Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

G20 Summit: ದೆಹಲಿಯ ಪ್ರಗತಿ ಮೈದಾನದಲ್ಲಿ ಸ್ಥಾಪಿಸಲಾದ ನಟರಾಜ ಪ್ರತಿಮೆ ತಮಿಳುನಾಡು ಕಲೆಯ ಹೆಮ್ಮೆ; ಶಿಲ್ಪಿ ಶ್ರೀಕಂಠ ಸ್ತಪತಿ…!

ನವದೆಹಲಿ: ಸೆ.9 ಮತ್ತು 10ರಂದು ದೆಹಲಿಯಲ್ಲಿ ಜಿ20 ಶೃಂಗಸಭೆ ನಡೆಯಲಿದ್ದು, ಸಮ್ಮೇಳನ ನಡೆಯುವ ಸಭಾಂಗಣದ ಮುಂಭಾಗದಲ್ಲಿ 28 ಅಡಿ ಎತ್ತರ ಹಾಗೂ 18 ಟನ್ ತೂಕದ ವಿಶ್ವದ ಅತಿ ದೊಡ್ಡ ನಟರಾಜ ಪ್ರತಿಮೆಯನ್ನು ಇರಿಸಲಾಗಿದೆ.

ಈ ನಟರಾಜನ ಪ್ರತಿಮೆಯನ್ನು ತಂಜಾವೂರು ಜಿಲ್ಲೆಯ ಕುಂಭಕೋಣಂ ಬಳಿಯ ಸ್ವಾಮಿಮಲೈನಲ್ಲಿರುವ ದೇವ ಸೇನಾಧಿಪತಿ ಸ್ಕಲ್ಪ್ಚರ್ ಗ್ಯಾಲರಿಯಲ್ಲಿ ರಚಿಸಲಾಗಿದೆ.

ಭಾರತದ ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿ ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್ ನೇತೃತ್ವದಲ್ಲಿ ನಟರಾಜನ ಈ ಬೃಹತ್ ಪ್ರತಿಮೆಯನ್ನು ದೆಹಲಿಗೆ ತರಲಾಯಿತು ಮತ್ತು ಜಿ 20 ಶೃಂಗಸಭೆ ನಡೆಯುವ ಪ್ರಗತಿ ಮೈದಾನದ ಮುಂಭಾಗದಲ್ಲಿ ಸ್ಥಾಪಿಸಲಾಯಿತು. ಈ ಪ್ರತಿಮೆಯನ್ನು ಕೆತ್ತಿದ ಪ್ರಮುಖ ಶಿಲ್ಪಿಗಳಲ್ಲಿ ಒಬ್ಬರಾದ ಸ್ವಾಮಿಮಲೈ ಶ್ರೀಕಂಠ ಸ್ತಪತಿ ಮಾತನಾಡಿ, ಇದು ತಮಿಳುನಾಡು ಮತ್ತು ತಮಿಳುನಾಡು ಕಲೆಯ ಹೆಮ್ಮೆ, ಇದು ನಮಗೆ ಕೊನೆಯದು, ನಮ್ಮ ಕಲೆಯ ವೈಭವವನ್ನು ಭವಿಷ್ಯದ ಪೀಳಿಗೆಗೆ ತಿಳಿಯುವಂತೆ ಈ ಪ್ರತಿಮೆಯನ್ನು ಮಾಡಲಾಗಿದೆ. ಚಿನ್ನ, ಬೆಳ್ಳಿ, ಸೀಸ, ತಾಮ್ರ, ತವರ, ಪಾದರಸ, ಕಬ್ಬಿಣ ಮತ್ತು ಸತು ಸೇರಿ ಅಷ್ಟಧಾತುಗಳಿಂದ ಈ ವಿಗ್ರಹ ತಯಾರಿಸಲಾಗಿದೆ ಎಂದು ಹೇಳಿದರು.

ಒಂದೇ ಅಚ್ಚಿನಲ್ಲಿರುವ ವಿಶ್ವದ ಅತಿದೊಡ್ಡ ನಟರಾಜನ ಪ್ರತಿಮೆಗಳಲ್ಲಿ ಒಂದಾದ ಈ ಬೃಹತ್ ನಟರಾಜ ವಿಗ್ರಹವನ್ನು ಸಹೋದರರಾದ ದೇವ ಸೇರಿದಂತೆ 30 ಶಿಲ್ಪಿಗಳ ತಂಡದಿಂದ ತಯಾರಿಸಲಾಗಿದೆ. ನಟರಾಜನ ಈ ಬೃಹತ್ ಪ್ರತಿಮೆಯ ಶೇ.75 ರಷ್ಟು ಕೆಲಸ ಪೂರ್ಣಗೊಂಡಿದ್ದ ಸಮಯದಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಅಧ್ಯಕ್ಷ ಮತ್ತು ಪ್ರಾಧ್ಯಾಪಕ ಅಚಲ್ ಪಾಂಡ್ಯ ನೇತೃತ್ವದ ತಂಡವು ಕಳೆದ ತಿಂಗಳು 25 ರಂದು ಭಾರೀ ಭದ್ರತೆಯಲ್ಲಿ ಸ್ವಾಮಿಮಲೈನಿಂದ ದೆಹಲಿಗೆ ಮೂರ್ತಿಯನ್ನು ಕೊಂಡೊಯ್ದಿತ್ತು.

30 ಜನರ ತಂಡ ದೆಹಲಿಗೆ ತೆರಳಿ ಪ್ರತಿಮೆಯ ಉಳಿದ ಕೆಲಸಗಳನ್ನು ಕೈಗೊಂಡು ಪ್ರತಿಮೆಯನ್ನು ಸಂಪೂರ್ಣವಾಗಿ ವಿನ್ಯಾಸಗೊಳಿಸಿತು. ನಂತರ G20 ಶೃಂಗಸಭೆಯ ಸ್ಥಳದ ಮುಂಭಾಗದಲ್ಲಿ ನಟರಾಜನ ಈ ದೈತ್ಯಾಕಾರದ ಪ್ರತಿಮೆಯನ್ನು ಸ್ಥಾಪಿಸಲಾಯಿತು. ಪ್ರಗತಿ ಮೈದಾನದಲ್ಲಿ ಸ್ಥಾಪಿಸಲಾಗಿರುವ 28 ಅಡಿ ಎತ್ತರ, 21 ಅಡಿ ಅಗಲ, ಸುಮಾರು 18 ಟನ್ ತೂಕದ ಈ ಬೃಹತ್ ನಟರಾಜನ ಪ್ರತಿಮೆಯ ದಾಖಲೆಯನ್ನು ಪ್ರಧಾನಿ ಮೋದಿ ಸೇರಿದಂತೆ ಹಲವು ರಾಜಕೀಯ ಮುಖಂಡರು ಹಂಚಿಕೊಳ್ಳುತ್ತಿದ್ದಾರೆ.

ದೇಶದ ಪ್ರಾಚೀನ ಕಲೆ, ಸಂಸ್ಕೃತಿ, ಪ್ರಜಾಪ್ರಭುತ್ವದ ಪರಿಚಯವನ್ನು ವಿದೇಶಿ ಅತಿಥಿಗಳಿಗೆ ಮಾಡಿಕೊಡುವ ಉದ್ದೇಶದೊಂದಿಗೆ ನಟರಾಜನ ವಿಗ್ರಹ ಸಿದ್ಧಪಡಿಸಲಾಗಿದೆ. ವಿಶ್ವದ ಅತಿ ಎತ್ತರದ ನಟರಾಜನ ವಿಗ್ರಹ ಎಂದೇ ಹೇಳಲಾಗುತ್ತಿದ್ದು, ಅಂದಾಜು 10 ಕೋಟಿ ವೆಚ್ಚದಲ್ಲಿ ತಮಿಳುನಾಡಿನ ಸ್ವಾಮಿಮಲೈನಲ್ಲಿರುವ ದೇವ ಸೇನಾಪತಿ ಶಿಲ್ಪಕಲಾ ಸ್ಟುಡಿಯೋದಲ್ಲಿ ವಿಗ್ರಹವನ್ನು ಶಿಲ್ಪಿಗಳಿಂದ ಸಂಸ್ಕೃತಿ ಸಚಿವಾಲಯವು ತಯಾರಿಸಿದೆ.