ ಇದೆ. ಅದನ್ನು 1% ಗಿಂತಲೂ ಕಡಿಮೆಗೊಳಿಸಲು ಸೂಚಿಸಿದೆ. ಇದಕ್ಕೆ ಬೇಕಾದ ಎಲ್ಲಾ ಸಹಕಾರ ನೀಡುವುದಾಗಿ ಕೇಂದ್ರ ತಂಡ ಭರವಸೆ ನೀಡಿದೆ ಎಂದರು.

ರಾಜ್ಯ ತೆಗೆದುಕೊಂಡ ಕ್ರಮಗಳ ಬಗ್ಗೆ ಕೇಂದ್ರ ತಂಡ ಮೆಚ್ಚುಗೆ ವ್ಯಕ್ತಪಡಿಸಿದೆ. ಮನೆ ಮನೆಗೆ ತೆರಳಿ ಐಎಲ್​ಐ ಪತ್ತೆ, ಟೆಸ್ಟಿಂಗ್ ಲ್ಯಾಬ್ ಹೆಚ್ಚಳ, ಕ್ವಾರೆಂಟೈನ್ ಕ್ರಮ, ಡೆತ್ ಆಡಿಟ್ ಪ್ರಾರಂಭಿಸಿರುವ ಕ್ರಮಗಳ ಬಗ್ಗೆ ಕೇಂದ್ರ ತಂಡ ಶ್ಲಾಘನೆ ವ್ಯಕ್ತಪಡಿಸಿದೆ.

60 ವರ್ಷ ಮೇಲ್ಪಟ್ಟವರು ಹಾಗೂ ಮಕ್ಕಳ ಬಗ್ಗೆ ಹೆಚ್ಚು ನಿಗಾ ವಹಿಸಿ, ಅವರನ್ನು ಹೆಚ್ಚು ಟೆಸ್ಟ್ ಮಾಡಿಸುವಂತೆ ಸೂಚನೆ ನೀಡಿದ್ದಾರೆ. ಹೆಚ್ಚು ಜನ‌ ಇರುವ ಸ್ಲಂಗಳಲ್ಲಿ, ಮಾರುಕಟ್ಟೆಗಳಲ್ಲಿ ಅಧಿಕ ಟೆಸ್ಟ್ ಮಾಡುವಂತೆ ಸೂಚಿಸಿದ್ದಾರೆ. ರಾಜ್ಯ ಅನುಸರಿಸುತ್ತಿರುವ ಟ್ರೇಸ್, ಟ್ರ್ಯಾಕ್, ಟೆಸ್ಟಿಂಗ್, ಟ್ರೀಟ್ಮೆಂಟ್ ಮತ್ತು ಟೆಕ್ನಾಲಾಜಿಗಳಿರುವ 5 ಟಿ-ಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು ಎಂದು ವಿವರಿಸಿದರು.

ವೈದ್ಯಕೀಯ ಕಾಲೇಜಿನ ಲ್ಯಾಬ್ ಹಾಗೂ ಖಾಸಗಿ ಲ್ಯಾಬ್​ನವರು ಸಾಮರ್ಥ್ಯಕ್ಕೆ ತಕ್ಕಂತೆ ಪರೀಕ್ಷೆ ನಡೆಸಬೇಕು. ಅದನ್ನು ಮಾಡುತ್ತಿಲ್ಲ. ಹೀಗಾಗಿ ಅವರಿಗೆ ಐಸಿಎಂಆರ್​ನಿಂದ ನೋಟಿಸ್ ನೀಡುವಂತೆ ಮನವಿ ಮಾಡಿದ್ದೇವೆ ಎಂದರು.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here