Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

G20 ಇನ್ಮುಂದೆ G21 : ಆಫ್ರಿಕಾ ಯೂನಿಯನ್‌ಗೆ ಜಿ-20ಯ ಖಾಯಂ ಸದಸ್ಯತ್ವ – ಪ್ರಧಾನಿ ಮೋದಿಯಿಂದ ಅಧಿಕೃತ ಘೋಷಣೆ

ಆಫ್ರಿಕನ್ ಯೂನಿಯನ್ ಗೆ ಜಿ-20ಯ ಖಾಯಂ ಸದಸ್ಯತ್ವವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.

ಹೊಸದಿಲ್ಲಿಯಲ್ಲಿ ಜಿ 20 ಶೃಂಗಸಭೆಯ ಉದ್ಘಾಟನಾ ಭಾಷಣ ಮಾಡಿದ ಅವರು, ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್’ ಎಂಬ ಕಲ್ಪನೆಯು ಜಗತ್ತಿಗೆ ಮಾರ್ಗದರ್ಶಿಯಾಗಬಹುದು ಎಂದು ಹೇಳಿದರು.

ಜಿ 20 ಸದಸ್ಯ ರಾಷ್ಟ್ರಗಳ ಅನುಮೋದನೆಯ ಅನಂತರ ಅವರು, ಆಫ್ರಿಕನ್ ಯೂನಿಯನ್ ಕೂಡ ಸದಸ್ಯ ರಾಷ್ಟ್ರಗಳ ಶಾಶ್ವತ ಸದಸ್ಯತ್ವವನ್ನು ಪಡೆಯುತ್ತಿದೆ. ಯುರೋಪಿಯನ್ ಒಕ್ಕೂಟದಲ್ಲಿಯೂ ಇದೇ ಸ್ಥಾನಮಾನವನ್ನು ಪಡೆಯುತ್ತದೆ ಘೋಷಿಸಿದರು.

ಇದಕ್ಕೆ ಎಲ್ಲ ನಾಯಕರು ಚಪ್ಪಾಳೆಯೊಂದಿಗೆ ಸಹಮತ ವ್ಯಕ್ತಪಡಿಸಿದರು. ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಆಫ್ರಿಕನ್ ಯೂನಿಯನ್ ಅಧ್ಯಕ್ಷ ಅಜಾಲಿ ಅಸ್ಸೌಮಾನಿ ಅವರನ್ನು ವೇದಿಕೆಗೆ ಕರೆತಂದರು. ಪ್ರಧಾನಿ ಮೋದಿ ಅವರನ್ನು ತಬ್ಬಿ ಅಭಿನಂದಿಸಿದರು.

ಭಾರತದ ಗಮನವು ಮಾನವ ಕೇಂದ್ರಿತ ಮತ್ತು ಅಂತರ್ಗತ ಅಭಿವೃದ್ಧಿಯ ಮೇಲಿದೆ. ಈ ಶೃಂಗಸಭೆಯನ್ನು ‘ಜನರ G20′ ಎಂದು ಬಣ್ಣಿಸಿದ ಮೋದಿ, ಮೊರಾಕೊದಲ್ಲಿ ಸಂಭವಿಸಿದ ಭೂಕಂಪದ ಬಗ್ಗೆ ಸಂತಾಪ ಸೂಚಿಸಿದರು. ಈ ಕಷ್ಟದ ಸಮಯದಲ್ಲಿ ಮೊರಾಕೊಗೆ ಸಾಧ್ಯವಿರುವ ಎಲ್ಲ ನೆರವು ನೀಡಲು ಭಾರತ ಸಿದ್ದ ಎಂದು ಹೇಳಿದರು.

ಆಹಾರ ಮತ್ತು ಇಂಧನ ನಿರ್ವಹಣೆ, ಭಯೋತ್ಪಾದನೆ, ಸೈಬರ್ ಭದ್ರತೆ, ಆರೋಗ್ಯ, ಇಂಧನ ಅಥವಾ ನೀರಿನ ಭದ್ರತೆಯ ನಡುವಿನ ಸಮಸ್ಯೆಗಳನ್ನು ಪರಿಹರಿಸಲು ಜಾಗತಿಕ ಸಮುದಾಯವು ಒಗ್ಗೂಡಲು ಮತ್ತು ಪರಿಹಾರವನ್ನು ಕಂಡುಕೊಳ್ಳುವ ಸಮಯ ಕೂಡಿಬಂದಿದೆ. ಉತ್ತರ ಮತ್ತು ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಒಂದಾಗಬೇಕಿದೆ ಎಂದರು.

ನಾವು ಕೋವಿಡ್ ಅನ್ನು ಸೋಲಿಸಲು ಸಾಧ್ಯವಾಗಿದೆ ಎಂದರೆ, ಯುದ್ಧದಿಂದ ಉಂಟಾದ ನಂಬಿಕೆಯ ಕೊರತೆಯನ್ನು ದೂರ ಮಾಡಲೂ ನಮ್ಮಿಂದ ಸಾಧ್ಯವಾಗಬಹುದು. ಕೋವಿಡ್ ನಂತರದ ಪ್ರಪಂಚವು ನಂಬಿಕೆಯ ಕೊರತೆಯಿಂದ ಬಳಲುತ್ತಿದೆ ಮತ್ತು ಯುದ್ಧವು ಅದನ್ನು ಮತ್ತಷ್ಟು ಹೆಚ್ಚಾಗಿಸಿದೆ ಎಂದು ಹೇಳಿದರು.