ಕೊರೊನಾ ವೈರಸ್ ಭೀತಿಯಿಂದ ಜನರು ಲಾಕ್ ಡೌನ್ ನಿಂದ ಮನೆಯಲ್ಲಿ ಉಳಿಯಬೇಕಾಗಿದೆ. ಏಕೆಂದರೆ ಮಾರಕ ರೋಗ ಜನರಿಂದ ಜನರಿಗೆ ಹರಡುವುದು, ಅವರ ಜೀವನಕ್ಕೆ ಸಮಸ್ಯೆಯಾಗಿರುವಾಗಲೇ, ಇನ್ನೊಂದೆಡೆ ಇದು ಪ್ರಾಣಿ ಪಕ್ಷಿಗಳಿಗೆ ಸ್ವತಂತ್ರವನ್ನು ನೀಡಿದೆ‌. ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಪ್ರಾಣಿ ಪಕ್ಷಿಗಳು ಸ್ವತಂತ್ರವಾಗಿ ಸುತ್ತಾಡುತ್ತಿರುವ ವಿಡಿಯೋಗಳನ್ನು ಹಲವರು ಹಂಚಿಕೊಂಡು, ಅದನ್ನು ನೋಡಿದ ಎಲ್ಲರೂ ಕೂಡಾ ಬೆರಗುಗಣ್ಣುಗಳಿಂದ ನೋಡುವಂತಾಗಿದೆ. ಈಗ ಅಂತಹುದೇ ಮತ್ತೊಂದು ವಿಡಿಯೋ ಎಲ್ಲ ಕಡೆ ವೈರಲ್ ಆಗಿ ಗಮನ ಸೆಳೆದಿದೆ.

ಡೆಹ್ರಾಡೂನ್ ನ ಜೊಲ್ಲಿಯಲ್ಲಿ ಆನೆಯೊಂದು ಮುಂಜಾನೆ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಲ್ಲಿ ಮತ್ತೊಂದು ಗಮ್ಮತ್ತಿನ ವಿಷಯ ಏನೆಂದರೆ ಆನೆ ರಸ್ತೆಯಲ್ಲಿ ನಡೆದು ಬರುವಾಗ ರಸ್ತೆಯ ಒಂದು ತಿರುವಿನಿಂದ ಬೈಕ್ ನಲ್ಲಿ ಒಬ್ಬ ವ್ಯಕ್ತಿ ಬಂದಿದ್ದು, ಆತನಿಗೆ ಆನೆ ಬರುತ್ತಿರುವ ಸುಳಿವು ಕೂಡಾ ಇರಲಿಲ್ಲ. ತಿರುವು ಇದ್ದುದ್ದರಿಂದ ಆ ವ್ಯಕ್ತಿಗೆ ಆನೆ ಕಾಣದೆ ಬೈಕ್ ನಲ್ಲಿ ಅದರ ಮುಂದಕ್ಕೆ ಬಂದಿದ್ದಾನೆ. ಆತನಿಗೆ ಆ ಕ್ಷಣದಲ್ಲಿ ಭಯವಾಗಿದ್ದು ಖಚಿತ‌. ಅನಂತರ ತನ್ನ ಬೈಕ್ ಅಲ್ಲೇ ಬಿಟ್ಟು ಓಡಿದ್ದಾನೆ.

ಆದರೆ ಆನೆ ಮಾತ್ರ ಆತನನ್ನು ಏನೂ ಮಾಡದೆ ಸುಮ್ಮನಾಗಿದೆ. ಲಾಕ್ ಡೌನ್ ನಿಂದ ರಸ್ತೆಗಳು ಖಾಲಿ, ಮಾನವನ ಸದ್ದು ಸುದ್ದಿಯಿಲ್ಲದ ಕಡೆ ಪ್ರಾಣಿಗಳು ಆರಾಮವಾಗಿ ಓಡಾಡುತ್ತಿವೆ‌. ಇನ್ನು ಬೈಕ್ ಸವಾರ ಓಡಿ ಹೋದ ನಂತರ ಆನೆ ಕೂಡಾ ತನ್ನ ಪಾಡಿಗೆ ತಾನು ನಡೆದು ಅಲ್ಲಿಂದ ಹೋಗಿದೆ. ಪ್ರಾಣಿಗಳು ತಮಗೆ ಅಪಾಯ ಎದುರಾಗದ ಹೊರತು ಅವು ತಮ್ಮ ಪಾಡಿಗೆ ತಾವು ಇರುತ್ತವೆ ಎನ್ನುವಂತೆ ಇದೆ ಈ ವಿಡಿಯೋ. ಕೊರೊನಾ ಎಫೆಕ್ಟ್ ನ ಭೀತಿಯ ನಡುವೆಯೇ ಪ್ರಾಣಿಗಳ ಇಂತಹ ನೋಟ ಒಂದು ಸಂತಸವನ್ನು ಜನರಿಗೆ ನೀಡುತ್ತಿದೆ.

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here