ಕೊರೊನಾ ವೈರಸ್ ಸೋಂಕು ಹರಡುವ ಭೀತಿಯಲ್ಲಿ ಇಡೀ ದೇಶ ಲಾಕ್ ಡೌನ್ ಆಗಿ ಜನರು ಮನೆಯಲ್ಲೇ ಇರುವ ಮೂಲಕ ಲಾಕ್ ಡೌನ್ ಪಾಲನೆ ಮಾಡುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಕೊರೊನಾ ನಿಯಂತ್ರಣಕ್ಕೆ ಇರುವ ಏಕೈಕ ಮಾರ್ಗ‌. ಆದರೆ ಲಾಕ್ ಡೌನ್ ಅರ್ಥ ಹಾಗೂ ಅನಿವಾರ್ಯತೆಯ ಅರಿವು ಇಲ್ಲದ ಕಿಡಿಗೇಡಿಗಳು ಮಾತ್ರ ಅನಾವಶ್ಯಕವಾಗಿ ಹೊರಬಂದು ತಮ್ಮ ಚಟುವಟಿಕೆಗಳನ್ನು ನಡೆಸಿ ಲಾಕ್ ಡೌನ್ ಪಾಲನೆ ಮಾಡುವ ಬದಲು ಅದನ್ನು ಮುಗಿಯುತ್ತಿದ್ದಾರೆ. ಒಂದೆಡೆ ವೈದ್ಯಕೀಯ ಇಲಾಖೆ, ಮತ್ತೊಂದೆಡೆ ಪೋಲಿಸ್ ಇಲಾಖೆ ಸೋಂಕು ಹರಡದಂತೆ ತಡೆಯಲು ಹಗಲಿರುಳು ಶ್ರಮಿಸುತ್ತಲೇ ಇದೆ.

ಮುಂದುವರೆದ ರಾಷ್ಟ್ರಗಳಲ್ಲೇ ಕೊರೊನಾ ಸೃಷ್ಟಿಸಿರುವ ಅಟ್ಟಹಾಸವನ್ನು ನೋಡಿ ಕೂಡಾ ಜನರು ಎಚ್ಚೆತ್ತುಕೊಳ್ಳದಿರುವುದು ದುರಾದೃಷ್ಟವಾಗಿದೆ. ಪೋಲಿಸರ ಲಾಠಿ ಏಟಿಗೆ ಜಗ್ಗದ ಹಲವರು, ಅವುಗಳನ್ನು ವಿಡಿಯೋ ಮಾಡಿ ಪೋಲಿಸರು ಕೆಟ್ಟ ವರ್ತನೆ ತೋರುತ್ತಿದ್ದಾರೆ ಎಂದು ಬಿಂಬಿಸುತ್ತಿದ್ದಾರೆ. ಇದೆಲ್ಲವನ್ನು ಗಮನಿಸಿದ ಸರ್ಕಾರ ಇದೀಗ ಹೊಸ ತೀರ್ಮಾನ ಒಂದನ್ನು ಮಾಡಿದೆ. ಇನ್ನು ಮುಂದೆ ಅನಗತ್ಯವಾಗಿ ರಸ್ತೆಗೆ ಇಳಿಯುವವರ ವಿರುದ್ಧ ವಿಶೇಷ ಪ್ರಕರಣವನ್ನು ದಾಖಲು ಮಾಡಲಾಗುತ್ತದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಅನ್ವಯ ಪ್ರಕರಣ ದಾಖಲಿಸಲು ರಾಜ್ಯ ಕಂದಾಯ ಇಲಾಖೆಯ ಜಂಟಿ ಕಾರ್ಯದರ್ಶಿ ಆದೇಶ ಮಾಡಿದ್ದಾರೆ.

ಈ ಕಾಯ್ದೆಯ ಅನ್ವಯ ಸೆಕ್ಷನ್ 51, 52, 53, 54 ಹಾಗೂ 57 ಪ್ರಕಾರ ಪ್ರಕರಣ ದಾಖಲಿಸಲು ಮುಂದಿನ ಆದೇಶ ಮಾಡುವವರೆಗೆ ರಾಜ್ಯ ಪೊಲೀಸ್‌ ಇಲಾಖೆಗೆ ರಾಜ್ಯ ಸರ್ಕಾರ ಅಧಿಕಾರವನ್ನು ನೀಡಿದೆ. ಏಪ್ರಿಲ್ 6 ರಿಂದಲೇ ಈ ಕಾಯಿದೆ ಉಪಯೋಗಿಸಿ ಪ್ರಕರಣಗಳನ್ನು ದಾಖಲಿಸಲು ಪೋಲಿಸರಿಗೆ ಅಧಿಕಾರವನ್ನು ನೀಡಲಾಗಿದೆ. ಅಲ್ಲದೆ ಈ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾದರೆ ಜಾಮೀನು ಸಿಗುವುದು ಕೂಡಾ ಕಷ್ಟ ಸಾಧ್ಯ ಎನ್ನಲಾಗಿದ್ದು, ಇನ್ನು ಮುಂದೆ ಅನಾವಶ್ಯಕವಾಗಿ ರಸ್ತೆಗೆ ಇಳಿಯುವವರು ಎಚ್ಚೆತ್ತುಕೊಳ್ಳಬೇಕಿದೆ ಮತ್ತು ಸರ್ಕಾರಕ್ಕೆ ಹಾಗೂ ಸಾರ್ವಜನಿಕರಿಗೆ ತೊಂದರೆ ಕೊಡದಂತೆ ಜಾಗ್ರತೆ ವಹಿಸಬೇಕಾಗಿದೆ‌.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here