EDಗೆ ಸಿಗದ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್-ದೆಹಲಿ ನಿವಾಸದಲ್ಲಿದ್ದ ಬಿಎಂಡಬ್ಲ್ಯು ಕಾರು ವಶಕ್ಕೆ
ದೆಹಲಿ: ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಅವರ ದೆಹಲಿ ನಿವಾಸದಿಂದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೆಲವು ದಾಖಲೆಗಳು ಹಾಗೂ ಬಿಎಂಡಬ್ಲ್ಯು ಕಾರನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ.ವಶಕ್ಕೆ ಪಡೆದ ಕಾರು ಹಾಗೂ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ಅಕ್ರಮ ಹಣ ಬಳಸಿ ಖರೀದಿಸಿದ್ದಾರೆ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ.
ಸೊರೇನ್ ಬಂಧನವಾಗುವ ಸಾಧ್ಯತೆ ಹೆಚ್ಚಾಗಿದೆ. ಬಂಧಿಸುವುದಕ್ಕೂ ಮುನ್ನ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೊರೇನ್ ಅವರ ಹೇಳಿಕೆ ಪಡೆಯುವುದು ಮುಖ್ಯವಾಗಿದೆ. ಆದರೆ ಕೇಂದ್ರೀಯ ತನಿಖಾ ಸಂಸ್ಥೆಗೆ ಹೇಮಂತ್ ಸೊರೇನ್ ಅವರೆಲ್ಲಿದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿದು ಬಂದಿದೆ.
ಸರ್ಕಾರಿ ಭೂಮಿಯ ಮಾಲಿಕತ್ವವನ್ನು ಬದಲಾವಣೆ ಮಾಡುವುದರಲ್ಲಿ ಬೃಹತ್ ಜಾಲವನ್ನೊಳಗೊಂಡ 600 ಕೋಟಿ ರೂಪಾಯಿ ಮೊತ್ತದ ಹಗರಣ ಇದಾಗಿದೆ. ಈ ಸರ್ಕಾರಿ ಭೂಮಿಯನ್ನು ಕ್ರಮೇಣ ಬಿಲ್ಡರ್ ಗಳಿಗೆ ಮಾರಟ ಮಾಡಲಾಗಿದೆ ಎಂದು ಆರೋಪಿಸಿರುವ ಜಾರಿ ನಿರ್ದೇಶನಾಲಯ, ಪ್ರಕರಣದ ಸಂಬಂಧ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಗೆ 7 ಬಾರಿ ನೊಟೀಸ್ ಜಾರಿಗೊಳಿಸಿತ್ತು.
ಆದರೆ ಈ ನೊಟೀಸ್ ಗಳನ್ನು ಸೊರೇನ್ ಕ್ಯಾರೇ ಅನ್ನುದ ಹಿನ್ನಲೆ , ಜಾರಿ ನಿರ್ದೇಶನಾಲಯದ ಸಮನ್ಸ್ ನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.