ಬಲಗೈ ನಿಂದ ಮಾಡಿದ ಒಳ್ಳೆಯ ಕೆಲಸ , ಎಡಗೈ ಗೆ ಗೊತ್ತಾಗಬಾರದು ಎಂಬುದು ಬಹಳ ಹಿಂದಿನಿಂದಲೂ ಕೇಳಿದ್ದೇವೆ. ಅಂದರೆ ಮಾಡಿದ ಒಳ್ಳೆಯ ಕೆಲಸದ ಬಗ್ಗೆ ನಾವು ಬೀಗಬಾರದು, ಗರ್ವ ಪಡಬಾರದು ಎಂಬುದು ಅದರ ತಾತ್ಪರ್ಯ. ಈಗ ಅದಕ್ಕೆ ಅತ್ಯುತ್ತಮ‌ ನಿದರ್ಶನ ಎಂಬಂತೆ, ಐದು ವರ್ಷಗಳ ಹಿಂದೆ ಕನ್ನಡದ ಖ್ಯಾತ ನಟ ದುನಿಯಾ ವಿಜಯ್ ಮಾಡಿದ್ದ , ಪ್ರಚಾರ ಬಯಸದೆ ನಿಸ್ವಾರ್ಥ ಮನಸ್ಸಿನಿಂದ ಅವರು ಮಾಡಿದ್ದ ಒಂದು ಮಾನವೀಯ ಕಾರ್ಯ ಇದೀಗ ಬೆಳಕಿಗೆ ಬಂದು, ವಿಜಯ್ ಅವರ ಸ್ಥಾನ ಹಾಗೂ ಅವರ ಬಗೆಗಿನ ಅಭಿಮಾನವನ್ನು ಮತ್ತೊಂದು ಎತ್ತರದ ಹಂತಕ್ಕೆ ಕೊಂಡೊಯ್ದಿದೆ. ಹಾಗಾದರೆ ವಿಜಿ ಅವರು ಮಾಡಿದ ಆ ಮಹೋನ್ನತ ಕಾರ್ಯ ಏನು ಎಂಬುದಕ್ಕೆ ಇಲ್ಲಿದೆ ವಿವರ.

ಕನ್ನಡ ಕಲರ್ಸ್ ಸೂಪರ್ ಚಾನಲ್ ನಲ್ಲಿ ಬರುತ್ತಿರುವ ಜನಪ್ರಿಯ ಕಾರ್ಯಕ್ರಮ ಕನ್ನಡ ಕೋಗಿಲೆ. ಈ ಕಾರ್ಯಕ್ರಮದ ಜಡ್ಜ್ ಗಳಾಗಿ ಚಂದನ್ ಶೆಟ್ಟಿ, ಹಾಗೂ ಸಾಧುಕೋಕಿಲಾ ಇದ್ದಾರೆ. ಈಗ ನಾವು ಹೊರಟಿರುವುದು ಈ ಕಾರ್ಯಕ್ರಮದ ಬಗ್ಗೆಯಲ್ಲ.‌ ಇತ್ತೀಚೆಗೆ ಅಷ್ಟೆ ಈ ಕಾರ್ಯಕ್ರಮದಲ್ಲಿ ಕನ್ನಡದ ಪ್ರತಿಭಾವಂತ ನಟರಲ್ಲಿ ಒಬ್ಬರಾಗಿ, ತನ್ನದೇ ಆದ ನಟನೆ ಹಾಗೂ ಶೈಲಿಯಿಂದ ರಂಜಿಸಿ ಅಪಾರ ಅಭಿಮಾನಿಗಳನ್ನು ಪಡೆದಿರುವ ದುನಿಯಾ ವಿಜಿ ಅವರು ಮಾಡಿದ್ದ ಒಂದು ಉತ್ತಮವಾದ ಕೆಲಸದ ಬಗ್ಗೆ , ಇದುವರೆಗೂ ಎಲ್ಲಿಯೂ ಪ್ರಚಾರಕ್ಕೆ ಬರದ , ಆದರೆ ಆದರ್ಶ ಪ್ರಾಯವಾದಂತಹ ಅವರ ಕಾರ್ಯದ ಬಗ್ಗೆ ಇದೇ ಕಾರ್ಯಕ್ರಮ ದಲ್ಲಿ ಒಬ್ಬ ಸ್ಪರ್ಧಿಯು ಹೇಳಿ, ಎಲ್ಲರಲ್ಲೂ ವಿಜಯ್ ಅವರ ಬಗ್ಗೆ ಅಭಿಮಾನ ಮೂಡುವಂತೆ ಮಾಡಿದ್ದಾರೆ.

ದುನಿಯಾ ವಿಜಯ್ ಅವರು ನಮಗೆ ಒಬ್ಬ‌ ಉತ್ತಮ ನಟ ಎಂದು ತಿಳಿದಿದೆ. ಆದರೆ ಅವರೊಬ್ಬ ಮಾನವತಾವಾದಿ ಎಂಬುದು, ಹೃದಯದಲ್ಲಿ ಅಂತಃಕರಣವಿರುವ ಉತ್ತಮ ವ್ಯಕ್ತಿಯೆಂಬುದು ಕನ್ನಡ ಕೋಗಿಲೆ ಕಾರ್ಯ ಕ್ರಮದಲ್ಲಿ ಮಹದೇವ ಸ್ವಾಮಿಯವರು ಹೇಳಿದ ನಂತರ ನಮಗೆಲ್ಲಾ ತಿಳಿಯುತ್ತಿದೆ. ಮಹದೇವ ಸ್ವಾಮಿಯವರು ಹೇಳುವಂತೆ ಅದು 2013 ಆಗ ಸಾಧು ಕೋಕಿಲಾ ಅವರು ನಿರ್ದೇಶನ ಮಾಡುತ್ತಿದ್ದ ದೇವ್ರು ಎಂಬ ಚಿತ್ರ ನಿರ್ಮಾಣಕ್ಕಾಗಿ, ಚಿತ್ರ ತಂಡ ಮೈಸೂರಿನ ಜೈಲಿಗೆ ಚಿತ್ರೀಕರಣಕ್ಕಾಗಿ ಹೋಗಿದೆ. ಆ ಸಂದರ್ಭದಲ್ಲಿ ಚಿತ್ರದ ನಾಯಕರಾದ ದುನಿಯ ವಿಜಯ್ ಅವರು ಕೇವಲ ತಮ್ಮ ನಟನೆ ಮಾತ್ರ ಮುಗಿಸಿ ಬರಲಿಲ್ಲ.

ಅಲ್ಲಿದ್ದ ಖೈದಿಗಳನ್ನು ಮಾತನಾಡಿಸಿ, ಅವರ ಯೋಗ ಕ್ಷೇಮ ವಿಚಾರಿಸಿದ್ದಾರೆ. ಅದೇ ಸಂದರ್ಭದಲ್ಲಿ ಆ ಜೈಲಿನಲ್ಲಿದ್ದ ಮಹದೇವ ಸ್ವಾಮಿಯವರು ತಾಯಿಯ ಬಗ್ಗೆ ಒಂದು ಕವನವನ್ನು ಬರೆದಿದ್ದರಂತೆ. ವಿಜಯ್ ಅವರು ಆ ಕವನ ನೋಡಿದ್ದಾರೆ, ಆದರೆ ಮಹದೇವಸ್ವಾಮಿ ಅದನ್ನು ಗಮನಿಸಿರಲಿಲ್ಲ. ನಂತರ ಅವರು ಜೈಲಿಗೆ ಯಾರೋ ಬಂದಿದ್ದಾರೆ ಎಂದು ತಮ್ಮ ಪುಸ್ತಕ ಮುಚ್ಚಿ ಎತ್ತಿಟ್ಟಿದ್ದಾರೆ. ಅದಾದ ಸ್ವಲ್ಪ ಹೊತ್ತಿನ ನಂತರ ಮಹಾದೇವ ಅವರು ಊಟ ಮಾಡುತ್ತಿದ್ದಾಗ, ಅಲ್ಲಿಗೆ ಬಂದ ವಿಜಯ್ ಅವರು ತಾನೊಬ್ಬ ನಟ, ಸೆಲೆಬ್ರಿಟಿ ಎಂಬ ಗತ್ತು ತೋರದೆ, ಒಬ್ಬ ಆತ್ಮೀಯನಂತೆ, ಮಹಾದೇವ ಅವರ ತಟ್ಟೆಯಲ್ಲೇ ಸ್ವಲ್ಪ ಅನ್ನವನ್ನು ಎತ್ತಿಕೊಂಡು ತಿಂದರಂತೆ. ಹೀಗೆ ತಮ್ಮ ಸರಳತೆಯನ್ನು ಪ್ರದರ್ಶಿಸಿದ ವಿಜಯ್ ಅವರ ಈ ವರ್ತನೆ ಮಹಾದೇವ ಅವರಿಗೆ ಆಶ್ಚರ್ಯ ತಂದರೆ, ಅನಂತರ ಮಹಾದೇವ್ ಕವನ ಬರೆದಿದ್ದ ಪುಸ್ತಕ ಕೇಳಿ ಪಡೆದು, ಅದರಲ್ಲಿ ತಾವೇ ಆಟೋಗ್ರಾಫ್ ಮಾಡಿ ಕೊಟ್ಟರಂತೆ. ಬಹುಶಃ ಸಿನಿಮಾ ನಟರಲ್ಲಿ ಇಂತಹ ಸರಳ ವ್ಯಕ್ತಿತ್ವ ನೋಡಲು ಸಿಗುವುದು ಅಪರೂಪ.

ಇದಾದ ನಂತರ ವಿಜಯ್ ಅವರು ಖೈದಿಗಳನ್ನು ನೋಡಿ , ನಿಮಗೆಲ್ಲಾ ಒಂದು ಒಳ್ಳೆ ಊಟ ಕೊಡಿಸಬೇಕು ಅನ್ನಿಸುತ್ತಿದೆ ಅಂತ ಹೇಳಿದರಂತೆ. ಮಹಾದೇವ ಮತ್ತು‌ ಇತರರು ಚರ್ಚಿಸಿ ಊಟ ಹಾಕಿಸಿದರೆ ಒಂದು ದಿನ , ಮರೆತು ಬಿಡುತ್ತೇವೆ, ಅದರ ಬದಲು ಅಲ್ಲಿ ಕೆಲವರು ದಂಡ ಕಟ್ಟಲಾಗದೆ ಇದ್ದಾರೆ. ಅಂತಹವರ ದಂಡ ಕಟ್ಟಿದರೆ ಅವರು ಜೈಲಿಂದ ಬಿಡುಗಡೆ ಆಗುತ್ತಾರೆ ಎಂದು ಹೇಳಿದಾಗ, ವಿಜಯ್ ಅವರು ಮರು ಮಾತನಾಡದೆ, ಆ ಖೈದಿಗಳ ಜೀವನ ಸುಧಾರಿಸಲು ತನಗೆ ಸಿಕ್ಕ ಸದವಕಾಶ ಎಂಬಂತೆ, ಸುಮಾರು ಮೂರುವರೆ ಲಕ್ಷದಷ್ಟು ಹಣ ಕೊಟ್ಟು ಒಟ್ಟು 62 ಜನರನ್ನು ಬಿಡುಗಡೆ ಮಾಡಿಸಲು ನೆರವಾದರಂತೆ. ಆದರೆ ಅವರು ಅಲ್ಲಿನ ಜೈಲರ್ ಗೆ ಹಾಕಿದ ಒಂದೇ ಷರತ್ತು ಯಾವುದೇ ಕಾರಣಕ್ಕೂ ಆ ಸುದ್ದಿ ಮಾದ್ಯಮಗಳಿಗೆ ಹೇಳಬಾರದು ಎಂದು.

 

ಆದ್ದರಿಂದಲೇ ಇಷ್ಟು ವರ್ಷಗಳಾದರೂ ಈ ಸುದ್ದಿ ಎಲ್ಲೂ ಪ್ರಚಾರವಾಗಿರಲಿಲ್ಲ. ಆದರೆ
ಬಹುಶಃ ಮಹಾದೇವ ಸ್ವಾಮಿಯವರು ಟಿವಿ ಕಾರ್ಯಕ್ರಮದಲ್ಲಿ ವಿಜಯ್ ಅವರು ಮಾಡಿರುವ ಈ ಕಾರ್ಯದ ಬಗ್ಗೆ ಹೇಳದಿದ್ದರೆ ಅದು ಯಾರಿಗೂ ತಿಳಿಯುತ್ತಿರಲಿಲ್ಲ. ಆದರೆ ಈಗ ಈ ವಿಷಯ ಹೊರಗೆ ಬಂದಿರುವುದು ನಿಜವಾಗಿಯೂ ಒಳ್ಳೆಯದು, ಏಕೆಂದರೆ ಇಂತಹ ಕಾರ್ಯಗಳ ಬಗ್ಗೆ ಇತರರು ತಿಳಿದರೆ, ಅದು ಹಲವರಿಗೆ ಸ್ಪೂರ್ತಿಯಾಗಿತ್ತದೆ. ಹಾಗೂ ಇಂತಹ ನಾಯಕರು ನಿಜ ಜೀವನದಲ್ಲೂ ನಾಯಕರಾಗಿ ಅಭಿಮಾನಿಗಳ ಮನದಲ್ಲಿ ಉಳಿಯುತ್ತಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here