ಅಬ್ಬಬ್ಬಾ.. ! ಮಗಳ ವಯಸ್ಸಿನ ವಿದ್ಯಾರ್ಥಿನಿಯ ಜೊತೆ ಪ್ರಣಯವನ್ನಾಡಿದ ಆ ಪ್ರಿನ್ಸಿಪಾಲ್ … ಯಾರು ಗೊತ್ತೆ.. !?!

ಲೇಖಕರು ಮತ್ತು ವಿಮರ್ಶಕರು: ವಿಷ್ಣು ನಾಚನೇಕರ್.

ವಿದ್ಯಾರ್ಥಿಗಳ ಬಾಳಿಗೆ ದಾರಿ ದೀಪವಾಗಬೇಕಾದ ಪ್ರಿನ್ಸಿಪಾಲರು ಚೆಂದದ ವಿದ್ಯಾರ್ಥಿನಿಗಳೊಂದಿಗೆ ಪ್ರಣಯವನ್ನಾಡಿದರೆ ಖಂಡಿತವಾಗಿಯೂ ಅದು ಅವರ ತಪ್ಪಾಗುತ್ತದೆ. ಒಂದು ವೇಳೆ ಎಲ್ಲಾ ಪ್ರಿನ್ಸಿಪಾಲರು ಹೀಗೆಯೇ ಇರುತ್ತಾರೆಂದು ಭಾವಿಸಿದರೆ ಇದು ನಮ್ಮ ತಪ್ಪಾಗುತ್ತದೆ. ಇಂತಹವರು ತುಂಬಾ ವಿರಳ. ಇಂತಹ ಘಟನೆಗಳು ನಡೆದಾಗ ಆ ಘಟನೆಯ ಮೇಲ್ನೋಟವನ್ನು ನೋಡಿದ ತಕ್ಷಣ ಅದು ತಪ್ಪು ಎಂದು ನಿರ್ಧರಿಸುವುದು ಹಾಗೂ ತೀರ್ಮಾನಿಸುವುದು ಸಮಂಜಸವಲ್ಲ. ಕೆಲವು ಘಟನೆಗಳು ಇಳಿದಷ್ಟು ಆಳ, ಸಾಗಿದಷ್ಟು ದೂರಕ್ಕಿರುತ್ತವೆ. ಹಾಗಾಗಿ ಅದರಾಳಕ್ಕಿಳಿದು ಸರಿಯಾಗಿ ಪರಾಮರ್ಶಿಸಿದಾಗ ಮಾತ್ರ, ಸತ್ಯಾಸತ್ಯತೆಯನ್ನು ತಿಳಿದು ನ್ಯಾಯ ಸಮ್ಮತವಾದ ತೀರ್ಮಾನಕ್ಕೆ ಬರಲು ಸಾಧ್ಯವಾಗುತ್ತದೆ. .. ಹಾಗಾದರೆ ಈ ಘಟನೆ ನಡೆದದ್ದು ಎಲ್ಲಿ ಎನ್ನುವ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಕಾಡುತ್ತಿರಬಹುದು.

ಇದು ನಡೆದದ್ದು 10/11/2019ರಂದು ಬಸವೇಶ್ವರನಗರದಲ್ಲಿರುವ ಕೆ.ಇ.ಎ.ಪ್ರಬಾತ್ ರಂಗಮಂದಿರದಲ್ಲಿ. ಟಿ.ವಿ.ಧಾರವಾಹಿಗಳನ್ನು ನೋಡುವುದನ್ನು ಬಿಟ್ಟು, ತಮ್ಮ ಸ್ವಂತ ಕೆಲಸಗಳನ್ನು ಬದಿಗಿಟ್ಟು ನಾಟಕವನ್ನು ನೋಡಲು ಬಂದಂತಹ ಎಲ್ಲಾ ಪ್ರೇಕ್ಷಕರಿಗೆ ನಾಟಕದಲ್ಲಿನ ಪಾತ್ರದಾರಿ ಮೇಳದವರಿಂದಲೇ ಸ್ವಾಗತವನ್ನು ಹೇಳಿಸುವುದರ ಮೂಲಕ “ಜೀ.ಕೆ.ಮಾಸ್ತರರ ಪ್ರಣಯ ಪ್ರಸಂಗ” ಎಂಬ ನಾಟಕ ಪ್ರಾರಂಭವಾಗುತ್ತದೆ. ಇಂದು ನಾಟಕವನ್ನು ನಿರ್ದೇಶಿಸಿ, “ಜನ ಮೆಚ್ಚಬೇಕು” ಎಂದು ಬಯಸುವ ನಿರ್ದೇಶಕರ ಸಂಖ್ಯೆ ಹೆಚ್ಚಾಗಿದೆ. ಆದರೆ “ಜನ ಮೆಚ್ಚಬೇಕು” ಎನ್ನುವುದಕ್ಕಿಂತ “ಜನ ಮೆಚ್ಚುವಂತೆ” ನಾಟಕವನ್ನು ನಿರ್ದೇಶಿಸುವ ನಿರ್ದೇಶಕರ ಅವಶ್ಯಕತೆ ರಂಗಭೂಮಿಗಿದೆ.

ಒಂದು ನಾಟಕವು ಯಶಸ್ವಿಯಾಗಬೇಕಾದರೆ ವಸ್ತು ಆಯ್ಕೆ ಕೂಡ ಬಹಳ ಮುಖ್ಯ. ಈ ವಿಷಯದಲ್ಲಿ “ವಿಶ್ವಪಥ ಕಲಾ ಸಂಗಮ” ರಂಗಸಂಸ್ಥೆಯು, ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಡಾ. ಚಂದ್ರಶೇಖರ್ ಕಂಬಾರ್ ಅವರ “ಜಿ.ಕೆ. ಮಾಸ್ತರ್ ಪ್ರಣಯ ಪ್ರಸಂಗ” ಎಂಬ ಕಾದಂಬರಿಯನ್ನು ಆಯ್ಕೆ ಮಾಡಿಕೊಳ್ಳುವುದರ ಮೂಲಕ ಮೊದಲ ಹೆಜ್ಜೆಯಲ್ಲಿ ಜಯ ಸಾಧಿಸಿದೆ. ಹಾಗಾಂತ ನಾಟಕದ ವಸ್ತು ವಿಷಯ ಚೆನ್ನಾಗಿದ್ದ ಮಾತ್ರಕ್ಕೆ ನಾಟಕ ಗೆಲ್ಲುತ್ತದೆ ಎಂದರ್ಥವಲ್ಲ. ನಾಟಕದ ಗೆಲುವು ಮತ್ತು ಸೋಲಿನಲ್ಲಿ ನಿರ್ದೇಶಕ ಪಾತ್ರ ಬಹುಮುಖ್ಯವಾಗಿರುತ್ತದೆ.

ಈ ನಾಟಕದ ಮುಖ್ಯ ಪಾತ್ರ ಜೀ.ಕೆ.ಮಾಸ್ತರರು . ಇವರು ಒಂದು ಕಾಲೇಜಿನ ಪ್ರಸಿದ್ಧ ಪ್ರಿನ್ಸಿಪಾಲ್. ಶಿಸ್ತು ಮತ್ತು ಕಟ್ಟುನಿಟ್ಟು ಇವರ ಜೀವನದ ಬಹುಮುಖ್ಯ ವ್ಯವಸ್ಥೆ. ಇದು ಒಳ್ಳೆಯದು ಎನ್ನುತ್ತಾರಾದರೂ ಅದಕ್ಕೆ ಪ್ರತಿರೋಧ ಎನ್ನುವಂತೆ ಈ ಕಟ್ಟು ನಿಟ್ಟಿನಿಂದಾಗಿಯೇ ಜಿ.ಕೆ.ಮಾಸ್ತರ್ ತನಗಿದ್ದ ಒಬ್ಬನೇ ಒಬ್ಬ ಮಗನನ್ನು ಕಳೆದುಕೊಂಡಿರುತ್ತಾರೆ. ಈ ನೋವಿನಿಂದ ಬಳಲಿದ ಮಾಸ್ತರ್ರರ ಹೆಂಡತಿ ಗಿರಿಜಮ್ಮ ಒಂದಲ್ಲಾ ಒಂದು ಕಾಯಿಲೆಯಿಂದ ಬಳಲುತ್ತಾ ಹಾಸಿಗೆಗೆ ಶರಣಾಗುತ್ತಾಳೆ. ಗಿರಿಜಮ್ಮ ಮರುಮದುವೆಗೆ ಎಷ್ಟೇ ಒತ್ತಾಯಿಸಿದರೂ ಈ ಕಟ್ಟು ನಿಟ್ಟಿನ ಮಾಸ್ತರ್ ಮಾತ್ರ ಒಪ್ಪುವುದೇ ಇಲ್ಲ. ಇಂತಹ ಕಟ್ಟು ನಿಟ್ಟಿನ ಮನುಷ್ಯ ತನ್ನ ಕಾಲೇಜಿನ ವಿದ್ಯಾರ್ಥಿನಿಯ ಕುಡಿ ನೋಟಕ್ಕೆ ಸೋಲುವುದೇ..!?!. ಹೌದು ರೋಜಾ ಎಂಬ ಹುಡುಗಿಯ ಮೋಹಕ‌ ನಗೆಗೆ ಮಾರುಹೋಗಿ ತನ್ನ ಶಿಸ್ತಿಗೆ ಭಂಗ ತಂದು ಅಂತಹ ಇಳಿ ವಯಸ್ಸಿನಲ್ಲೂ ತರುಣನಂತೆ ಆಡುತ್ತಾರೆ ಜಿ.ಕೆ.ಮಾಸ್ತರ್. ಅಷ್ಟರೊಳಗೆ ಕಾಲೇಜಿನ ಹತ್ತನೆಯ ವಾರ್ಷಿಕೋತ್ಸವದಲ್ಲಿ ಕಾಲೇಜಿನ ಯೂನಿಯನ್ ಲೀಡರ್ ಗಿರ್ರಪ್ಪ ಮತ್ತು ಜಿ.ಕೆ. ಮಾಸ್ತರ್ರರಿಗೆ ಜಗಳವಾಗಿ ಇಬ್ಬರ ಮಧ್ಯ ದ್ವೇಷದ ಬೆಂಕಿ ಹೊತ್ತಿಕೊಳ್ಳುತ್ತದೆ. ಗಿರ್ರಪ್ಪನನ್ನು ಕಾಲೇಜಿನಿಂದ ಡಿಸ್ ಮಿಸ್ ಮಾಡುತ್ತಾರೆ. ಇದಕ್ಕೆ ಇನ್ನೊಂದು ಕಾರಣ ಗಿರ್ರಪ್ಪ, ರೋಜಾಳಿಗೆ ಬಲವಂತವಾಗಿ ಮುತ್ತು ನೀಡಿದ್ದ ಎಂದು ಎಂ.ಟಿ. ಹೇಳಿದ ಸುದ್ಧಿಯೂ ಆಗಿರುತ್ತದೆ. ಆದರೆ ಮುಂದೊಂದು ದಿನ ರೋಜಾ, ತನ್ನ ಮತ್ತು ಗಿರ್ರಪ್ಪನ ನಡುವೆ ಅಂತಹದ್ದೇನೂ ಇಲ್ಲ, ಏಕೆಂದರೆ ನಾನು ಪ್ರೀತಿಸುತ್ತಿರುವುದು ನಿಮ್ಮನ್ನು ಎಂದಾಗ. ಪ್ರೀತಿಗೆ ಕಣ್ಣಿಲ್ಲ ಎಂಬ ಕೆಲ ಹಿರಿಯರ ಮಾತು ಪ್ರೇಕ್ಷಕರಿಗೆ ಅಕ್ಷರಶಃ ನಿಜ ಎನಿಸುವುದಂತೂ ನಿಜ. ಆಗ ಮಾಸ್ತರ್, ತನ್ನ ಮತ್ತು ರೋಜಾಳ ಪ್ರೀತಿಯನ್ನು ಕಂಡು ಮತ್ತಷ್ಟು ಉರಿದುಕೊಳ್ಳಲಿ ಎಂಬ ಕಾರಣಕ್ಕಾಗಿಯೇ ಗಿರ್ರಪ್ಪನನ್ನು ಮತ್ತೇ ಕಾಲೇಜಿಗೆ ಸೇರಿಸಿಕೊಳ್ಳುತ್ತಾರೆ ಮತ್ತು ರೋಜಾಳ ಜೊತೆ ನೂರಾರು ಕನಸುಗಳನ್ನು ಕಾಣುತ್ತಾರೆ. ದಿನ ಕಳೆದಂತೆ ಇವರ ಪ್ರಣಯ ಪ್ರಸಂಗ ಮದುವೆ ಮಾತಿನವರೆಗೂ ಬರುತ್ತದೆ. ಆದರೆ ಪರೀಕ್ಷೆಗಳು ಹತ್ತಿರ ಬಂದಿದ್ದರಿಂದ ರೋಜಾ ಅದಕ್ಕೆ ವಿರಾಮದ ಗೆರೆ ಎಳೆಯುತ್ತಾಳೆ…

ಪರೀಕ್ಷೆಯೂ ಮುಗಿಯುತ್ತದೆ. ರೋಜಾಳ ಮೇಲಿನ ವ್ಯಾಮೋಹದಿಂದ ಆಕೆಯನ್ನು ಮನೆಗೆ ಕರೆಯಿಸಿಕೊಂಡು ಉತ್ತರ ಪತ್ರಿಕೆಯನ್ನೇ ಆಕೆಯ ಕೈಗಿಟ್ಟು , ಆಕೆಯನ್ನೇ ನೋಡುತ್ತಾ ತನ್ನನ್ನೇ ತಾನು ಮರೆತ ಮಾಸ್ತರ್ರರ ಸಲುಗೆ ಪಡೆದ ರೋಜಾ ತನಗಷ್ಟೇ ಅಲ್ಲದೆ, ತನ್ನ ಗೆಳತಿಯ ಉತ್ತರ ಪತ್ರಿಕೆಗೂ ತನಗೆ ಬೇಕಾದಷ್ಟು ಅಂಕಗಳನ್ನು ಬರೆದುಕೊಳ್ಳುತ್ತಾಳೆ. ಇದಕ್ಕೆಲ್ಲಾ ಅನುಮತಿ ನೀಡುತ್ತಾರೆಂದರೆ, ತನ್ನ ಪ್ರೀತಿಗೊಸ್ಕರ ಶಿಕ್ಷಕ ವೃತ್ತಿ ಧರ್ಮಕ್ಕೆ ಮಾಡುವ ಅವಮಾನ ಇದಲ್ಲವೆ ? ಎಂಬ ಪ್ರಶ್ನೆ ಪ್ರೇಕ್ಷಕರ ಮನಸ್ಸಿನಲ್ಲಿ ಬರದಿರಲು ಸಾಧ್ಯವೆ ? ಪರೀಕ್ಷಾ ಫಲಿತಾಂಶವೂ ಬಂತು ರೋಜಾ ಹೇಳಿದಂತೆ ಜಿ.ಕೆ.ಮಾಸ್ತರ್ ಹುಬ್ಬಳಿಯ ಹೊಟೇಲೊಂದರಲ್ಲಿ ಒಂದು ರೂಮ್ ಅನ್ನು ಬುಕ್ ಮಾಡಿ ಅವಳಿಗಾಗಿ ಕಾಯುತ್ತಿರುತ್ತಾರೆ. ಅವಳು ಬರದಿರಲು ಕಾಲೇಜಿಗೆ ಹೋಗಿ ನೋಡುತ್ತಾರೆ. ಅಲ್ಲಿ ಎಲ್ಲೂ ರೋಜಾ ಕಾಣಸಿಗುವುದಿಲ್ಲ. ಅಲ್ಲಿಂದ ಹೋಗಿ ಪರೀಕ್ಷಾ ಫಲಿತಾಂಶ ನೋಡಿ ಶಾಕ್ ಆಗುತ್ತಾರೆ. ಕಾರಣ ರೋಜಾ ಅಷ್ಟೇ ಅಲ್ಲದೆ ಗಿರ್ರಪ್ಪನೂ ಮೊದಲ ದರ್ಜೆಯಲ್ಲೇ ಪಾಸಾಗಿರುತ್ತಾನೆ. ಆದರೂ ಮಾಸ್ತರ್ ಸುಧಾರಿಸಿಕೊಂಡು ಈಗಲಾದರೂ ರೋಜಾ ತನಗಾಗಿ ಹೊಟೇಲ್ಗೆ ಬಂದಿರಬಹುದು ಎಂಬ ಆಸೆಯಿಂದ ಹೊಟೇಲ್ಗೆ ಹಿಂದಿರುಗುತ್ತಾರೆ. ಆದರೆ ಇವರಿಗಿಂತಲೂ ಮೊದಲೆ ಅಲ್ಲಿಗೆ ಬಂದೀದ್ದ ಗಿರ್ರಪ್ಪ ಮತ್ತು ರೋಜಾ ಪ್ರಣಯದ ಪಕ್ಷಿಗಳಂತೆ ಹಾರುತ್ತಿರುವುದನ್ನು ಕಂಡು ಇವರೆದೆಯ ಹಾರಾಟ ಏರುಪೇರಾಗುತ್ತದೆ. ರೋಜಾಳ ಮೋಸದಾಟ ತಿಳಿದು ಅವರ ಮನಸ್ಸಿಗೆ ದೊಡ್ಡ ಅಘಾತವಾಗುತ್ತದೆ. ಇಷ್ಟಕ್ಕೆ ನಾಟಕ ಮುಗಿಯುವುದಿಲ್ಲ. ಇದನ್ನು ಕಂಡು ಮಾಸ್ತರ್ ಏನೂ ಮಾಡುತ್ತಾರೆ. ನಾಟಕದ ಕತೆ ಯಾವ ಯಾವ ರೀತಿಯ ‌ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನೂ ತಿಳಿದುಕೊಳ್ಳಬೇಕಾದರೆ ನಾನು ಹೇಳುವುದಕ್ಕಿಂತ ನೀವೇ ನಾಟಕ ನೋಡುವುದು ಒಳ್ಳೆಯದು.

ಈ ನಾಟಕದ ಕೇಂದ್ರ ಬಿಂದು ಜಿ.ಕೆ. ಮಾಸ್ತರ್ . ಈ ಪಾತ್ರ ನಿರ್ವಹಿಸಿದ ಕಲಾವಿದ ಅಶೋಕ್ ಬಿ.ಯವರು. ಒಬ್ಬ ಕಟ್ಟು ನಿಟ್ಟಿನ ಹಾಗು ಶಿಸ್ತಿನ ಪ್ರಿನ್ಸಿಪಾಲ್ ಆಗಿ, ರೋಜಾಳ ಪ್ರೇಮಿಯಾಗಿ, ಮನೆಯಲ್ಲಿ ಕಾಯಿಲೆ ಬಿದ್ದ ಹೆಂಡತಿಯ ಗಂಡನಾಗಿ , ಉತ್ಸುಹಕನಾಗಿ, ನಿಸ್ಸಾಹಯಕನಾಗಿ ಹೀಗೆ ಎಲ್ಲಾ ಸ್ತರಗಳಲ್ಲೂ ತನ್ನ ಅಭಿನಯದಲ್ಲಿ ಬದಲಾವಣೆಯನ್ನೂ ತೋರಿಸುತ್ತಾ ತನ್ನ ವಯಸ್ಸಿಗೂ ಮೀರಿದ ಪಾತ್ರವನ್ನು ನಿರ್ವಹಿಸಿ, ನಾಟಕದ ಒಂದು ದೊಡ್ಡ ಶಕ್ತಿಯಾಗಿ ಉಳಿಯುತ್ತಾರೆ. ಬಹುಶಃ ಜಿ.ಕೆ.ಮಾಸ್ತರ್ ಅವರು ಇಳಿ ವಯಸ್ಸಿನಲ್ಲೂ ತರುಣನಂತೆ ರೋಜಾಳೊಂದಿಗೆ ಮಜಾ ಮಾಡುವ ಅಷ್ಟು ಸೊಗಸಾದ ಅಭಿನಯಕ್ಕೆ ಅಶೋಕ್ ಅವರ ನೈಜ್ಯ ವಯಸ್ಸು ಸಹಕಾರಿಯಾಗಿರಬಹುದೇನೊ..

ಇನ್ನೊಂದು ಮುಖ್ಯ ಪಾತ್ರವೆಂದರೆ ರೋಜಾ. ಇವರು ವಿದ್ಯಾರ್ಥಿನಿಯಾಗಿ ತನ್ನ ತಂದೆ ವಯಸ್ಸಿನ ಪ್ರಿನ್ಸಿಪಾಲ್ರನ್ನು ಅಚ್ಚುಕಟ್ಟಾಗಿ ಪ್ರೀತಿಸಿ, ಮಾಸ್ತರ್ ಅವರ ಕನಸ್ಸಲ್ಲೂ, ಮನಸ್ಸಲ್ಲೂ ತಾನೇ ಆಗಿ, ನಂತರ ಮಾಸ್ತರ್ರರಿಗೆ ಪಂಗನಾಮ ಹಾಕಿದರೂ ಅಭಿನಯದ ದೃಷ್ಟಿಯಿಂದ ಈ ಪಾತ್ರದಲ್ಲಿ ಅಭಿನಯಿಸಿದ ಪಲ್ಗುಣಿ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ.

ಇನ್ನೊಂದು ಪಾತ್ರದ ಕಲಾವಿದನ ಬಗ್ಗೆ ವಿಶೇಷವಾಗಿ ಹೇಳಲೇಬೇಕು. ಅವರು ಈ ನಾಟಕದ ಹೆಡ್ ಲೈನ್ ಅಲ್ಲದಿದ್ದರೂ, ಹೈಲೆಟ್ ಎಂಬುದನ್ನು ಎಲ್ಲರೂ ಒಪ್ಪಲೇಬೇಕು. ತನ್ನ ವಿಶಿಷ್ಠವಾದ ಅಭಿನಯದ ಮೂಲಕ ಲೆಕ್ಚರ್ ಎಂಟಿ ಪಾತ್ರದಲ್ಲಿ ಅಭಿನಯಿಸಿದ ಸಾಂಕೃತ್ಯ ತಾನು ರಂಗದ ಮೇಲೆ ಬಂದಾಗಿನಿಂದ ಪ್ರತಿ ಘಳಿಗೆಯೂ ಪ್ರೇಕ್ಷಕರಿಗೆ ಆರೋಗ್ಯಕರವಾದ ನಗುವಿನ ರಸದೌತನವನ್ನು ನೀಡುತ್ತಲೇ ಇರುತ್ತಾರೆ.

ಗಿರ್ರಪ್ಪನ ಪಾತ್ರದಲ್ಲಿ ಅಭಿನಯಿಸಿದ ಕೃಷ್ಣ ಮೋಹನ್ ಚೆನ್ನಾಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.
ಆದರೂ ಪಲ್ಗುಣಿ ಮತ್ತು ಕೃಷ್ಣ ಮೋಹನ್ ಕೊನೆಯಲ್ಲಿ ಅಂದರೆ ಪಶ್ಚಾತ್ತಾಪದ ದೃಶ್ಯಗಳಲ್ಲಿ ಇನ್ನೂ ಪರಿಣಾಮಕಾರಿಯಾಗಿ ಅಭಿನಯಿಸಬಹುದಿತ್ತು.
ಇನ್ನು ಮಾಸ್ತರ್ ಅವರ ಹೆಂಡತಿ ಗಿರಿಜಮ್ಮಳಾಗಿ ಪವಿತ್ರ, ಟಿಚರ್ ಆಗಿ ಮೇಘನಾ, ಪೆಪರ್ ಬಾಯ್ ಆಗಿ ರಚನ್ ತಮಗಿರುವ ಸೀಮತವಾದ ಪಾತ್ರಗಳಲ್ಲಿ ಚೆನ್ನಾಗಿ ಅಭಿನಯಿಸಲು ಪ್ರಯತ್ನಿಸಿದ್ದಾರೆ. ಹಾಗೆಯೇ ಸಿಪಾಯಿಯಾಗಿ ಪುರುಷೋತ್ತಮ್,
ಮೇಳದವರಾಗಿ ಪುನೀತ್, ಅಶ್ವ, ಮನೋಜ್, ವರುಣ್, ಮೋಹನ್ ನಾಯಕ್, ನಿಶ್ಚಯ್, ಶ್ರೀಧರ್ ಮತ್ತು ಕಾಲೇಜು ವಿದ್ಯಾರ್ಥಿಗಳಾಗಿ ಪೂಜಾ, ರಘು, ಶ್ವೇತಾ, ಸುದರ್ಶನ್ ಎಲ್ಲರೂ ಎಲ್ಲೂ ಬೇಸರವಾಗದಂತೆ ನಟಿಸಿದ್ದಾರೆ. ಡೈಲಾಗ್ ಡಿಲವರಿಯಲ್ಲಿ ಚಿಕ್ಕ ಪುಟ್ಟ ಅಕಸ್ಮಿಕ್ ತಪ್ಪುಗಳನ್ನು ಬದಿಗಿಟ್ಟರೆ ಎಲ್ಲಾ ಕಲಾವಿದರೂ ಸೈ ಎನಿಸಿಕೊಂಡು ನಾಟಕಕ್ಕೆ ಮೆರಗು ನೀಡಿದ್ದಾರೆ.

ಇಲ್ಲಿ ಹೇಳಬೇಕೆಂದರೆ, ಕ್ರಿಯಾಶೀಲನಾಗಿ ತನ್ನ ಕೆಲಸವನ್ನು ವರ್ತಮಾನದ ಪ್ರೇಕ್ಷಕನಿಗೆ ಎಲ್ಲೂ ಬೇಸರ ಆಗದಂತೆ ಮತ್ತು ರುಚಿಸುವಂತೆ ತನ್ನ ನಿರೂಪಣಾ ಶೈಲಿಯಿಂದ ಈ ನಾಟಕವನ್ನು ನಿರ್ದೇಶಿಸಿದ ನಿರ್ದೇಶಕ ಭಾಸ್ಕರ ನಿನಾಸಂ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ. ರಂಗಸ್ಥಳದ ಮೇಲೂ ಮನುಷ್ಯ ನೀರಿನಲ್ಲಿ ಈಜಬಹುದಾ ಎಂಬ ಪ್ರಶ್ನೆಯನ್ನು ಉತ್ತರವಾಗಿಸಿದ ರೀತಿ ಹಾಗೂ ಈ ರೀತಿಯ ಅನೇಕ ಪ್ರಯೋಗಗಳು ನಿರ್ದೇಶಕ ಮತ್ತು ತಂಡದ ಕ್ರಿಯಾಶೀಲತೆಯನ್ನು ಎತ್ತಿ ಹಿಡಿಯುತ್ತದೆ.

ಮೊದಲೇ ತಯಾರಿಸಿಕೊಂಡ ಸತ್ಯ ರಾಧಕೃಷ್ಣ ಅವರ ಸಂಗೀತ ಯುವ ಪೀಳಿಗೆಯ ಮನಸ್ಸುಗಳನ್ನು ಸಕತ್ ರಂಜಿಸುತ್ತದೆ. ಮತ್ತು ಅದಕ್ಕೆ ಪೂರಕವಾದ ಮಂಜು ನಾರಾಯಣ್ ಅವರ ವಿಶಿಷ್ಟವಾದ ಬೆಳಕು ಪ್ರೇಕ್ಷಕರ ಮನಸ್ಸು ಅತ್ತಿತ್ತ ಸುಳಿಯದಂತೆ ಜಾಗೃತೆ ವಹಿಸಿ ನಾಟಕವನ್ನು ಶ್ರೀಮಂತಗೊಳಿಸಿದೆ. ಒಟ್ಟಿನಲ್ಲಿ “￰ಮನುಷ್ಯನೊಳಗ ಅಗಾಧ ಶಕ್ತಿ ಐತಿ, ಆದ್ರ ನಾವು, ನಮನಮಗ ಅನುಕೂಲವಾದ ಸಣ್ಣ ಸಣ್ಣ ಭಾವನೆಗಳನ್ನಿಡ್ಕೊಂಡು ಅದ್ರೊಳಗ ಉರುಳಾಡ್ತಿವಿ.” ಎನ್ನುವುದನ್ನು ಹೇಳುವ “ಜೀಕೆ ಮಾಸ್ತರರ ಪ್ರಣಯ ಪ್ರಸಂಗ”ನಾಟಕವನ್ನು ಎಲ್ಲರೂ ಒಮ್ಮೆ ನೋಡಲೇಬೆಕು.

ಚಿತ್ರಕೃಪೆ: ರಘುನಾಥ್ ದೀಕ್ಷಿತ್

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here