Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಹಸು ಖರೀದಿಗೆ ಡಿಸಿಸಿ ಬ್ಯಾಂಕ್‌ನಿಂದ: ಸಬ್ಸಿಡಿ ಸಾಲ: ಜೆ.ಆರ್.ಷಣ್ಮುಖಪ್ಪ

 

ದಾವಣಗೆರೆ: ಜಿಲ್ಲೆಯಲ್ಲಿ ಹೈನುಗಾರಿಕೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಹಸುಗಳ ಖರೀದಿಗೆ ಸಬ್ಸಿಡಿ ನೀಡುವ ಯೋಜನೆ ಘೋಷಿಸಿದ್ದು, ಅವರ ಆಶಯದಂತೆ ಜಿಲ್ಲಾ ಡಿಸಿಸಿ ಬ್ಯಾಂಕ್ ಹಸುಗಳ ಖರೀದಿಗಾಗಿ ಸಾಲ ನೀಡಲಿದೆ ಎಂದು ಬ್ಯಾಂಕಿನ ನಿರ್ದೇಶಕ ಜೆ.ಆರ್.ಷಣ್ಮುಖಪ್ಪ ಹೇಳಿದರು.

ತಾಲ್ಲೂಕಿನ ಹದಡಿ ಗ್ರಾಮದಲ್ಲಿರುವ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸಂಘದ ನೂತನ ಮಳಿಗೆ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ವ್ಯವಸಾಯದ ಜೊತೆಗೆ ಉಪಕಸುಬಾಗಿ ಹೈನುಗಾರಿಕೆಯನ್ನು ಜಿಲ್ಲೆಯ ಬಹಳಷ್ಟು ರೈತರು ಅವಲಂಭಿಸಿದ್ದಾರೆ. ಇದರಿಂದ ಸಾವಿರಾರು ಕುಟುಂಬಗಳಲ್ಲಿ ನೆಮ್ಮದಿ ನೆಲೆಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹೈನುಗಾರಿಕೆಯನ್ನು ಮತ್ತಷ್ಟು ವಿಸ್ತರಿಸಿ ಈ ಕುಟುಂಬಗಳನ್ನು ಆರ್ಥಿಕವಾಗಿ ಸ್ವಾವಲಂಭಿಗಳನ್ನಾಗಿ ಮಾಡುವುದು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಹಸು ಖರೀದಿಗೆ ೪೦ ಸಾವಿರ ರೂ ಸಬ್ಸಿಡಿ ನೀಡುವುದಾಗಿ ಸಚಿವರು ಹೇಳಿದ್ದಾರೆ. ಇದರ ಅನ್ವಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಪ್ರತಿ ಹಾಲು ಉತ್ಪಾದಕರಿಗೆ ೨ ಹಸು ಖರೀದಿಗೆ ೮೦ ಸಾವಿರ ರೂ ಸಬ್ಸಿಡಿ ರೂಪದಲ್ಲಿ ಸಾಲ ನೀಡಲಿದೆ ಎಂದು ಷಣ್ಮುಖಪ್ಪ ಹೇಳಿದರು.

ರಾಜ್ಯ ಸರ್ಕಾರ ಅಲ್ಪಾವಧಿ ಬೆಳೆಸಾಲವನ್ನು ೩ ರಿಂದ ೫ ಲಕ್ಷಕ್ಕೆ, ಮಧ್ಯಮಾವಧಿ ಸಾಲವನ್ನು ೫ ರಿಂದ ೧೦ ಲಕ್ಷಕ್ಕೆ ಹೆಚ್ಚಳ ಮಾಡಿದೆ. ಇದರ ಉಪಯೋಗವನ್ನು ಎಲ್ಲ ರೈತರು ಪಡೆದುಕೊಳ್ಳಬೇಕೆಂದು ಕರೆ ನೀಡಿದ ಅವರು, ಸಹಕಾರ ಸಂಘಗಳಲ್ಲಿ ಹೆಚ್ಚಿನ ಠೇವಣಿ ಇಡುವಂತೆ ಆಡಳಿತ ಮಂಡಳಿಗಳು ಸದಸ್ಯರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು, ಸಾಲ ವಸೂಲಾತಿಗೂ ಕೂಡ ಅಷ್ಟೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಾಗ ಮಾತ್ರ ಸಹಕಾರಿ ಕ್ಷೇತ್ರ ಉಳಿಯಲು ಸಾಧ್ಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ಸಹಕಾರ ಸಂಘಗಳು ನೀಡುವ ಬಡ್ಡಿ ರಹಿತ ಸಾಲದ ಪ್ರಯೋಜನವನ್ನು ಹೆಚ್ಚು ರೈತರು ಪಡೆದುಕೊಳ್ಳಬೇಕು. ಸಹಕಾರ ಸಂಘಗಳು ಕೂಡ ಬಡವರಿಗೆ ಹೆಚ್ಚು ಸಾಲ ನೀಡಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ನಿಟ್ಟಿನಲ್ಲಿ ಮುಂದೆ ಬರಬೇಕು ಎಂದರು.

ಇದೇ ವೇಳೆ ಹದಡಿ ಗ್ರಾಮದಲ್ಲಿ ಗೋದಾಮು ನಿರ್ಮಾಣಕ್ಕೆ ಅನುದಾನ ನೀಡುವಂತೆ ಶಾಸಕರಿಗೆ ಮನವಿ ಸಲ್ಲಿಸಲಾಯಿತು. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಬಿ.ಶೇಖರಪ್ಪ, ಮಾತನಾಡಿದರು. ಹದಡಿ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಎಂ.ಎಚ್.ಕುಬೇರಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಜಿಪಂ ಸದಸ್ಯ ಹದಡಿ ನಿಂಗಪ್ಪ, ಉಪಾಧ್ಯಕ್ಷ ಎ.ಡಿ.ಮಹಾಂತೇಶ್, ನಿರ್ದೇಶಕರುಗಳಾದ ಎಂ.ಡಿ.ನಿAಗಪ್ಪ, ಟಿ.ಬಿ.ಮಹಾಂತೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.